More

    ಸೌಕರ್ಯ ಕಲ್ಪಿಸದ ಬಿಡಿಎ ನಡೆಗೆ ಆಕ್ಷೇಪ

    ಬೆಂಗಳೂರು: ನಾಡಪ್ರಭು ಕೆಂಪೇಗೌಡ ಬಡಾವಣೆಯಲ್ಲಿ ಹಂಚಿಕೆ ಮಾಡಲಾದ 26 ಸಾವಿರ ನಿವೇಶನಗಳಲ್ಲಿ 26 ಸೈಟ್‌ಗಳಲ್ಲಿ ಮಾತ್ರ ಮನೆಗಳು ನಿರ್ಮಾಣಗೊಂಡಿವೆ ಎಂಬ ಮಾಹಿತಿಯನ್ನು ಬಿಡಿಎ, ವಿಧಾನಸಭೆ ಅರ್ಜಿ ಸಮಿತಿಗೆ ತಿಳಿಸಿದೆ. ಈ ಮಾಹಿತಿ ತಿಳಿದು ಹೌಹಾರಿರುವ ಸಮಿತಿಯು, ಪ್ರಾಧಿಕಾರದ ಕಾರ್ಯವೈಖರಿಗೆ ತೀವ್ರ ಅಸಮಾಧಾನವನ್ನು ಹೊರಹಾಕಿದೆ.

    ಗುರುವಾರ ವಿಧಾನಸೌಧದಲ್ಲಿ ನಡೆದ ಸಮಿತಿಯ ಸಭೆಯಲ್ಲಿ ಸಾರ್ವಜನಿಕ ಮಹತ್ವವುಳ್ಳ ಅರ್ಜಿ ಸಂಬಂಧ ಕೆಂಪೇಗೌಡ ಬಡಾವಣೆಗೆ ಸಂಬಂಧಿಸಿದಂತೆ ಸಲ್ಲಿಕೆಯಾಗಿರುವ ಅರ್ಜಿ ವಿಚಾರಣೆ ವೇಳೆ ಬಿಡಿಎ ಅಧಿಕಾರಿಗಳು ಸಮರ್ಪಕ ಉತ್ತರ ನೀಡದೆ ತಡಬಡಾಯಿಸಿದ ಪ್ರಸಂಗ ನಡೆದಿದೆ.

    ನಾಡಪ್ರಭು ಕೆಂಪೇಗೌಡ ಜಯಂತಿಯಂದೇ ಅವರ ಹೆಸರಿನಲ್ಲಿ ನಿರ್ಮಿಸುತ್ತಿರುವ ಬಡಾವಣೆಯಲ್ಲಿ ಅಗತ್ಯ ಮೂಲಸೌಕರ್ಯ ಕಲ್ಪಿಸದಿರುವುದಕ್ಕೆ ಸಮಿತಿಯು ಬೇಸರ ಹೊರಹಾಕಿದೆ. ಎಂಟು ವರ್ಷಗಳಿಂದ ಕುಂಟುತ್ತಾ ಸಾಗಿರುವ ವಿವಿಧ ಕಾಮಗಾರಿಗಳನ್ನು ಗಡುವಿನೊಳಗೆ ಪೂರ್ಣಗೊಳಿಸಲು ಸಾಧ್ಯವಾಗಿಲ್ಲ. ಈ ಹಿಂದೆ ನೀಡಿದ್ದ ನಿರ್ದೇಶನಗಳನ್ನು ಪಾಲಿಸಲು ಪ್ರಾಧಿಕಾರ ವಿಲವಾಗಿದ್ದು, ಮತ್ತೆ ಕಾಮಗಾರಿ ಮುಗಿಸಲು ಗಡುವು ವಿಸ್ತರಿಸುವುದಿಲ್ಲ. ಈಗಾಗಲೇ ನೀಡಿರುವ ಅವಧಿಯೊಳಗೆ ಬಾಕಿ ಕೆಲಸಗಳನ್ನು ಪೂರ್ಣಗೊಳಿಸಲು ಅಧಿಕಾರಿಗಳಿಗೆ ತಾಕೀತು ಮಾಡಲಾಯಿತು.

    ನಿರುತ್ತರರಾದ ಅಧಿಕಾರಿ ವರ್ಗ:

    ಅರ್ಜಿ ಸಮಿತಿಯ ಮುಂದೆ ಬಿಡಿಎ ಆಯುಕ್ತರ ಗೈರಿನಲ್ಲಿ ಅಭಿಯಂತರ ಸದಸ್ಯ ಡಾ. ಶಾಂತರಾಜಣ್ಣ ಹಾಗೂ ಹಿರಿಯ ಇಂಜಿನಿಯರ್‌ಗಳು ಹಾಜರಾಗಿದ್ದರು. ಪ್ರಸ್ತುತ ಲೇಔಟ್‌ನಲ್ಲಿ ಮೂಲಸೌಕರ್ಯ ಕೆಲಸ ಹೇಗೆ ನಡೆದಿದೆ, ಹಂಚಿಕೆ ಮಾಡಲಾದ ಸೈಟ್‌ಗಳಲ್ಲಿ ಎಷ್ಟು ಮಂದಿ ಮನೆ ನಿರ್ಮಿಸಿದ್ದಾರೆಂಬ ಪ್ರಶ್ನೆಯನ್ನು ಸಮಿತಿ ಮುಖ್ಯಸ್ಥರು ಕೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ಅಭಿಯಂತರ ಸದಸ್ಯ, ಬಡಾವಣೆಯಲ್ಲಿ 26,000 ನಿವೇಶನಗಳನ್ನು ರಚಿಸಿ ಈ ಪೈಕಿ ರೈತರಿಗೆ 12 ಸಾವಿರ ಪರಿಹಾರದ ಸೈಟ್, ಸಾರ್ವಜನಿಕರಿಗೆ 10,000 ಸೈಟ್, ಅರ್ಕಾವತಿ ನಿರಾಶ್ರಿತರಿಗೆ 2,000 ಸೈಟ್, ಮೂಲೆ ನಿವೇಶನಗಳ ಹರಾಜು ಮೂಲಕ 2,000 ಸೈಟ್‌ಗಳನ್ನು ಹಂಚಿಕೆ ಮಾಡಲಾಗಿದೆ. ಇವುಗಳಲ್ಲಿ ಈತನಕ 26 ಮನೆಗಳು ನಿರ್ಮಿಸಲ್ಪಟ್ಟಿವೆ ಎಂದು ಉತ್ತರಿಸಲಾಯಿತು.

    ಬಿಡಿಎ ಅಧಿಕಾರಿಗಳ ಉತ್ತರದಿಂದ ಸಮಾಧಾನವಾಗದ ಸಮಿತಿಯು, ಸರಕಾರದ ವಸತಿ ಯೋಜನೆ ವೈಫಲ್ಯ ಕಾಣಲು ಬಡಾವಣೆಯಲ್ಲಿ ಕನಿಷ್ಠ ಮೂಲಸೌಕರ್ಯ ಇಲ್ಲದಿರುವುದೇ ಕಾರಣ. ಕಳೆದ ಸೆಪ್ಟೆಂಬರ್‌ನಲ್ಲಿ ಸಮಿತಿ ಸಭೆ ಮುಂದೆ ಒಪ್ಪಿಕೊಂಡಂತೆ ಲೇಔಟ್‌ನ 9 ಬ್ಲಾಕ್‌ಗಳಲ್ಲಿ ಕಾಮಗಾರಿಗಳು ಪೂರ್ಣಗೊಳಿಸಲು 14 ತಿಂಗಳು ಗಡುವು ಪಡೆಯಲಾಗಿದೆ. ಇದರಲ್ಲಿ ಈಗಾಗಲೇ 9 ತಿಂಗಳು ಕಳೆದಿದ್ದು, ಬಾಕಿ ಅವಧಿಯಲ್ಲಿ ಹೇಗೆ ಕೆಲಸ ಮಾಡುವಿರಿ? ಹೀಗಾದರೆ ಮೂಲಸೌಕರ್ಯ ಮುಗಿಯುವುದೆಂದು ಎಂಬ ಸಮಿತಿಯ ಪ್ರಶ್ನೆಗೆ ಅಧಿಕಾರಿಗಳು ನಿರುತರರಾದರು ಎಂದು ತಿಳಿದುಬಂದಿದೆ.

    ಮುಂದಿನ ಸಭೆಯಲ್ಲಿ ಪ್ರಾಧಿಕಾರದ ಆಯುಕ್ತರು ಹಾಜರಾಗಿ ಸಮರ್ಪಕವಾದ ಮಾಹಿತಿ ನೀಡಬೇಕು ಎಂದು ಸೂಚಿಸಿ ವಿಚಾರಣಾ ಕಲಾಪವನ್ನು ಮುಂದೂಡಲಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts