More

    ಮದನಿನಗರಕ್ಕೆ ಸಂಸದ ಬ್ರಿಜೇಶ್ ಚೌಟ ಭೇಟಿ: ನಿಶ್ಚಿತಾರ್ಥ ಸುದ್ದಿ ಬರೀ ವದಂತಿ ಎಂದ ಸಹೋದರಿ!

    ವಿಜಯವಾಣಿ ಸುದ್ದಿಜಾಲ ಉಳ್ಳಾಲ
    ಕಳೆದ ಬುಧವಾರ ಆವರಣಗೋಡೆ ಕುಸಿದು ಒಂದೇ ಕುಟುಂಬದ ನಾಲ್ವರು ಸಾವನ್ನಪ್ಪಿದ ಮುನ್ನೂರು ಗ್ರಾಮದ ಮದನಿನಗರ ಮನೆಗೆ ಭಾನುವಾರ ಸಂಸದ ಬ್ರಿಜೇಶ್ ಚೌಟ ಭೇಟಿ ನೀಡಿದರು. ಈ ಸಂದರ್ಭ ಬದುಕುಳಿದ ಕುಟುಂಬದ ಏಕೈಕ ಸದಸ್ಯೆ ಫಾತಿಮಾ ರಶೀನಾ ಮಾಧ್ಯಮಗಳ ಮುಂದೆ ಮಾತನಾಡಿದ್ದು, ಸಹೋದರಿಗೆ ನಿಶ್ಚಿತಾರ್ಥ ಆಗಿರಲಿಲ್ಲ, ಅದೆಲ್ಲಾ ಸುಳ್ಳು ಸುದ್ದಿ ಎಂದು ತಿಳಿಸಿದರು.

    ಪಾತ್ರೆಗಳು ಎಲ್ಲವೂ ತೊಳೆಯದ ಸ್ಥಿತಿಯಲ್ಲಿತ್ತು!

    ಬಕ್ರೀದ್ ಹಬ್ಬದ ಮರುದಿನವೇ ನಾನು ಪತಿಯ ಮನೆಗೆ ತೆರಳಿದ್ದೇನೆ. ಪ್ರತಿದಿನ ಬೆಳಗ್ಗೆ 6 ಗಂಟೆಗೆ ಪೈಪ್‌ಲೈನ್‌ನಲ್ಲಿ ನೀರು ಬರುವುದರಿಂದ ತುಂಬಿಸಿಡಲು ಎಲ್ಲರೂ ಬೇಗನೆ ಏಳುತ್ತಿದ್ದೆವು. ಆದರೆ ಘಟನೆ ನಡೆದ ದಿನದಂದು ಮನೆಯಲ್ಲಿ ನೀರು ತುಂಬಿಸಿಟ್ಟಿಲ್ಲ, ಪಾತ್ರೆಗಳು ಎಲ್ಲವೂ ತೊಳೆಯದ ಸ್ಥಿತಿಯಲ್ಲಿತ್ತು. ಇದನ್ನು ಗಮನಿಸಿದಾಗ ನಸುಕಿನ ಜಾವ 3 ಗಂಟೆಯ ಆಸುಪಾಸಿನಲ್ಲಿ ದುರಂತ ಸಂಭವಿಸಿರುವ ಅನುಮಾನ ಇದೆ. ಮಾಧ್ಯಮಗಳಿಗೆ ಹಲವರು ನೀಡಿರುವ ಮಾಹಿತಿಗಳು ಸತ್ಯಕ್ಕೆ ದೂರವಾಗಿದೆ ಎಂದರು.

    ಸದೃಢ ಕಂಪೌಂಡ್ ನಿರ್ಮಿಸುವಂತೆ ಮನವಿ ಮಾಡಿದ್ದರೂ ನಿರ್ಲಕ್ಷ್ಯ

    ಎರಡು ವರ್ಷದ ಹಿಂದೆಯೂ ಕಂಪೌಂಡ್ ಬಿದ್ದಾಗ, ಸದೃಢ ರೀತಿಯಲ್ಲಿ ನಿರ್ಮಿಸುವಂತೆ ಮನವಿ ಮಾಡಿದ್ದೆವು. ನಮ್ಮ ಮನವಿಗೆ ಕಿವಿಗೊಡದೆ ನಿರ್ಲಕ್ಷ್ಯ ವಹಿಸಿದ ಕಾರಣ ನಮ್ಮ ಕುಟುಂಬದ ನಾಲ್ಕು ಅಮೂಲ್ಯ ಜೀವಗಳು ಉಸಿರು ಚೆಲ್ಲುವಂತಾಯಿತು. ಇನ್ನು ಮುಂದೆ ಇಲ್ಲೇ ಮನೆ ಕಟ್ಟಿಕೊಟ್ಟಲ್ಲಿ ವಾಸಿಸುವುದು ಕಷ್ಟ. ಬೇರೆ ಕಡೆ ಮನೆಯನ್ನು ನಿರ್ಮಿಸಿ ಕೊಟ್ಟರೆ ವಾಸಿಸುತ್ತೇವೆ ಎಂದು ರಶೀನಾ ತಿಳಿಸಿದರು.

    ಜಿಲ್ಲಾಧಿಕಾರಿ, ತಹಶೀಲ್ದಾರ್‌ಗೆ ಸೂಚನೆ ನೀಡಿರುವೆ

    ಸಂಸದ ಬ್ರಿಜೇಶ್ ಚೌಟ ಮಾತನಾಡಿ, ಪ್ರಾಕೃತಿಕ ವಿಕೋಪಕ್ಕೆ ಒಳಗಾಗುವ ಪ್ರದೇಶಗಳ ಸರ್ವೇ ನಡೆಸುವಂತೆ ಹಾಗೂ ಮಳೆ ಹೆಚ್ಚಾಗುವ ಸಂದರ್ಭ ಅಪಾಯಕಾರಿ ಪ್ರದೇಶಗಳಲ್ಲಿರುವ ಜನರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲು ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಮತ್ತು ತಹಶೀಲ್ದಾರ್‌ಗೆ ಸೂಚಿಸಿದ್ದೇನೆ ಎಂದು ಹೇಳಿದರು.

    ಈ ಸಂದರ್ಭ ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ, ಉಪಾಧ್ಯಕ್ಷ ಕೆ.ರವೀಂದ್ರ ಶೆಟ್ಟಿ ಉಳಿದೊಟ್ಟು, ತಹಶೀಲ್ದಾರ್ ಪ್ರದೀಪ್ ಕೊರ್ಡೇಕರ್, ತಾಲೂಕು ಕಾರ್ಯನಿರ್ವಹಣಾಧಿಕಾರಿ ಶೈಲಾ, ಮುಖಂಡರುಗಳಾದ ಸಂತೋಷ್ ಕುಮಾರ್ ರೈ ಬೋಳಿಯಾರ್, ಹೇಮಂತ್ ಶೆಟ್ಟಿ ಇನ್ನಿತರರು ಉಪಸ್ಥಿತರಿದ್ದರು.

    ಒಂದೇ ಮನೆಯ ನಾಲ್ವರು ಸಾವನ್ನಪ್ಪಿರುವುದು ಅತ್ಯಂತ ದುಃಖಕರ ವಿಚಾರ. ದುರ್ಘಟನೆ ನಡೆದ ದಿನವೇ ತಹಶೀಲ್ದಾರ್ ಹಾಗೂ ಜಿಲ್ಲಾಧಿಕಾರಿಗಳಿಂದ ಮಾಹಿತಿ ಪಡೆದುಕೊಂಡಿದ್ದೇನೆ. ದ.ಕ. ಜಿಲ್ಲೆ ಸಮತಟ್ಟು ಪ್ರದೇಶವಾಗಿರದ ಕಾರಣದಿಂದ ಮಳೆ ನೀರು ಹೋಗಲು ಸೂಕ್ತ ವ್ಯವಸ್ಥೆಗಳಿಲ್ಲದೆ ಘಟನೆ ಸಂಭವಿಸುತ್ತಿವೆ. ಪ್ರಕೃತಿ ವಿಕೋಪಕ್ಕೆ ತುತ್ತಾಗಬಹುದಾದ ಮನೆಗಳ ವರದಿ ಶೀಘ್ರ ಸಂಗ್ರಹಿಸಲು ಸೂಚಿಸಿದ್ದೇನೆ. ಮೃತರ ಕುಟುಂಬಕ್ಕೆ ರಾಜ್ಯ ಸರ್ಕಾರದ ಕಡೆಯಿಂದ ಪರಿಹಾರ ಕೊಡಲು ಒತ್ತಾಯಿಸುತ್ತೇನೆ.
    – ಬ್ರಿಜೇಶ್ ಚೌಟ, ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಸಂಸದ

    ಪರಿಹಾರ ಪತ್ರ ಹಸ್ತಾಂತರ

    ಮದನಿನಗರಕ್ಕೆ ಸಂಸದ ಬ್ರಿಜೇಶ್ ಚೌಟ ಭೇಟಿ: ನಿಶ್ಚಿತಾರ್ಥ ಸುದ್ದಿ ಬರೀ ವದಂತಿ ಎಂದ ಸಹೋದರಿ!

    ಮದನಿ ನಗರದಲ್ಲಿ ಆವರಣಗೋಡೆ ಕುಸಿದು ಮೃತಪಟ್ಟ ಕುಟುಂಬಕ್ಕೆ ಸರ್ಕಾರದಿಂದ ಘೋಷಿಸಲಾದ ಪರಿಹಾರ ಮೊತ್ತದ ಪತ್ರ ಭಾನುವಾರ ವಿಧಾನಸಭಾಧ್ಯಕ್ಷ ಯು.ಟಿ. ಖಾದರ್ ಫರೀದ್ ಹಸ್ತಾಂತರಿಸಿದರು. ಮೃತ ಯಾಸಿರ್ ಅವರ ಪುತ್ರಿ ಫಾತಿಮಾ ರಶೀನಾ ಅವರ ಕೈಯಲ್ಲಿ ಇಪ್ಪತ್ತು ಲಕ್ಷದ ಚೆಕ್ ಮದನಿ ನಗರ ಮಸೀದಿಯಲ್ಲಿ ಹಸ್ತಾಂತರಿಸಲಾಯಿತು. ಈ ಸಂದರ್ಭ ಮಸೀದಿಯ ಪದಾಧಿಕಾರಿಗಳು, ಆಡಳಿತ ಸಮಿತಿಯ ಸದಸ್ಯರು ಹಾಗೂ ಮುನ್ನೂರು ಗ್ರಾಮ ಪಂಚಾಯಿತಿ ಸದಸ್ಯರು ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts