More

    ಓದುವ ಹಾದಿಗೆ ದಿನಪತ್ರಿಕೆ ಬೆಳಕು

    ದಾವಣಗೆರೆ: ಜುಲೈ ಒಂದು ಮತ್ತೆ ಬಂದಿದೆ. ವಿದ್ಯುನ್ಮಾನದ ಬೆಳವಣಿಗೆಗಳ ಮಧ್ಯೆ ಓದುಗರಿಗೆ ಖಚಿತ ಮತ್ತು ವಿಶ್ವಾಸಾರ್ಹ ಸುದ್ದಿಗಳನ್ನು ಉಣಬಡಿಸುತ್ತ, ಸಾಮಾಜಿಕ ಕಾಳಜಿ ಬಗ್ಗೆ ಎಚ್ಚರಿಸುತ್ತ ಬಂದಿರುವ ದಿನಪತ್ರಿಕೆಗಳ ಅಸ್ಮಿತೆಯನ್ನು ನೆನಪಿಸುವ ದಿನವಿದು. ಪತ್ರಿಕೆಗಳನ್ನು ಉಳಿಸುವ ಮತ್ತು ಬೆಳೆಸುವ ನಿಟ್ಟಿನಲ್ಲಿ ಪತ್ರಿಕಾ ದಿನ ಸಾಂಕೇತಿಕ ಆಚರಣೆ ಮಾತ್ರ.

    ಪತ್ರಿಕೋದ್ಯಮ ಇಂದು ಹಲವು ಮಜಲುಗಳನ್ನು ಕಂಡಿದೆ. ಅದರ ಸ್ವರೂಪವೂ ಬದಲಾಗಿದೆ. ಕೋವಿಡ್‌ನಂಥ ಸಂದಿಗ್ಧ ಸಂದರ್ಭದಲ್ಲೂ ಸವಾಲುಗಳನ್ನು ಎದುರಿಸಿ ಜನರ ಮನೆ ಮನ ತಲುಪಿವೆ. ಮುದ್ರಣ ಮಾಧ್ಯಮದ ಜಾಗವನ್ನು ಆನ್‌ಲೈನ್ ಪತ್ರಿಕೆಗಳು ಆಕ್ರಮಿಸಿಕೊಳ್ಳುವ ಈ ಹೊತ್ತಿನಲ್ಲಿ ಸಾಮಾಜಿಕ ಜಾಲತಾಣಗಳು ಪರಾಮರ್ಶಿಸದೆ ನೀಡುವ ಸುದ್ದಿಗಳು ವೇಗ ಪಡೆದುಕೊಳ್ಳುತ್ತಿರುವುದು ಅಪಾಯದ ದಿಕ್ಸೂಚಿ.

    ಕಾಲ ಬದಲಾದರೂ ಪತ್ರಿಕೆಗಳನ್ನು ಕೈಯಲ್ಲಿಡಿದು ಓದುವ ಮಜಾ ಬೇರಾವ ಮಾಧ್ಯಮದಿಂದ ಸಿಗದು. ಎಲ್ಲ ಕ್ಷೇತ್ರಗಳ ಕುರಿತ ಕರಾರುವಕ್ಕಾದ ಮತ್ತು ವಿಸ್ತೃತ ವಿಶ್ಲೇಷಣೆ ನೀಡುವ ಪತ್ರಿಕೆಗಳು ನಮ್ಮೆಲ್ಲರ ಮಿತ್ರ. ಹೀಗಾಗಿ, ಜನಸಾಮಾನ್ಯರು ದಿನಪತ್ರಿಕೆಗಳನ್ನು ಏತಕ್ಕೆ ಓದಬೇಕು ಎಂಬುದನ್ನು ಏಜೆಂಟರು/ ಪತ್ರಿಕಾ ವಿತರಕರು ಲೌಡ್‌ಸ್ಪೀಕರ್‌ನಲ್ಲಿ ಹಂಚಿಕೊಂಡ ಮಾತುಗಳು ಇಲ್ಲಿವೆ.

    ಓದುವ ಹಾದಿಗೆ ದಿನಪತ್ರಿಕೆ ಬೆಳಕು

    ವಿಶ್ವಾಸಾರ್ಹತೆ ವರದಿ ಇಲ್ಲುಂಟು: ಪತ್ರಿಕೆಗಳನ್ನು ಓದುವುದರಿಂದ ಪರೋಕ್ಷ ಲಾಭಗಳೇ ಹೆಚ್ಚು. ಪತ್ರಿಕೆಗಳಿಂದ ನಿರೀಕ್ಷಿಸಬಹುದಾದ ಸುದ್ದಿಯ ವಿಶ್ವಾಸಾರ್ಹತೆ, ವಸ್ತುನಿಷ್ಠತೆ, ಅದರ ಆಳ ವಿವರಣೆ, ವಿಶ್ಲೇಷಣೆಗಳನ್ನು ಸಾಮಾಜಿಕ ಜಾಲತಾಣ ಅಥವಾ ಟಿವಿ ಮಾಧ್ಯಮಗಳಲ್ಲಿ ಸಿಗದು. ಆಹಾರಧಾನ್ಯ, ಡ್ಯಾಂ ನೀರಿನ ಪ್ರಮಾಣ, ಚಿನ್ನದ ದರ ಇತ್ಯಾದಿ, ಸ್ಥಳೀಯ ಮಟ್ಟದ ಸುದ್ದಿಗಳನ್ನು ಪತ್ರಿಕೆಗಳು ಬಿತ್ತರಿಸಲಿವೆ. ಈ ಎಲ್ಲ ಕಾರಣಕ್ಕೆ ಜನರು ದಿನಪತ್ರಿಕೆಗಳನ್ನು ಓದುವ ಹವ್ಯಾಸ ರೂಢಿಸಿಕೊಳ್ಳಬೇಕು.
    l ನಿತ್ಯಾನಂದ ಕಾಮತ್, ಏಜೆಂಟರು, ದಾವಣಗೆರೆ

    ಓದುವ ಹಾದಿಗೆ ದಿನಪತ್ರಿಕೆ ಬೆಳಕು

    ಪತ್ರಿಕೆ ಓದುವ ಖುಷಿಯೇ ಬೇರೆ.
    ತಂತ್ರಜ್ಞಾನ ಎಷ್ಟೇ ಮುಂದುವರಿದರೂ ಪತ್ರಿಕೆ ಓದುವುದರಲ್ಲಿ ಇರುವ ಖುಷಿಯೇ ಬೇರೆ. ಮೊಬೈಲ್‌ನಲ್ಲಿ ಕ್ಷಣಕ್ಷಣದ ಮಾಹಿತಿ ದೊರೆಯುತ್ತಿದೆಯಾದರೂ ಯಾವುದೇ ವಿಷಯದ ಕುರಿತು ಸಂಪೂರ್ಣ ಮಾಹಿತಿ ನಮ್ಮ ಮನಕ್ಕೆ ಇಳಿಯಬೇಕಾದರೆ ಅದಕ್ಕೆ ಪತ್ರಿಕೆಯೇ ಬೇಕು. ಸ್ಪರ್ಧಾತ್ಮಕ ದಿನಮಾನಗಳಲ್ಲಿಯೂ ಪತ್ರಿಕೆಯ ಛಾಪು ಒಂಚೂರು ಕಡಿಮೆಯಾಗಿಲ್ಲ. ನಮಗೆ ಬದುಕು ಕೊಟ್ಟಿರುವುದು ಇದೇ ಪತ್ರಿಕೆ.
    l ಚಂದ್ರಪ್ಪ, ವಿಜಯವಾಣಿ ಪತ್ರಿಕಾ ಏಜೆಂಟರು, ಹೊನ್ನಾಳಿ

    ಓದುವ ಹಾದಿಗೆ ದಿನಪತ್ರಿಕೆ ಬೆಳಕು

    ವಿಶ್ವಾಸಕ್ಕೆ ಅರ್ಹ ಮಾಧ್ಯಮ
    ಪತ್ರಿಕೆ ಓದುವುದು ಒಂದು ಅತ್ಯುತ್ತಮ ಹವ್ಯಾಸ. ದಿನ ಬೆಳಗಾದರೆ ಪತ್ರಿಕೆ ಮೇಲೆ ಕಣ್ಣಾಡಿಸಿದರೆ ಸಾಕು ಜಗತ್ತಿನ ಮಾಹಿತಿ ಕಣಜವೇ ಕಣ್ಮುಂದೆ ಸಿಗುತ್ತದೆ. ಆದರೆ, ಇತ್ತೀಚಿನ ದಿನಗಳಲ್ಲಿ ಪತ್ರಿಕೆ ಓದುವುದಕ್ಕಿಂತ ಹೆಚ್ಚು ಜನರು ಮೊಬೈಲ್ ದಾಸರಾಗುತ್ತಿದ್ದಾರೆ. ಆದರೂ, ಪತ್ರಿಕೆ ಓದುವುದರಲ್ಲಿರುವ ಖುಷಿ ಮೊಬೈಲ್‌ನಲ್ಲಿ ಸುದ್ದಿ ನೋಡುವುದರಲ್ಲಿ ಇರುವುದಿಲ್ಲ. ಪತ್ರಿಕೆ ವಿಶ್ವಾಸಕ್ಕೆ ಅರ್ಹವಾದುದು.
    l ಕೆ.ಎಂ. ಬಸವರಾಜ್, ಪತ್ರಿಕಾ ವಿತರಕ, ಚನ್ನಗಿರಿ.

    ಓದುವ ಹಾದಿಗೆ ದಿನಪತ್ರಿಕೆ ಬೆಳಕು

    ಹೋರಾಟದ ಕಿಚ್ಚು ಹೊತ್ತಿಸಿದ ಮಾಧ್ಯಮ
    ಸ್ವಾತಂತ್ರೃಪೂರ್ವ ಕಾಲದಲ್ಲಿಯೇ ಸ್ವಾತಂತ್ರೃಕ್ಕಾಗಿ ಕ್ರಾಂತಿ ಕಿಡಿ, ಜನಜಾಗೃತಿಯನ್ನು ಮೂಡಿಸುವಲ್ಲಿ ಪತ್ರಿಕೆಗಳ ಕಾರ್ಯ ಮಹತ್ವದ್ದಾಗಿತ್ತು. ಅಂದಿನ ಬ್ರಿಟಿಷ್ ಆಡಳಿತದಲ್ಲಿಯೂ ಅನೇಕ ಪತ್ರಿಕೆಗಳು ಅಂಜದೆ ಸ್ವಾತಂತ್ರೃದ ಕಹಳೆ ಮೊಳಗಿಸುವ ಮೂಲಕ ಭಾರತೀಯರಲ್ಲಿ ಹೋರಾಟದ ಕಿಚ್ಚು ಮೂಡಿಸಿದ್ದವು. ಇಂದಿಗೂ ಪತ್ರಿಕೆ ನಾಲ್ಕನೇ ಅಂಗವಾಗಿ ಕಾರ್ಯನಿರ್ವಹಿಸುತ್ತಿದೆ.
    l ಶಿವಕುಮಾರ್, ಏಜೆಂಟರು.ಹರಿಹರ

    ಓದುವ ಹಾದಿಗೆ ದಿನಪತ್ರಿಕೆ ಬೆಳಕು

    ಪತ್ರಿಕೋದ್ಯಮ ಸಾಹಸದ ಕೆಲಸ
    ಇಂದಿನ ದುಬಾರಿ ದಿನಮಾನಗಳಲ್ಲಿಯೂ ಪತ್ರಿಕೆ ಅತ್ಯಂತ ಕಡಿಮೆ ಬೆಲೆಯಲ್ಲಿ ದೊರೆಯುತ್ತಿರುವುದು ಸೋಜಿಗವೇ ಸರಿ. ಜಾಹೀರಾತು ಆದಾಯದ ಮೂಲದಿಂದ ಪತ್ರಿಕೆ ನಡೆಸುವುದು ತ್ರಾಸದಾಯಕ. ಆದರೂ, ಕನ್ನಡ ಪತ್ರಿಕೋದ್ಯಮ ವರ್ಷದಿಂದ ವರ್ಷಕ್ಕೆ ಬೃಹತ್ ಉದ್ಯಮವಾಗಿ ಬೆಳೆಯುತ್ತಲೆ ಇದೆ. ಹತ್ತಿಪ್ಪರ ಸಂಖ್ಯೆಯಲ್ಲಿದ್ದ ಪತ್ರಿಕೆಗಳು ಇಂದು ನೂರಾರು ಸ್ಥಳೀಯ, ರಾಜ್ಯಮಟ್ಟದ ಪತ್ರಿಕೆಗಳಾಗಿ ಬೆಳೆಯುತ್ತಿರುವುದೇ ಸಾಕ್ಷಿ.
    l ಡಿ.ಬಿ. ನಾಗರಾಜ್, ಪತ್ರಿಕೆ ವಿತರಕ, ಕೆಂಚಿಕೊಪ್ಪ, ನ್ಯಾಮತಿ ತಾಲೂಕು.

    See also  ಪಾಸ್​ ಮಾಡಲು ಎಚ್​ಒಡಿಗೆ 18 ವರ್ಷದ ಹುಡುಗಿಯರ ಪೂರೈಕೆ: ಬಿರುಗಾಳಿ ಎಬ್ಬಿಸಿದ ಗಾಯಕಿ ಚಿನ್ಮಯಿ ರೀಟ್ವೀಟ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts