More

    ಹಾಸ್ಟೆಲ್ ಕಟ್ಟಡ ದುರಸ್ತಿಗೆ ಆದ್ಯತೆ : ಗುರುರಾಜ ಗಂಟಿಹೊಳೆ ಸೂಚನೆ ; ಹಿಂದುಳಿದ ವರ್ಗ, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳ ಸಭೆ

    ವಿಜಯವಾಣಿ ಸುದ್ದಿಜಾಲ ಬೈಂದೂರು

    ವಿದ್ಯಾದಾನಕ್ಕೆ ಹೆಸರುವಾಸಿಯಾಗಿರುವ ಉಡುಪಿ ಜಿಲ್ಲೆಯ ಬೈಂದೂರು ಕೇತ್ರದ ಯಾವುದೇ ಹಾಸ್ಟೆಲ್‌ಗಳಲ್ಲೂ ವಿದ್ಯಾರ್ಥಿಗಳಿಗೆ ಮೂಲಸೌಕರ್ಯದ ಕೊರತೆ ಆಗಬಾರದು. ಬೇರೆ ಜಿಲ್ಲೆಗಳಿಂದ ಇಲ್ಲಿಗೆ ಹೆಚ್ಚಿನ ವಿದ್ಯಾರ್ಥಿಗಳು ಬರುವುದರಿಂದ ಅವರಿಗೂ ಅನನುಕೂಲ ಆಗದಂತೆ ನೋಡಿಕೊಳ್ಳಬೇಕು. ಹಾಸ್ಟೆಲ್ ಕಟ್ಟಡ ದುರಸ್ತಿ, ಹೊಸ ಕಟ್ಟಡ ನಿರ್ಮಾಣ ಇತ್ಯಾದಿಗಳನ್ನು ಆದ್ಯತೆ ಮೇರೆಗೆ ಮಾಡಬೇಕು ಎಂದು ಅಧಿಕಾರಿಗಳಿಗೆ ಶಾಸಕ ಗುರುರಾಜ ಗಂಟಿಹೊಳೆ ಸೂಚನೆ ನೀಡಿದರು.

    ಉಪ್ಪುಂದ ಕಾರ್ಯಕರ್ತರ ಕಚೇರಿಯಲ್ಲಿ ಬುಧವಾರ ವಿದ್ಯಾರ್ಥಿಗಳ ಹಾಸ್ಟೆಲ್ ಸೌಲಭ್ಯ ಹಾಗೂ ವಸತಿ ಶಾಲೆ ದಾಖಲಾತಿ ಹಾಗೂ ಇನ್ನಿತರ ಯೋಜನೆಗಳ ಪ್ರಗತಿ ಬಗ್ಗೆ ಹಾಸ್ಟೆಲ್ ಮೇಲ್ವಿಚಾರಕರ, ಪ್ರಾಂಶುಪಾಲರು, ಹಿಂದುಳಿದ ವರ್ಗ ಹಾಗೂ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳ ಸಭೆಯಲ್ಲಿ ಕುಂದುಕೊರತೆಗಳ ಮಾಹಿತಿ ಪಡೆದು ಮಾತನಾಡಿದರು.

    ಐದು ವಸತಿ ಶಾಲೆಗಳಿಗೆ ಒಬ್ಬರು ಮೇಲ್ವಿಚಾರಕರನ್ನು(ವಾರ್ಡನ್) ನೇಮಿಸಿರುವುದನ್ನು ಗಂಭೀರವಾಗಿ ಪರಿಗಣಿಸಿದ ಶಾಸಕರು, ಇಂಥ ವ್ಯವಸ್ಥೆಯಿಂದ ಗುಣಮಟ್ಟದ ಸೌಲಭ್ಯ, ಶಿಕ್ಷಣದ ವ್ಯವಸ್ಥೆ ನಿರೀಕ್ಷಿಸಲು ಸಾಧ್ಯವಿಲ್ಲ ಸಮಸ್ಯೆ ಸರಿಯಾಗಬೇಕು. ನನ್ನ ಎಲ್ಲ ರೀತಿಯ ಸಹಕಾರ, ಪ್ರಯತ್ನ ಇರುತ್ತದೆ. ಸಮಸ್ಯೆಗಳು ಮುಂದುವರಿದರೆ ಹೋರಾಟಕ್ಕೆ ಸಿದ್ಧನಿದ್ದೇನೆ. ಆದಷ್ಟು ಶೀಘ್ರ ಎಲ್ಲ ಹಾಸ್ಟೆಲ್‌ಗಳಿಗೂ ವಾರ್ಡನ್ ವ್ಯವಸ್ಥೆ ಮಾಡಬೇಕು. ನಿಯೋಜನೆ ವ್ಯವಸ್ಥೆಯಡಿಯಲ್ಲಾದರೂ ಕಲ್ಪಿಸಬೇಕು ಎಂದರು. ಸಮೃದ್ಧ ಬೈಂದೂರು ಸಂಚಾಲಕ ಉಪ್ಪುಂದ ಬಿ.ಎಸ್.ಸುರೇಶ ಶೆಟ್ಟಿ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಭಾಗವಹಿಸಿದ್ದರು.

    ಶೀಘ್ರ ಕಾಮಗಾರಿ ನಡೆಸಿ

    ಉಡುಪಿ ಜಿಲ್ಲೆಗೆ ಎರಡು ಹಾಸ್ಟೆಲ್ ಮಂಜೂರಾಗಿರುವುದನ್ನು ಗಮನಕ್ಕೆ ತಂದಾಗ ಒಂದನ್ನು ಬೈಂದೂರಿಗೆ ತರಲು ಪ್ರಯತ್ನಿಸುವುದಾಗಿ ತಿಳಿಸಿದರು. ನಾವುಂದ ಹಾಸ್ಟೆಲ್‌ನಲ್ಲಿ ಕಟ್ಟಡದ ಕೊರತೆ, ಶೌಚಗೃಹ ದುರಸ್ತಿ ಬಾಕಿ, ಅಪಾಯಕಾರಿ ಸ್ಥಿತಿಯ ಕಟ್ಟಡ ಹಾಗೂ ತುರ್ತು ಆಗಬೇಕಿರುವ ಕೆಲಸಗಳನ್ನು ಶೀಘ್ರ ಕೈಗೊಳ್ಳುವಂತೆ ಸೂಚನೆ ನೀಡಿದರು. ಶಂಕರನಾರಾಯಣದಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚುತ್ತಿದ್ದು ಕಟ್ಟಡದ ಅಗತ್ಯವಿದೆ ಇದಕ್ಕೆ ಪ್ರಸ್ತಾವನೆ ಸಲ್ಲಿಸಲು ಸೂಚಿಸಿದರು. ಅಂಪಾರು ಎಸ್‌ಟಿಎಸ್‌ಸಿ ಹಾಸ್ಟೆಲ್‌ನಲ್ಲಿ ಕಟ್ಟಡ ಇದ್ದು ಇದಕ್ಕೆ ವಿದ್ಯಾರ್ಥಿಗಳನ್ನು ಹೆಚ್ಚಿಸಲು ಸೂಚಿಸಿದರು. ನೀರಿನ ಸಮಸ್ಯೆ ಪರಿಹಾರಕ್ಕೆ ಅನುದಾನ ಒದಗಿಸಲು ಚರ್ಚೆ ನಡೆಸಿದರು. ಕುಂದಾಪುರ ಹಾಸ್ಟೆಲ್, ವಾಲ್ಮೀಕಿ ಆಶ್ರಮ ಶಾಲೆ ಹಳೇ ಕಟ್ಟಡವಾಗಿದ್ದು, ಹೊಸ ಕಟ್ಟಡದ ಅಗತ್ಯದ ಕುರಿತು ಗಮನಕ್ಕೆ ತಂದಾಗ ಅಲ್ಲಿನ ಶಾಸಕರ ಜತೆಗೆ ಮಾತನಾಡುವುದಾಗಿ ತಿಳಿಸಿದರು. ಹೇರಂಜಾಲು ಮುರಾರ್ಜಿ ದೇಸಾಯಿ ವಸತಿ ಶಾಲೆಗಳ ಜಾಗದ ಸಮಸ್ಯೆ, ಊಟದ ಹಾಲ್ ಸೋರುವಿಕೆ ಸರಿಪಡಿಸುವಂತೆ ತಿಳಿಸಿದರು. ಇದೇ ವೇಳೆ ಇಂಗುಗುಂಡಿ ಬೇಡಿಕೆ ಕುರಿತು ಚರ್ಚಿಸಿದರು.

    ಇಲ್ಲಿನ ಹಾಸ್ಟೆಲ್‌ಗಳ ಜತೆಗೆ ಶಿಕ್ಷಣದ ವ್ಯವಸ್ಥೆ ಚೆನ್ನಾಗಿ ಇರಬೇಕು. ಯಾವುದೇ ಕೊರತೆ ಉಂಟಾಗಬಾರದು. ಕಟ್ಟಡ, ಸಿಬ್ಬಂದಿ ಕೊರತೆಗಳ ಸಮಸ್ಯೆಗಳ ಕುರಿತು ಸರ್ಕಾರದ ಗಮನಸೆಳೆದು ಪರಿಹರಿಸಲು ಪ್ರಯತ್ನಸಲಾಗುವುದು ಪರಿಹಾರ ಆಗದಿದ್ದರೆ ಸುಮ್ಮನಿರುವುದಿಲ್ಲ. ಹಾಗೆಯೇ ಹಾಸ್ಟೆಲ್ ಜಮೀನು ಪತ್ರ ವ್ಯವಸ್ಥಿತವಾಗಿ ಇಟ್ಟುಕೊಳ್ಳುವುದು, ಸರಿಯಾದ ದಾಖಲೀಕರಣಗೊಳಿಸುವುದು ಮಾಡಬೇಕು.
    -ಗುರುರಾಜ ಗಂಟಿಹೊಳೆ ಶಾಸಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts