

ನವದೆಹಲಿ: ದೇಶದ ಸಶಸ್ತ್ರ ಪಡೆಗಳಲ್ಲಿ ಸೇವೆ ಸಲ್ಲಿಸಬೇಕು ಎಂಬುದು ಅನೇಕ ಯುವಜನರ ಕನಸು. ಈ ಕನಸು ನನಸಾಗಿಸಲು ಕೇಂದ್ರ ಸರ್ಕಾರ 2022ರ ಜೂನ್ನಲ್ಲಿ ‘ಅಗ್ನಿಪಥ’ ಯೋಜನೆ ಜಾರಿಗೆ ತಂದಿತು. ಆದರೆ ಇದರಲ್ಲಿ 4 ವರ್ಷಗಳ ಸೇವೆಯ ಬಳಿಕ ಶೇ. 25 ಮಂದಿಗೆ ಮಾತ್ರ ಕಾಯಂ ಸೇವೆಗೆ ಅವಕಾಶ, ಉಳಿದ ಶೇ. 75 ಮಂದಿ ಸೇವೆಯಿಂದ ನಿರ್ಗಮಿಸಬೇಕಾದ ನಿಯಮ ಇತ್ತು. ಇದರ ಬಗ್ಗೆ ಆರಂಭದಿಂದಲೂ ಚರ್ಚೆ ನಡೆಯುತ್ತಿತ್ತು. ಇದೀಗ ಮೊದಲ ಬ್ಯಾಚ್ನ ಅಗ್ನಿವೀರರ 4 ವರ್ಷಗಳ ಅವಧಿ ಮುಗಿಯುವ ಹೊಸ್ತಿಲಲ್ಲಿ ಸರ್ಕಾರ ಹೊಸ ಬದಲಾವಣೆಗಳನ್ನು ಪ್ರಕಟಿಸಿದೆ. ಕಾಯಂ ಸೇವೆಗೆ ಮೊದಲ ಹಂತದಲ್ಲಿ ಆಯ್ಕೆಯಾಗದವರಿಗೆ ಇನ್ನೆರಡು ವರ್ಷ ಸೇವೆ ಮುಂದುವರಿಸುವ ಅವಕಾಶ ನೀಡುತ್ತಿದೆ. ಈ ಅವಧಿಯ ಬಳಿಕವೂ ಅರ್ಹತೆ ಮತ್ತು ಕಾರ್ಯಕ್ಷಮತೆಯ ಆಧಾರದಲ್ಲಿ ಕಾಯಂ ಸೈನಿಕರಾಗಲು ಮತ್ತೊಂದು ಅವಕಾಶ ಇರಲಿದೆ.
ಅಗ್ನಿಪಥ ಯೋಜನೆಯಡಿ 2022ರ ಜೂನ್ನಲ್ಲಿ ಮೊದಲ ಬಾರಿಗೆ ಯುವಕರನ್ನು ಅಗ್ನಿವೀರರಾಗಿ ನೇಮಕ ಮಾಡಿಕೊಳ್ಳಲಾಗಿತ್ತು. ಆರಂಭದಲ್ಲಿ ನಾಲ್ಕು ವರ್ಷಗಳ ಸೇವಾವಧಿ ನಿಗದಿಪಡಿಸಲಾಗಿತ್ತು. ಈ ಅವಧಿಯಲ್ಲಿ ನಿರಂತರವಾಗಿ ಕಾರ್ಯಕ್ಷಮತೆಯನ್ನು ಮೌಲ್ಯಮಾಪನ ಮಾಡಿ, ಅರ್ಹತೆ ಮತ್ತು ಸೇನೆಯ ಅವಶ್ಯಕತೆಯ ಆಧಾರದಲ್ಲಿ ಶೇ. 25ರಷ್ಟು ಮಂದಿಯನ್ನು ಕಾಯಂ ಸೇವೆಗೆ ಆಯ್ಕೆ ಮಾಡುವ ನಿಯಮವಿತ್ತು. ಉಳಿದ ಶೇ. 75 ಮಂದಿಯನ್ನು ನಾಲ್ಕು ವರ್ಷಗಳ ಬಳಿಕ ಸೇವೆಯಿಂದ ಬಿಡುಗಡೆ ಮಾಡಬೇಕಿತ್ತು. ಆದರೆ ಮೊದಲ ಬ್ಯಾಚ್ನ ಅಗ್ನಿವೀರರ ಸೇವಾವಧಿ ಮುಗಿಯುವ ಹೊತ್ತಿನಲ್ಲಿ ಕೇಂದ್ರ ಸಚಿವ ಸಂಪುಟ ಈ ನಿಯಮದಲ್ಲಿ ಬದಲಾವಣೆ ಮಾಡಿದೆ. ಶೇ. 25ರಷ್ಟು ಮಂದಿಯನ್ನು ಹಿಂದಿನಂತೆಯೇ ನಾಲ್ಕು ವರ್ಷಗಳ ಬಳಿಕ ಕಾಯಂ ಸೇವೆಗೆ ಆಯ್ಕೆ ಮಾಡಲಾಗುತ್ತದೆ. ಉಳಿದ ಶೇ. 75ರಷ್ಟು ಮಂದಿಗೆ ಅವರ ಇಚ್ಛೆಯ ಮೇರೆಗೆ ಇನ್ನೆರಡು ವರ್ಷಗಳ ಸೇವಾವಕಾಶ ನೀಡಲಾಗುತ್ತದೆ. ಈ ಅವಧಿ ಪೂರ್ಣಗೊಂಡ ಬಳಿಕ ಕಾಯಂ ಸೈನಿಕರಾಗಿ ಸೇರ್ಪಡೆಯಾಗಲು ಮತ್ತೊಂದು ಅವಕಾಶ ಕಲ್ಪಿಸಲಾಗಿದೆ.
ಹೊಸ ನಿರ್ಧಾರದ ಪ್ರಮುಖ ಅಂಶವೇ ಇದು. ಮೊದಲ 4 ವರ್ಷಗಳ ಬಳಿಕ ಕಾಯಂ ಸೇವೆಗೆ ಆಯ್ಕೆಯಾಗದ ಶೇ. 75 ಅಗ್ನಿವೀರರಿಗೆ ಇನ್ನೆರಡು ವರ್ಷ ಸೇವೆ ಮುಂದುವರಿಸಲು ಅವಕಾಶ ನೀಡಲಾಗುತ್ತದೆ. 6 ವರ್ಷಗಳ ಸೇವೆ ಪೂರ್ಣಗೊಂಡ ಬಳಿಕ ಸಶಸ್ತ್ರ ಪಡೆಗಳಲ್ಲಿ ಕಾಯಂ ಸೈನಿಕರಾಗಿ ಸೇರ್ಪಡೆಯಾಗಲು ಅವಕಾಶವಿರುತ್ತದೆ. ಆದರೆ 6 ವರ್ಷ ಸೇವೆ ಮಾಡಿದ ಎಲ್ಲರಿಗೂ ಯಾವುದೇ ಷರತ್ತಿಲ್ಲದೆ ಕಾಯಂ ನೇಮಕಾತಿ ಸಿಗುತ್ತದೆ ಎಂದರ್ಥವಲ್ಲ. ಸೇನೆಯಲ್ಲಿ ಮುಂದುವರಿಯಲು ಆಸಕ್ತಿ ಹೊಂದಿರುವವರು ನಿಗದಿತ ಆಯ್ಕೆ ಮಾನದಂಡಗಳನ್ನು ಪೂರೈಸಬೇಕು. ಅವರ ಕಾರ್ಯಕ್ಷಮತೆ, ಅರ್ಹತೆ ಮತ್ತು ಸೇನೆಯ ಅಗತ್ಯವನ್ನು ಪರಿಗಣಿಸಲಾಗುತ್ತದೆ. ಕೇಂದ್ರ ಸರ್ಕಾರದ ಪ್ರಕಟಣೆಯ ಪ್ರಕಾರ, ಎರಡನೇ ಸೇವಾವಧಿ ಪೂರ್ಣಗೊಳಿಸಿದ ಎಲ್ಲ ಅಗ್ನಿವೀರರಿಗೂ ಕಾಯಂ ಸೇವೆಗೆ ಸೇರ್ಪಡೆಯಾಗುವ ಅವಕಾಶ ನೀಡಲಾಗುತ್ತದೆ. ಆದರೆ ಅದು ಆಟೋಮ್ಯಾಟಿಕ್ ಆಗುವ ನೇಮಕಾತಿಯಲ್ಲ.
ಪ್ರಸ್ತುತ ಅಗ್ನಿಪಥ ನಿಯಮಗಳ ಪ್ರಕಾರ, ಅಗ್ನಿವೀರರು ತಮ್ಮ ಆರಂಭಿಕ ನಾಲ್ಕು ವರ್ಷಗಳ ಸೇವಾವಧಿಯಲ್ಲಿ ವಿವಾಹವಾಗುವಂತಿಲ್ಲ. ನೇಮಕಾತಿ ಸಂದರ್ಭದಲ್ಲಿ ಈ ಷರತ್ತನ್ನು ಪಾಲಿಸುವುದು ಕಡ್ಡಾಯವಾಗಿದೆ. ಆದರೆ ಹೊಸ ವ್ಯವಸ್ಥೆಯಲ್ಲಿ ಶೇ. 75ರಷ್ಟು ಅಗ್ನಿವೀರರಿಗೆ ಇನ್ನೆರಡು ವರ್ಷ ಸೇವೆ ಮುಂದುವರಿಸುವ ಅವಕಾಶ ಸಿಕ್ಕಿರುವುದರಿಂದ, ಅವರ ವೈಯಕ್ತಿಕ ಮತ್ತು ಕೌಟುಂಬಿಕ ಬದುಕಿನ ವಿಚಾರವೂ ಚರ್ಚೆಗೆ ಬಂದಿದೆ. ಹೀಗಾಗಿ ಹೆಚ್ಚುವರಿ ಎರಡು ವರ್ಷಗಳ ಸೇವಾವಧಿಯಲ್ಲಿ ವಿವಾಹ ನಿರ್ಬಂಧವನ್ನು ಸಡಿಲಿಸುವ ಬಗ್ಗೆ ರಕ್ಷಣಾ ಸಚಿವಾಲಯ ಮತ್ತು ಸಶಸ್ತ್ರ ಪಡೆಗಳು ಪರಿಶೀಲನೆ ನಡೆಸುತ್ತಿವೆ. ಆದರೆ ಈ ಬಗ್ಗೆ ಅಂತಿಮ ನಿರ್ಧಾರ ಪ್ರಕಟವಾಗಿಲ್ಲ. ಆರಂಭಿಕ ನಾಲ್ಕು ವರ್ಷಗಳ ಅವಧಿಯಲ್ಲಿ ವಿವಾಹಕ್ಕೆ ಇರುವ ನಿರ್ಬಂಧ ಈಗಿನ ನಿಯಮದಂತೆ ಮುಂದುವರಿಯುತ್ತದೆ.
ಅಗ್ನಿಪಥ ಯೋಜನೆಯಡಿ ಮೊದಲ ಬ್ಯಾಚ್ನಲ್ಲಿ ಸುಮಾರು 24,400 ಯುವಕರು ನೇಮಕಗೊಂಡಿದ್ದರು. ಇವರಲ್ಲಿ ಸುಮಾರು 18,300 ಮಂದಿ 4 ವರ್ಷಗಳ ಸೇವೆ ಪೂರ್ಣಗೊಳಿಸಿ 2026ರ ನವೆಂಬರ್ನಿಂದ ಡಿಸೆಂಬರ್ ಅಂತ್ಯದವರೆಗೆ ಸೇನೆಯಿಂದ ನಿರ್ಗಮಿಸಬೇಕಿತ್ತು. ಇವರಿಗೆ ಹೊಸ ನಿರ್ಧಾರದಿಂದ ಇನ್ನೆರಡು ವರ್ಷ ಸೇವೆ ಮುಂದುವರಿಸುವ ಅವಕಾಶ ಸಿಗಲಿದೆ. ಪ್ರಸ್ತುತ ಸೇನೆಯ ವಿವಿಧ ವಿಭಾಗಗಳಲ್ಲಿ 3 ಲಕ್ಷಕ್ಕೂ ಅಧಿಕ ಅಗ್ನಿವೀರರು ಕಾರ್ಯನಿರ್ವ ಹಿಸುತ್ತಿದ್ದಾರೆ ಎನ್ನುತ್ತವೆ ವರದಿಗಳು. ಹೊಸ ಬದಲಾವಣೆ ಮುಂದಿನ ನೇಮಕಾತಿ ಬ್ಯಾಚ್ಗಳಿಗೂ ಅನ್ವಯವಾಗುತ್ತದೆ. ಅಗ್ನಿವೀರರ ಸೇವೆಯ ಬಗ್ಗೆ ಸಶಸ್ತ್ರ ಪಡೆಗಳಿಂದ ದೊರೆತ ಸಕಾರಾತ್ಮಕ ಪ್ರತಿಕ್ರಿಯೆ ಮತ್ತು ತರಬೇತಿ ಪಡೆದ ಯುವಜನರ ಅನುಭವವನ್ನು ಬಳಸಿಕೊಳ್ಳುವ ಉದ್ದೇಶದಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದಿದೆ ಸರ್ಕಾರ.
ಅಗ್ನಿವೀರರ ನೇಮಕಾತಿ ವಿಧಾನದಲ್ಲೂ ಬದಲಾವಣೆ ಮಾಡಲಾಗಿದೆ. ಇನ್ನು ಮುಂದೆ ಲಿಖಿತ ಪರೀಕ್ಷೆಯನ್ನು ಮೊದಲು ನಡೆಸಿ, ನಂತರ ದೈಹಿಕ ಸಾಮರ್ಥ್ಯ ಪರೀಕ್ಷೆ ನಡೆಸುವ ವ್ಯವಸ್ಥೆ ಜಾರಿಗೆ ಬರಲಿದೆ. ಈ ಹಿಂದೆ ದೈಹಿಕ ಪರೀಕ್ಷೆ ಮೊದಲು ನಡೆಯುತ್ತಿತ್ತು. ಹೊಸ ಕ್ರಮದಿಂದ ಅಭ್ಯರ್ಥಿಗಳ ಶೈಕ್ಷಣಿಕ ಸಾಮರ್ಥ್ಯವನ್ನು ಮೊದಲ ಹಂತದಲ್ಲೇ ಪರಿಶೀಲಿಸಲು ಸಾಧ್ಯವಾಗಲಿದೆ. ಸೇವಾವಧಿಯಲ್ಲಿ ಅಗ್ನಿವೀರರು ಪಡೆಯುವ ತರಬೇತಿ ಮತ್ತು ಅನುಭವಕ್ಕೆ ಅಧಿಕೃತ ಮಾನ್ಯತೆ ನೀಡಲು ಕೌಶಲ ಪ್ರಮಾಣಪತ್ರವನ್ನೂ ಒದಗಿಸಲಾಗುತ್ತದೆ. ಸೇನಾ ತರಬೇತಿ, ತಾಂತ್ರಿಕ ಕೌಶಲ, ಶಿಸ್ತು ಮತ್ತು ಕಾರ್ಯಾನುಭವವನ್ನು ದಾಖಲಿಸುವ ಈ ಪ್ರಮಾಣಪತ್ರವು ಮುಂದಿನ ಉದ್ಯೋಗಾವಕಾಶಗಳಿಗೂ ನೆರವಾಗಬಹುದು.
ಮೊದಲ ವರ್ಷ 30,000 ರೂ. 21,000 ರೂ.
ಎರಡನೇ ವರ್ಷ 33,000 ರೂ. 23,100 ರೂ.
ಮೂರನೇ ವರ್ಷ 36,500 ರೂ. 25,550 ರೂ.
ನಾಲ್ಕನೇ ವರ್ಷ 40,000 ರೂ. 28,000 ರೂ.
ವೇತನದಲ್ಲಿ ಶೇ. 70ರಷ್ಟು ಹಣವನ್ನು ಕೈಗೆ ನೀಡಿ ಉಳಿದ ಶೇ. 30ರಷ್ಟು ಹಣವನ್ನು ಸೇವಾನಿಧಿಗೆ ಜಮೆ ಮಾಡಲಾಗುತ್ತದೆ. ಸರ್ಕಾರವೂ ಅಷ್ಟೇ ಮೊತ್ತವನ್ನು ತನ್ನ ಪಾಲಿನ ಕೊಡುಗೆಯಾಗಿ ಸೇರಿಸುತ್ತದೆ. 4 ವರ್ಷಗಳ ಸೇವೆ ಪೂರ್ಣಗೊಂಡಾಗ ಬಡ್ಡಿ ಸಹಿತ ಸುಮಾರು 11.71 ಲಕ್ಷ ರೂ. ಸೇವಾನಿಧಿ ಪ್ಯಾಕೇಜ್ ದೊರೆಯುತ್ತದೆ. ಈ ಮೊತ್ತವನ್ನು ಪಡೆಯುವವರಿಗೆ ಪಿಂಚಣಿ ಸೌಲಭ್ಯ ಇರುವುದಿಲ್ಲ. ಹೊಸ ವ್ಯವಸ್ಥೆಯಡಿ ಐದನೇ ವರ್ಷದ ಮಾಸಿಕ ವೇತನ 43,500 ರೂ. ಮತ್ತು ಆರನೇ ವರ್ಷದ ವೇತನ 47,500 ರೂ. ಆಗಿರುತ್ತದೆ. ಹೆಚ್ಚುವರಿ 2 ವರ್ಷಗಳ ಸೇವೆಗೆ ಹೆಚ್ಚಿನ ಸಂಭಾವನೆ, ಹೆಚ್ಚುವರಿ ಸೇವಾನಿಧಿ ಮತ್ತು ಸೀನಿಯಾರಿಟಿಯ ಪ್ರಯೋಜನಗಳನ್ನೂ ನೀಡಲಾಗುತ್ತದೆ.
ಅಗ್ನಿಪಥ ಯೋಜನೆ ಸಂಪೂರ್ಣ ರದ್ದಾಗಿಲ್ಲ ಅಥವಾ ಅದರ ಮೂಲ ನೇಮಕಾತಿ ವಿಧಾನ ಬದಲಾಗಿಲ್ಲ. 17.5ರಿಂದ 21 ವರ್ಷದೊಳಗಿನ ಯುವಕರನ್ನು ಆರಂಭದಲ್ಲಿ 4 ವರ್ಷಗಳ ಅವಧಿಗೆ ಅಗ್ನಿವೀರರಾಗಿ ನೇಮಕ ಮಾಡಿಕೊಳ್ಳುವ ವ್ಯವಸ್ಥೆ ಮುಂದುವರಿಯಲಿದೆ. 4 ವರ್ಷಗಳ ಬಳಿಕ ಶೇ. 25 ಮಂದಿ ಯನ್ನು ಕಾಯಂ ಸೇವೆಗೆ ಆಯ್ಕೆ ಮಾಡುವ ಹಿಂದಿನ ನಿಯಮವೂ ಹಾಗೇ ಉಳಿದಿದೆ. ಹೊಸ ಬದಲಾವಣೆ ಪ್ರಕಾರ, ಉಳಿದ ಶೇ. 75 ಮಂದಿಗೆ ಹೆಚ್ಚುವರಿ 2 ವರ್ಷಗಳ ಸೇವಾವಕಾಶ ನೀಡಲಾಗುತ್ತದೆ. ಈ ಅವಧಿಯಲ್ಲಿ ಹೆಚ್ಚಿನ ವೇತನ, ಸೇವಾನಿಧಿ ಪ್ರಯೋಜನಗಳಿರುತ್ತವೆ. 6 ವರ್ಷಗಳ ಬಳಿಕ ಅರ್ಹತೆ ಮತ್ತು ಆಯ್ಕೆ ಮಾನದಂಡಗಳನ್ನು ಪೂರೈಸು ವವರಿಗೆ ಕಾಯಂ ಯೋಧರಾಗುವ ಅವಕಾಶ ದೊರೆಯಲಿದೆ. ಈ ಬದಲಾವಣೆಯಿಂದ ಅಗ್ನಿವೀರರಿಗೆ ಸೇನೆಯಲ್ಲಿ ಮುಂದುವರಿಯಲು ಮತ್ತೊಂದು ಅವಕಾಶ ಸಿಕ್ಕಂತಾಗಿದೆ.