ಇಸ್ರೇಲ್‌ನಲ್ಲಿ ಮಹಾ ಕ್ರಾಂತಿ: ಗಡಿ ಐಸೆನ್‌ಕೋಟ್​ಗೆ ಅರಬ್​ ಪಕ್ಷಗಳ ಬೆಂಬಲ; ಪ್ರಧಾನಿ ಕುರ್ಚಿಯಿಂದ ಕೆಳಗಿಳಿಯಲು ಸಜ್ಜಾದ ನೆತನ್ಯಾಹು? Benjamin Netanyahu

Benjamin Netanyahu faces the threat of losing power; former military chief Gadi Eizenkot leads the way with the support of Arab parties.
ಇಸ್ರೇಲ್ ಗದ್ದುಗೆಯಿಂದ ಕೆಳಗಿಳಿಯುವ ಭೀತಿಯಲ್ಲಿ ಬೆಂಜಮಿನ್ ನೆತನ್ಯಾಹು; ಅರಬ್ ಪಕ್ಷಗಳ ಬೆಂಬಲದೊಂದಿಗೆ ಮುಂಚೂಣಿಯಲ್ಲಿರುವ ಮಾಜಿ ಮಿಲಿಟರಿ ಮುಖ್ಯಸ್ಥ ಗಡಿ ಐಸೆನ್‌ಕೋಟ್.
Published on: 

ಜೆರುಸಲೇಂ: ಇಸ್ರೇಲ್​ನಲ್ಲಿ ಇತ್ತೀಚಿಗೆ ನಡೆದ ಚುನಾವಣೆ ಬಳಿಕ ಅವರ ರಾಜಕೀಯ ರಂಗ ಸಂಪೂರ್ಣ ಬದಲಾಗಿದೆ. ದೀರ್ಘಕಾಲ ದೇಶವನ್ನು ಮುನ್ನಡೆಸಿದ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರ ಕುರ್ಚಿ ಅಲುಗಾಡುತ್ತಿದ್ದು, ಮಾಜಿ ಮಿಲಿಟರಿ ಮುಖ್ಯಸ್ಥ ಗಡಿ ಐಸೆನ್‌ಕೋಟ್ ಪ್ರಧಾನಿ ಗದ್ದುಗೆಗೇರುವ ಸಾಧ್ಯತೆ ದಟ್ಟವಾಗಿದೆ.

ಇಸ್ರೇಲ್‌ನ ಅತಿದೊಡ್ಡ ಅರಬ್ ಒಕ್ಕೂಟವಾದ 'ಜಾಯಿಂಟ್ ಲಿಸ್ಟ್' ಹಾಗೂ 'ರಾಮ್' ಪಕ್ಷಗಳು ಅಚ್ಚರಿಯ ಬೆಳವಣಿಗೆಯಲ್ಲಿ ಐಸೆನ್‌ಕೋಟ್‌ಗೆ ಬಾಹ್ಯ ಬೆಂಬಲ ಘೋಷಿಸಿದ್ದು, ನೆತನ್ಯಾಹು ಅಧಿಕಾರದಿಂದ ಕೆಳಗಿಳಿಯುವುದು ಬಹುತೇಕ ಖಚಿತ ಎಂಬ ಮಾತುಗಳು ಕೇಳಿಬರುತ್ತಿವೆ.

ಕಿಂಗ್‌ಮೇಕರ್ ಆದ ಅರಬ್ ಪಕ್ಷಗಳು!

ಅಕ್ಟೋಬರ್ 27ರಂದು ನಡೆದ ಚುನಾವಣೆಯಲ್ಲಿ ಯಾವುದೇ ಪಕ್ಷಕ್ಕೆ ಸ್ಪಷ್ಟ ಬಹುಮತ ಸಿಕ್ಕಿರಲಿಲ್ಲ. ಆದರೆ ಇಸ್ರೇಲ್ ಇತಿಹಾಸದಲ್ಲೇ ಹಿಂದೆಂದೂ ಕಾಣದ ರೀತಿಯಲ್ಲಿ ಅರಬ್ ಬಹುಸಂಖ್ಯಾತ ಪಕ್ಷಗಳು ಬರೋಬ್ಬರಿ 19 ಸ್ಥಾನಗಳನ್ನು ಗೆದ್ದು ಬೀಗಿವೆ. ಜಾಯಿಂಟ್ ಲಿಸ್ಟ್ 11 ಮತ್ತು ರಾಮ್ ಪಕ್ಷ 8 ಸ್ಥಾನಗಳನ್ನು ಬಾಚಿಕೊಂಡಿದ್ದು, ಈಗ ಇಡೀ ದೇಶದ ರಾಜಕೀಯ ಭವಿಷ್ಯವನ್ನು ನಿರ್ಧರಿಸುವ ಕಿಂಗ್‌ಮೇಕರ್ ಸ್ಥಾನದಲ್ಲಿ ಕುಳಿತಿವೆ.

120 ಸದಸ್ಯ ಬಲದ ನೆಸ್ಸೆಟ್‌ನಲ್ಲಿ ಸರ್ಕಾರ ರಚಿಸಲು 61 ಸದಸ್ಯರ ಬೆಂಬಲ ಬೇಕು. ಅರಬ್ ಪಕ್ಷಗಳ 19 ಸ್ಥಾನಗಳ ಬೆಂಬಲ ಸಿಕ್ಕಿರುವುದರಿಂದ, ಐಸೆನ್‌ಕೋಟ್ ಪರವಾಗಿ ಬರೋಬ್ಬರಿ 67 ಶಾಸಕರ ಬಲ ಬಂದಂತಾಗಿದೆ. ಇದರಿಂದಾಗಿ ಅಧ್ಯಕ್ಷ ಐಸಾಕ್ ಹೆರ್ಜಾಗ್ ಸರ್ಕಾರ ರಚಿಸಲು ಐಸೆನ್‌ಕೋಟ್ ಅವರಿಗೇ ಆಹ್ವಾನ ನೀಡುವ ಸಾಧ್ಯತೆ ಹೆಚ್ಚಾಗಿದೆ.

ನೆತನ್ಯಾಹು ಅವರನ್ನು ಮನೆಗೆ ಕಳಿಸುವುದೇ ಏಕೈಕ ಗುರಿ!

ಐಸೆನ್‌ಕೋಟ್ ನೇತೃತ್ವದ ವಿರೋಧ ಪಕ್ಷದ ನಿಲುವುಗಳ ಬಗ್ಗೆ ತಮಗೆ ಸಂಪೂರ್ಣ ಸಮಾಧಾನವಿಲ್ಲದಿದ್ದರೂ, ನೆತನ್ಯಾಹು ಅವರನ್ನು ಅಧಿಕಾರದಿಂದ ಹೊರಗಿಡಲೇಬೇಕು ಎಂಬ ಏಕೈಕ ಕಾರಣಕ್ಕೆ ಈ ಬೆಂಬಲ ನೀಡಲಾಗಿದೆ ಎಂದು ಜಾಯಿಂಟ್ ಲಿಸ್ಟ್ ಸ್ಪಷ್ಟಪಡಿಸಿದೆ. "ಜನರು ಬದಲಾವಣೆ ಬಯಸಿದ್ದಾರೆ. ನೆತನ್ಯಾಹು ಮತ್ತೆ ಅಧಿಕಾರಕ್ಕೆ ಬರುವುದನ್ನು ತಡೆಯುವುದು ಇಂದಿನ ತುರ್ತು ಅಗತ್ಯ," ಎಂದು ಅರಬ್ ಮೈತ್ರಿಕೂಟ ಹೇಳಿದೆ.

ಯುದ್ಧ, ಗಡಿಯ ಬಿಕ್ಕಟ್ಟುಗಳು ಹಾಗೂ ಅರಬ್ ಸಮುದಾಯದ ವಿರುದ್ಧದ ತಾರತಮ್ಯದ ಧೋರಣೆಗಳಿಂದಾಗಿ ನಿರ್ಗಮಿತ ನೆತನ್ಯಾಹು ಸರ್ಕಾರದ ವಿರುದ್ಧ ಇಸ್ರೇಲ್‌ನಲ್ಲಿ ತೀವ್ರ ಆಕ್ರೋಶ ಹೊಗೆಯಾಡುತ್ತಿತ್ತು. ಈ ಜನಾದೇಶ ಅದಕ್ಕೆ ತಕ್ಕ ಉತ್ತರ ನೀಡಿದೆ ಎನ್ನಲಾಗುತ್ತಿದೆ.

Also Read
ಟ್ರಂಪ್​ ಸೋಲಿನ ಎಫೆಕ್ಟ್​: 'ಕರಡಿ'ಗೆ ಗುಮ್ಮಿದ 'ಗೂಳಿ': ಸೆನ್ಸೆಕ್ಸ್ 1600 ಅಂಕ ಜಿಗಿತ; ಹೂಡಿಕೆದಾರರ ಜೇಬು ಸೇರಿದ 7 ಲಕ್ಷ ಕೋಟಿ! Stock Market India
Benjamin Netanyahu faces the threat of losing power; former military chief Gadi Eizenkot leads the way with the support of Arab parties.

ಲೆಕ್ಕಾಚಾರಗಳು ಇನ್ನೂ ಮುಗಿದಿಲ್ಲ: ದಾರಿ ಸುಲಭವಲ್ಲ!

ಸಂಖ್ಯಾಬಲದ ಲೆಕ್ಕದಲ್ಲಿ ಐಸೆನ್‌ಕೋಟ್ ಮುಂದೆ ಕಂಡರೂ, ಸರ್ಕಾರ ನಡೆಸುವುದು ಅವರಿಗೆ ಹೂವಿನ ಹಾಸಿಗೆಯೇನಲ್ಲ. ನೆತನ್ಯಾಹು ಅವರ ಬಣ ಇನ್ನೂ 53 ಸ್ಥಾನಗಳನ್ನು ಭದ್ರವಾಗಿ ಹಿಡಿದಿಟ್ಟುಕೊಂಡಿದೆ.

ಐಸೆನ್‌ಕೋಟ್ ಅರಬ್ ಪಕ್ಷಗಳ ಬೆಂಬಲ ಪಡೆಯುತ್ತಿರುವುದು ವಿರೋಧ ಪಕ್ಷದೊಳಗಿರುವ ಕೆಲ ಬಲಪಂಥೀಯ ನಾಯಕರಿಗೆ ರುಚಿಸಿಲ್ಲ. ಮುಖ್ಯವಾಗಿ ಮಾಜಿ ಮಿತ್ರ, ಕಟು ವಿರೋಧಿ ಅವಿಗ್ದೋರ್ ಲಿಬರ್ಮನ್ ಅವರಂತಹ ನಾಯಕರು ಪ್ಯಾಲೆಸ್ಟೀನಿಯನ್ನರ ವಿಚಾರದಲ್ಲಿ ಕಠಿಣ ನಿಲುವು ಹೊಂದಿದವರು. ಇಂತಹ ಪರಿಸ್ಥಿತಿಯಲ್ಲಿ ಅರಬ್ ಪಕ್ಷಗಳನ್ನು ಮತ್ತು ಸ್ವಪಕ್ಷೀಯರನ್ನು ಒಟ್ಟಿಗೆ ಕರೆದೊಯ್ಯುವುದು ಐಸೆನ್‌ಕೋಟ್‌ಗೆ ನಿಜವಾದ ಸವಾಲಾಗಿದೆ.

ಹತಾಶೆಯಲ್ಲಿ ನೆತನ್ಯಾಹು? ವಿದೇಶಿ ಹಣದ ಆರೋಪ!

ಕುರ್ಚಿ ಕೈತಪ್ಪುವ ಆತಂಕ ಎದುರಾಗುತ್ತಿದ್ದಂತೆ ನೆತನ್ಯಾಹು ಹೊಸ ದಾಳ ಉರುಳಿಸಿದ್ದಾರೆ. ವಿರೋಧ ಪಕ್ಷಗಳು ಅರಬ್ ಶಾಸಕರೊಂದಿಗೆ ಕೈಜೋಡಿಸುತ್ತಿರುವುದನ್ನು ಕಟುವಾಗಿ ಟೀಕಿಸಿರುವ ಅವರು, ಈ ಚುನಾವಣಾ ಪ್ರಚಾರಕ್ಕೆ ವಿದೇಶಿ ಶಕ್ತಿಗಳು ಹಣ ಹೂಡಿವೆ ಎಂದು ಆರೋಪಿಸಿ ವೀಡಿಯೊ ಬಿಡುಗಡೆ ಮಾಡಿದ್ದಾರೆ. ಸೋಲಿನ ಭೀತಿಯಿಂದಲೇ ನೆತನ್ಯಾಹು ಇಂತಹ ಗಂಭೀರ ಆರೋಪಗಳನ್ನು ಮಾಡುತ್ತಿದ್ದಾರೆ ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.

ಮುಂದೇನು?

ಸಂಪ್ರದಾಯದಂತೆ ಅಧ್ಯಕ್ಷ ಐಸಾಕ್ ಹೆರ್ಜಾಗ್ ಅವರು ಹೆಚ್ಚು ಶಾಸಕರ ಬೆಂಬಲವಿರುವ ಗಡಿ ಐಸೆನ್‌ಕೋಟ್ ಅವರಿಗೆ ಸರ್ಕಾರ ರಚನೆಗೆ ಹಸಿರು ನಿಶಾನೆ ತೋರಲಿದ್ದಾರೆ. ಆಹ್ವಾನ ಬಂದ ನಂತರ ಅವರಿಗೆ ಬಹುಮತ ಸಾಬೀತುಪಡಿಸಲು 28 ದಿನಗಳ ಕಾಲಾವಕಾಶ ಸಿಗಲಿದೆ. ಒಟ್ಟಿನಲ್ಲಿ, ದಶಕಗಳಿಂದ ಇಸ್ರೇಲ್ ರಾಜಕಾರಣವನ್ನು ತನ್ನ ಕಪಿಮುಷ್ಟಿಯಲ್ಲಿಟ್ಟುಕೊಂಡಿದ್ದ ಬೆಂಜಮಿನ್ ನೆತನ್ಯಾಹು ಅವರ ಶಕೆಗೆ ತೆರೆ ಬೀಳುತ್ತಾ ಅಥವಾ ಕೊನೆ ಕ್ಷಣದಲ್ಲಿ ಏನಾದರೂ ಪವಾಡ ನಡೆಯುತ್ತಾ ಎಂಬ ಕುತೂಹಲ ಇಡೀ ಜಗತ್ತಿನ್ನು ಆವರಿಸಿದೆ, (ಏಜೆನ್ಸೀಸ್​).