ಒಂದೇ ಒಂದು ದುರಂತಕ್ಕೆ ಇಡೀ ಊರೇ ಸರ್ವನಾಶ! 40 ವರ್ಷಗಳ ಹಿಂದೆಯೇ ಮೌನಕ್ಕೆ ಜಾರಿದ ನಗರವಿದು | Pripyat

Pripyat
ಒಂದೇ ಒಂದು ದುರಂತಕ್ಕೆ ಇಡೀ ಊರೇ ಸರ್ವನಾಶ! 40 ವರ್ಷಗಳ ಹಿಂದೆಯೇ ಮೌನಕ್ಕೆ ಜಾರಿದ ನಗರವಿದು | Pripyat
Published on: 

Pripyat: ಚೆರ್ನೋಬಿಲ್ ಪರಮಾಣು ದುರಂತದ ಬಗ್ಗೆ ನೀವು ಎಂದಾದರೂ ಕೇಳಿದ್ದೀರಾ ಅಥವಾ ಎಲ್ಲಾದರೂ ಓದಿದ್ದೀರಾ? ಇದೊಂದು ಅವಘಡದಿಂದ ಇಡೀ ನಗರವೇ ಸರ್ವನಾಶವಾಗಿ ಹೋಗಿದ್ದು ಇಂದಿಗೂ ಜಗತ್ತಿನ ಅತ್ಯಂತ ಭೀಕರ ದುರಂತಗಳಲ್ಲಿ ಮರೆಯಲಾಗದ ಘಟನೆಯಾಗಿಯೇ ಉಳಿದಿದೆ.

ಉಕ್ರೇನ್‌ನ ಹೃದಯಭಾಗದಲ್ಲಿರುವ ಚೆರ್ನೋಬಿಲ್, ಒಂದು ಕಾಲದಲ್ಲಿ ಸುಂದರ ನಗರ. ಇಲ್ಲಿ ಸುಮಾರು 50,000ಕ್ಕೂ ಅಧಿಕ ನಿವಾಸಿಗಳು ಜೀವನ ಕಟ್ಟಿಕೊಂಡಿದ್ದರು. ಚೆರ್ನೋಬಿಲ್ ಪರಮಾಣು ವಿದ್ಯುತ್ ಸ್ಥಾವರದ ಕಾರ್ಮಿಕರಿಗಾಗಿ 1970ರ ದಶಕದಲ್ಲಿ 'ಪ್ರಿಪ್ಯಾಟ್' (Pripyat) ಎಂಬ ರೋಮಾಂಚಕ ವಸತಿ ಕಟ್ಟಡವನ್ನು ನಿರ್ಮಿಸಲಾಯಿತು. ಆಧುನಿಕ ಸೌಲಭ್ಯಗಳು, ಶಾಲೆಗಳು ಮತ್ತು ಉದ್ಯಾನವನಗಳನ್ನು ಹೊಂದಿದ್ದ ಈ ನಗರವು ಸೋವಿಯತ್ ಒಕ್ಕೂಟದ ಪ್ರಗತಿಯ ಸಂಕೇತವಾಗಿತ್ತು. ಆದರೆ, ಒಂದೇ ಕ್ಷಣದಲ್ಲಿ ಎಲ್ಲವೂ ಬದಲಾಗಿ ಹೋಗಿದ್ದು ಈಗ ಇತಿಹಾಸ ಪುಟಗಳನ್ನು ಸೇರಿಕೊಂಡಿದೆ.

ಏಪ್ರಿಲ್ 26, 1986

1986ರ ಏಪ್ರಿಲ್ 26ರಂದು, ಚೆರ್ನೋಬಿಲ್ ಪರಮಾಣು ವಿದ್ಯುತ್ ಸ್ಥಾವರದಲ್ಲಿ ಭೀಕರ ಸ್ಫೋಟ ಸಂಭವಿಸಿತು. ಅಪಾರ ಪ್ರಮಾಣದ ವಿಕಿರಣಶೀಲ ಐಸೊಟೋಪ್‌ಗಳು ಗಾಳಿಯಲ್ಲಿ ಮಿಶ್ರಣಗೊಂಡ ಕಾರಣ, ಪ್ರಿಪ್ಯಾಟ್ ನಗರವು ಮಾರಣಾಂತಿಕ ಮಟ್ಟದ ವಿಕಿರಣಕ್ಕೆ ತುತ್ತಾಯಿತು. ಅನಿವಾರ್ಯವಾಗಿ, ಅಧಿಕಾರಿಗಳು ತುರ್ತಾಗಿ ಮತ್ತು ಕಟು ನಿರ್ಧಾರವನ್ನೇ ಕೈಗೊಳ್ಳಬೇಕಾಯಿತು. ಅದುವೇ ಇಡೀ ನಗರವನ್ನೇ ಖಾಲಿ ಮಾಡಿಸುವುದು.

ಕೆಲವೇ ಗಂಟೆಗಳಲ್ಲಿ, ಪ್ರಿಪ್ಯಾಟ್ ನಿವಾಸಿಗಳಿಗೆ ತಮ್ಮ ಗಂಟುಮೂಟೆಯನ್ನು ಕಟ್ಟಿಕೊಂಡು ನಗರವನ್ನು ತೊರೆಯುವಂತೆ ಆದೇಶ ನೀಡಲಾಯಿತು. ಜನರನ್ನು ಸುರಕ್ಷಿತ ಸ್ಥಳಗಳಿಗೆ ಕರೆದೊಯ್ಯಲು 1,200ಕ್ಕೂ ಹೆಚ್ಚು ಬಸ್‌ಗಳನ್ನು ವ್ಯವಸ್ಥೆ ಮಾಡಲಾಯಿತು. ಏಪ್ರಿಲ್ 27ರ ಸಂಜೆಯ ವೇಳೆಗೆ, ಇಡೀ ನಗರವೇ ಖಾಲಿಯಾಗಿತು. ಬೀದಿಗಳಲ್ಲಿ ಭಯಾನಕವಾದ ನಿಶ್ಯಬ್ದ ಆವರಿಸಿತು. ಪ್ರಿಪ್ಯಾಟ್ ನಿವಾಸಿಗಳು ತಮ್ಮ ಮನೆಗಳು, ಆಸ್ತಿಪಾಸ್ತಿಗಳು ಮತ್ತು ತಮ್ಮ ಜೀವನವನ್ನೇ ಬಿಟ್ಟುಹೋಗುವಂತ ಪರಿಸ್ಥಿತಿ ನಿರ್ಮಾಣಗೊಂಡಿದ್ದು ಕಲ್ಪನೆಗೂ ಮೀರಿ ಹೋಗಿತ್ತು.

ಇಂದು ಅದೇ ಪ್ರಿಪ್ಯಾಟ್ ಒಂದು 'ಭೂತಗಳ ನಗರ' ಎಂಬ ಪಟ್ಟಿಗೆ ಸೇರಿಕೊಂಡಿದೆ. ಒಂದು ಕಾಲದಲ್ಲಿ ಜನನಿಬೀಡ ಪ್ರದೇಶವಾಗಿದ್ದ ಊರು ಈಗ ಜನರ ಕೆಲಸ, ಮಾತು, ಓಡಾಟಗಳಿಲ್ಲದೇ ಪಾಳುಬಿದ್ದಿದೆ. ಶಿಥಿಲಗೊಂಡ ಕಟ್ಟಡಗಳು, ಗಿಡಗಂಟಿಗಳಿಂದ ಮುಚ್ಚಿ ಹೋಗಿರುವ ಬಸ್​ ನಿಲ್ದಾಣಗಳು ಮತ್ತು ಆಟದ ಮೈದಾನದ ಉಪಕರಣಗಳೆಲ್ಲವೂ ತುಕ್ಕು ಹಿಡಿದಿವೆ. ನಿಂತಲ್ಲೇ ನಿಂತ ಕಾರುಗಳು ಮತ್ತು ಮರೆತುಹೋದ ಯುಗದ ಅವಶೇಷಗಳು ಇಂದಿಗೂ ನಗರದ ಬೀದಿಗಳಲ್ಲಿ ಅನಾಥವಾಗಿವೆ.

ಚೆರ್ನೋಬಿಲ್ ದುರಂತ: ಜಗತ್ತಿಗೊಂದು ಎಚ್ಚರಿಕೆ

ಚೆರ್ನೋಬಿಲ್ ದುರಂತವು ಜಗತ್ತಿಗೆ ಒಂದು ಎಚ್ಚರಿಕೆಯ ಗಂಟೆಯಾಯಿತು ಎಂಬುದರಲ್ಲಿ ಅನುಮಾನವೇ ಇಲ್ಲ. ಇದು ಪರಮಾಣು ಸುರಕ್ಷತೆಯ ಮಹತ್ವವನ್ನು ಮತ್ತು ಮಾನವನ ತಪ್ಪುಗಳಿಂದ ಉಂಟಾಗುವ ವಿನಾಶಕಾರಿ ಪರಿಣಾಮಗಳನ್ನು ಎತ್ತಿ ಹಿಡಿಯಿತು. ಪ್ರಿಪ್ಯಾಟ್‌ನ ಕಥೆಯು ಈ ದುರಂತದಿಂದ ಮಾನವಕುಲಕ್ಕೆ ಉಂಟಾದ ಭಾರಿ ನಷ್ಟವನ್ನು ನೆನಪಿಸುತ್ತದೆ. ಕಾರಣ, ಅಲ್ಲಿನ ಅನೇಕ ನಿವಾಸಿಗಳು ಸುರಕ್ಷಿತ ಸ್ಥಳಗಳಿಗೆ ಹೋಗಲು ಸಾಧ್ಯವೇ ಆಗಲಿಲ್ಲ.

Also Read
ಮೆಟ್ಟಿಲುಗಳನ್ನು ಹತ್ತುವಾಗ ಜಾರಿಬಿದ್ದ ಅಣ್ಣ ಆಸ್ಪತ್ರೆಗೆ ದಾಖಲು: ಆರೋಗ್ಯ ವಿಚಾರಿಸಲು ಬೆಂಗಳೂರಿಗೆ ಬಂದ ರಜನಿಕಾಂತ್! Superstar Rajinikanth
Pripyat

ಅಪಾಯಗಳಿದ್ದರೂ ಸಹ, ಚೆರ್ನೋಬಿಲ್ ದುರಂತದ ಪರಿಣಾಮಗಳನ್ನು ಅರಿಯಲು ಬಯಸುವವರಿಗೆ ಪ್ರಿಪ್ಯಾಟ್ ಈಗ ಒಂದು ತಾಣವಾಗಿದೆ. ಇಲ್ಲಿಗೆ ಜನರು ಪ್ರವಾಸ ಮಾಡಬಹುದು ಮತ್ತು ಒಬ್ಬ ಗೈಡ್​ ಮೂಲಕ ಅಲ್ಲಿನ ನಿಗೂಢ ಹಾಗೂ ಮೌನ ತುಂಬಿದ ವಾತಾವರಣವನ್ನು ನೋಡಬಹುದಾಗಿದೆ ಎಂದು ಒಂದಷ್ಟು ವರದಿಗಳು ತಿಳಿಸಿವೆ. ಒಂದು ಕಾಲದಲ್ಲಿ ಜನರಿಂದ ಸದ್ದು ಮಾಡುತ್ತಿದ್ದ ಇಡೀ ನಗರವೇ ಇಂದು ಬಿಕೋ ಎನ್ನುತ್ತಿರುವುದು ನಿಜಕ್ಕೂ ಆಶ್ಚರ್ಯಕರವೇ,(ಏಜೆನ್ಸೀಸ್).