More

    ವಿಶ್ವಾಸಾರ್ಹತೆ ಉಳಿಸಿಕೊಂಡಿರುವ ಪತ್ರಿಕೆಗಳು

    ಮಡಿಕೇರಿ:

    ಜುಲೈ 1 ಕರ್ನಾಟಕದಲ್ಲಿ ಪತ್ರಿಕಾ ದಿನಾಚರಣೆಯಾಗಿ ಆಚರಿಸಲಾಗುತ್ತದೆ. ಕನ್ನಡ ಪತ್ರಿಕೋದ್ಯಮದ ಪ್ರಾರಂಭ ಮಂಗಳೂರಿನಲ್ಲಿ ಬಾಸೆಲ್ ಮಿಶನ್ ಸಂಸ್ಥೆಯಿAದ ನಡೆಯಿತು. ‘ಮಂಗಳೂರು ಸಮಾಚಾರ’ ಎಂಬ ಹೆಸರಿನಲ್ಲಿ ಪತ್ರಿಕೆ ಆರಂಭವಾಯಿತು. ಕನ್ನಡ ವಾರ ಪತ್ರಿಕೆಯಿಂದ ಕನ್ನಡ ಪತ್ರಿಕೋದ್ಯಮ ಚರಿತ್ರೆ ಕರ್ನಾಟಕದಲ್ಲಿ ಶುರುವಾಗುತ್ತದೆ. ಪಾಶ್ಚಾತ್ಯ ಜಗತ್ತಿನಲ್ಲಿ ಜನಜೀವನದ ಮೇಲೆ ಮುದ್ರಣ ಮಾಧ್ಯಮದ ಪ್ರಭಾವ 3-4 ಶತಮಾನಗಳಿಂದ ಉಂಟಾಗಿದ್ದರೂ ಕನ್ನಡಲ್ಲಿ ಈ ವ್ಯವಸ್ಥೆ ಒಂದೂವರೆ ಶತಮಾನದ ಈಚಿನದು. ಈ ಸೌಲಭ್ಯ ಕನ್ನಡಕ್ಕೆ ಒದಗಿಸಿಕೊಟ್ಟವರು ಪಾಶ್ಚಾತ್ಯರು. ಕ್ರೈಸ್ತ ಮತ ಪ್ರಚಾರಕ್ಕಾಗಿ ಬಂದ ಇವರು ಮೊದಲು ಇಲ್ಲಿ ಕಲ್ಲಚ್ಚಿನ ಮುದ್ರಣವನ್ನು ಬೆಳಕಿಗೆ ತಂದರು. ತದನಂತರ ಅಚ್ಚುಮೊಳೆಗಳ ಮುದ್ರಣವೂ ಆರಂಭವಾಯಿತು. ಕನ್ನಡ ಪತ್ರಿಕೋದ್ಯಮದಲ್ಲಿ ನಂತರ ನಡೆದ ಬೆಳವಣಿಗೆಯೆಲ್ಲಾ ಈಗ ಇತಿಹಾಸ. ಪತ್ರಿಕಾ ದಿನಾಚರಣೆ ಹಿನ್ನೆಲೆಯಲ್ಲಿ  ಕನ್ನಡ ಪತ್ರಿಕೆಗಳನ್ನು ಮನೆ ಮನೆಗಳಿಗೆ ತಲುಪಿಸುವ ಕಾಯಕವನ್ನು ಹಲವು ದಶಕ ಅಥವಾ ವರ್ಷದಿಂದ ಮಾಡಿಕೊಂಡಿರುವ ಬರುತ್ತಿರುವ ಸಾಕಷ್ಟು ವಿತರಕರು ಇದ್ದಾರೆ. ಓದುಗರನ್ನು ಬಲು ಹತ್ತಿರದಿಂದ ನೋಡಿರುವ ಅವರು ಪತ್ರಿಕೆಗಳ ಬಗ್ಗೆ ಲೌಡ್ ಸ್ಪೀಕರ್‌ನಲ್ಲಿ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.

    ದಿನಪತ್ರಿಕೆಗಳು ನಮ್ಮ ಜೀವನದ ಅವಿಭಾಜ್ಯ ಅಂಗ. ನಮಗೆ ಈ ಆಧುನಿಕ ಜಗತ್ತಿನ ಆಗು-ಹೋಗುಗಳ ಬಗ್ಗೆ ಸಂಪೂರ್ಣ ಮಾಹಿತಿ ಮತ್ತು ಅರಿವನ್ನು ಪತ್ರಿಕೆಗಳು ಒದಗಿಸುತ್ತವೆ. ದೇಶದ ರಾಜಕೀಯ, ಆರ್ಥಿಕ, ಸಾಂಸ್ಕೃತಿಕ ಹಾಗೂ ಇನ್ನೂ ಹೆಚ್ಚಿನ ಬೆಳವಣಿಗೆಗಳ ಬಗ್ಗೆ ಮಾತ್ರವಲ್ಲದೆ ನಮ್ಮ ಹಕ್ಕು ಮತ್ತು ಕರ್ತವ್ಯಗಳ ವಿವರಗಳನ್ನೂ ನಮಗೆ ತಿಳಿಸುತ್ತದೆ. ದಿನಪತ್ರಿಕೆ ಓದುವ ಮೂಲಕ ನಾವು ಓದುವ ಆಸಕ್ತಿ ಮತ್ತು ನಮ್ಮ ಬರಹ ಶಕ್ತಿಯನ್ನು ಹೆಚ್ಚಿಸಿಕೊಳ್ಳಲು ಸಹಕಾರಿಯಾಗಿದೆ.

    ಪ್ರಸಾದ್, ಪತ್ರಿಕಾ ವಿತರಕ, ಕಾನೂರು.

    ದೇಶ ವಿದೇಶಗಳಲ್ಲಿ ನಡೆದ ಸುದ್ದಿಗಳು, ಉದ್ಯೋಗದ ಮಾಹಿತಿಗಳು, ವಿದ್ಯಾರ್ಥಿಗಳಿಗೆ ಬೇಕಾದಂಥ ಅಗತ್ಯ ಮಾಹಿತಿಗಳು ಪ್ರತಿ ಮನೆಯ ಓದುಗರಿಗೆ ತಲುಪುತ್ತಿದೆ. ಇಷ್ಟೇ ಅಲ್ಲದೆ ಪತ್ರಿಕೆಯಿಂದ ಹಲವಾರು ಕುಟುಂಬಗಳು ಜೀವನ ಸಾಗಿಸುತ್ತಿವೆ. ವಿದ್ಯಾರ್ಥಿಗಳಿಗೂ ಕೂಡ ಪಾರ್ಟ್ ಟೈಮ್ ಕೆಲಸ ಸಿಗುತ್ತಿದೆ. ವಿದ್ಯಾರ್ಥಿಗಳು ಮೊಬೈಲ್ ಬಳಕೆ ಕಡಿಮೆ ಮಾಡಿ, ದಿನ ಪತ್ರಿಕೆ ಹೆಚ್ಚು ಓದಲು ಸಮಯ ನೀಡಬೇಕಿದೆ. 

    ಸತೀಶ್ ಟಿ.ಜಿ., ಜನಪ್ರಿಯ ನ್ಯೂಸ್ ಏಜೆನ್ಸಿ, ಮಡಿಕೇರಿ 

    ದೃಶ್ಯ ಮಾಧ್ಯಮದಲ್ಲಿ ಎಲ್ಲವೂ ಕ್ಷಣ ಕ್ಷಣಕ್ಕೂ ಸಿಗುವುದರಿಂದ ಪತ್ರಿಕೆ ಓದುವವರ ಸಂಖ್ಯೆ ಇತ್ತೀಚೆಗೆ ಕಡಿಮೆ ಆಗುತ್ತಿದೆ ಎನ್ನುವ ಮಾತುಗಳಿದೆ. ಇದು ಬಹುತೇಕ ನಿಜವೂ ಹೌದು. ಆದರೆ ಪತ್ರಿಕೆಗಳ ಮೂಲಕ ಸಿಗುವ ಜ್ಞಾನ ದೃಶ್ಯ ಮಾಧ್ಯಮಗಳಲ್ಲಿ ಸಿಗಲು ಸಾಧ್ಯವಿಲ್ಲ. ನಿಖರ ಮತ್ತು ವಿಶ್ವಾಸಾರ್ಹ ಸುದ್ದಿಗಳು ಪತ್ರಿಕೆಗಳಲ್ಲಿ ಮಾತ್ರ ಸಿಗಲು ಸಾಧ್ಯ. 

    ಕೃಷಿಕರಿಗೂ ಪತ್ರಿಕೆಗಳು ಅನುಕೂಲವಾಗಿದೆ.

    ದಿವ್ಯಾ, ಚಾರ್ವಿ ಪೇಪರ್ ಏಜೆನ್ಸಿ, ನಾಪೋಕ್ಲು

    ಪತ್ರಿಕೆಗಳು ಯುವ ಪೀಳಿಗೆಯ ಮೆಚ್ಚುಗೆ ಗಳಿಸುವಂತಾಗಬೇಕು. ಹೊಸ ಓದುಗರನ್ನು ಹುಟ್ಟುಹಾಕುವುದಲ್ಲದೆ ಓದುಗರಲ್ಲಿ ಉತ್ಸಾಹ, ಉಲ್ಲಾಸ ಮೂಡಿಸುವ ಬರಹಗಳು ಬರಬೇಕು. ಈಗಿನ ಪತ್ರಿಕೆಗಳು ವಿದ್ಯಾರ್ಥಿಗಳಿಗೂ ಅನುಕೂಲಕರವಾಗಿದೆ. ಉದ್ಯೋಗ, ಕಲಿಕೆಗೂ ಕಲಿಕೆಗೂ ಮಾರ್ಗದರ್ಶನ ಸಿಗುತ್ತದೆ. ಪತ್ರಿಕೆ ವಿತರಕರ ಸ್ನೇಹಿಯಾಗಿಯೂ ಪತ್ರಿಕೆಗಳು ಕೆಲಸ ಮಾಡುತ್ತಿದ್ದು, ದುಡಿಮೆಗೆ ಉತ್ಸಾಹ ಮೂಡಿಸುತ್ತಿದೆ.

    ಜಯರಾಂ, ಪತ್ರಿಕಾ ವಿತರಕ, ಕೂಡಿಗೆ

    ಪತ್ರಿಕೆ ಓದುವ ಹವ್ಯಾಸವನ್ನು ಎಲ್ಲರೂ ಬೆಳೆಸಿಕೊಳ್ಳಬೇಕು. ಇಂದಿನ ಮೊಬೈಲ್ ಯುಗದಲ್ಲಿ ಪತ್ರಿಕೆ ಓದುವವರ ಸಂಖ್ಯೆ ತುಂಬಾ ಕಡಿಮೆಯಾಗಿದೆ. ಅದರಲ್ಲೂ ಇಂದಿನ ಯುವ ಜನತೆ ಪತ್ರಿಕೆ ಓದುವುದನ್ನು ಬಿಟ್ಟಿದ್ದಾರೆ ಎಂದರೂ ತಪ್ಪಾಗುವುದಿಲ್ಲ. ಪತ್ರಿಕೆ ಓದುವ ಪ್ರಾಮುಖ್ಯತೆಯನ್ನು ಅರಿತು ಇಂದಿನ ಯುವ ಜನತೆ ಪತ್ರಿಕೆಯನ್ನು ಕೊಂಡು ಓದುವಂತಾಗಲಿ.

    ಶಿವಕುಮಾರ್, ಪತ್ರಿಕಾ ವಿತರಕ, ಸೋಮವಾರಪೇಟೆ 

    ವೃತ್ತಪತ್ರಿಕೆ ನಮ್ಮ ಓದುವ ಅಭ್ಯಾಸವನ್ನು ಬೆಳೆಸುವುದು ಮಾತ್ರವಲ್ಲದೆ ನಮ್ಮ ಸುತ್ತಲೂ ಮತ್ತು ಪ್ರಪಂಚದಾದ್ಯಂತ ನಡೆಯುತ್ತಿರುವ ವಿಷಯಗಳ ಬಗ್ಗೆ ಜ್ಞಾನವನ್ನು ಪಡೆಯಲು ಸಹಾಯ ಮಾಡುತ್ತದೆ. ನಮ್ಮ ಶಬ್ದಕೋಶವನ್ನು ಸುಧಾರಿಸುತ್ತದೆ. ನಮ್ಮ ಬರವಣಿಗೆ ಕೌಶಲ್ಯವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಪತ್ರಿಕೆಗಳಲ್ಲಿ ಮುಖ್ಯಾಂಶಗಳು ಮತ್ತು ಮಾಹಿತಿಗಳನ್ನು ಸುಂದರವಾಗಿ ವಿವರಿಸಲಾಗಿರುತ್ತದೆ. 

    ಮಂಜುಳಾ, ಪತ್ರಿಕಾ ವಿತರಕಿ, ಸೋಮವಾರಪೇಟೆ

    ಪತ್ರಿಕೆ ಓದುವ ಅಭ್ಯಾಸ ಇರುವವರಿಗೆ ಇದನ್ನು ಬಿಟ್ಟಿರಲು ಅಸಾಧ್ಯ. ಈಗಿನ ತಂತ್ರಜ್ಞಾನದ ಬಳಕೆ ಎಷ್ಟೇ ಇದ್ದರು ಕೂಡ ಪತ್ರಿಕೆಗಳನ್ನು ಓದುವ ಹವ್ಯಾಸ ಇದ್ದವರಿಗೆ ಮನಸಿನಲ್ಲಿರುವ ದುಗುಡಗಳನ್ನು ಹೊರಹಾಕುವುದು ಸುಲಭ. ವಿಷಯವಾರು ಸುದ್ದಿಗಳನ್ನು ಓದುವುದರಿಂದ ಮನಸ್ಸಿಗೆ ಹಿತಾನುಭವಗಳ್ನು ತಂದುಕೊಡುತ್ತದೆ. ಕೊಡಗಿನಂಥ ಮಳೆಯ ಅಬ್ಬರವಿರುವ ಪ್ರದೇಶಗಳಲ್ಲಿ ಸಕಾಲಕ್ಕೆ ಪತ್ರಿಕೆ ತಲುಪಿಸುವಲ್ಲಿ ವಿತರಕರ ಪಾತ್ರ ಬಹಳ ದೊಡ್ಡದು. 

    ಮೇರಿಯಂಡ ಆದೇಶ್ ಬೋಪಯ್ಯ, ಪತ್ರಿಕಾ ವಿತರಕ, ಮರಂದೊಡ ಗ್ರಾಮ

    ನಮ್ಮ ಮಾತೃಭಾಷೆ ಮಳೆಯಾಳಂ. ಆದರೂ ಕನ್ನಡದ ಮೇಲೆ ಅಭಿಮಾನ ಬರುವಂತೆ ಮಾಡಿರುವುದು ಇಲ್ಲಿನ ಕನ್ನಡ ದಿನಪತ್ರಿಕೆಗಳು.  ಪತ್ರಿಕೆಯನ್ನು ದುಡ್ಡುಕೊಟ್ಟು ಖರೀದಿಸಿ ಓದಿದಷ್ಟೂ ಪತ್ರಿಕಾರಂಗ ಹೆಚ್ಚು ಬೆಳೆಯುತ್ತದೆ. ಪತ್ರಿಕೆಗಳಲ್ಲಿ ಹೈನುಗಾರಿಕೆ, ಕೃಷಿ, ವಾಣಿಜ್ಯ ವಿಷಯಗಳು ಆಸಕ್ತ ಓದುಗರ ಗಮನ ಸೆಳೆಯುತ್ತದೆ.

    ಶರ್ಮಿಳಾ, ಪತ್ರಿಕಾ ವಿತರಕಿ, ಕುಟ್ಟ

    ಪತ್ರಿಕೆ ಓದುವುದರಿಂದ ಪ್ರತಿ ನಿತ್ಯ ದೇಶ ವಿದೇಶದಲ್ಲಿ ನಡೆಯುವ ವಿದ್ಯಮಾನಗಳ ಬಗ್ಗೆ ತಿಳಿಯಬಹುದಾಗಿದೆ. ಇಂದು ಮೊಬೈಲ್ ಫೋನುಗಳ ಮೂಲಕ ಎಷ್ಟೆ ವಿಚಾರಗಳೂ ಗೊತ್ತಾದರೂ ಪತ್ರಿಕೆಗಳನ್ನು ಓದಿದಂತೆ ಆಗುವುದಿಲ್ಲ. ನೈಜ ಸುದ್ದಿಗಳು ಇಂದು ಮೂಡಿ ಬರುತ್ತಿರುವುದು ಪತ್ರಿಕೆಗಳಲ್ಲಿ ಮಾತ್ರ. ಅನೇಕರು ದಿನದ ಪ್ರಾರಂಭ ಮಾಡುವುದು ದಿನಪತ್ರಿಕೆಗಳನ್ನು ಓದಿದ ನಂತರ. ಕಡಿಮೆ ಬೆಲೆಯಲ್ಲಿ ಹೆಚ್ಚು ಮಾಹಿತಿ ತಿಳಿದುಕೊಳ್ಳಬಹುದಾದ ಮಾಧ್ಯಮ ಪತ್ರಿಕೆಯಾಗಿದೆ.

    ದಿನೇಶ್ ಮಾಲಂಬಿ, ಪತ್ರಿಕಾ ವಿತರಕ, ಶನಿವಾರಸಂತೆ

    ನಮ್ಮಲ್ಲಿಗೆ ದೇಶದ ಬಹುತೇಕ ಭಾಷೆಗಳ ಪ್ರಮುಖ ಪತ್ರಿಕೆಗಳು ಬರುತ್ತದೆ. ಪತ್ರಿಕೆಗಳಿಂದಾಗಿಯೇ ನಮಗೆ ವಿವಿಧ ಭಾಷೆಗಳ ಪರಿಚಯ ಆಗಿದೆ. ಸುಮಾರು 60 ವರ್ಷಗಳಿಂದ ಪತ್ರಿಕೆಗಳ ವಿತರಣೆ ಮಾಡುತ್ತಿದ್ದೇನೆ. ಆಗಿನ ದಿನಗಳಿಗೆ ಹೋಲಿಸಿದರೆ ಈಗ ಪತ್ರಿಕೆ ಓದುವವರ ಸಂಖ್ಯೆ ತುಂಬಾ ಕಡಿಮೆ ಆಗಿದೆ. ಆದರೂ ಸುದ್ದಿಯ ವಿಷಯದಲ್ಲಿ ಪತ್ರಿಕೆಗಳು ಇಂದಿಗೂ ವಿಶ್ವಾಸಾರ್ಹತೆ ಉಳಿಸಿಕೊಂಡಿರುವುದು ಹೆಮ್ಮೆಯ ವಿಷಯ.

    ವಿ.ಪಿ. ಪ್ರಕಾಶ್, ಹಿರಿಯ ಪತ್ರಿಕಾ ವಿತರಕ, ಕುಶಾಲನಗರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts