ಮುಸ್ಲಿಂ ಲೀಗ್​ ಪಕ್ಷವನ್ನು ಜಾತ್ಯತೀತ ಎಂದ ರಾಹುಲ್​ ಗಾಂಧಿ

rahul gandhi
ಸಾಂದರ್ಭಿಕ ಚಿತ್ರ
Published on: 

ಅಮೆರಿಕ: ಗುರುವಾರ ಅಮೆರಿಕದ ರಾಜಧಾನಿ ವಾಷಿಂಗ್ಟನ್ ಡಿಸಿಯ ನ್ಯಾಷನಲ್ ಪ್ರೆಸ್ ಕ್ಲಬ್‌ನಲ್ಲಿ ಪತ್ರಕರ್ತರೊಂದಿಗೆ ಸಂವಾದ ನಡೆಸಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, 'ಮುಸ್ಲಿಂ ಲೀಗ್ ಸಂಪೂರ್ಣ ಜಾತ್ಯತೀತ ಪಕ್ಷ' ಎಂದು ಹೇಳಿದ್ದಾರೆ.

ಕೇರಳದಲ್ಲಿ ಮುಸ್ಲಿಂ ಲೀಗ್ ಜೊತೆಗಿನ ಕಾಂಗ್ರೆಸ್ ಮೈತ್ರಿ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿದ ರಾಹುಲ್ ಗಾಂಧಿ, "ಮುಸ್ಲಿಂ ಲೀಗ್ ಸಂಪೂರ್ಣವಾಗಿ ಜಾತ್ಯತೀತ ಪಕ್ಷವಾಗಿದೆ. ಅದರಲ್ಲಿ ಜಾತ್ಯತೀತವಲ್ಲದ ಯಾವ ವಿಚಾರವೂ ಇಲ್ಲ. ಆ ವ್ಯಕ್ತಿ (ವರದಿಗಾರ) ಮುಸ್ಲಿಂ ಲೀಗ್ ಅನ್ನು ಅಧ್ಯಯನ ಮಾಡಿಲ್ಲ ಎಂದು ನಾನು ಭಾವಿಸುತ್ತೇನೆ..." ಎಂದಿದ್ದಾರೆ.

ಅವರು ಗುರುವಾರ ವಾಷಿಂಗ್ಟನ್‌ನ ನ್ಯಾಷನಲ್ ಪ್ರೆಸ್ ಕ್ಲಬ್‌ನಲ್ಲಿ ಫ್ರೀ-ವೀಲಿಂಗ್ ಸಂವಾದದಲ್ಲಿ ಪತ್ರಕರ್ತರಿಂದ ಪ್ರಶ್ನೆಗಳನ್ನು ಕೇಳುತ್ತಿದ್ದರು. ಪ್ರತಿಪಕ್ಷಗಳ ಒಗ್ಗಟ್ಟಿನ ಕುರಿತು ಎಎನ್‌ಐ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ತಮ್ಮ ಪಕ್ಷವು ಎಲ್ಲಾ ವಿರೋಧ ಪಕ್ಷಗಳೊಂದಿಗೆ ನಿಯಮಿತವಾಗಿ ಸಂವಾದ ನಡೆಸುತ್ತಿದೆ ಎಂದು ಹೇಳಿದರು. ಆ ನಿಟ್ಟಿನಲ್ಲಿ "ಸಾಕಷ್ಟು ಒಳ್ಳೆಯ ಕೆಲಸಗಳು ನಡೆಯುತ್ತಿವೆ" ಎಂದು ಹೇಳಿದರು.

"ವಿರೋಧ ಪಕ್ಷಗಳು ಚೆನ್ನಾಗಿ ಒಗ್ಗೂಡಿದ್ದು ನಾವು ಎಲ್ಲಾ ಪ್ರತಿಪಕ್ಷಗಳೊಂದಿಗೆ ಮಾತುಕತೆ ನಡೆಸುತ್ತಿದ್ದೇವೆ. ಅಲ್ಲಿ ಸಾಕಷ್ಟು ಒಳ್ಳೆಯ ಕೆಲಸಗಳು ನಡೆಯುತ್ತಿವೆ ಎಂದು ನಾನು ಭಾವಿಸುತ್ತೇನೆ. ಇದು ಸಂಕೀರ್ಣವಾದ ಚರ್ಚೆಯಾಗಿದೆ. ಏಕೆಂದರೆ ನಾವು ಇರುವ ಸ್ಥಳಗಳಲ್ಲಿ ಇತರ ಪ್ರತಿಪಕ್ಷಗಳೂ ಪೈಪೋಟಿ ನಡೆಸುತ್ತಿವಎ. ಹಾಗಾಗಿ ಸ್ವಲ್ಪ ಕೊಡು ಕೊಳ್ಳುವ ಅಗತ್ಯವಿದೆ. ಆದರೆ ಅದು (ಕೇಂದ್ರದಲ್ಲಿ ಬಿಜೆಪಿ ವಿರುದ್ಧದ ವಿರೋಧಪಕ್ಷಗಳ ಮೈತ್ರಿ) ಸಂಭವಿಸುತ್ತದೆ ಎಂಬ ವಿಶ್ವಾಸವಿದೆ" ಎಂದು ಹೇಳಿದರು.

ಅಮೇರಿಕಾಕ್ಕೆ ಅವರ ನಡೆಯುತ್ತಿರುವ ಭೇಟಿಯ ಅವಧಿಯಲ್ಲಿ, ಕಾಂಗ್ರೆಸ್ ನಾಯಕ ಸ್ಯಾನ್ ಫ್ರಾನ್ಸಿಸ್ಕೋ, ವಾಷಿಂಗ್ಟನ್ ಡಿಸಿ ಮತ್ತು ನ್ಯೂಯಾರ್ಕ್‌ಗೆ ಭೇಟಿ ನೀಡಲಿದ್ದಾರೆ. (ಏಜೆನ್ಸೀಸ್)