More

    ರಾಜ್ಯದಲ್ಲಿ ಮುಂಗಾರು ಸೊಗಸು, ಬಿತ್ತನೆ ಬಿರುಸು

    ಬೆಂಗಳೂರು: ರಾಜ್ಯದಲ್ಲಿ ಉತ್ತಮವಾಗಿ ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ 40 ಲಕ್ಷ ಹೆಕ್ಟೇರ್ ಪ್ರದೇಶಗಳಲ್ಲಿ ಬಿತ್ತನೆ ಕಾರ್ಯ ಪೂರ್ಣಗೊಂಡಿದೆ. ಈ ಬಾರಿ 82.48 ಲಕ್ಷ ಹೆಕ್ಟೇರ್ ಪ್ರದೇಶಗಳಲ್ಲಿ ಬಿತ್ತನೆ ಗುರಿ ಹೊಂದಲಾಗಿತ್ತು. ಒಟ್ಟಾರೆ 23.99 ಲಕ್ಷ ಹೆಕ್ಟೇರ್ ನೀರಾವರಿ ಪ್ರದೇಶಗಳ ಪೈಕಿ 7.94 ಲಕ್ಷ ಹೆಕ್ಟೇರ್​ನಲ್ಲಿ ಏಕಧಾನ್ಯ, ದ್ವಿದಳ ಧಾನ್ಯ, ಎಣ್ಣೆ ಕಾಳುಗಳು, ವಾಣಿಜ್ಯ ಬೆಳೆಗೆ ಬಿತ್ತನೆ ಮಾಡಲಾಗಿದೆ. 58.49 ಲಕ್ಷ ಹೆಕ್ಟೇರ್ ಪ್ರದೇಶ ಮಳೆ ಅವಲಂಬಿಸಿದ್ದು, ಈವರೆಗೆ 30 ಲಕ್ಷ ಹೆಕ್ಟೇರ್ ಪ್ರದೇಶಗಳಲ್ಲಿ ಭತ್ತ, ಜೋಳ, ರಾಗಿ, ಮೆಕ್ಕೆಜೋಳ, ಗೋಧಿ, ತೊಗರಿ, ಕಡಲೆ, ಹುರುಳಿ, ಉದ್ದು, ಹೆಸರು, ಅಲಸಂದಿ, ಅವರೆ, ಮಟಕಿ, ಶೇಂಗಾ, ಎಳ್ಳು, ಸೂರ್ಯಕಾಂತಿ, ಹರಳಿ, ಹಿಚ್ಚೆಳ್ಳು, ಸೋಯಾ ಅವರೆ, ಅಗಸೆ, ಹತ್ತಿ, ಕಬ್ಬು ಮತ್ತು ತಂಬಾಕು ಸೇರಿ ವಿವಿಧ ಬೀಜ ಬಿತ್ತಲಾಗಿದೆ.

    ಬೆಂಗಳೂರು, ಬೆಂ.ಗ್ರಾಮಾಂತರ, ರಾಮನಗರ, ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು, ಚಿತ್ರದುರ್ಗ, ದಾವಣಗೆರೆ, ಚಾಮರಾಜನಗರ, ಮೈಸೂರು, ಮಂಡ್ಯ, ಬಳ್ಳಾರಿ, ವಿಜಯನಗರ, ಕೊಪ್ಪಳ, ರಾಯಚೂರು, ಕಲಬುರಗಿ, ಯಾದಗಿರಿ, ಬೆಳಗಾವಿ, ಬಾಗಲಕೋಟೆ, ವಿಜಯಪುರ, ಗದಗದಲ್ಲಿ ವಾಡಿಕೆಗಿಂತ ಹೆಚ್ಚು ಮಳೆ ಸುರಿದಿದೆ. ಈ ಹಿನ್ನೆಲೆಯಲ್ಲಿ ಕೃಷಿ ಚಟುವಟಿಕೆಗಳು ಬಿರುಸಾಗಿವೆ. ಹಾವೇರಿ, ಧಾರವಾಡ, ಶಿವಮೊಗ್ಗ, ಹಾಸನ, ಕೊಡಗು, ಚಿಕ್ಕಮಗಳೂರು, ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡದಲ್ಲಿ

    ವಾಡಿಕೆಗಿಂತ ಕಡಿಮೆ ಪ್ರಮಾಣದಲ್ಲಿ ವರ್ಷಧಾರೆಯಾಗಿದ್ದರೂ ಬಿತ್ತನೆ ಬೀಜ ಬಿತ್ತಲಾಗಿದೆ. ಆದರೆ, ಕೆಲ ಪ್ರದೇಶಗಳಲ್ಲಿ ಬಿತ್ತನೆ ಮಾಡಿದ ಬಳಿಕ ಒಂದು ವಾರ ಮಳೆ ಕುಂಠಿತವಾಗಿತ್ತು. ಇದರಿಂದಾಗಿ ರೈತರಿಗೆ ಬೆಳೆಗಳು ಒಣಗುವ ಆತಂಕ ಕಾಡುತ್ತಿತ್ತು. ಕಳೆದ ಒಂದು ವಾರದಿಂದ ಮುಂಗಾರು ಪ್ರಬಲವಾಗಿದ್ದು, ಉತ್ತಮ ಮಳೆ ಸುರಿಯುತ್ತಿದೆ.

    See also  ವೈಜಾಗ್ ಅನಿಲ ಸೋರಿಕೆ: ಎಲ್​ಜಿ ಪಾಲಿಮರ್ಸ್ ವಿರುದ್ಧ ದಾಖಲಾಯಿತು ಎಫ್​ಐಆರ್​

    ವಾಡಿಕೆಯಷ್ಟು ಮಳೆ: ಜೂನ್​ನಲ್ಲಿ ರಾಜ್ಯಾದ್ಯಂತ 208 ಮಿಮೀ ಮಳೆ ಬೀಳಬೇಕಿತ್ತು. 205 ಮಿಮೀ ಬಿದ್ದಿದ್ದು, ವಾಡಿಕೆಗಿಂತ ಶೇ.2ರಷ್ಟು ಕಡಿಮೆ ಪ್ರಮಾಣದಲ್ಲಿ ಸುರಿದಿದೆ. ಆದರೆ, ರಾಜ್ಯಾದ್ಯಂತ ಒಟ್ಟಾರೆ ವಾಡಿಕೆಯಷ್ಟೇ ಮಳೆಯಾದ ಹಿನ್ನೆಲೆಯಲ್ಲಿ ಕೃಷಿ ಚಟುವಟಿಕೆಗಳಿಗೆ ವರದಾನವಾಗಿದೆ. ಐದು ವರ್ಷಗಳಿಂದ ಮಳೆ ಅವಧಿ ದಿನಗಳು ಬದಲಾಗುತ್ತಿರುವ ಹಿನ್ನೆಲೆಯಲ್ಲಿ ಜೂನ್​ನಲ್ಲಿ ಮಳೆ ಕುಂಠಿತವಾಗುತ್ತಿತ್ತು . ಈ ಬಾರಿ ‘ಎಲ್ ನಿನೋ’ ದುರ್ಬಲವಾಗಿ ಲಾ-ನಿನಾ’ ಉಂಟಾಗಿರುವ ಹಿನ್ನೆಲೆಯಲಿ ಮುಂಗಾರು ಆಶಾದಾಯಕವಾಗಿದೆ.

    ಎಲ್ಲೆಲ್ಲಿ ಕಡಿಮೆ ಬಿತ್ತನೆ?: ಬೆಂಗಳೂರು ಗ್ರಾಮಾಂತರ, ದಕ್ಷಿಣ ಕನ್ನಡ, ಕೊಡಗು, ಕೋಲಾರ, ಚಿಕ್ಕಬಳ್ಳಾಪುರದಲ್ಲಿ ಕಡಿಮೆ ಪ್ರಮಾಣದಲ್ಲಿ ಬಿತ್ತನೆ ಕಾರ್ಯ ನಡೆದಿದೆ.

    54 ತಾಲೂಕಲ್ಲಿ ಮಳೆ ಹೆಚ್ಚಳ: ಜೂ 1ರಿಂದ ಜು.2ರವರೆಗೆ 77 ತಾಲೂಕುಗಳಲ್ಲಿ ವಾಡಿಕೆಗಿಂತ ಅಧಿಕ ಪ್ರಮಾಣದಲ್ಲಿ ಮಳೆ ಸುರಿದರೆ, 54 ತಾಲೂಕುಗಳಲ್ಲಿ ವಾಡಿಕೆಗಿಂತ ತುಸು ಹೆಚ್ಚು ಸುರಿದಿದೆ. 71 ತಾಲೂಕುಗಳಲ್ಲಿ ವಾಡಿಕೆಯಷ್ಟೇ ವರ್ಷಧಾರೆಯಾದರೆ, 34 ತಾಲೂಕುಗಳಲ್ಲಿ ವಾಡಿಕೆಗಿಂತ ಕಡಿಮೆ ಮಳೆ ಬಿದ್ದಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts