

ಬೆಂಗಳೂರು: ರಾಜ್ಯದ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ನಡೆಸುವ ರಾಜ್ಯ ಚುನಾವಣೆ ಆಯೋಗ ಎಸ್ಐಆರ್ಗೆ ಮುನ್ನದ ಮತದಾರರ ಯಾದಿ ಪರಿಗಣಿಸಬೇಕೆ ಅಥವಾ ಎಸ್ಐಆರ್ ನಂತರದ ಮತದಾರರ ಪಟ್ಟಿಯನ್ನು ಪರಿಗಣಿಸಬೇಕೆಂಬ ಎಂಬ ವಿಚಾರದಲ್ಲಿ ಸರ್ಕಾರ ಅಕ್ಷರಶಃ ಜಿಜ್ಞಾಸೆಗೆ ಸಿಲುಕಿದೆ.
ಗುರುವಾರ ನಡೆದ ಸಂಪುಟ ಸಭೆಯಲ್ಲಿ ಈ ವಿಚಾರವಾಗಿ ಸುದೀರ್ಘ ಚರ್ಚೆ ನಡೆದಿದೆ. ಅಚ್ಚರಿ ಎಂದರೆ ಬಹುತೇಕ ಸಚಿವರು ತಮ್ಮ ಅಭಿಪ್ರಾಯ ದಾಖಲಿಸಿದ್ದು, ವಿಭಿನ್ನ ಅನಿಸಿಕೆ ವ್ಯಕ್ತವಾಯಿತು ಎಂದು ಉನ್ನತ ಮೂಲಗಳು ತಿಳಿಸಿವೆ. ಗ್ರೇಟರ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಐದು ಪಾಲಿಕೆಗೆ ಡಿಸೆಂಬರ್ ಒಳಗೆ ಚುನಾವಣೆ ನಡೆಸಬೇಕಾದ ಅನಿವಾರ್ಯತೆಗೆ ಸರ್ಕಾರ ಸಿಲುಕಿದೆ. ಚುನಾವಣೆ ಮುಂದೂಡಲು ನೆಪ ಹುಡುಕಿ ಮತ್ತೆ ನಮ್ಮ ಬಳಿ ಬರಬೇಡಿ, ಡಿಸೆಂಬರ್ ಒಳಗೆ ಚುನಾವಣೆ ನಡೆಸಿ ಎಂದು ಸುಪ್ರಿಂ ಕೋರ್ಟ್ ಸರ್ಕಾರಕ್ಕೆ ಎಚ್ಚರಿಕೆ ನೀಡಿ ಕಳಿಸಿ ಮೂರು ತಿಂಗಳು ಕಳೆದಿದೆ. ಹೀಗಾಗಿ ತಕ್ಷಣವೇ ಚುನಾವಣೆಗೆ ಸಜ್ಜಾಗಬೇಕಾಗಿದೆ. ಜತೆಗೆ ಜಿಲ್ಲಾ ಪಂಚಾಯಿತಿ ಮತ್ತು ತಾಲೂಕು ಪಂಚಾಯಿತಿ ಚುನಾವಣೆಗೂ ಕೈ ಹಾಕಬೇಕಿದೆ.
ಆದರೆ, ಆಡಳಿತ ಪಕ್ಷಕ್ಕೆ ವಿಚಿತ್ರ ಸಂದಿಗ್ಧ ಪರಿಸ್ಥಿತಿ ಎದುರಾಗಿದೆ. ಒಂದೊಮ್ಮೆ ಕೇಂದ್ರ ಚುನಾವಣಾ ಆಯೋಗ ಎಸ್ಐಆರ್ ಮೂಲಕ ಸಿದ್ಧಪಡಿಸಿದ ಮತದಾರರ ಪಟ್ಟಿಯನ್ನು ಒಪ್ಪಿಕೊಂಡು ಅದನ್ನೇ ರಾಜ್ಯದ ಸ್ಥಳೀಯ ಸಂಸ್ಥೆಗೆ ಬಳಸಿಕೊಳ್ಳುವುದು ಎಷ್ಟು ಸೂಕ್ತ ಎಂಬ ಪ್ರಶ್ನೆ ಎದುರಾಗಿದೆ. ಇದೇ ವಿಚಾರ ಸಂಪುಟ ಸಭೆಯಲ್ಲಿ ಸುದೀರ್ಘ ಚರ್ಚೆಯಾಗಿದೆ. ಹಾಗೆಯೇ, ಬೇರೆ ರಾಜ್ಯದಲ್ಲಿ ಎಸ್ಐಆರ್ ಹೇಗೆ ನಡೆಯಿತೋ ತಿಳಿಯದು, ನಮ್ಮಲ್ಲಂತೂ ಅಚ್ಚುಕಟ್ಟಾಗಿ ನಡೆದಿದೆ. ಕೆಲವು ಸಣ್ಣಪುಟ್ಟ ವ್ಯತ್ಯಾಸ ಇರಬಹುದು. ಆದರೆ 5.5 ಕೋಟಿ ಮತದಾರರ ಪಟ್ಟಿಯನ್ನು ಪರಿಷ್ಕರಿಸುವಾಗ ಸಹಜ. ಹೀಗಾಗಿ ಈ ಮತದಾರರ ಪಟ್ಟಿಯನ್ನೇ ಸ್ಥಳೀಯ ಸಂಸ್ಥೆ ಚುನಾವಣೆಗೆ ಬಳಸಿಕೊಳ್ಳುವುದು ಸೂಕ್ತ ಎಂದು ಕೆಲವು ಸಚಿವರು ಅಭಿಪ್ರಾಯ ನೀಡಿದ್ದಾರೆ.
ಹಾಗೊಂದು ವೇಳೆ ಎಸ್ಐಆರ್ ಮೂಲಕ ಸಿದ್ಧವಾದ ಮತದಾರರ ಪಟ್ಟಿಯನ್ನು ಬಳಸಿಕೊಂಡರೆ ಪ್ರತಿಪಕ್ಷಕ್ಕೆ ಆಹಾರಕೊಟ್ಟಂತೆ, ಇಷ್ಟೆಲ್ಲ ಹೋರಾಟ ಮಾಡಿಯೂ ಆ ಪಟ್ಟಿಯನ್ನು ಬಳಸಿಕೊಳ್ಳಲು ರಾಜ್ಯ ಚುನಾವಣೆ ಆಯೋಗಕ್ಕೆ ಅನುಮತಿ ನೀಡಿದರೆ ಬೇರೆ ರೀತಿ ಸಂದೇಶ ಹೋಗಬಹುದು. ಅಲ್ಲದೆ ಇಂಡಿಯಾ ಬ್ಲಾಕ್ ಒಕ್ಕೂಟದ ಪಕ್ಷಗಳಲ್ಲಿ ಬೇರೆ ಅಭಿಪ್ರಾಯ ಮೂಡಬಹುದು ಎಂಬ ಚರ್ಚೆ ನಡೆದಿದೆ. ಇದೇ ಕಾರಣಕ್ಕೆ ಪಕ್ಷದ ದೆಹಲಿ ನಾಯಕರೊಂದಿಗೆ ತಕ್ಷಣವೇ ಚರ್ಚೆ ಮಾಡಿ ಅಂತಿಮ ತೀರ್ಮಾನ ಕೈಗೊಳ್ಳುವ ಬಗ್ಗೆ ಸಂಪುಟ ಸಭೆಯಲ್ಲಿ ನಿರ್ಧರಿಸಲಾಯಿತು ಎಂದು ಮೂಲಗಳು ತಿಳಿಸಿವೆ.
ಸಂಪುಟ ಸಭೆಯ ಬಳಿಕ ಸುದ್ದಿಗಾರರಿಗೆ ಪ್ರತಿಕ್ರಿಯೆ ನೀಡಿದ ಗ್ರಾಮೀಣಾಭಿವೃದ್ಧಿ ಸಚಿವ ಈಶ್ವರ ಖಂಡ್ರೆ, ಸ್ಥಳೀಯ ಸಂಸ್ಥೆ ಚುನಾವಣೆಗೆ ಮತದಾರರ ಪಟ್ಟಿಯನ್ನು ಬಳಸುವ ಕುರಿತು ಸಂಪುಟ ಸಭೆಯಲ್ಲಿ ಚರ್ಚೆಯಾಯಿತು. ವಿವಿಧ ಸ್ವರೂಪದಲ್ಲಿ ಅಭಿಪ್ರಾಯ ಬಂದಿದೆ. ಅಲ್ಲದೆ ಈ ವಿಚಾರದಲ್ಲಿ ರಾಜ್ಯ ಚುನಾವಣೆ ಆಯೋಗ ಅಂತಿಮ ನಿರ್ಧಾರ ಮಾಡುತ್ತದೆ ಎಂದರು. ಇನ್ನು ಬ್ಯಾಲೆಟ್ ಪೇಪರ್ ಬಳಕೆ ಮಾಡುವ ಬಗ್ಗೆ ಈಗಾಗಲೇ ತೀರ್ಮಾನ ಮಾಡಿದ್ದು, ಚುನಾವಣೆ ಆಯೋಗಕ್ಕೆ ಹಣವನ್ನೂ ಬಿಡುಗಡೆ ಮಾಡಲಾಗಿದೆ ಎಂದು ತಿಳಿಸಿದರು.
1. ಎಸ್ಐಆರ್ಗೆ ಮುನ್ನ ಕೇಂದ್ರ ಚುನಾವಣೆ ಆಯೋಗ ಸಿದ್ಧಪಡಿಸಿದ್ದ ಮತದಾರರ ಪಟ್ಟಿಯನ್ನು ಬಳಸಿಕೊಂಡು ಅವಧಿಯಲ್ಲಿ ಪರಿಷ್ಕರಣೆ ಮಾಡಿಕೊಳ್ಳುವುದು.
2. ಎಸ್ಐಆರ್ ಬಳಿಕ ಸಿದ್ಧವಾಗಿರುವ ಮತದಾರರ ಪಟ್ಟಿಯನ್ನು ಬಳಸಿ ಪರಿಷ್ಕರಣೆಗೆ ಅವಕಾಶ ನೀಡಿ ಕೈಬಿಟ್ಟು ಹೋದವರ ಹೆಸರು ಸೇರಿಸಿಕೊಳ್ಳುವುದು.
3. 2025ರ ಜನವರಿಯಲ್ಲಿದ್ದ ಮತದಾರರ ಪಟ್ಟಿಯನ್ನೇ ಆಧಾರವಾಗಿಟ್ಟುಕೊಂಡು ಯಾವುದೇ ಪರಿಷ್ಕರಣೆ ನಡೆಸದೇ ಚುನಾವಣೆಗೆ ಅವಕಾಶ ಮಾಡಿಕೊಡುವುದು.
ನವೆಂಬರ್ 30ರಿಂದ ಬೆಳಗಾವಿಯ ಸುವರ್ಣ ಸೌಧದಲ್ಲಿ ನಡೆಯಬೇಕಿದ್ದ ಚಳಿಗಾಲದ ಅಧಿವೇಶನ ಡಿ.2ರಿಂದ ಆರಂಭಿಸಲು ಸರ್ಕಾರ ನಿರ್ಧರಿಸಿದೆ. ಈ ಕುರಿತು ಸ್ಪಷ್ಟನೆ ನೀಡಿದ ಸಚಿವ ಈಶ್ವರ ಖಂಡ್ರೆ, ಎಲ್ಲರ ಅನುಕೂಲ ನೋಡಿಕೊಂಡು ದಿನಾಂಕ ಬದಲಿಸಲಾಗಿದೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ರಾಜ್ಯದ ರಾಜಕೀಯ ಬೆಳವಣಿಗೆಗಳು, ಎಸ್ಐಆರ್ ಬಳಿಕ ಸಿದ್ಧಗೊಂಡಿರುವ ಮತದಾರರ ಪಟ್ಟಿಯನ್ನು ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಬಳಸುವುದು, ಸಂಪುಟ ಭರ್ತಿ- ನಿಗಮಗಳ ನೇಮಕ ಕುರಿತು ಹೈಕಮಾಂಡ್ ಜತೆ ಸಮಾಲೋಚನೆ ನಡೆಸಲು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಶುಕ್ರವಾರ ನವದೆಹಲಿಗೆ ತೆರಳಲಿದ್ದಾರೆ.
ಸ್ಥಳೀಯ ಸಂಸ್ಥೆ ಚುನಾವಣೆ ಮುಂದೂಡಲು ಇನ್ನು ಅವಕಾಶ ಇಲ್ಲ. ಆದರೆ, ಮತದಾರರ ಪಟ್ಟಿ ಹಳೆಯದ್ದು ಬಳಸಬೇಕೋ ಅಥವಾ ಹೊಸದನ್ನು ಪರಿಗಣಿಸಬೇಕೋ ಎಂಬುದರ ಬಗ್ಗೆ ತೀರ್ಮಾನ ಮಾಡಲು ಸಾಧ್ಯವಾಗಿಲ್ಲ. ಈ ಕಾರಣಕ್ಕೆ ಎಐಸಿಸಿ ನಾಯಕರೊಂದಿಗೆ ಚರ್ಚೆ ಮಾಡಿ ಮುಂದುವರಿಯಲು ನಿರ್ಧರಿಸಿದ್ದಾರೆ ಎನ್ನಲಾಗಿದೆ.
ಹಾಗೆಯೇ, ಕಳೆದ ವಾರ ದೆಹಲಿಗೆ ತೆರಳಿದ್ದ ಮಾಜಿ ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಬಿ.ಕೆ.ಹರಿಪ್ರಸಾದ್ ದೆಹಲಿ ನಾಯರಿಗೆ ರಾಜ್ಯದ ವಿದ್ಯಮಾನಗಳ ಬಗ್ಗೆ ಮನವರಿಕೆ ಮಾಡಿ ರಾಜ್ಯಕ್ಕೆ ವಾಪಸ್ ಆಗಿದ್ದರು. ಸಿದ್ದರಾಮಯ್ಯ ರಾಹುಲ್ ಗಾಂಧಿಯ ಭೇಟಿಯ ಸಂದರ್ಭದಲ್ಲಿ ಸ್ಟಿಂಗ್ ಪ್ರಕರಣವನ್ನ ಪ್ರಸ್ತಾಪಿಸಿ, ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದರು. ಈ ಕುರಿತಂತೆಯೂ ಸಿಎಂ ವಿವರಣೆ ನೀಡುವ ಸಾಧ್ಯತೆ ಇದೆ. ಹಾಗೆಯೇ ಎಸ್ಐಆರ್ ವಿರುದ್ಧ ಹೋರಾಟ ನಡೆಸಿರುವ ಕುರಿತು ಮತ್ತು ಮುಂದಿನ ಹಂತದ ಹೋರಾಟದ ಬಗ್ಗೆಯೂ ಹೈಕಮಾಂಡ್ಗೆ ಸಿಎಂ ವಿವರಣೆ ನೀಡಲಿದ್ದಾರೆ.
ಮಹಿಳಾ ಖೋಟಾ ಭರ್ತಿಗೆ ಸಮ್ಮತಿ?: ಸಿಎಂ ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ಸಂಪುಟ ರಚನೆಯಾಗಿ ಐದು ತಿಂಗಳಾಗುತ್ತಿದ್ದು, ಮಳೆಗಾಲದ ಅದಿವೇಶನಕ್ಕೆ ಮುನ್ನ ಸಂಪುಟದಲ್ಲಿ ಮಹಿಳೆಗೆ ಸ್ಥಾನ ನೀಡುವ ಬಗ್ಗೆ ವರಿಷ್ಠರ ಜತೆ ಸಿಎಂ ಸಮಾಲೋಚನೆ ನಡೆಸಲಿದ್ದಾರೆ. ಈ ವಿಚಾರದಲ್ಲಿ ವರಿಷ್ಠರು ಸಮ್ಮತಿ ನೀಡುವ ಸಾಧ್ಯತೆ ಇದೆ ಎಂಬ ಮಾಹಿತಿ ಲಭ್ಯವಾಗಿದೆ.
ಕಲಬುರಗಿ ಜಿಲ್ಲೆಯ ಚಿತ್ತಾಪುರ ತಾಲೂಕಿನ ಪ್ರಾಚೀನ ಬೌದ್ಧ ಕೇಂದ್ರ ಸನ್ನತಿಯ ಪ್ರಗತಿಗೆ ಸರ್ಕಾರ ಅಭಿವೃದ್ಧಿ ಪ್ರಾಧಿಕಾರ ರಚಿಸಲು ಗುರುವಾರದ ಸಂಪುಟ ಸಭೆಯಲ್ಲಿ ನಿರ್ಣಯ ಕೈಗೊಂಡಿದೆ. ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರ ತವರು ಕ್ಷೇತ್ರದಲ್ಲಿರುವ ಈ ಐತಿಹಾಸಿಕ ಕ್ಷೇತ್ರದಲ್ಲಿ ಐತಿಹಾಸಿಕ ಹಾಗೂ ಪುರಾತತ್ವ ಮಹತ್ವವುಳ್ಳ ಅಶೋಕನ ಶಾಸನಗಳು ಹಾಗೂ ಬೌದ್ಧ ಕಾಲದ ಅವಶೇಷಗಳಿವೆ. ಬೌದ್ಧರ ಕಾಲದ ಶಾಸನಗಳ ವೀಕ್ಷಣೆಗೆ ದೇಶ-ವಿದೇಶಗಳಿಂದ ಯಾತ್ರಾರ್ಥಿಗಳು, ಪ್ರವಾಸಿಗರು ಆಗಮಿಸುವ ಹಿನ್ನೆಲೆಯಲ್ಲಿ ಸಮಗ್ರ ಅಭಿವೃದ್ಧಿಗೆ ವಿಧೇಯಕ ಮಂಡಿಸಲು ಸಿದ್ಧತೆ ಮಾಡಿಕೊಂಡು ಬೆಳಗಾವಿ ಅಧಿವೇಶನದಲ್ಲಿ ಮಂಡಿಸಲು ನಿರ್ಧರಿಸಲಾಗಿದೆ.
ಸಹಾಯಕ ಪ್ರಾಧ್ಯಾಪಕರ ನೇಮಕಕ್ಕೆ ಸರ್ಕಾರ ಮುಂದಾಗಿದ್ದು, ಈ ಹಿನ್ನೆಲೆಯಲ್ಲಿ ವಿಶೇಷ ನಿಯಮ ತರಲು ಮುಂದಾಗಿದೆ. ಕರ್ನಾಟಕ ಶಿಕ್ಷಣ ಇಲಾಖೆ ಸೇವೆಗಳು (ಕಾಲೇಜು ಶಿಕ್ಷಣ ಇಲಾಖೆ) (ಸಹಾಯಕ ಪ್ರಾಧ್ಯಾಪಕರ ನೇಮಕಾತಿ) (ವಿಶೇಷ) ನಿಯಮಗಳು, 2026 ಮತ್ತು ಕರ್ನಾಟಕ ಉನ್ನತ ಶಿಕ್ಷಣ ಇಲಾಖೆ ಸೇವೆಗಳು (ತಾಂತ್ರಿಕ ಶಿಕ್ಷಣ ಇಲಾಖೆ) (ಬೋಧಕ ಹುದ್ದೆಗಳ ನೇಮಕಾತಿ) (ವಿಶೇಷ) ನಿಯಮಗಳು, 2026ಕ್ಕೆ ಸಂಪುಟ ಅನುಮೋದನೆ ನೀಡಿದ್ದು, ಮುಂದಿನ ಸಂಪುಟ ಸಭೆಯಲ್ಲಿ ಮಂಡಿಸಲಾಗುತ್ತದೆ.