More

    ದೂರದರ್ಶಿತ್ವದ ಕಲ್ಪನೆಯಿಂದ ಸಾಧನೆ ಸಾಧ್ಯ

    ಜಿಲ್ಲಾಧಿಕಾರಿ ವಿದ್ಯಾಕುಮಾರಿ ಅಭಿಮತ | ಕೆಂಪೇಗೌಡ ಜಯಂತಿ ಉದ್ಘಾಟನೆ

    ವಿಜಯವಾಣಿ ಸುದ್ದಿಜಾಲ ಉಡುಪಿ
    ನಮ್ಮ ರಾಜಧಾನಿಯಾದ ಬೆಂಗಳೂರನ್ನು 16ನೇ ಶತಮಾನದ ಆದಿಯಲ್ಲಿ ನಾಡಪ್ರಭು ಕೆಂಪೇಗೌಡ ಅವರು ತುಂಬ ವಿಭಿನ್ನವಾಗಿ ನಿರ್ಮಿಸಿದ್ದಾರೆ. ದೂರದರ್ಶಿತ್ವದ ಕಲ್ಪನೆಯಿಂದ ಸಾಧನೆ ಸಾಧ್ಯ ಎನ್ನುವುದಕ್ಕೆ ಕೆಂಪೇಗೌಡ ಅವರು ಕಟ್ಟಿರುವ ಸುಂದರ ಬೆಂಗಳೂರು ನಗರವೇ ಸಾಕ್ಷ್ಯವಾಗಿದೆ ಎಂದು ಜಿಲ್ಲಾಧಿಕಾರಿ ಡಾ. ಕೆ.ವಿದ್ಯಾಕುಮಾರಿ ಹೇಳಿದರು.

    ಉಡುಪಿಯ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಜಿಲ್ಲಾಡಳಿತ, ಜಿಪಂ, ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಆಶ್ರಯದಲ್ಲಿ ಗುರುವಾರ ಆಯೋಜಿಸಿದ್ದ ನಾಡಪ್ರಭು ಕೆಂಪೇಗೌಡ ಅವರ 515ನೇ ಜಯಂತಿ ಉದ್ಘಾಟಿಸಿ ಮಾತನಾಡಿದರು.

    ಕೆಂಪೇಗೌಡ ಅವರ ಭಾವಚಿತ್ರಕ್ಕೆ ಜಿಲ್ಲಾಧಿಕಾರಿ ಹಾಗೂ ಇತರ ಅಧಿಕಾರಿಗಳು ಪುಷ್ಪಾರ್ಚನೆಗೈದರು.

    ಸುಂದರ ನಗರ

    ಕೆಂಪೇಗೌಡ ಅವರು ಅನೇಕ ಕೆರೆಗಳನ್ನು ನಿರ್ಮಿಸಿದ್ದು ಅವು ಒಂದಕ್ಕೊಂದು ಕೊಂಡಿಯಾಗಿರುವಂತೆ ರಚಿಸಿ, ಕೊನೆಯಲ್ಲಿ ನದಿ ಸೇರುವಂತಹ ವಿಶಿಷ್ಟ ಯೋಜನೆ ಅದಾಗಿದೆ. ಉದ್ಯಾವನ, ಐದು ಕಡೆಗಳಲ್ಲಿ ದ್ವಾರ, ಸಮಾಜದ ಎಲ್ಲ ಕುಶಲಕರ್ಮಿಗಳಿಗೆ ಮಾರುಕಟ್ಟೆ ವ್ಯವಸ್ಥೆ, ಸಾಲು ಮರಗಳು, ಸುಂದರ ಉದ್ಯಾನವನ ಹೀಗೆ ಅನೇಕ ವ್ಯವಸ್ಥೆ ಅಳವಡಿಸಿದ್ದಾರೆ. ಇದೀಗ ಬೆಂಗಳೂರು ಇನ್ನಷ್ಟು ಅಭಿವೃದ್ಧಿ ಕಂಡಿದ್ದು, ವಿಶ್ವದ ಸುಂದರ ನಗರಗಳಲ್ಲಿ ಪ್ರಮುಖವಾಗಿದೆ. ದೇಶವಷ್ಟೇ ಅಲ್ಲದೆ, ಜಗತ್ತಿನ ಜನರು ಇಲ್ಲಿ ಬದುಕು ಕಟ್ಟಿಕೊಳ್ಳುವಂತಹ ವ್ಯವಸ್ಥೆ ಇರುವುದರ ಹಿಂದೆ ನಾಡಪ್ರಭುವಿನ ಕೊಡುಗೆ ಅವಿಸ್ಮರಣೀಯ ಎಂದರು.

    ಸುದರ್ಶನ್​ ಮತ್ತು ತಂಡದವರು ನಾಡಗೀತೆ ಹಾಡಿದರು. ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ ಪ್ರಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಉಪನ್ಯಾಸಕ ದಯಾನಂದ ಡಿ. ಕಾರ್ಯಕ್ರಮ ನಿರೂಪಿಸಿದರು.

    ಜಿಪಂ ಸಿಇಒ ಪ್ರತೀಕ್​ ಬಾಯಲ್​, ಅಪರ ಜಿಲ್ಲಾಧಿಕಾರಿ ಮಮತಾದೇವಿ ಜಿ.ಎಸ್​., ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ಡಾ.ಅರುಣಕುಮಾರ್​ ಕೆ., ಕಸಾಪ ಜಿಲ್ಲಾಧ್ಯಕ್ಷ ನೀಲಾವರ ಸುರೇಂದ್ರ ಅಡಿಗ, ಡಿಡಿಪಿಐ ಗಣಪತಿ ಕೆ., ಬಿಇಒ ಡಾ.ಯಲ್ಲಮ್ಮ, ಕಾಲೇಜಿನ ಪ್ರಾಂಶುಪಾಲೆ ಡಾ. ಸುಮಾ ಎಸ್​., ಪ್ರೌಢಶಾಲೆಯ ಮುಖ್ಯೋಧ್ಯಾಪಕಿ ಇಂದಿರಾ, ಜಿಲ್ಲಾ ಒಕ್ಕಲಿಗರ ಸಂಘದ ಅಧ್ಯಕ್ಷ ಸೀತಾರಾಮ್​ ಗೌಡ ಎ., ಕಾರ್ಯದರ್ಶಿ ಹೇಮಾನಂದ ಹಲ್ದಡ್ಕ ಉಪಸ್ಥಿತರಿದ್ದರು.

    ವಿಶೇಷ ಉಪನ್ಯಾಸ

    ಕೆಂಪೇಗೌಡ ಅವರ ಜೀವನ ಹಾಗೂ ಸಾಧನೆ ಕುರಿತು ಇತಿಹಾಸ ಉಪನ್ಯಾಸಕ ಪ್ರಕಾಶ್​ ಶೆಟ್ಟಿ ವಿಶೇಷ ಉಪನ್ಯಾಸ ನೀಡಿದರು. ಕೆಂಪೇಗೌಡ ಜಯಂತಿ ಪ್ರಯುಕ್ತ ಆಯೋಜಿಸಿದ್ದ ವಿವಿಧ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ನಗದು ಬಹುಮಾನ ಹಾಗೂ ಪ್ರಶಸ್ತಿ ನೀಡಲಾಯಿತು.

    UDP-27-1B-Kempegouda
    ಕೆಂಪೇಗೌಡ ಜಯಂತಿ ಪ್ರಯುಕ್ತ ಆಯೋಜಿಸಿದ್ದ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ನಗದು ಬಹುಮಾನ ನೀಡಲಾಯಿತು.

    ಮುನ್ನುಗ್ಗುವ ಗುಣ ಬೆಳೆಸಿಕೊಳ್ಳಿರಿ

    ಪಠ್ಯಗಳೊಂದಿಗೆ ನಾಡಿನ ಸಾಧಕರ ಜೀವನ ವೃತ್ತಾಂತ ತಿಳಿದುಕೊಳ್ಳಲು, ಅವರ ವ್ಯಕ್ತಿತ್ವ ನಮ್ಮ ಬದುಕಿಗೂ ಪ್ರೇರಣೆಯಾಗಬೇಕೆಂಬ ಸದುದ್ದೇಶದಿಂದ ಶಾಲಾ-ಕಾಲೇಜುಗಳಲ್ಲಿಯೇ ಸರ್ಕಾರ ಇಂತಹ ಕಾರ್ಯಕ್ರಮ ಆಯೋಜಿಸುತ್ತಿದೆ. ವಿದ್ಯಾರ್ಥಿನಿಯರು ವಿಶೇಷವಾಗಿ ಮುನ್ನುಗ್ಗುವ ಗುಣ ಬೆಳೆಸಿಕೊಳ್ಳಬೇಕು. ಕಲಿಕೆಯ ಸಂದರ್ಭದಲ್ಲಿ ಲಭಿಸುವ ಅವಕಾಶಗಳ ಸದ್ವಿನಿಯೋಗ ಮಾಡಿಕೊಳ್ಳಬೇಕು. ಯಾರಿಗೂ ಅಂಜುವ ಅವಶ್ಯಕತೆ ಇಲ್ಲ. ಇನ್ನೊಬ್ಬರಿಗಾಗಿ ಅಲ್ಲ, ನನಗಾಗಿ ಬದುಕಬೇಕು ಎನ್ನುವುದನ್ನು ವಿದ್ಯಾರ್ಥಿನಿಯರು ಅವಶ್ಯವಾಗಿ ಅರಿತುಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ವಿದ್ಯಾಕುಮಾರಿ ಸಲಹೆ ನೀಡಿದರು.

    ಅಭಿವೃದ್ಧಿಗೊಂಡ ದೇಶದ ಅನೇಕ ನಗರಗಳು ನದಿಯ ಸಮೀಪದಲ್ಲಿಯೇ ಇವೆ. ಆದರೆ, ನದಿಯೇ ಇಲ್ಲದ ಊರೊಂದರಲ್ಲಿ ನೂರಾರು ಕೆರೆ ನಿರ್ಮಿಸಿ, ಎಲ್ಲ ಬಗೆಯ ಸೌಕರ್ಯ ಕಲ್ಪಿಸಿ ಬೆಂಗಳೂರನ್ನು ನಗರವನ್ನಾಗಿಸಿದ ಕೆಂಪೇಗೌಡರ ಕಾರ್ಯ ವರ್ಣಿಸಲು ಅಸಾಧ್ಯ. ಟೌನ್​ ಪ್ಲಾನಿಂಗ್​, ಅರ್ಬನ್​ ಪ್ಲಾನಿಂಗ್​ ಅಥವಾ ನಿರ್ಮಾಣ ಕ್ಷೇತ್ರಗಳಲ್ಲಿ ವಿಪುಲ ಉದ್ಯೋಗಾವಕಾಶವಿದ್ದು, ಪೂರಕ ಶಿಕ್ಷಣ ಗಳಿಸಲು ವಿದ್ಯಾರ್ಥಿಗಳು ಮುಂದಾಗಬೇಕು.

    ಪ್ರತೀಕ್​ ಬಾಯಲ್​.
    ಸಿಇಒ. ಜಿಪಂ ಉಡುಪಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts