More

    ಮಗು ತಪ್ಪು ಮಾಡಿದ್ರೆ ತಂದೆ ಎಷ್ಟು ನೋವು ತಿಂತಾನೋ ಅಷ್ಟೇ ನೋವನ್ನು ತಿಂತಿದ್ದೀನಿ: ದರ್ಶನ್​ ಬಗ್ಗೆ ಹಂಸಲೇಖ ಮಾತು

    ಮಂಡ್ಯ: ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಪ್ರಕರಣದ ಎ2 ಆರೋಪಿಯಾಗಿ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ನ್ಯಾಯಾಂಗ ಬಂಧನದಲ್ಲಿರುವ ನಟ ದರ್ಶನ್​ ಬಗ್ಗೆ ಇತ್ತೀಚೆಗೆ ಸಾಕಷ್ಟು ಕಲಾವಿದರು ಮತ್ತು ಚಿತ್ರರಂಗದ ಗಣ್ಯರು ಮಾತನಾಡುತ್ತಿದ್ದಾರೆ. ದರ್ಶನ್​ ಬಂಧನವಾದಾಗ ನಟ ಸುದೀಪ್​ ಮತ್ತು ಉಪೇಂದ್ರ ಹೊರತುಪಡಿಸಿ ಯಾರೋಬ್ಬರು ಮಾತನಾಡಿರಲಿಲ್ಲ. ಯಾವಾಗ ದರ್ಶನ್​ ಜೈಲು ಸೇರಿದರೂ ಒಬ್ಬೊಬ್ಬರಾಗಿ ಅವರ ಬಗ್ಗೆ ಮಾತನಾಡುತ್ತಿದ್ದಾರೆ. ಅಲ್ಲದೆ, ಜೈಲಿಗೆ ಹೋಗಿ ಭೇಟಿ ಮಾಡಿ ಬರುತ್ತಿದ್ದಾರೆ. ಇದೀಗ ದರ್ಶನ್​ ಬಗ್ಗೆ ಸಂಗೀತ ನಿರ್ದೇಶಕ ಹಂಸಲೇಖ ಮಾತನಾಡಿದ್ದಾರೆ.

    ಮಂಡ್ಯದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಹಂಸಲೇಖ, ನಟ‌ ದರ್ಶನ್ ನನ್ನ ಮಗು ಎಂದರು. ಮಗು ತಪ್ಪು ಮಾಡಿದ್ರೆ ತಂದೆಯಾದವನು ಎಷ್ಟು ನೋವು ತಿಂತಾನೋ ಅಷ್ಟೇ ನೋವನ್ನು ನಾನು ತಿಂತಿದ್ದೀನಿ ಮತ್ತು ಆ ಮಗು ಕೂಡ ಅಷ್ಟೆ ನೋವು ತಿಂತಿರುತ್ತೆ. ನಾವು ಆತ ಕೊಟ್ಟಿರುವ ಕೊಡುಗೆ ಕಡೆಗೆ ನೋಡೋಣ ಎಂದು ಹೇಳಿದರು.

    ಕನ್ನಡ ಚಿತ್ರರಂಗ ಎಷ್ಟು ಕೀರ್ತಿ ಪಡೆದಿತ್ತು, ಎಷ್ಟೊಂದು ಪ್ರಶಸ್ತಿ ಪಡೆದುಕೊಂಡಿತ್ತು. ಮೇಲಿದ್ದವರು ಕೆಳಗೆ ಬೀಳಲೇ ಬೇಕು ಎಂಬ ಮಾತಿದೆ. ಆದರೆ, ಆ ರೀತಿ ಆಗೋದು ಬೇಡ. ಕೆಳಗೆ ಬಿದ್ದರೂ ಮೇಲೆ ಏಳಲು ಸಾಧ್ಯವಿದೆ. ಕೇರಳ ಚಿತ್ರೋದ್ಯಮ ಕೂಡ ಹೀಗೆ ಆಗಿತ್ತು. ಆದ್ರೆ ಈಗ ಅದು ಉತ್ತುಂಗದಲ್ಲಿದೆ ಎನ್ನುವ ಮೂಲಕ ಕನ್ನಡ ಚಿತ್ರರಂಗಕ್ಕೆ ದರ್ಶನ್​ ಪ್ರಕರಣ ಯಾವುದೇ ಪ್ರಭಾವ ಬಿರುವುದಿಲ್ಲ ಎಂದರು.

    ಸಿಟ್ಟನ್ನು ಸ್ಕ್ರಿಪ್ಟ್​ ಮಾಡಬೇಕು ಮತ್ತು ದ್ವೇಷವನ್ನು ಕ್ಯಾರೆಕ್ಟರ್ ಮಾಡಬೇಕು. ಆದರೆ, ನಿಜ‌ ಜೀವನದಲ್ಲಿ ಸ್ಕ್ರಿಪ್ಟ್​ ಆಗಬಾರದು ಮತ್ತು ಕ್ಯಾರೆಕ್ಟರ್ ಸಹ ಆಗಬಾರದು. ಇದು ಕಲಾವಿದರ ಕರ್ತವ್ಯ ಎಂದು ಹಂಸಲೇಖ ಕಿವಿಮಾತು ಹೇಳಿದರು.

    ಏನಿದು ಪ್ರಕರಣ?
    ರೇಣುಕಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್​ ಮತ್ತು ಗೆಳತಿ ಪವಿತ್ರಾ ಗೌಡ ಅರೆಸ್ಟ್​ ಆಗಿರುವ ಸುದ್ದಿ ರಾಜ್ಯದೆಲ್ಲೆಡೆ ಭಾರಿ ಚರ್ಚೆಯಾಗುತ್ತಿದೆ. ಪವಿತ್ರಾ ಗೌಡಗೆ ಅಶ್ಲೀಲ ಸಂದೇಶ ಕಳುಹಿಸಿದಕ್ಕೆ ರೇಣುಕಸ್ವಾಮಿಯ ಕೊಲೆ ನಡೆದಿದೆ ಎನ್ನಲಾಗಿದೆ. ಇದರಲ್ಲಿ ದರ್ಶನ್​ ಕೈವಾಡ ಇದೆ ಎಂಬ ಆರೋಪ ಕೇಳಿಬಂದಿದೆ. ದರ್ಶನ್​ ಸೂಚನೆ ಕೊಟ್ಟಿದ್ದಕ್ಕೆ ಹಲ್ಲೆ ಮಾಡಿದೆವು ಎಂದು ಬಂಧಿತ ಆರೋಪಿಗಳು ತಪ್ಪೊಪ್ಪಿಕೊಂಡಿರುವ ಹಿನ್ನೆಲೆಯಲ್ಲಿ ದರ್ಶನ್​ರನ್ನು ಬಂಧಿಸಲಾಗಿದೆ. ಫೆಬ್ರವರಿ 27ರಿಂದ ದರ್ಶನ್​ ಗೆಳತಿ ಪವಿತ್ರಾ ಗೌಡಗೆ ರೇಣುಕಸ್ವಾಮಿ ಅಶ್ಲೀಲವಾಗಿ ಮೆಸೇಜ್ ಶುರು ಮಾಡಿದ್ದರು. ಅಕೌಂಟ್‌ ಬ್ಲಾಕ್‌ ಮಾಡಿದ್ದರೂ ಹೊಸ ಅಕೌಂಟ್‌ನಿಂದ ಮತ್ತದೇ ಮಸೇಜ್ ಕಳುಹಿಸುತ್ತಿದ್ದ. ಕಳೆದ ಶುಕ್ರವಾರ ಮರ್ಮಾಂಗದ ಫೋಟೋ ಕಳುಹಿಸಿ ‘ದರ್ಶನ್​ಗಿಂತ ನಾನೇನು ಕಡಿಮೆ ಬಾ’ ಎಂದು ಹೇಳಿದ್ದನಂತೆ. ಈ ರೀತಿಯ ಟಾರ್ಚರ್‌ ಸಹಿಸಿಕೊಳ್ಳಲಾಗದೇ ಪವಿತ್ರಾ ಅವರು ತಮ್ಮ ಮನೆಗೆಲಸದವ ಪವನ್​ಗೆ ಹೇಳಿದ್ದರು. ಈ ವಿಚಾರ ದರ್ಶನ್​ಗೆ ತಿಳಿದಿದೆ. ರೇಣುಕಾಸ್ವಾಮಿಯನ್ನು ಚಿತ್ರದುರ್ಗದಿಂದ ಅಪಹರಣ ಮಾಡಿ ಕರೆದುಕೊಂಡು ಬಂದು ಶೆಡ್​ನಲ್ಲಿ ಇರಿಸಿಕೊಂಡು ಹಲ್ಲೆ ಮಾಡಿದ್ದ ದರ್ಶನ್ ಮತ್ತು ಗ್ಯಾಂಗ್​, ಹಲ್ಲೆಯಿಂದ ರೇಣುಕಸ್ವಾಮಿ ನಿಧನ ಹೊಂದಿದ ಬಳಿಕ ಆತಂಕಗೊಂಡು, ಶವವನ್ನು ಸಾಗಿಸುವ ದಾರಿ ಹುಡುಕಿದೆ. ಆಗ ಬೇರೆ ಗ್ಯಾಂಗ್ ಒಂದನ್ನು ಕರೆಸಿ ಅವರಿಗೆ ಶವ ಒಪ್ಪಿಸಿ, ಅದನ್ನು ವಿಲೇವಾರಿ ಮಾಡುವಂತೆ ಹೇಳಿ ಅವರಿಗೆ 30 ಲಕ್ಷ ರೂಪಾಯಿ ಹಣ ನೀಡಿದ್ದಾರೆ. ಈ ಹಣವನ್ನು ದರ್ಶನ್ ಅವರೇ ನೀಡಿದ್ದಾರೆ ಎಂಬ ಆರೋಪಗಳು ಕೇಳಿಬಂದಿದೆ.

    ಸದ್ಯ ಈ ಪ್ರಕರಣದಲ್ಲಿ ದರ್ಶನ್​ ಮತ್ತು ಪವಿತ್ರಾ ಗೌಡ ಸೇರಿದಂತೆ ಎಲ್ಲ ಆರೋಪಿಗಳು ಪರಪ್ಪನ ಆಗ್ರಹಾರ ಕೇಂದ್ರ ಕಾರಾಗೃಹವನ್ನು ಸೇರಿದ್ದು, ನ್ಯಾಯಾಂಗ ಬಂಧನದಲ್ಲಿದ್ದಾರೆ. ಮತ್ತೊಂದೆಡೆ ಈ ಪ್ರಕರಣದ ತನಿಖೆ ಮುಂದುವರಿದೆ. ಹಾಗೇ ನಟ ದರ್ಶನ್​ಗೆ ಜಾಮೀನು ಪಡೆಯುವ ಪ್ರಯತ್ನಗಳು ಸಹ ನಡೆಯುತ್ತಿದೆ.

    ಹಣ ಪಡೆದ ಮತ್ತೊಂದು ಗ್ಯಾಂಗ್ ರೇಣುಕಾ ಸ್ವಾಮಿಯ ಶವವನ್ನು ಕಾಮಾಕ್ಷಿಪಾಳ್ಯ ಪೊಲೀಸ್ ಠಾಣಾ ವ್ಯಾಪ್ತಿಯ ಸುಮನಹಳ್ಳಿ ಮೋರಿಗೆ ಬಿಸಾಡಿ ಹೋಗಿದ್ದಾರೆ. ಶವ ದೊರೆತ ಬಳಿಕ ತಾವೇ ಕೊಲೆ ಮಾಡಿರುವುದಾಗಿ ಹೇಳಿ ಠಾಣೆಗೆ ಒಪ್ಪಿಕೊಂಡಿದ್ದಾರೆ. ಕೊಲೆ ಮಾಡಲು ಹಣಕಾಸಿನ ವಿಚಾರವೇ ಕಾರಣ ಎಂದು ಹೇಳಿದ್ದಾರೆ. ಆದರೆ ಒಬ್ಬೊಬ್ಬರನ್ನೂ ಪ್ರತ್ಯೇಕವಾಗಿ ವಿಚಾರಣೆ ಮಾಡಿದಾಗ ಅವರ ಹೇಳಿಕೆಯಲ್ಲಿ ವ್ಯತ್ಯಾಸ ಕಂಡುಬಂದಿದೆ. ಬಳಿಕ ಪೊಲೀಸರು ತಮ್ಮದೇ ಶೈಲಿಯಲ್ಲಿ ವಿಚಾರಣೆ ಮಾಡಿದಾಗ ನಿಜಾಂಶ ಬಯಲಾಗಿದೆ. ಹಣ ಪಡೆದು ಶವ ವಿಲೇವಾರಿ ಜವಾಬ್ದಾರಿ ಹೊತ್ತಿದ್ದ ಗ್ಯಾಂಗ್, ದರ್ಶನ್​ರ ಆಪ್ತನೊಟ್ಟಿಗೆ ಸಂಪರ್ಕದಲ್ಲಿತ್ತಂತೆ. ಶವ ವಿಲೇವಾರಿ ಹಾಗೂ ಕೊಲೆಯ ಆರೋಪ ಹೊರಲೆಂದು ಮುಂಚಿತವಾಗಿಯೇ 30 ಲಕ್ಷ ರೂಪಾಯಿ ಹಣವನ್ನು ದರ್ಶನ್ ಅವರಿಂದ ಈ ಗ್ಯಾಂಗ್ ಪಡೆದಿತ್ತು ಎನ್ನಲಾಗಿದೆ.

    ರೋಹಿತ್ ಶರ್ಮರ ವಿಭಿನ್ನ ಸಂಭ್ರಮಾಚರಣೆ ಹಿಂದಿನ ಅರ್ಥವೇನು?​ ಕಪ್ ಗೆದ್ದ ನಂತ್ರ ಯಾಕೆ ಹೀಗೆ ಮಾಡಿದ್ರು?

    ಟಿ20 ವಿಶ್ವಕಪ್ ಗೆದ್ದ ಬೆನ್ನಲ್ಲೇ ವಿಂಡೀಸ್​ನಲ್ಲಿ ಟೀಮ್​ ಇಂಡಿಯಾ ಲಾಕ್​! ರೋಹಿತ್​ ಪಡೆಯಲ್ಲಿ ಮನೆ ಮಾಡಿದ ಆತಂಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts