More

    ಎಂಪಿಎಂ ಅರಣ್ಯ ಗುತ್ತಿಗೆ ಭಿನ್ನ ನಿಲುವು?

    ಶಿವಮೊಗ್ಗ: ಭದ್ರಾವತಿ ಎಂಪಿಎಂ ಕಾರ್ಖಾನೆಗೆ ನೀಡಿದ್ದ 20 ಸಾವಿರ ಹೆಕ್ಟೇರ್ ಅರಣ್ಯ ಭೂಮಿ ಗುತ್ತಿಗೆ ಅವಧಿ ನಾಲ್ಕು ವರ್ಷಗಳ ಹಿಂದೆಯೇ ಮುಕ್ತಾಯವಾಗಿದ್ದು, ಈ ಭೂಮಿಯನ್ನು ಮತ್ತೆ 40 ವರ್ಷಗಳ ಕಾಲ ಕಾರ್ಖಾನೆಗೆ ಗುತ್ತಿಗೆ ನೀಡಬೇಕೆಂದು ಅರಣ್ಯ ಸಚಿವ ಈಶ್ವರ ಖಂಡ್ರೆ ಅವರು ಕೇಂದ್ರ ಪರಿಸರ ಸಚಿವ ಭೂಪೇಂದರ್ ಯಾದವ್ ಅವರಿಗೆ ಮನವಿ ಮಾಡಿರುವುದು ತೀವ್ರ ಕುತೂಹಲಕ್ಕೆ ಕಾರಣವಾಗಿದೆ.

    2020ರಲ್ಲಿ ರಾಜ್ಯದಲ್ಲಿ ಬಿಜೆಪಿ ಸರ್ಕಾರವಿದ್ದಾಗ ಅರಣ್ಯ ಭೂಮಿ ಗುತ್ತಿಗೆ ಅವಧಿಯನ್ನು ಮತ್ತೆ 40 ವರ್ಷಕ್ಕೆ ವಿಸ್ತರಿಸಲು ಒಪ್ಪಿಗೆ ನೀಡಿತ್ತು. ಆದರೆ ಕೇಂದ್ರದ ಅನುಮತಿ ಪಡೆದಿರಲಿಲ್ಲ. ತಡವಾಗಿ ಎಚ್ಚೆತ್ತ ಸರ್ಕಾರ ಕೇಂದ್ರಕ್ಕೆ ಪ್ರಸ್ತಾವನೆ ಕಳುಹಿಸಿತ್ತು. ಆದರೆ ಈ ಪ್ರಸ್ತಾವನೆಗೆ ಕೇಂದ್ರ ಪರಿಸರ ಸಚಿವಾಲಯ ತೀವ್ರ ಆಕ್ಷೇಪ ವ್ಯಕ್ತಪಡಿಸಿತ್ತು. ಗುತ್ತಿಗೆ ಅವಧಿ ವಿಸ್ತರಣೆ ಮಾಡಿದರೆ ಕೇಂದ್ರ ಪರಿಸರ ಕಾಯ್ದೆ-1980ರ ಉಲ್ಲಂಘನೆಯಾಗುತ್ತದೆ ಎಂದು ತಿಳಿಸಿತ್ತು. ಕಾರ್ಖಾನೆಯ ಪರ ನಿಲುವು ತಳೆದ ಅರಣ್ಯ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಸೂಚಿಸಿತ್ತು. ಅಲ್ಲಿಗೆ ಈ ಪ್ರಕ್ರಿಯೆ ಸಂಪೂರ್ಣ ಸ್ಥಗಿತವಾಗಿತ್ತು. ಆದರೆ ರಾಜ್ಯ ಸರ್ಕಾರದ ತೀರ್ಮಾನಕ್ಕೆ ಅಂದಿನ ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರು. 20 ಸಾವಿರ ಹೆಕ್ಟೇರ್ ಭೂಮಿಯನ್ನು ಅರಣ್ಯ ಇಲಾಖೆಗೆ ಹಸ್ತಾಂತರಿಸಬೇಕೆಂದು ಅಂದಿನ ಸಿಎಂ ಬಿ.ಎಸ್.ಯಡಿಯೂರಪ್ಪ ಅವರಿಗೆ ಪತ್ರ ಬರೆದಿದ್ದರು.
    ಈಗ ತಮ್ಮದೇ ಸರ್ಕಾರದ ಸಚಿವರೊಬ್ಬರು ಎಂಪಿಎಂ ಅರಣ್ಯ ಭೂಮಿ ಗುತ್ತಿಗೆಯನ್ನು ಮುಂದುವರಿಸಲು ಪ್ರಯತ್ನಿಸುತ್ತಿರುವುದು ಸಿದ್ದರಾಮಯ್ಯ ಅವರ ಗಮನಕ್ಕೆ ಬಂದಿಲ್ಲವೇ ಎಂಬ ಪ್ರಶ್ನೆ ಉದ್ಭವಿಸಿದೆ. ಇಲ್ಲವೇ ನಾಲ್ಕು ವರ್ಷಗಳ ಬಳಿಕ ಸಿದ್ದರಾಮಯ್ಯ ತಮ್ಮ ನಿಲುವು ಬದಲಿಸಿದ್ದಾರೆಯೇ ಎಂಬ ಕುತೂಹಲ ಮೂಡಿದೆ.
    ಮೂರು ಜಿಲ್ಲೆಗಳಲ್ಲಿ ಭೂಮಿ:ಎಂಪಿಎಂ ಆರಂಭಿಸುವ ಸಂದರ್ಭದಲ್ಲಿ ಕಾರ್ಖಾನೆಗೆ ಅಗತ್ಯವಿರುವ ಕಚ್ಚಾ ವಸ್ತುವಿಗೋಸ್ಕರ ಶಿವಮೊಗ್ಗ, ಉತ್ತರ ಕನ್ನಡ ಹಾಗೂ ಚಿಕ್ಕಮಗಳೂರು ಜಿಲ್ಲೆಗಳ ವ್ಯಾಪ್ತಿಯಲ್ಲಿ 20 ಸಾವಿರ ಹೆಕ್ಟೇರ್ ಭೂಮಿಯನ್ನು ಕಾರ್ಖಾನೆಗೆ ಗುತ್ತಿಗೆ ಆಧಾರದಲ್ಲಿ ನೀಡಲಾಗಿತ್ತು. ಈಗ ಕಾರ್ಖಾನೆ ಸ್ಥಗಿತಗೊಂಡ ಬಳಿಕ ಈ ಭೂಮಿಯನ್ನು ಯಾರಿಗೆ ಹಸ್ತಾಂತರಿಸಬೇಕು ಎಂಬ ಗೊಂದಲ ಸೃಷ್ಟಿಯಾಗಿದೆ. ಈ ಭೂಮಿಗಾಗಿ ಕೆಲ ಹಿತಾಸಕ್ತಿಗಳು ಕೆಲಸ ಮಾಡುತ್ತಿರುವುದು ಗುಟ್ಟಾಗೇನೂ ಉಳಿದಿಲ್ಲ.
    ಮುಚ್ಚಿದ ಕಾರ್ಖಾನೆಗೇಕೆ ಜಾಗ?:ಎಂಪಿಎಂ ಕಾರ್ಖಾನೆ 2015ರಲ್ಲೇ ಸ್ಥಗಿತಗೊಂಡಿದೆ. ಇದಾದ ಐದು ವರ್ಷಗಳವರೆಗೆ ಗುತ್ತಿಗೆ ಅವಧಿಯಿತ್ತು. ಈಗ ಸ್ವಲ್ಪ ಭಾಗದಲ್ಲಿ ಎಂಪಿಎಂನಿಂದ ಬೆಳೆಸಿದ ನೆಡುತೋಪು ಇರಬಹುದು. ಅದನ್ನು ಕಟಾವು ಮಾಡಿದ ಬಳಿಕ ಭೂಮಿ ಬಗ್ಗೆ ನಿರ್ಧಾರ ಕೈಗೊಳ್ಳಲು ಸರ್ಕಾರ ಸ್ವತಂತ್ರವಾಗಿದೆ. ಈ ನಡುವೆ ಮುಚ್ಚಿರುವ ಕಾರ್ಖಾನೆಗೆ ಭೂಮಿ ಏಕೆ? ಅದರಿಂದ ಕಾರ್ಖಾನೆಗೆ ಲಾಭವೇನು? ಅಲ್ಲಿ ನೆಡುತೋಪು ಬೆಳೆಸಿದರೆ ಅದರ ಮಾಲೀಕತ್ವ ಎಂಪಿಎಂನದ್ದೋ? ಸರ್ಕಾರದ್ದೋ? ಎಂಬ ಹಲವಾರು ಪ್ರಶ್ನೆಗಳಿಗೆ ಖಚಿತ ಉತ್ತರವಿಲ್ಲ. ಕಾರ್ಖಾನೆ ಆರಂಭಕ್ಕೆ ಪ್ರಾಮಾಣಿಕ ಪ್ರಯತ್ನ ಮಾಡದ ಯಾವ ಸರ್ಕಾರಗಳೂ ಅರಣ್ಯ ಭೂಮಿ ಗುತ್ತಿಗೆ ವಿಷಯದಲ್ಲಿ ಮಾತ್ರ ಅತ್ಯುತ್ಸಾಹ ತೋರುತ್ತಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.
    ನೆಡುತೋಪಿಗೆ ವ್ಯಾಪಕ ವಿರೋಧ:ಇನ್ನೊಂದೆಡೆ ಮಲೆನಾಡು ಭಾಗದಲ್ಲಿ ನೆಡುತೋಪು ಬಗ್ಗೆ ಸಾರ್ವಜನಿಕರಲ್ಲಿ ವ್ಯಾಪಕ ಆಕ್ರೋಶವಿದೆ. ಏಕಜಾತಿ ಗಿಡಗಳನ್ನು ನೆಡುವುದರಿಂದ ಜೀವ ವೈವಿಧ್ಯ ನಾಶವಾಗುತ್ತದೆ. ಅದರಲ್ಲಿ ನೀಲಗಿರಿ ಹಾಗೂ ಅಕೇಶಿಯಾ ನೆಡುತೋಪುಗಳಿಂದ ಅಂತರ್ಜಲ ಬತ್ತಿ ಹೋಗುತ್ತದೆ. ಅದರ ಎಲೆಗಳು ಕೊಳೆಯದ ಕಾರಣ ಸಣ್ಣ ಪುಟ್ಟ ಗಿಡಗಳು ಬೆಳೆಯಲು ಸಾಧ್ಯವಿಲ್ಲ. ಇವುಗಳಿಂದ ವಾತಾವರಣದ ಉಷ್ಣತೆ ಹೆಚ್ಚುತ್ತದೆ ಎಂಬ ಕಾರಣದಿಂದ ಅನೇಕ ಸಂಘಟನೆಗಳು ಈಗಾಗಲೇ ಹೋರಾಟ ನಡೆಸಿವೆ. ಈ ಹೋರಾಟಗಳಿಗೆ ನಾಲ್ಕು ವರ್ಷದ ಹಿಂದೆ ಸಿದ್ದರಾಮಯ್ಯ ಸಹ ಬೆಂಬಲ ವ್ಯಕ್ತಪಡಿಸಿದ್ದರು. ಆದರೆ ಈಗ ಅವರ ಸರ್ಕಾರದ ನಿಲುವು ಬದಲಾಗಿರುವುದು ವಿಪರ್ಯಾಸ.
    ಒತ್ತುವರಿ ಭೀತಿ?:ಇನ್ನೊಂದೆಡೆ ಇಷ್ಟೊಂದು ಪ್ರಮಾಣದ ಭೂಮಿಯನ್ನು ಅರಣ್ಯ ಇಲಾಖೆಗೆ ಹಸ್ತಾಂತರ ಮಾಡಿದರೆ ಭೂಮಿ ಸುರಕ್ಷಿತವಲ್ಲ ಎಂಬ ಮಾತುಗಳೂ ಕೇಳಿ ಬರುತ್ತಿವೆ. ಅರಣ್ಯ ಇಲಾಖೆಗೆ ಹಸ್ತಾಂತರವಾದರೆ ಭೂ ಒತ್ತುವರಿ ಪ್ರಕರಣಗಳು ಹೆಚ್ಚಬಹುದು. ಒತ್ತುವರಿ ತೆರವು ಮಾಡಲು ಅರಣ್ಯ ಇಲಾಖೆ ಅಧಿಕಾರಿಗಳು ಮುಂದಾದರೆ ಅವರ ಮೇಲೆ ರಾಜಕೀಯ ನಾಯಕರು ಒತ್ತಡ ಹೇರಬಹುದು ಎಂಬ ಮಾತುಗಳಿವೆ. ಹೀಗಾಗಿ ಸರ್ಕಾರ ಎಲ್ಲ ಆಯಾಮಗಳಲ್ಲೂ ಪರಿಶೀಲನೆ ಮಾಡಬೇಕಾದ ಅವಶ್ಯಕತೆಯಿದೆ.
    ಬಗೆಹರಿಯದ ಗೊಂದಲ:ಎಂಪಿಎಂ ವಿಷಯದಲ್ಲಿ ಈಗಲೂ ಸರ್ಕಾರದ ಮಟ್ಟದಲ್ಲಿ ಸಾಕಷ್ಟು ಗೊಂದಲಗಳಿವೆ. ಎಂಪಿಎಂ ಖಾಸಗೀಕರಣಕ್ಕೆ ಈಗಾಗಲೇ ಹಲವು ಬಾರಿ ಟೆಂಡರ್ ಕರೆದಿರುವ ಸರ್ಕಾರ ಅನೇಕ ನಿಬಂಧನೆಗಳನ್ನು ವಿಧಿಸಿದೆ. ಎಂಪಿಎಂ ಟೌನ್‌ಶಿಪ್ ಅನ್ನು ಖಾಸಗಿಯವರಿಗೆ ನೀಡದಿರಲು ನಿರ್ಧರಿಸಿದೆ. ಅರಣ್ಯ ಭೂಮಿ ವಿಷಯದಲ್ಲಿ ಇನ್ನೂ ಸ್ಪಷ್ಟ ನಿರ್ಧಾರ ಕೈಗೊಂಡಿಲ್ಲ. ಒಂದು ವೇಳೆ ಇದನ್ನು ಖಾಸಗಿ ಕಂಪನಿಗೆ ಹಸ್ತಾಂತರಿಸಿದರೆ ದುರ್ಬಳಕೆಯಾಗುವ ಅಪಾಯವನ್ನು ತಳ್ಳಿ ಹಾಕುವಂತಿಲ್ಲ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts