More

    ಹರಾಜಾಗದ ಪುರಸಭೆ ವಾಣಿಜ್ಯ ಮಳಿಗೆಗಳು..!

    ಗುಳೇದಗುಡ್ಡ: ಸರ್ಕಾರದ ವಿಶೇಷ ಅನುದಾನ ಪಡೆದು ಪಟ್ಟಣದ ಕೆಳಗಿನ ಪೇಟೆಯ ಮಾರುಕಟ್ಟೆಯ ಒಳಗಡೆ ಪುರಸಭೆ ನಿರ್ಮಿಸಿರುವ 42 ಮಳಿಗೆಗಳ ಸಂಕೀರ್ಣ ಕಾಮಗಾರಿ ಮುಗಿದು ವರ್ಷವೇ ಕಳೆದಿದ್ದರೂ ಇನ್ನೂ ಅವುಗಳನ್ನು ಹರಾಜು ಮಾಡದಿರುವುದು ವಿಪರ್ಯಾಸ.

    ಇದರಿಂದಾಗಿ ಪುರಸಭೆಗೆ ವರ್ಷಕ್ಕೆ ಲಕ್ಷಾಂತರ ರೂ. ಆದಾಯ ನಷ್ಟವಾಗುತ್ತಿದ್ದು, ಮಳಿಗೆಗಳಿಗೆ ಕೀಲಿ ಹಾಕಿರುವುದರಿಂದ, ನಿರ್ವಹಣೆ ಕೊರತೆಯಿಂದಾಗಿ ವಾಣಿಜ್ಯ ಮಳಿಗೆಗಳ ಸುತ್ತ ಸಾರ್ವಜನಿಕರು ಕಸ ಚೆಲ್ಲುತ್ತಿದ್ದು, ವಾತಾವರಣವೂ ಕಲುಷಿತಗೊಳ್ಳುತ್ತಿದೆ.

    ಸರ್ಕಾರದ ಅನುದಾನ ಪಡೆದು ಪುರಸಭೆಯಿಂದ ನಿರ್ಮಿಸಿರುವ 21 ಮಳಿಗೆಗಳಿದೆ. ಅದರ ಮೇಲೆ ಎಸ್‌ಸಿ, ಎಸ್‌ಟಿ ಯೋಜನೆಯಡಿ ಲೋಕೋಪಯೋಗಿ ಇಲಾಖೆ ವತಿಯಿಂದ 14 ಮಳಿಗೆಗಳು ಹಾಗೂ ಸಮುದಾಯ ಆರೋಗ್ಯ ಕೇಂದ್ರದ ಎದುರಿಗೆ ಭಾರತ್ ಮಾರ್ಕೆಟ್‌ನಲ್ಲಿ 7 ಮಳಿಗೆಗಳು ಒಟ್ಟು ಸೇರಿ 42 ಮಳಿಗೆಗಳಿದ್ದು, ಅವುಗಳನ್ನು ಹರಾಜು ಹಾಕಿದರೆ ಪುರಸಭೆಗೆ ದೊಡ್ಡ ಆದಾಯವಾದರೂ ಬರುತ್ತಿತ್ತು.

    ಪಟ್ಟಣದ ಕೇಂದ್ರ ಭಾಗದಲ್ಲಿರುವ ಈ ಮಳಿಗೆಯ ನಿರ್ಮಾಣಕ್ಕಾಗಿ ಎಸ್‌ಸಿ, ಎಸ್‌ಟಿ ಯೋಜನೆಡಿ 21 ಮಳಿಗೆಗಳಿಗೆ 70 ಲಕ್ಷ ರೂ. ಸರ್ಕಾರದ ವಿಶೇಷ ಅನುದಾನದಿಂದ ನಿರ್ಮಿಸಿರುವ ಮಳಿಗೆಗಳಿಗೆ 85 ಲಕ್ಷ ರೂ., ಸೇರಿ ಒಟ್ಟು 1.55 ಕೋಟಿ ರೂ. ವೆಚ್ಚವಾಗಿದೆ. ಇಷ್ಟು ಹಣ ವೆಚ್ಚಮಾಡಿ ನಿರ್ಮಾಣವಾದ ಕಟ್ಟಡಗಳು ಪೂರ್ಣಗೊಂಡಿದ್ದರೂ ವರ್ಷಕಳೆದರೂ ವ್ಯಾಪಾರಸ್ಥರಿಗೆ ನೀಡಿಲ್ಲವೇಕೆ ಎಂಬುದೇ ಯಕ್ಷಪ್ರಶ್ನೆಯಾಗಿದೆ.

    ಗುಳೇದಗುಡ್ಡ ಪಟ್ಟಣದಲ್ಲಿನ ವಾಣಿಜ್ಯ ಮಳಿಗೆಗಳನ್ನು ಪುರಸಭೆಗೆ ಹಸ್ತಾಂತರಿಸಿದ್ದಾರೋ ಇಲ್ಲವೋ ಮಾಹಿತಿ ಇಲ್ಲ. ಈ ಬಗ್ಗೆ ಪರಿಶೀಲನೆ ನಡೆಸಿ, ಮಳಿಗೆಗಳನ್ನು ಕೂಡಲೇ ಲಿಲಾವು ಮಾಡುವಂತೆ ಪುರಸಭೆ ಅಧಿಕಾರಿಗಳಿಗೆ ಸೂಚನೆ ನೀಡುತ್ತೇನೆ.
    ವಿಜಯ ಮೆಕ್ಕಳಕಿ, ಯೋಜನಾಧಿಕಾರಿ, ಜಿಲ್ಲಾ ನಗರಾಭಿವೃದ್ಧಿ ಕೋಶ, ಬಾಗಲಕೋಟೆ.
    ಮುಖ್ಯಾಧಿಕಾರಿಯಾಗಿ ಸತೀಶಕುಮಾರ ಚವಡಿ ಎಂಬುವವರು ಇದ್ದಾಗಲೇ ಲೋಕೋಪಯೋಗಿ ಇಲಾಖೆಯಿಂದ ವಾಣಿಜ್ಯ ಮಳಿಗೆಗಳನ್ನು ಪುರಸಭೆಗೆ ಹಸ್ತಾಂತರಿಸಲಾಗಿದೆ.
    ಎ.ಕೆ. ಮಕಾನದಾರ, ಕಿರಿಯ ಇಂಜಿನಿಯರ್, ಲೋಕೋಪಯೋಗಿ ಇಲಾಖೆ, ಬಾದಾಮಿ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts