More

    ವಾಣಿಜ್ಯ ಉದ್ದೇಶಕ್ಕೆ ಕೊಡವ ಲ್ಯಾಂಡ್ ದುರ್ಬಳಕೆ

    ಕೊಡಗು : ರಾಜಕೀಯ ನಂಟು ಹೊಂದಿರುವ ಭೂ ಮಾಫಿಯಾಗಳು ವಾಣಿಜ್ಯ ದುರುದ್ದೇಶಕ್ಕಾಗಿ ಆದಿಮಸಂಜಾತ ಕೊಡವರ ಪವಿತ್ರ ಕೊಡವ ಲ್ಯಾಂಡ್ ದುರ್ಬಳಕೆ ಮಾಡಿಕೊಳ್ಳುತ್ತಿದ್ದು, ಜಿಲ್ಲೆಯಲ್ಲಿ ಕಪ್ಪು ಹಣ ಚಲಾವಣೆಯಾಗುತ್ತಿದೆ ಎಂದು ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆಯ ಅಧ್ಯಕ್ಷ ಎನ್.ಯು. ನಾಚಪ್ಪ ಆರೋಪಿಸಿದರು.


    ನಾಪೋಕ್ಲು ಸಮೀಪದ ಕಕ್ಕಬ್ಬೆಯಲ್ಲಿ ಸಿಎನ್‌ಸಿಯಿಂದ ಸೋಮವಾರ ನಡೆದ ಜನಜಾಗೃತಿ ಮಾನವ ಸರಪಳಿ ಕಾರ್ಯಕ್ರಮದಲ್ಲಿ ಮಾತನಾಡಿದರು.
    ವಿಶ್ವದಾದ್ಯಂತ ಇರುವ ಆರ್ಥಿಕ ಅಪರಾಧಿಗಳು, ಕಾಳಸಂತೆಕೋರರು ಹಾಗೂ ರಾಜಕೀಯ ನಂಟು ಹೊಂದಿರುವ ಭೂ ಮಾಫಿಯಾಗಳು ಕಪ್ಪು ಹಣವನ್ನು ಬಿಳಿ ಮಾಡಲು ಕೊಡವ ಲ್ಯಾಂಡ್ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಕೊಡಗಿನಲ್ಲಿ ರೆಸಾರ್ಟ್ ವ್ಯವಹಾರ ದೊಡ್ಡ ಮಟ್ಟದಲ್ಲಿ ನಡೆಯದಿದ್ದರೂ ಕಾಫಿ ತೋಟಗಳ ಬೃಹತ್ ಭೂ ಪರಿವರ್ತನೆ ಮತ್ತು ಭೂ ವಿಲೇವಾರಿಯನ್ನು ಮಾಡಲಾಗುತ್ತಿದೆ. ನಷ್ಟ ತೋರಿಸುವುದಕ್ಕಾಗಿ ರೆಸಾರ್ಟ್‌ಗಳನ್ನು ನಿರ್ಮಿಸುತ್ತಿದ್ದು, ಕಪ್ಪು ಹಣವನ್ನು ಚಲಾವಣೆ ಮಾಡಲಾಗುತ್ತಿದೆ ಎಂದರು.


    ಅಕ್ರಮ ದಂಧೆಕೋರ ಬಂಡವಾಳಶಾಹಿ ಕಂಪನಿಗಳು ಕಾನೂನು ದುರುಪಯೋಗ ಪಡಿಸಿಕೊಂಡು ರಾತ್ರೋರಾತ್ರಿ ಪ್ರಭಾವ ಬೀರಿ ಬೃಹತ್ ಭೂಪರಿವರ್ತನೆ ಮತ್ತು ಭೂವಿಲೇವಾರಿಗಾಗಿ ನೋಂದಣಿ ಮಾಡಿಸಿಕೊಳ್ಳುತ್ತಿದ್ದಾರೆ. ಸರ್ಕಾರವೇ ಕಾನೂನಿನ ಕುಣಿಕೆಯಿಂದ ತಪ್ಪಿಸಿಕೊಳ್ಳಲು ದಂಧೆಕೋರರಿಗೆ ಮಾರ್ಗ ತೋರಿಸುತ್ತಿದೆ. ಜಮೀನನ್ನು ಒಟ್ಟಾಗಿ ಖರೀದಿಸದೆ ಬಿಡಿ ಬಿಡಿಯಾಗಿ ಬೇನಾಮಿ ಹೆಸರಿನಲ್ಲಿ ಖರೀದಿಸಿ ನಂತರ ಭೂ ಪರಿವರ್ತನೆ ಮಾಡಿಸಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದರು.


    ಜಿಲ್ಲೆಯ ಇತರೆಡೆಯಂತೆ ಕಕ್ಕಬ್ಬೆ ನಾಲಡಿ ಪೂಮಾಲೆ ಎಸ್ಟೇಟ್‌ನ 300 ಎಕರೆ ಜಾಗವನ್ನು ಭೂಪರಿವರ್ತನೆ ಮಾಡಲು ಹುನ್ನಾರ ನಡೆದಿದೆ. ಜನರು ವಿರೋಧ ವ್ಯಕ್ತಪಡಿಸಿ ಪ್ರತಿಭಟನೆ ನಡೆಸುತ್ತಿದ್ದರೂ ದೆಹಲಿ ಮತ್ತು ಮುಂಬೈ ಭಾಗದ ರಾಜಕೀಯ ಸಂಕುಲಗಳು ಭೂಮಾಫಿಯಾದ ಪರವಾಗಿ ರೆಸಾರ್ಟ್ ನಿರ್ಮಾಣದ ಅನುಮತಿಗೆ ಪ್ರಭಾವ ಬೀರುತ್ತಿದ್ದಾರೆ. ಮರಂದೋಡು ಗ್ರಾಮದ ಮೇರಿಯಂಡ ಅಂಗಡಿ ಪ್ರದೇಶದಲ್ಲಿ ಭತ್ತದ ಗದ್ದೆ ಮತ್ತು ಪರ್ವತ ಕೊರೆದು ಟೌನ್ ಶಿಪ್‌ಗಾಗಿ ಭೂಪರಿವರ್ತನೆಯಾಗುತ್ತಿದ್ದು, ಕೊಡವ ಲ್ಯಾಂಡ್ ನ ಕಾವೇರಿ ಒಡಲು ನಾಶವಾಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.

    ಅಪ್ಪಾರಂಡ ನಂದಿನಿ ನಂಜಪ್ಪ, ನಾಟೋಳಂಡ ಕಮಲಾ, ಅರೆಯಡ ಸವಿತಾ, ಲೆಫ್ಟಿನೆಂಟ್ ಕರ್ನಲ್ ಬಿ.ಎಂ.ಪಾರ್ವತಿ, ಪಾಂಡಂಡ ನರೇಶ್, ಕೆಟೋಳಿರ ಸನ್ನಿ ಸೊಮಣ್ಣ, ಬಾಚಮಂಡ ರಾಜಾ ಪೂವಣ್ಣ, ಚೇನಂಡ ಸುರೇಶ್, ಅಪ್ಪಾರಂಡ ಶ್ರೀನಿವಾಸ್, ಉದಿಯಂಡ ಸುಭಾಷ್, ಅಪ್ಪಾರಂಡ ಪ್ರಕಾಶ್, ಕಲ್ಯಾಟಂಡ ರಘು, ಅರೆಯಡ ಗಿರೀಶ್, ಅಪ್ಪಾರಂಡ ಪ್ರಸಾದ್ ಮತ್ತಿತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts