More

    ಮೈಸೂರು ವಿಶ್ವವಿದ್ಯಾಲಯ: 80.35 ಕೋಟಿ ರೂ. ಕೊರತೆ ಬಜೆಟ್

    ಮೈಸೂರು: 2024-25ನೇ ಸಾಲಿ 80.35 ಕೋಟಿ ರೂ. ಕೊರತೆ ಆಯವ್ಯಯವನ್ನು ಮೈವಿವಿ ಮಂಡಿಸಿದೆ.


    ಪ್ರಸ್ತಕ ಸಾಲಿನಲ್ಲಿ 277.39 ಕೋಟಿ ರೂ. ಆದಾಯ ನಿರೀಕ್ಷಿಸಿದ್ದು, 357.74 ಕೋಟಿ ರೂ. ನಿರೀಕ್ಷಿತ ವೆಚ್ಚ, 80.35 ಕೋಟಿ ರೂ. ಕೊರತೆಯಾಗಿದೆ ಎಂದು ಹಣಕಾಸು ಅಧಿಕಾರಿ ಕೆ.ಎಸ್. ರೇಖಾ ತಿಳಿಸಿದರು.

    ವಿವಿ ಕಾರ್ಯಸೌಧ ಕ್ರಾಫರ್ಡ್ ಭವನದಲ್ಲಿ ಶುಕ್ರವಾರ ಕರೆದಿದ್ದ ಮೈವಿವಿ ಶೈಕ್ಷಣಿಕ ಮಂಡಳಿ ಸಭೆಯಲ್ಲಿ ಮಾತನಾಡಿದರು

    ಕಾಯಂ ಸಿಬ್ಬಂದಿ ವೇತನಕ್ಕಾಗಿ 121.78 ಕೋಟಿ ರೂ., ಪಿಂಚಣಿ ಅನುದಾನ 50 ಕೋಟಿ ರೂ. ಸೇರಿದಂತೆ 171.78 ಕೋಟಿ ರೂ. ರಾಜ್ಯ ಸರ್ಕಾರದಿಂದ ಬರಲಿದೆ. ಎಸ್‌ಸಿ-ಎಸ್‌ಟಿ ವಿದ್ಯಾರ್ಥಿಗಳಿಗೆ 3 ಕೋಟಿ ರೂ. ಅನುದಾನ ನಿರೀಕ್ಷಿಸಲಾಗಿದೆ. ಆಂತರಿಕ ಸಂಪನ್ಮೂಲಗಳಾದ ಪ್ರವೇಶ, ನೋಂದಣಿ, ಸಂಯೋಜನೆ ಇನ್ನಿತರ ಶುಲ್ಕಗಳಿಂದ 42 ಕೋಟಿ ರೂ., ಸ್ಕೀಂ ಬಿ ಕೋರ್ಸ್‌ಗಳಿಂದ 3.50 ಕೋಟಿ ರೂ., ಪರೀಕ್ಷಾ ಚಟುವಟಿಕೆಗಳಿಂದ 45 ಕೋಟಿ ರೂ., ವಿವಿಯ ವಿವಿಧ ಆಸ್ತಿಗಳಿಂದ 3 ಕೋಟಿ ರೂ., ಇತರ ಮೂಲಗಳಿಂದ 6 ಕೋಟಿ ರೂ. ಸೇರಿದಂತೆ 99.50 ಕೋಟಿ ರೂ. ಆಂತರಿಕ ಆದಾಯವಾಗಿದೆ. ಕಳೆದ ಸಾಲಿನಲ್ಲಿ 3.10 ಕೋಟಿ ರೂ.ಉಳಿಕೆಯಾಗಿದೆ ಎಂದು ಮಾಹಿತಿ ನೀಡಿದರು.


    2023-24ರಲ್ಲಿ 1802 ಪಿಂಚಣಿದಾರರಿದ್ದು, 2024-25ನೇ ಸಾಲಿನಲ್ಲಿ ಈ ಸಂಖ್ಯೆ 1852ಕ್ಕೆ ಏರಿಕೆಯಾಗಲಿದೆ. ಪಿಂಚಣಿ ಬಾಬ್ತಿಗಾಗಿ 120 ಕೋಟಿ ರೂ. ನಿಗದಿಪಡಿಸಲಾಗಿದೆ. ಜತೆಗೆ, ವೇತನ ಭತ್ಯೆಗಳು, ಪಿಂಚಣಿ, ಸಾಮಾನ್ಯ ಆಡಳಿತ ವೆಚ್ಚ, ಇನ್ನಿತರ ವೆಚ್ಚಕ್ಕಾಗಿ 357.74 ಕೋಟಿ ರೂ. ನಿಗದಿಪಡಿಸಲಾಗಿದೆ ಎಂದು ತಿಳಿಸಿದರು.


    2022-23, 2023-24, 2024-25ನೇ ಸಾಲಿನಲ್ಲಿ ಸರ್ಕಾರದಿಂದ ಪಿಂಚಣಿ ಅನುದಾನವಾಗಿ ಕ್ರಮವಾಗಿ 56 ಕೋಟಿ ರೂ., 63 ಕೋಟಿ ರೂ., 70 ಕೋಟಿ ರೂ. ಕಡಿಮೆ ನೀಡಿದ್ದು, ಇದರಿಂದ ಪ್ರಸಕ್ತ ಸಾಲಿನಲ್ಲಿ 80.35 ಕೋಟಿ ರೂ. ಕೊರತೆ ಎದುರಾಗಿದೆ. ವೆಚ್ಚಗಳಲ್ಲಿ ಮಿತವ್ಯಯ ಸಾಧಿಸಲು ಕ್ರಮ ವಹಿಸಲಾಗುವುದು. ಅಗತ್ಯ ವೆಚ್ಚಗಳನ್ನು ಹೊರತುಪಡಿಸಿ ಉಳಿದ ವೆಚ್ಚ ನಿಯಂತ್ರಿಸಲಾಗುವುದು ಎಂದು ತಿಳಿಸಿದರು.

    ಸರ್ಕಾರದಿಂದಲೇ ಪಿಂಚಣಿ ನೀಡಿ


    ಸರ್ಕಾರಿ ಪಿಂಚಣಿದಾರರ ಮಾದರಿಯಲ್ಲಿ ಮೈಸೂರು ವಿವಿ ಪಿಂಚಣಿದಾರರಿಗೂ ರಾಜ್ಯ ಸರ್ಕಾರದಿಂದ ಪಿಂಚಣಿ ಸೌಲಭ್ಯ ಕಲ್ಪಿಸಿಕೊಡಬೇಕು ಎಂದು ಸಭೆ ಆಗ್ರಹಿಸಿತು.


    ಈ ವಿಷಯವನ್ನು ಪ್ರಸ್ತಾಪಿಸಿದ ವಿವಿ ಕಾಲೇಜು ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಪ್ರೊ.ಆನಂದ ಅವರು, ಪಿಂಚಣಿದಾರರ ಸಂಖ್ಯೆ ಹೆಚ್ಚಿದ್ದು, ಸರ್ಕಾರದಿಂದ ಬರುವ ಅನುದಾನ ಕಡಿಮೆಯಾಗುತ್ತಿದೆ. ಇದರಿಂದ ಸಮಸ್ಯೆಯಾಗುತ್ತಿದ್ದು, ಪಿಂಚಣಿ ಹಣವನ್ನು ಅನ್ಯ ಉದ್ದೇಶಕ್ಕೆ ಬಳಸಿಕೊಳ್ಳಲಾಗಿದೆ ಎಂಬ ಗುಮಾನಿ, ಆಕ್ಷೇಪ ವ್ಯಕ್ತವಾಗುತ್ತದೆ. ಈ ವಿಷಯ ಗೊಂದಲಮಯವಾಗಿದೆ. ಇದು ರಾಜ್ಯ ಎಲ್ಲ ಸರ್ಕಾರಿ ವಿಶ್ವವಿದ್ಯಾಲಯಗಳ ಸಮಸ್ಯೆಯೂ ಆಗಿದೆ. ಆದ್ದರಿಂದ ಸರ್ಕಾರ ಹಂತದಲ್ಲಿ ಈ ಸಮಸ್ಯೆ ಪರಿಹಾರ ಕಂಡುಕೊಳ್ಳಬೇಕು. ಅದಕ್ಕಾಗಿ ಪ್ರಯತ್ನಿಸಬೇಕು ಎಂದು ಎಂಎಲ್‌ಸಿ ಸಿ.ಎನ್.ಮಂಜೇಗೌಡರಿಗೆ ಕೋರಿದರು.

    ಇದಕ್ಕೆ ಇತರ ಸದಸ್ಯರೂ ಧ್ವನಿಗೂಡಿಸಿದರು. ಇದಕ್ಕೆ ಸ್ಪಂದಿಸಿದ ಎಂಎಲ್‌ಸಿ, ಈ ವಿಷಯವನ್ನು ಸದನದಲ್ಲಿ ಪ್ರಸ್ತಾಪಿಸಲಾಗುವುದು ಎಂದು ತಿಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts