More

    ನೇಜಾರು ಕೊಲೆ ಪ್ರಕರಣ :ಆರೋಪಿ ಪ್ರವೀಣ್ ಅರುಣ್ ಚೌಗುಲೆಗೆ ಜಾಮೀನು ನೀಡಲು ನಕಾರ

    ಬೆಂಗಳೂರು: ಉಡುಪಿ ಜಿಲ್ಲೆಯ ಹಂಪನಕಟ್ಟೆ ಸಮೀಪದ ನೇಜಾರಿನ ತೃಪ್ತಿ ಲೇಔಟ್ ನಿವಾಸದಲ್ಲಿನ ಒಂದೇ ಕುಟುಂಬದ ನಾಲ್ವರನ್ನು ಬರ್ಬರವಾಗಿ ಹತ್ಯೆ ಮಾಡಿದ್ದ ಆರೋಪಿ ಪ್ರವೀಣ್ ಅರುಣ್ ಚೌಗುಲೆಯ ಜಾಮೀನು ಅರ್ಜಿ ವಜಾ ಮಾಡಿ ಹೈಕೋರ್ಟ್ ಆದೇಶಿಸಿದೆ.
    ಈ ವಿಚಾರವಾಗಿ ಪ್ರವೀಣ್ ಅರುಣ್ ಚೌಗುಲೆ (40) ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ನ್ಯಾಯಮೂರ್ತಿ ಎಂ.ಜಿ.ಉಮಾ ಅವರಿದ್ದ ಏಕಸದಸ್ಯ ನ್ಯಾಯಪೀಠ ಗುರುವಾರ ವಿಚಾರಣೆ ನಡೆಸಿತು.

    ಈ ವೇಳೆ ಸರ್ಕಾರದ ಪರ ವಾದ ಮಂಡಿಸಿದ ವಕೀಲರು ಇದೊಂದು ಗಂಭೀರ ಸ್ವರೂಪದ ಪ್ರಕರಣವಾಗಿದ್ದು, ಮೃತ ಶರೀರಗಳ ಮೇಲಿದ್ದ ಆರೋಪಿಯ ಕೂದಲು ಡಿಎನ್‌ಎ ಪರೀಕ್ಷೆಯಲ್ಲಿ ಹೊಂದಾಣಿಕೆಯಾಗಿದೆ. ಕೊಲೆ ಮಾಡುವ ಸಮಯದಲ್ಲಿ ಆರೋಪಿಯ ಕೈಗೂ ಗಾಯವಾಗಿತ್ತು. ಇದು ಆತಪಡೆದಿದ್ದ ವೈದ್ಯಕೀಯ ಚಿಕಿತ್ಸೆಯ ದಾಖಲೆಯಿಂದ ತಿಳಿದು ಬಂದಿದೆ.

    ಆತ ಕೃತ್ಯ ನಡೆಸಿದ ಸ್ಥಳಕ್ಕೆ ಬಂದು ಹೋಗಿದ್ದ ಎನ್ನುವ ಮಾಹಿತಿ ಕೂಡ ಮೊಬೈಲ್ ಲೊಕೇಶನ್ ಪರಶೀಲನೆ ವೇಳೆ ದೃಢಪಟ್ಟಿದೆ. ಹೀಗೆ ಅರ್ಜಿದಾರರು ಏಸಗಿದ ಸಾಕಷ್ಟು ಸಾಕ್ಷ್ಯಗಳನ್ನು ಪ್ರಾಸಿಕ್ಯೂಷನ್ ತನಿಖೆಯಲ್ಲಿ ಕಲೆ ಹಾಕಿದೆ. ಆದ್ದರಿಂದ, ಜಾಮೀನು ಮಂಜೂರು ಮಾಡಬಾರದು ಎಂದು ಮನವಿ ಮಾಡಿದರು. ಇದನ್ನು ಪರಿಗಣಿಸಿದ ನ್ಯಾಯಪೀಠ ಜಾಮೀನು ಕೋರಿಕೆ ಅರ್ಜಿಯನ್ನು ತಿರಸ್ಕರಿಸಿ ಆದೇಶಿಸಿತು.
    ಪ್ರಕರಣಕ್ಕೆ ಸಂಬಂಧಿಸಿದಂತೆ ಉಡುಪಿ ಪೊಲೀಸರು ಕಳೆದ ಫೆ. 15 ಸಂಪುಟಗಳ 2,202 ಪುಟಗಳ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.

    ಪ್ರಕರಣವೇನು?
    ನೇಜಾರಿನ ತೃಪ್ತಿ ಲೇ ಔಟ್‌ನಲ್ಲಿ 2023ರ ನ. 12ರಂದು ಬೆಳಿಗ್ಗೆ ಹಸೀನಾ (48), ಅವರ ಮಕ್ಕಳಾದ ಅಫ್ನಾನ್(23), ಅಯ್ನಜ್ (20) ಹಾಗೂ ಅಸೀಮ್ (14) ಅವರನ್ನು ಚೂರಿಯಿಂದ ಇರಿದು ಭೀಕರವಾಗಿ ಕೊಲೆ ಮಾಡಲಾಗಿತ್ತು. ಚೂರಿ ಇರಿತಕ್ಕೊಳಗಾಗಿದ್ದ ಮೃತ ಹಸೀನಾ ಅವರ ಅತ್ತೆ ಹಾಜಿರಾ ಹಂತಕನಿಂದ ತಪ್ಪಿಸಿಕೊಂಡು ಶೌಚಾಲಯದೊಳಗೆ ಅವಿತು ಜೀವ ಉಳಿಸಿಕೊಂಡಿದ್ದರು.
    ಮಹಾರಾಷ್ಟ್ರದ ಸಾಂಗ್ಲಿ ನಿವಾಸಿಯಾದ ಆರೋಪಿ ಪ್ರವೀಣ್ ಚೌಗುಲೆಯನ್ನು ಬೆಳಗಾವಿ ಜಿಲ್ಲೆಯ ರಾಯಬಾಗ ತಾಲ್ಲೂಕಿನ ಕುಡಚಿಯಲ್ಲಿ ಬಂಧಿಸಲಾಗಿತ್ತು.ಆರೋಪಿಯ ವಿರುದ್ಧ ಭಾರತೀಯ ದಂಡ ಸಂಹಿತೆ-1860ರ ಕಲಂ 302 (ಕೊಲೆ), 307 (ಕೊಲೆ ಯತ್ನ), 324 (ಮಾರಕಾಸ್ತ್ರದಿಂದ ಸರಳ ಗಾಯ ಉಂಟು ಮಾಡುವುದು) 449 (ಮರಣ ದಂಡನೆಗೆ ಒಳಗಾಗುವ ಅಪರಾಧ ಕೃತ್ಯ ಎಸಗಲು ಗೃಹ ಅತಿಕ್ರಮಣ) ಮತ್ತು 201 (ಸಾಕ್ಷ್ಯ ನಾಶ) ಆರೋಪಗಳಡಿ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.ಚೌಗುಲೆಯ ಜಾಮೀನು ಅರ್ಜಿಯನ್ನು ಉಡುಪಿ ಜಿಲ್ಲಾ ಎರಡನೇ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯ ತಿರಸ್ಕರಿಸಿತ್ತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts