More

    ಬೈಂದೂರು ಕಾಲೇಜಿಗೆ ಪವರ್ ಪ್ಲಾಂಟ್ :ವಿದ್ಯಾರ್ಥಿಗಳ ಸಮಸ್ಯೆಗೆ ಶಾಸಕರ ಸ್ಪಂದನೆ ; 10 ಲಕ್ಷ ರೂ. ವೆಚ್ಚದಲ್ಲಿ ಅಳವಡಿಕೆ

    ವಿಜಯವಾಣಿ ಸುದ್ದಿಜಾಲ ಬೈಂದೂರು

    ಬೈಂದೂರು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕಂಪ್ಯೂಟರ್ ಲ್ಯಾಬ್‌ಗೆ ಶಾಶ್ವತ ಪರಿಹಾರ ನೀಡುವ ನಿಟ್ಟಿನಲ್ಲಿ 10 ಲಕ್ಷ ರೂ. ವೆಚ್ಚದ 10 ಕೆ.ವಿ ಸಾಮರ್ಥ್ಯದ ಸೋಲಾರ್ ಚಾಲಿತ ಅಪ್‌ಗ್ರಿಡ್ ಪವರ್ ಪ್ಲಾಂಟ್ ಸಿಸ್ಟಮ್ ತರುವಲ್ಲಿ ಶಾಸಕ ಗುರುರಾಜ್ ಗಂಟಿಹೊಳೆ ಯಶಸ್ವಿಯಾಗಿದ್ದಾರೆ.
    ಕಾಲೇಜಿನಲ್ಲಿ ಕಳೆದ ವರ್ಷ ಬಿಸಿಎ ಪದವಿ ಶಿಕ್ಷಣ ಆರಂಭಗೊಂಡಿದ್ದು, ಈ ಕೋರ್ಸ್‌ಗೆ ಸಂಬಂಧಿಸಿ ಕಂಪ್ಯೂಟರ್ ಲ್ಯಾಬ್‌ನ ಎಲ್ಲ ಗಣಕಯಂತ್ರಗಳು ವಿದ್ಯುತ್ ಸಂಪರ್ಕದ ಮೇಲೆ ಅವಲಂಬಿತವಾಗಿತ್ತು. ವಿದ್ಯುತ್ ಸ್ಥಗಿತಗೊಂಡಾಗ ಎಲ್ಲ ಕಂಪ್ಯೂಟರ್‌ಗಳು ಸ್ವಿಚ್‌ಆಫ್ ಆಗುತ್ತಿದ್ದರಿಂದ ಕಂಪ್ಯೂಟರಿನ ಡಾಟಾ ಲಾಸ್, ಹಾರ್ಡವೇರ್ ಡ್ಯಾಮೇಜ್ ಮುಂತಾದ ಸಮಸ್ಯೆಗಳಿಂದ ಸಾಕಷ್ಟು ಕಂಪ್ಯೂಟರ್‌ಗಳು ಹಾಳಾಗುತ್ತಿತ್ತು. ಈ ಸಮಸ್ಯೆಗೆ ತಕ್ಷಣ ಸ್ಪಂದಿಸಿದ ಶಾಸಕ ಗುರುರಾಜ್ ಗಂಟಿಹೊಳೆ, ಸಮೃದ್ಧ ಬೈಂದೂರು ಯೋಜನೆಯಡಿ ಕೆನಾರಾ ಬ್ಯಾಂಕ್ ಪ್ರಾಯೋಜಕತ್ವದ ಕ್ಯಾನ್‌ಫಿನ್ ಹೋಮ್ಸ್ ಲಿಮಿಟೆಡ್ ಸಂಸ್ಥೆಯೊಂದಿಗೆ ಸಮಸ್ಯೆ ಕುರಿತು ತಿಳಿಸಿ ಸಿಎಸ್‌ಆರ್ ಅನುದಾನದಡಿ ಕಾಲೇಜಿನ ಕಂಪ್ಯೂಟರ್ ಲ್ಯಾಬ್‌ಗೆ ಶಾಶ್ವತ ಪರಿಹಾರ ನೀಡುವ ನಿಟ್ಟಿನಲ್ಲಿ ಕ್ರಮ ಕೈಗೊಂಡಿದ್ದಾರೆ.

    ಉದ್ಘಾಟನೆ

    ಕೆನರಾ ಬ್ಯಾಂಕ್ ನಿವೃತ್ತ ಜನರಲ್ ಮ್ಯಾನೇಜರ್ ಬಿ.ಸುಧಾಕರ ಶೆಟ್ಟಿ ಪವರ್ ಪ್ಲಾಂಟ್ ಉದ್ಘಾಟಿಸಿದರು. ಬ್ಯಾಟರಿ ರೂಮನ್ನು ಖಂಬದಕೋಣೆ ರೈತ ಸೇವಾ ಸಂಘ ಅಧ್ಯಕ್ಷ ಪ್ರಕಾಶ್ಚಂದ್ರ ಶೆಟ್ಟಿ, ಕಂಪ್ಯೂಟರ್ ಲ್ಯಾಬನ್ನು ಬಿ.ಎಸ್.ಸುರೇಶ ಶೆಟ್ಟಿ ಉದ್ಘಾಟಿಸಿದರು. ಜಿಪಂ ಮಾಜಿ ಅಧ್ಯಕ್ಷ, ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯ ಎಸ್.ರಾಜು ಪೂಜಾರಿ, ಸದಸ್ಯ ಮಂಜುನಾಥ ಬಿಲ್ಲವ, ಐ.ನಾರಾಯಣ, ನಾಗರಾಜ ಉಪ್ಪುಂದ, ಎಸ್.ಮಣಿಕಂಠ ದೇವಾಡಿಗ, ಉದ್ಯಮಿ ಹರೀಶ್ ಶ್ರಿಯಾನ್, ಪತ್ರಕರ್ತ ಅರುಣಕುಮಾರ್ ಶಿರೂರು, ಪ್ರಾಂಶುಪಾಲ ನಾಗರಾಜ ಶೆಟ್ಟಿ, ಐಟಿ ಸೆಲ್ ಸಂಚಾಲಕ ಡಾ.ಅಶ್ವತ್ಥ ದೇವರಾಯ ನಾಯ್ಕ, ಶಾಸಕರ ಆಪ್ತ ಸಹಾಯಕ ಶೋಧನ್ ಮಲ್ಪೆ ಮೊದಲಾದವರು ಉಪಸ್ಥಿತರಿದ್ದರು.

    ಗ್ರಾಮೀಣ ಪ್ರದೇಶದ ನಮ್ಮ ಕಾಲೇಜಿನಲ್ಲಿ ಕಂಪ್ಯೂಟರ್ ಲ್ಯಾಬ್‌ಗೆ ವಿದ್ಯುತ್ ಸ್ಥಗಿತಗೊಂಡಾಗ ಸಾಕಷ್ಟು ಸಮಸ್ಯೆ ಎದುರಿಸುತ್ತಿದ್ದೇವು ಶಾಸಕ ಗುರುರಾಜ್ ಗಂಟಿಹೊಳೆ ನಮ್ಮ ಮನವಿಗೆ ಸ್ಪಂದಿಸಿ ಕ್ಯಾನ್‌ಫಿನ್ ಸಂಸ್ಥೆ ಮೂಲಕ ಸೋಲಾರ್ ವಿದ್ಯುತ್ ಸಂಪರ್ಕ ನೀಡಿ ಸಹಕರಿಸಿದ್ದಾರೆ.
    -ನಾಗರಾಜ ಶೆಟ್ಟಿ ಪ್ರಾಂಶುಪಾಲ

    ಕಳೆದ ಸೆಮಿಸ್ಟರ್ ಪರೀಕ್ಷೆಯಲ್ಲಿ ಬಿಸಿಎ ಪ್ರಾಯೋಗಿಕ ಪರೀಕ್ಷೆ ನಡೆಯುತ್ತಿರುವಾಗ ವಿದ್ಯುತ್ ಅವ್ಯವಸ್ಥೆಯಿಂದ ಪರೀಕ್ಷೆ ಬರೆಯಲು ಸಮಸ್ಯೆಯಾಗಿತ್ತು. ಈಗ ಕಂಪ್ಯೂಟರ್ ಲ್ಯಾಬ್‌ಗೆ ಸೋಲಾರ್ ವಿದ್ಯುತ್ ವ್ಯವಸ್ಥೆ ಕಲ್ಪಿಸಿರುವುದರಿಂದ ನಿರಾಂತಕವಾಗಿ ಪರೀಕ್ಷೆ ಬರೆಯಲು ಅನುಕೂಲವಾಗಿದೆ.
    -ನಿಶ್ಮಿತಾ ಬಿಸಿಎ ವಿದ್ಯಾರ್ಥಿನಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts