More

    ಕಾಂಕ್ರೀಟ್ ಹಾಕಿ ಗುಂಡಿ ಮುಚ್ಚಿದ ಟ್ರಾಫಿಕ್ ಪಿಎಸ್‌ಐ ಕೆಪಿಟಿ ವೃತ್ತದಲ್ಲಿ ಈಶ್ವರ ಸ್ವಾಮಿಯ ಸಾಮಾಜಿಕ ಕಳಕಳಿಗೆ ಶ್ಲಾಘನೆ

    ಮಂಗಳೂರು: ಸಂಚಾರಿ ಪೊಲೀಸರು ಕೇವಲ ವಾಹನ ತಪಾಸಣೆ ನಡೆಸುವುದು, ದಂಡ ಹಾಕುವುದು, ಸುಗಮ ಸಂಚಾರಕ್ಕೆ ಅನುವು ಮಾಡಿಕೊಡುವುದಷ್ಟೇ ಅಲ್ಲ, ಅವರಲ್ಲಿ ಸಾಮಾಜಿಕ ಕಳಕಳಿಯೂ ಇರುತ್ತದೆ. ಮಂಗಳವಾರ ಇದಕ್ಕೆ ಸಾಕ್ಷಿಯಾದವರು ಕದ್ರಿ ಸಂಚಾರ ಠಾಣೆಯ ಪಿಎಸ್‌ಐ ಈಶ್ವರ ಸ್ವಾಮಿ.

    ಕೆಪಿಟಿ ವೃತ್ತದಲ್ಲಿ ಕರ್ತವ್ಯ ನಿರತರಾಗಿದ್ದ ಅವರು ರಸ್ತೆಯಲ್ಲಿ ಉಂಟಾದ ಗುಂಡಿಗಳಿಂದ ವಾಹನ ದಟ್ಟಣೆ ಉಂಟಾಗುವುದನ್ನು ಗಮನಿಸಿದ್ದಾರೆ. ಕೆಲವು ದಿನಗಳಿಂದ ಮಳೆಗೆ ರಸ್ತೆಯ ಡಾಂಬಾರು ಕಿತ್ತು ಹೋಗಿ ಅಲ್ಲಲ್ಲಿ ಗುಂಡಿಗಳಾಗಿತ್ತು, ವಾಹನ ಸವಾರರು, ಪಾದಚಾರಿಗಳು ಸಮಸ್ಯೆ ಅನುಭವಿಸುತ್ತಿದ್ದರು. ವೇಗವಾಗಿ ಬಂದ ಬೈಕ್ ಸವಾರರಂತೂ ಗುಂಡಿಗಳನ್ನು ಕಂಡೊಡನೇ ಬ್ರೇಕ್ ಹಾಕುವ ಧಾವಂತದಲ್ಲಿ ಬ್ಯಾಲೆನ್ಸ್ ಗಾಗಿ ಪರದಾಡುವುದು ನಿರಂತರವಾಗಿತ್ತು. ನಿತ್ಯ ಇದನ್ನೆಲ್ಲ ನೋಡುತ್ತಿದ್ದ ಈಶ್ವರ ಸ್ವಾಮಿಯವರು ಗುಂಡಿಗಳಿಗೊಂದು ತಾತ್ಕಾಲಿಕ ಮುಕ್ತಿ ಹಾಕಲು ನಿರ್ಧರಿಸಿದ್ದಾರೆ. ಇತರರ ನೆರವಿನ ಜೊತೆಗೆ ತಾನೂ ದುಡ್ಡು ಒಟ್ಟುಗೂಡಿಸಿ ಗುಂಡಿ ಮುಚ್ಚಲು ಬೇಕಾದ ಕಾಂಕ್ರೀಟು ವ್ಯವಸ್ಥೆ ಮಾಡಿದ್ದಾರೆ. ಬಳಿಕ ತಾವೇ ಹಾರೆ ಹಿಡಿದು ಗುಂಡಿ ಮುಚ್ಚಿದ್ದಾರೆ. ಈ ಹಿಂದೆಯೂ ಇವರು ರಸ್ತೆಯಲ್ಲಿ ಅಪಾಯಕಾರಿ ಗುಂಡಿಗಳು ಉಂಟಾದಾಗ ಸ್ವತಃ ಆಸಕ್ತಿ ವಹಿಸಿ ಕಾಂಕ್ರೀಟು ಅಳವಡಿಸಿ ಮುಚ್ಚಿದ್ದಾರೆ.


    ಈಶ್ವರ ಸ್ವಾಮಿ ಮೂಲತಃ ಮೈಸೂರಿನವರು. 32 ವರ್ಷಗಳಿಂದ ಮಂಗಳೂರಿನಲ್ಲೇ ಸೇವೆಯಲ್ಲಿದ್ದು, ನಿವೃತ್ತಿಯ ಅಂಚಿನಲ್ಲಿದ್ದಾರೆ. ಕದ್ರಿ, ಬಂದರು, ಪಣಂಬೂರು ಸೇರಿದಂತೆ ಮಂಗಳೂರು ನಗರ ಪಶ್ಚಿಮ ಪೋಲಿಸ್ ಠಾಣೆಯಲ್ಲೂ ಕರ್ತವ್ಯ ನಿರ್ವಹಿಸಿದ್ದಾರೆ. ರಸ್ತೆಯ ದುಸ್ಥಿತಿಯ ಫೋಟೋ ತೆಗೆಯಲು ಹೋಗಿದ್ದ ವಿಜಯವಾಣಿ ಛಾಯಾಚಿತ್ರಗ್ರಾಹಕ ಸಂದೇಶ್ ಜಾರ ಅವರ ಕಣ್ಣಿಗೆ ಈ ದೃಶ್ಯ ಬಿದ್ದಿದೆ. ಮಾಧ್ಯಮಗಳಲ್ಲಿ ಈ ಬಗ್ಗೆ ವರದಿಯಾಗುತ್ತಲೇ ಈಶ್ವರ ಸ್ವಾಮಿಯವರ ಸಾಮಾಜಿಕ ಕಳಕಳಿಗೆ ಶ್ಲಾಘನೆ ವ್ಯಕ್ತವಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts