More

    ಇಂದ್ರಾಳಿ ರೈಲ್ವೆ ಮೇಲ್ಸೇತುವೆಗೆ ಸೆ.15ರ ಗಡುವು

    ಅಧಿಕಾರಿಗಳಿಗೆ ಸಂಸದ ಕೋಟ ತಾಕೀತು | ಮಾತು ತಪ್ಪಿದರೆ ಕ್ರಮದ ಎಚ್ಚರಿಕೆ

    ವಿಜಯವಾಣಿ ಸುದ್ದಿಜಾಲ ಉಡುಪಿ
    ಉಡುಪಿ-ಮಣಿಪಾಲ ರಾಷ್ಟ್ರೀಯ ಹೆದ್ದಾರಿಯ ಇಂದ್ರಾಳಿಯಲ್ಲಿ ರೈಲ್ವೆ ಮೇಲ್ಸೇತುವೆ ಕಾಮಗಾರಿ ಕೂಡಲೇ ಆರಂಭಿಸಲು ಎನ್​ಎಚ್​ ಅಧಿಕಾರಿಗಳಿಗೆ ತಾಕೀತು ಮಾಡಿದ ಸಂಸದ ಕೋಟ ಶ್ರೀನಿವಾಸ್​ ಪೂಜಾರಿ, ಎರಡೂವರೆ ತಿಂಗಳ (ಸೆ.15) ಒಳಗೆ ಕಾಮಗಾರಿ ಪೂರ್ಣಗೊಳಿಸಲು ಗಡುವು ನೀಡಿದರು.

    ಶಾಸಕ ಯಶ್​ಪಾಲ್​ ಸುವರ್ಣ ಅವರೊಂದಿಗೆ ಇಂದ್ರಾಳಿಯಲ್ಲಿ ಕಾಮಗಾರಿ ನಡೆಯಲಿರುವ ಸ್ಥಳಕ್ಕೆ ಶನಿವಾರ ಭೇಟಿ ನೀಡಿ, ಪರಿಶೀಲಿಸಿದರು. ಸ್ಥಳಕ್ಕೆ ರಾಷ್ಟ್ರೀಯ ಹೆದ್ದಾರಿ ಇಲಾಖೆಯ ಅಧಿಕಾರಿಗಳನ್ನು ಕರೆಸಿ ಮಾತನಾಡಿದರು.

    ಜು.1ರಿಂದ ಕೆಲಸ ಆರಂಭ

    ರಾಷ್ಟ್ರೀಯ ಹೆದ್ದಾರಿ ಶೃಂಗೇರಿ ವಿಭಾಗದ ಎಇಇ ಮಂಜುನಾಥ ಮಾತನಾಡಿ, 58 ಮೀಟರ್​ ಉದ್ದದ ಸಿಂಗಲ್​ ಸ್ಪಾನ್​ ಕಾಮಗಾರಿ ಮಾಡಬೇಕಿದೆ. ಈಗಾಗಲೇ ಗರ್ಡರ್​ ಬಂದಿದ್ದು, ವೆಲ್ಡಿಂಗ್​ ಕೆಲಸ ಮಾಡಬೇಕಿದೆ. ಮೆಸ್ಕಾಂನವರು ವಿದ್ಯುತ್ ಕಂಬ ತೆರವು ಮಾಡಿಕೊಡಬೇಕಿದೆ. ಜು.3ರಿಂದ ಕಾಮಗಾರಿ ಆರಂಭಿಸಿ, ಎರಡು ತಿಂಗಳಲ್ಲಿ ಕೆಲಸ ಮುಗಿಸುತ್ತೇವೆ. ಮಳೆ ಇರುವುದರಿಂದ ಕೆಲಸಕ್ಕೆ ಸ್ವಲ್ಪ ತೊಡಕಾಗಬಹುದು ಎಂದರು.

    ಜನರ ಅಸಮಾಧಾನ

    ಕಾಮಗಾರಿಯ ನೀಲನಕ್ಷೆ ವೀಕ್ಷಿಸಿ ಮಾತನಾಡಿ ಸಂಸದ ಕೋಟ, ನಿಮ್ಮ ವಿಳಂಬ ಧೋರಣೆಯಿಂದ ಈ ಭಾಗದಲ್ಲಿ ಸಂಚರಿಸುತ್ತಿರುವ ಪ್ರಯಾಣಿಕರು, ಸಾರ್ವಜನಿಕರಕು ಅಸಮಾಧಾನ ವ್ಯಕ್ತಪಡಿಸುತ್ತದ್ದಾರೆ. ಪಕ್ಕದಲ್ಲೇ ಶಾಲೆಯೂ ಇದ್ದು ಮಕ್ಕಳೂ ಜೀವಭಯದಲ್ಲಿ ಓಡಾಡುವಂತಾಗಿದೆ. ದಿನವೂ ಇಲ್ಲಿ ಅಪಘಾತವಾಗುತ್ತಿದ್ದು, ನಿತ್ಯ ನೂರಾರು ದೂರವಾಣಿ ಕರೆಗಳು ಬರುತ್ತಿದ್ದು, ಜನಪ್ರತಿನಿಧಿಗಳಾಗಿ ನಮಗೂ ಉತ್ತರಿಸುವುದು ಕಷ್ಟವಾಗುತ್ತಿದೆ. ನೀವೇ ತಿಳಿಸಿರುವಂತೆ ಸೆ.15ರ ಒಳಗೆ ಕಾಮಗಾರಿ ಮುಗಿಸದಿದ್ದಲ್ಲಿ ನಿಮ್ಮ ವಿರುದ್ಧವೇ ಕ್ರಮ ಕೈಗೊಳ್ಳಲು ಸರ್ಕಾರಕ್ಕೆ ಒತ್ತಾಯ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

    ಬಿಜೆಪಿಯ ಸುಪ್ರಸಾದ್​ ಶೆಟ್ಟಿ, ನಗರಸಭಾ ಸದಸ್ಯರಾದ ಗಿರೀಶ್​ ಅಂಚನ್​, ಭಾರತಿ ಪ್ರಶಾಂತ್​ ಸಗ್ರಿ, ರಾಷ್ಟ್ರೀಯ ಹೆದ್ದಾರಿ ಶೃಂಗೇರಿ ವಿಭಾಗದ ಸಹಾಯಕ ಇಂಜಿನಿಯರ್​ಗಳಾದ ಮಂಜುನಾಥ್​ ನಾಯಕ್​, ಶಶಿಧರ್​ ಎಚ್​.ಎಸ್​. ಹಾಗೂ ಸ್ಥಳೀಯರು ಇದ್ದರು.

    ಸುಳ್ಳು ಹೇಳುತ್ತ ಕಾಲಹರಣ ಮಾಡಬೇಡಿ

    ಹೆದ್ದಾರಿ ಅಧಿಕಾರಿಗಳ ಅಸಮರ್ಪಕ ಮಾತಿನಿಂದ ಆಕ್ರೋಶಿತರಾದ ಶಾಸಕ ಯಶ್​ಪಾಲ್​ ಸುವರ್ಣ, ಗರ್ಡರ್​ ಬರುವ ಮೊದಲು ಐದಾರು ಬಾರಿ ನಾನೇ ಧಾರವಾಡಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದೆ. ಅಲ್ಲಿಂದ ಉಡುಪಿಗೆ ಗರ್ಡರ್​ ಬಂದು ಮೂರ್ನಾಲ್ಕು ತಿಂಗಳು ಕಳೆದಿದೆ. ಮಳೆಗಾಲದ ಮೊದಲೇ ಕಾಮಗಾರಿ ಆರಂಭಿಸಿ ಮುಗಿಸಲು ಎಲ್ಲ ಅವಕಾಶವೂ ತಮಗೆ ಇತ್ತು. ಇದೀಗ ಮಳೆಗಾಲದ ನೆಪ ಹೇಳುತ್ತಿದ್ದೀರಿ. ಸುಮ್ಮನೆ ಸುಳ್ಳು ಹೇಳುತ್ತ ಕಾಲಹರಣ ಮಾಡಬೇಡಿ. ಕೂಡಲೇ ಕೆಲಸ ಆರಂಭಿಸಿ ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts