More

    ಆನ್‌ಲೈನ್ ವಹಿವಾಟು ಡಿಜಿಟಲ್ ವಂಚನೆಗೆ ದಾರಿ: ವೀರಮಂಜು ಕಳವಳ

    ಶಿವಮೊಗ್ಗ: ಜಗತ್ತಿನಲ್ಲಿ ಎಲ್ಲದೂ ಡಿಜಿಟಲ್ ಯುಗಕ್ಕೆ ತೆರೆದುಕೊಂಡಿದ್ದು ಜನರು ಹೆಚ್ಚೆಚ್ಚು ಆನ್‌ಲೈನ್ ವಹಿವಾಟಿನ ಮೇಲೆ ಅವಲಂಬಿತರಾಗುತ್ತಿದ್ದಾರೆ. ಇದು ಡಿಜಿಟಲ್ ವಂಚನೆಗೆ ದಾರಿ ಮಾಡಿಕೊಡುತ್ತಿದೆ ಎಂದು ಮೈಸೂರಿನ ಶ್ರೀ ಜಯಚಾಮರಾಜೇಂದ್ರ ಇಂಜಿನಿಯರಿಂಗ್ ಕಾಲೇಜಿನ ಪ್ರಾಧ್ಯಾಪಕ ಡಾ. ಕೆ.ಟಿ.ವೀರಮಂಜು ಕಳವಳ ವ್ಯಕ್ತಪಡಿಸಿದರು.
    ನಗರದ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಸಭಾಂಗಣದಲ್ಲಿ ಶನಿವಾರ ಡಿಜಿಟಲ್ ಪ್ರಪಂಚದ ಅನುಕೂಲಗಳು, ಅಪರಾಧಗಳು ಮತ್ತು ವಹಿಸಬೇಕಾದ ಮುನ್ನೆಚ್ಚರಿಕಾ ಕ್ರಮಗಳು ಅರಿವು ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಅವರು, ಆನ್‌ಲೈನ್ ವಹಿವಾಟಿನ ಬಗ್ಗೆ ಹೆಚ್ಚು ಜಾಗೃತರಾಗಬೇಕಿದೆ ಎಂದರು.
    ಡಿಜಿಟಲ್ ಪ್ರಪಂಚದಲ್ಲಿ ಎಚ್ಚತ್ತುಕೊಂಡರೆ ಅನುಕೂಲ. ಇಲ್ಲಿ ಅನುಕೂಲಗಳ ಜತೆಗೆ ಅನಾನುಕೂಲಗಳು ಆಗುತ್ತವೆ. ಭಾರತದಲ್ಲಿ ನಗದು ರಹಿತ ವ್ಯವಹಾರದಲ್ಲಿ ನಾವೇ ಮುಂದಿದ್ದೇವೆ. ಆದರೆ ಪ್ರತಿ ಹೆಜ್ಜೆಯಲ್ಲೂ ವಂಚನೆ ಪ್ರಕರಣ ಹೆಚ್ಚಾಗುತ್ತಲೇ ಹೋಗುತ್ತಿವೆ. ಅಂತರ್ಜಾಲ ಬಂದ ಮೇಲೆ ಡಿಜಿಟಲ್ ಪ್ರಪಂಚಕ್ಕೆ ಬೌಂಡರಿಯೇ ಇಲ್ಲದಂತಾಗಿದೆ. ವ್ಯವಹಾರಿಕವಾಗಿ ಅಂತರ್ಜಾಲ ಹೆಚ್ಚು ಉಪಯುಕ್ತಯೂ ಆಗಿತ್ತು. ಆದರೆ ಅಂತರ್ಜಾಲ ಉಚಿತವಾದ ಮೇಲೆ, ಆ್ಯಪ್‌ಗಳು ಬಂದ ಮೇಲೆ ದುರುಪಯೋಗ ಹೆಚ್ಚಾಯಿತು ಎಂದರು.
    ಮಕ್ಕಳ ಸುರಕ್ಷತೆ ದೃಷ್ಟಿಯಿಂದ ವರ್ಚುವಲ್ ನೆಟ್‌ವರ್ಕ್ ಬಳಕೆ ಮಾಡಬೇಕು. ಅನಾವಶ್ಯಕವಾಗಿ ಆ್ಯಪ್‌ಗಳನ್ನು ಡೌನ್‌ಲೋಡ್ ಮಾಡಬಾರದು. ಪಾಸ್‌ವರ್ಡ್‌ಗಳನ್ನು ಕನಿಷ್ಠ 30ರಿಂದ 90 ದಿನಗಳಿಗೊಮ್ಮೆ ಬದಲಿಸಬೇಕು. ಲೋನ್ ಆ್ಯಪ್ ಹಾವಳಿ ಹೆಚ್ಚಾಗಿವೆ ಎಂದು ಆತಂಕ ವ್ಯಕ್ತಪಡಿಸಿದ ಅವರು, ವಂಚನೆಗೆ ಒಳಗಾದ ಮುರ್ನಾಲ್ಕು ಗಂಟೆಯೊಳಗೆ ಸೈಬರ್ ಪೊಲೀಸರಿಗೆ ದೂರು ನೀಡಿದರೆ ಹಣವನ್ನು ಫ್ರೀಚ್ ಮಾಡಬಹುದು. ಡಿಜಿಟಲ್ ಫೋರೆನ್ಸಿಕ್ ಲ್ಯಾಬ್‌ನಿಂದ ತ್ವರಿತ ನ್ಯಾಯ ಸಿಗುತ್ತಿದೆ ಎಂದು ಹೇಳಿದರು.
    ಅಧ್ಯಕ್ಷತೆ ವಹಿಸಿದ್ದ ಸಂಘದ ಜಿಲ್ಲಾ ಅಧ್ಯಕ್ಷ ಎನ್.ಗೋಪಿನಾಥ ಮಾತನಾಡಿ, ಇಪ್ಪತ್ತು ವರ್ಷಕ್ಕೆ ಹೋಲಿಸಿದರೆ ಇಂದು ಡಿಜಿಟಲ್ ಯುಗ ವೇಗವಾಗಿ ಬೆಳೆದಿದೆ. ಡಿಜಿಟಲ್ ಯುಗ ಬೆಳೆದಂತೆ ಆನ್‌ಲೈನ್ ಅಪರಾಧಗಳು ಹೆಚ್ಚಾಗುತ್ತಿವೆ. ಈ ಬಗ್ಗೆ ಪ್ರತಿಯೊಬ್ಬರು ಜಾಗೃತರಾಗುವ ಜತೆಗೆ ಇತರರಿಗೂ ಅರಿವು ಮೂಡಿಸಬೇಕಿದೆ ಎಂದರು.
    ಸಂಘದ ಮಾಜಿ ಅಧ್ಯಕ್ಷ ಜೆ.ಆರ್.ವಾಸುದೇವ, ಉಪಾಧ್ಯಕ್ಷ ಬಿ.ಗೋಪಿನಾಥ, ಕಾರ್ಯದರ್ಶಿ ವಸಂತ್ ಹೋಬಳಿದಾರ, ಕೈಗಾರಿಕಾ ಸಮಿತಿ ಛೇರ್ಮನ್ ಎಂ.ರಾಜು ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts