Gold Rates: ಅಮೆರಿಕ ಮಧ್ಯಂತರ ಚುನಾವಣೆಯ ಫಲಿತಾಂಶಗಳು ಹೊರಬಿದ್ದಿದ್ದೇ ತಡ ಇದೀಗ ಜಾಗತಿಕ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ತೀವ್ರ ಏರಿಕೆ ಕಂಡಿದೆ. ಕಳೆದ ಎರಡು ವಾರಗಳಲ್ಲೇ ಗರಿಷ್ಠ ಮಟ್ಟವನ್ನು ತಲುಪಿದ್ದು, ಯುಎಸ್ ಡಾಲರ್ ಮೌಲ್ಯ ಮತ್ತು ಖಜಾನೆ ಆದಾಯ ಕುಸಿತ ಕಂಡಿರುವುದು ಮತ್ತು ಕಚ್ಚಾ ತೈಲ ಬೆಲೆಯಲ್ಲಿ ಭಾರಿ ಇಳಿಕೆಯಾಗಿರುವುದು ಸದ್ಯ ಚಿನ್ನದ ಬೆಲೆ ಜಿಗಿತಕ್ಕೆ ಪ್ರಮುಖ ಕಾರಣವಾಗಿದೆ.
ರಾಯಿಟರ್ಸ್ ವರದಿ ಪ್ರಕಾರ, ಸ್ಪಾಟ್ ಗೋಲ್ಡ್ ಬೆಲೆಯು ಶೇ.1.9ರಷ್ಟು ಹೆಚ್ಚಳವಾಗಿದ್ದು, ಪ್ರತಿ ಔನ್ಸ್ ಗೋಲ್ಡ್ ದರ 4,134.82 ಡಾಲರ್ಗೆ ತಲುಪಿದೆ. ಬುಧವಾರ ಒಂದೇ ದಿನ ಚಿನ್ನದ ದರ ಶೇ.3.4ರಷ್ಟು ಜಿಗಿತ ಕಂಡಿದ್ದು, ಕಳೆದ ಶುಕ್ರವಾರ ದಾಖಲಾಗಿದ್ದ ಒಂದು ವರ್ಷದ ಕನಿಷ್ಠ ಮಟ್ಟಕ್ಕಿಂತ (3,869.85 ಡಾಲರ್) ಈ ವಾರದಲ್ಲಿ ಸುಮಾರು 250 ಡಾಲರ್ಗೂ ಹೆಚ್ಚು ಹೆಚ್ಚಳವಾಗಿದೆ. ಇತರ ವಲಯಗಳಲ್ಲಿ ಬೆಳ್ಳಿ ಬೆಲೆ ಶೇ.1.3ರಷ್ಟು ಹೆಚ್ಚಾಗಿ 52.88 ಡಾಲರ್ ತಲುಪಿದರೆ, ಪ್ಲಾಟಿನಂ ಶೇ.1.8 ಮತ್ತು ಪಲ್ಲಾಡಿಯಂ ಶೇ.2.8ರಷ್ಟು ಏರಿಕೆ ಕಂಡಿವೆ.
ತೈಲ ಬೆಲೆ ಕುಸಿತ: ಬ್ರೆಂಟ್ ಕಚ್ಚಾ ತೈಲದ ಬೆಲೆ ಬುಧವಾರ ಒಂದೇ ದಿನ ಶೇ.9ರಷ್ಟು ಕಡಿತಗೊಂಡು 100 ಡಾಲರ್ಕ್ಕಿಂತ ಕೆಳಗೆ ಬಂದಿದೆ. ಇದರಿಂದಾಗಿ ಹಣದುಬ್ಬರದ ಆತಂಕ ಇಳಿದಿದೆ.
ಡಾಲರ್ ಮೌಲ್ಯ ಕುಸಿತ: ಅಮೆರಿಕನ್ ಡಾಲರ್ ಮೌಲ್ಯ ಕುಸಿದಿರುವುದರಿಂದ ಇತರ ದೇಶಗಳ ಕರೆನ್ಸಿ ಹೊಂದಿರುವ ಹೂಡಿಕೆದಾರರಿಗೆ ಚಿನ್ನದ ಖರೀದಿ ಅಗ್ಗ ಎನಿಸಿದ್ದು, ಬಂಗಾರಕ್ಕೆ ಬೇಡಿಕೆ ಹೆಚ್ಚಾಗಿದೆ.
ಮಾರುಕಟ್ಟೆ ತಜ್ಞರ ಪ್ರಕಾರ, ಇಂಧನ ಬೆಲೆ ಇಳಿಕೆ ಮತ್ತು ಬಡ್ಡಿ ದರ ಭೀತಿ ಕುಸಿದಿರುವುದು ಸದ್ಯ ಬೆಲೆಬಾಳುವ ಲೋಹಗಳ ಮಾರುಕಟ್ಟೆಗೆ ದೊಡ್ಡ ಬೂಸ್ಟರ್ ಡೋಸ್ ಆಗಿದೆ. ಹೂಡಿಕೆದಾರರು ಈಗ ಅಮೆರಿಕದ ಶುಕ್ರವಾರದ ಉದ್ಯೋಗ ವರದಿ ಮತ್ತು ಫೆಡರಲ್ ರಿಸರ್ವ್ನ ಮುಂದಿನ ಬಡ್ಡಿದರ ನಿರ್ಧಾರಗಳ ಮೇಲೆ ಕಣ್ಣಿಟ್ಟಿದ್ದು, ಅದರ ಅನ್ವಯ ಲೆಕ್ಕಾಚಾರಗಳಲ್ಲಿ ತೊಡಗಲಿದ್ದಾರೆ,(ಏಜೆನ್ಸೀಸ್).