Ramayana Movie: ಜಟಾಯು ಪಾತ್ರಕ್ಕೆ ಅನೂಪ್ ಖೇರ್ ಧ್ವನಿ! ‘ದಿ ವಿಂಗ್ಸ್ ಆಫ್ ಧರ್ಮ’ ಪೋಸ್ಟರ್ ರಿಲೀಸ್​

ರಣಬೀರ್ ಕಪೂರ್ ನಟನೆಯ ‘ರಾಮಾಯಣ’ ಸಿನಿಮಾದಲ್ಲಿ ಜಟಾಯು ಪಾತ್ರಕ್ಕೆ ಅನೂಪ್ ಖೇರ್ ಧ್ವನಿ ನೀಡಿದ್ದಾರೆ. ‘ದಿ ವಿಂಗ್ಸ್ ಆಫ್ ಧರ್ಮ’ ಶೀರ್ಷಿಕೆಯ ಹೊಸ ಪೋಸ್ಟರ್ ಬಿಡುಗಡೆಯಾಗಿದೆ.
Ramayana : Anupam Kher as Jatayu
ಜಟಾಯು ಪಾತ್ರಕ್ಕೆ ಅನೂಪ್ ಖೇರ್ ಧ್ವನಿ
Published on: 

Ramayana Movie: ನಿತೇಶ್ ತಿವಾರಿ ನಿರ್ದೇಶನದ ಬಹುನಿರೀಕ್ಷಿತ ‘ರಾಮಾಯಣ’ ಸಿನಿಮಾದಿಂದ ಮತ್ತೊಂದು ಹೊಸ ಪೋಸ್ಟರ್ ಬಿಡುಗಡೆಯಾಗಿದೆ. ಈ ಬಾರಿ ರಾಮಾಯಣದ ಪ್ರಮುಖ ಪಾತ್ರವಾದ ಜಟಾಯುವನ್ನು ಪರಿಚಯಿಸಲಾಗಿದ್ದು, ಹಿರಿಯ ನಟ ಅನೂಪ್ ಖೇರ್ ಧ್ವನಿ ನೀಡಿದ್ದಾರೆ. ‘ದಿ ವಿಂಗ್ಸ್ ಆಫ್ ಧರ್ಮ’ (ಧರ್ಮದ ರೆಕ್ಕೆಗಳು) ಎಂಬ ಶೀರ್ಷಿಕೆಯಡಿ ಬಿಡುಗಡೆಯಾಗಿರುವ ಪೋಸ್ಟರ್ ಈಗ ಸಿನಿಪ್ರಿಯರ ಗಮನ ಸೆಳೆಯುತ್ತಿದೆ.

ಪೋಸ್ಟರ್‌ನಲ್ಲಿ ಜಟಾಯುವಿನ ತೀಕ್ಷ್ಣ ನೋಟ ಮತ್ತು ರೆಕ್ಕೆಗಳನ್ನು ವಿಶಾಲವಾಗಿ ಹರಡಿಕೊಂಡಿರುವ ಭವ್ಯ ರೂಪ ಗಮನ ಸೆಳೆಯುತ್ತದೆ. ಧೈರ್ಯ, ತ್ಯಾಗ ಹಾಗೂ ಧರ್ಮದ ಪರವಾಗಿ ನಿಲ್ಲುವ ಸಂಕಲ್ಪವನ್ನು ಈ ಪೋಸ್ಟರ್ ಬಿಂಬಿಸುತ್ತದೆ. ನಿರ್ಮಾಪಕರು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟರ್ ಹಂಚಿಕೊಂಡು, “ಕೆಟ್ಟತನದ ವಿರುದ್ಧ ಹೋರಾಡಲು ಧೈರ್ಯವೇ ಎದ್ದು ನಿಂತಿತು. ಗೆಲ್ಲುವುದಕ್ಕಾಗಿ ಅಲ್ಲ, ಧರ್ಮದ ಪರವಾಗಿ ನಿಲ್ಲಲು ಆತ ಹೋರಾಡಿದ” ಎಂಬ ಸಾಲುಗಳ ಮೂಲಕ ಜಟಾಯುವಿನ ಪಾತ್ರವನ್ನು ಪರಿಚಯಿಸಿದ್ದಾರೆ.

ಸೀತೆಯನ್ನು ಕಾಯಲು ರಾವಣನ ವಿರುದ್ಧ ಹೋರಾಡಿದ್ದ ಜಟಾಯು

ರಾಮಾಯಣದಲ್ಲಿ ಜಟಾಯು ಧೈರ್ಯ ಮತ್ತು ತ್ಯಾಗದ ಸಂಕೇತವಾಗಿ ಗುರುತಿಸಿಕೊಂಡಿದ್ದಾನೆ. ರಾವಣ ಸೀತೆಯನ್ನು ಅಪಹರಿಸಿಕೊಂಡು ಹೋಗುವಾಗ ಆಕೆಯನ್ನು ರಕ್ಷಿಸಲು ಜಟಾಯು ಪ್ರಯತ್ನಿಸುತ್ತಾನೆ. ರಾವಣನ ಶಕ್ತಿಯ ಅರಿವಿದ್ದರೂ ಆತನ ವಿರುದ್ಧ ಹೋರಾಡುವ ಜಟಾಯು, ಧರ್ಮದ ಪರವಾಗಿ ನಿಲ್ಲುವ ಧೈರ್ಯವನ್ನು ತೋರಿಸುತ್ತಾನೆ. ಈ ಪಾತ್ರಕ್ಕೆ ಅನೂಪ್ ಖೇರ್ ತಮ್ಮ ಧ್ವನಿ ನೀಡಿದ್ದಾರೆ.

ರಾಮನಾಗಿ ರಣಬೀರ್, ರಾವಣನಾಗಿ ಯಶ್

ನಮಿತ್ ಮಲ್ಹೋತ್ರಾ ನಿರ್ಮಾಣದ ‘ರಾಮಾಯಣ’ ಸಿನಿಮಾದಲ್ಲಿ ರಣಬೀರ್ ಕಪೂರ್ ರಾಮನಾಗಿ, ಸಾಯಿ ಪಲ್ಲವಿ ಸೀತೆಯಾಗಿ, ಯಶ್ ರಾವಣನಾಗಿ, ಸನ್ನಿ ಡಿಯೋಲ್ ಹನುಮಂತನಾಗಿ ಹಾಗೂ ರವಿ ದುಬೆ ಲಕ್ಷ್ಮಣನಾಗಿ ಕಾಣಿಸಿಕೊಳ್ಳಲಿದ್ದಾರೆ. ಪ್ರೈಮ್ ಫೋಕಸ್ ಸ್ಟುಡಿಯೋಸ್, ಆಸ್ಕರ್ ಪ್ರಶಸ್ತಿ ವಿಜೇತ ಡಿಎನ್‌ಇಜಿ (DNEG) ಮತ್ತು ಯಶ್ ಅವರ ಮಾನ್‌ಸ್ಟರ್ ಮೈಂಡ್ ಕ್ರಿಯೇಷನ್ಸ್ ಜಂಟಿಯಾಗಿ ಈ ಚಿತ್ರವನ್ನು ನಿರ್ಮಿಸುತ್ತಿವೆ. ಎರಡು ಭಾಗಗಳಲ್ಲಿ ಬಿಡುಗಡೆಯಾಗಲಿರುವ ಸಿನಿಮಾದ ಮೊದಲ ಭಾಗ 2026ರ ನವೆಂಬರ್ 5ರಂದು ವಿಶ್ವದಾದ್ಯಂತ ತೆರೆಕಾಣಲಿದ್ದು, ಎರಡನೇ ಭಾಗ 2027ರ ದೀಪಾವಳಿಗೆ ಬಿಡುಗಡೆಯಾಗಲಿದೆ.

ಇದನ್ನೂ ಓದಿ: ಶೇ. 56 ಮೀಸಲಾತಿಗೆ ಪಟ್ಟು: ಸುಪ್ರೀಂ ಕೋರ್ಟ್‌ಗೆ ಹೋಗಲು ಮುನಿಯಪ್ಪ ಸಿದ್ಧತೆ | Muniyappa on Reservation

ಹಿಂದಿ, ತಮಿಳು, ತೆಲುಗು, ಕನ್ನಡ ಮತ್ತು ಮಲಯಾಳಂ ಭಾಷೆಗಳಲ್ಲಿ ಸಿನಿಮಾ ಬಿಡುಗಡೆಯಾಗಲಿದ್ದು, ಐಮ್ಯಾಕ್ಸ್ (IMAX) ಸ್ವರೂಪದಲ್ಲಿಯೂ ವೀಕ್ಷಣೆಗೆ ಲಭ್ಯವಾಗಲಿದೆ. ಭಾರತದ ಹೊರಗೆ ಸೋನಿ ಪಿಕ್ಚರ್ಸ್ ಜಾಗತಿಕ ವಿತರಣೆಯ ಜವಾಬ್ದಾರಿ ವಹಿಸಿಕೊಂಡಿದ್ದು, ಹಿಂದಿ ಭಾಷೆಯ ಮಾರುಕಟ್ಟೆಯಲ್ಲಿ ಧರ್ಮ ಪ್ರೊಡಕ್ಷನ್ಸ್ ವಿತರಣೆ ಮಾಡಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net