More

    ಬೋನಫೈಡ್ ದಂಧೆ ಬಯಲಿಗೆಳೆದ ಲೋಕಾಯುಕ್ತ

    ಆರ್ ಟಿ ಓ ಸೇರಿ ಮೂವರ ಬಂಧನ 

    ಸರ್ಕಾರಕ್ಕೆ ಕೋಟ್ಯಂತರ ರೂ ನಷ್ಟ 

    ರಾಮನಗರ

    ಯಾರದ್ದೋ ಕೃಷಿ ಜಮೀನಿಗೆ ಇನ್ಯಾರ ಹೆಸರಿನಲ್ಲೋ ನಕಲಿ ‘ಬೋನಫೈಡ್ ಸರ್ಟಿಫಿಕೇಟ್’ಗಳನ್ನು ಸೃಷ್ಟಿಸಿ, ಟ್ರ್ಯಾಕ್ಟರ್ ಹಾಗೂ ಟ್ರಾಲಿಗಳನ್ನು ನೋಂದಣಿ ಮಾಡುವ ಮೂಲಕ ಸರ್ಕಾರಕ್ಕೆ ಕೋಟ್ಯಂತರ ರೂ. ವಂಚಿಸಿರುವ ಬಹುದೊಡ್ಡ ಹಗರಣ ರಾಮನಗರ ಪ್ರಾದೇಶಿಕ ಸಾರಿಗೆ ಕಚೇರಿ (ಆರ್‌ಟಿಒ)ಯಲ್ಲಿ ಬೆಳಕಿಗೆ ಬಂದಿದೆ. ಈ ಸಂಬಂಧ ಆರ್‌ಟಿಒ ಶಿವಕುಮಾರ್, ಪ್ರಥಮ ದರ್ಜೆ ಸಹಾಯಕ ರಚಿತ್ ರಾಜ್ ಹಾಗೂ ಮಧ್ಯವರ್ತಿ ಸತೀಶ್ ಅಲಿಯಾಸ್ ಟ್ರ್ಯಾಕ್ಟರ್ ಸತೀಶ್‌ನನ್ನು ಲೋಕಾಯುಕ್ತ ಪೊಲೀಸರು ಬಂಧಿಸಿದ್ದಾರೆ.

    ಬೋನಫೈಡ್ ದಂಧೆ ಬಯಲಿಗೆಳೆದ ಲೋಕಾಯುಕ್ತಲೋಕಾಯುಕ್ತ ಎಸ್‌ಪಿ ವಂಶಿಕೃಷ್ಣ ನೇತೃತ್ವದ ತಂಡ ಶುಕ್ರವಾರ ರಾಮನಗರ ಆರ್‌ಟಿಒ ಕಚೇರಿ, ಆರ್‌ಟಿಒ ಶಿವಕುಮಾರ್ ಹಾಗೂ ಸಿಬ್ಬಂದಿಯ ಬೆಂಗಳೂರಿನ ಮನೆ ಸೇರಿ ಒಟ್ಟು ಐದು ಕಡೆಗಳಲ್ಲಿ ದಾಳಿ ನಡೆಸಿತ್ತು. ಪರಿಶೀಲನೆ ವೇಳೆ ಹಗರಣಕ್ಕೆ ಸಂಬಂಧಪಟ್ಟಂತಹ ಮಹತ್ವದ ದಾಖಲೆಗಳು ಪತ್ತೆಯಾದ ಹಿನ್ನೆಲೆಯಲ್ಲಿ ಮೂವರನ್ನು ಬಂಧಿಸಿದೆ. ಬಂಧಿತ ಆರ್‌ಟಿಒ ಶಿವಕುಮಾರ್ ವಯೋನಿವೃತ್ತಿಗೆ ಒಂದು ದಿನವಷ್ಟೇ ಬಾಕಿ ಉಳಿದಿದ್ದು, ಮುನ್ನವೇ ದಿನವೇ ಲೋಕಾಯುಕ್ತ ಪೊಲೀಸರ ಅತಿಥಿಯಾಗಿದ್ದಾರೆ.

    ದಂಧೆ ಹೇಗೆ?

    – ಮೂಲ ಮಾಲೀಕರ ಹೆಸರಲ್ಲಿರುವ ಜಮೀನಿಗೆ ಬೇರೆ ವ್ಯಕ್ತಿ ಹೆಸರಿನಲ್ಲಿ ಬೋನೈಡ್ ಪತ್ರ ಸೃಷ್ಟಿ
    – ರಾಮನಗರದಲ್ಲಿ ಜಮೀನು ಹೊಂದಿರುವಂತೆ ದಾಖಲೆ ಸಲ್ಲಿಸಿ ಟ್ರ್ಯಾಕ್ಟರ್-ಟ್ರಾಲಿಗಳ ನೋಂದಣಿ
    – ನಕಲಿ ಪತ್ರಗಳನ್ನು ಸಲ್ಲಿಸುವ ಮೂಲಕ ಕೃಷಿಕ ಎಂದು ಬಿಂಬಿಸಿಕೊಂಡು ವಾಹನಗಳ ನೋಂದಣಿ.
    – ರಾಜ್ಯದ ಬೇರೆಬೇರೆ ಭಾಗಗಳ ಶೋರೂಂಗಳಲ್ಲಿ ಸೇಲಾದ ವಾಹನಗಳಿಗೂ ಇಲ್ಲೇ ರಿಜಿಸ್ಟ್ರೇಷನ್
    – 2018-2023ರವರೆಗೆ ತಾತ್ಕಾಲಿಕ ನೋಂದಣಿ ಸಂಖ್ಯೆಯಲ್ಲಿ ಓಡಾಡುತ್ತಿದ್ದ ವಾಹನ ನೋಂದಣಿ
    – ಪ್ರತಿ ಟ್ರಾಕ್ಟರ್‌ಗೆ ಸುಮಾರು 50 ಸಾವಿರ ರೂ.ನಿಂದ 1 ಲಕ್ಷ ರೂ.ವರೆಗೆ ವಸೂಲಿ ಮಾಡಲಾಗಿದೆ

    ಸರ್ಕಾರದ ಖಜಾನೆಗೆ ನಷ್ಟ

    ಕೃಷಿ ಬಳಕೆಗೆ ಬಳಸುವ ವಾಹನವಾದರೆ ರಸ್ತೆ ತೆರಿಗೆ (ವೈಟ್‌ಬೋರ್ಡ್) 2400 ರೂ. ಪಾವತಿಸಬೇಕಾಗುತ್ತದೆ. ಆದರೆ, ಕೃಷಿಕರಲ್ಲದವರು ಖರೀದಿಸಿದರೆ ವಾಣಿಜ್ಯ ವಾಹನ ವ್ಯಾಪ್ತಿಗೆ ಬರುತ್ತದೆ. ನೋಂದಣಿ ಸಂದರ್ಭದಲ್ಲಿ 3 ರಿಂದ 5 ಲಕ್ಷ ರೂ. ರಸ್ತೆ ತೆರಿಗೆ ಪಾವತಿಸಬೇಕಾಗುತ್ತದೆ. ಜತೆಗೆ 3 ತಿಂಗಳಿಗೊಮ್ಮೆ ರಸ್ತೆ ತೆರಿಗೆ ಕಟ್ಟಬೇಕಾಗುತ್ತದೆ. ತೆರಿಗೆ ವಂಚಿಸುವ ಉದ್ದೇಶದಿಂದ ಕೃಷಿ ಹೆಸರಲ್ಲಿ ಟ್ರ್ಯಾಕ್ಟರ್‌ಗಳನ್ನು ನೋಂದಣಿ ಮಾಡುತ್ತಿದ್ದರು.

    ಏಜೆಂಟ್‌ಗೆ ಲಾಗಿನ್ ಐಡಿ!

    ಆರ್‌ಟಿಒ ಶಿವಕುಮಾರ್ ಹಾಗೂ ಎ್ಡಿಎ ರಚಿತ್ ರಾಜ್, ಬ್ರೋಕರ್ ಸತೀಶ್‌ಗೆ ಕಚೇರಿಯ ಲಾಗಿನ್ ಐಡಿ ಕೊಟ್ಟಿದ್ದರು. ಆತನೇ ನಕಲಿ ದಾಖಲೆಗಳನ್ನು ಅಪ್‌ಲೋಡ್ ಮಾಡುತ್ತಿದ್ದ. ಆರ್‌ಟಿಒ ಅಧಿಕಾರಿಗಳು ಯಾವುದೇ ದಾಖಲೆಗಳನ್ನು ಪರಿಶೀಲಿಸುತ್ತಿರಲಿಲ್ಲ. ಹೀಗಾಗಿ ಸುಲಭವಾಗಿ ರೈತರ ಹೆಸರಲ್ಲಿ ಟ್ರ್ಯಾಕ್ಟರ್ ನೋಂದಣಿಯಾಗುತ್ತಿತ್ತು. ನೋಂದಣಿಗೆ ಸಂದಾಯ ಮಾಡಬೇಕಾದ ಹಣವನ್ನು ಸತೀಶ್ ತನ್ನ ಖಾತೆಯಿಂದಲೇ ಭರಿಸುತ್ತಿದ್ದ.

    ನಿವೃತ್ತಿಗೂ ಮುನ್ನ ದಿನ ಸಿಕ್ಕಿಬಿದ್ದರು!

    ಬೋನಫೈಡ್ ದಂಧೆ ಬಯಲಿಗೆಳೆದ ಲೋಕಾಯುಕ್ತಲೋಕಾಯುಕ್ತ ದಾಳಿ ವೇಳೆ ಸಿಕ್ಕಿ ಬಿದ್ದಿರುವ ಪ್ರಾದೇಶಿಕ ಸಾರಿಗೆ ಅಧಿಕಾರಿ ಶಿವಕುಮಾರ್ ಸುಮಾರು 2 ವರ್ಷಗಳಿಂದ ರಾಮನಗರ ಆರ್‌ಟಿಒ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದು ಶನಿವಾರ (ಜೂ.29) ವೃತ್ತಿ ಜೀವನದ ಕೊನೇ ದಿನ. ಆದರೆ, ಕೋಟ್ಯಂತರ ರೂ. ಅವ್ಯವಹಾರ ನಡೆದಿರುವ ಸಂಬಂಧ ಸಾರ್ವಜನಿಕರಿಂದ ಬಂದ ದೂರಿನ ಹಿನ್ನೆಲೆಯಲ್ಲಿ ಪ್ರಕರಣ ದಾಖಲು ಮಾಡಿಕೊಂಡಿದ್ದ ಲೋಕಾಯುಕ್ತ ಪೊಲೀಸರು ಶುಕ್ರವಾರ ಬೆಂಗಳೂರಿನ ಅವರ ನಿವಾಸದ ಮೇಲೆಯೇ ದಾಳಿ ಮಾಡಿ, ಅವರನ್ನು ಬಂಧಿಸಿ ರಾಮನಗರ ಕಚೇರಿಗೆ ಕರೆ ತಂದು ಪರಿಶೀಲನೆ ನಡೆಸಿದರು.

    1000 ಟ್ರ್ಯಾಕ್ಟರ್ ನೋಂದಣಿ?

    ಪ್ರಾಥಮಿಕ ತನಿಖೆಯಲ್ಲಿ ಅಂದಾಜು 1000ಕ್ಕೂ ಅಧಿಕ ಟ್ರ್ಯಾಕ್ಟರ್‌ಗಳನ್ನು ನೋಂದಣಿ ಮಾಡಿರುವ ಬಗ್ಗೆ ದಾಖಲಾತಿ ಪತ್ತೆಯಾಗಿವೆ. ಕಂಪ್ಯೂಟರ್, ಮೊಬೈಲ್‌ಗಳು, ಡಿಜಿಟಲ್ ಸಹಿಗೆ ಬಳಕೆ ಮಾಡುತ್ತಿದ್ದ ಡಾಂಗಲ್‌ಗಳು ಸೇರಿ ಪ್ರತಿ ಅಕ್ರಮ ನೋಂದಣಿಯ ಕಡತಗಳನ್ನು ವಶಕ್ಕೆ ಪಡೆಯಲಾಗಿದ್ದು, ತನಿಖೆ ಮುಂದುವರಿದಿದೆ ಎಂದು ಲೋಕಾಯುಕ್ತ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

    ಏನಿದು ಬೋನಫೈಡ್ ಸರ್ಟಿಫಿಕೇಟ್?

    ಕೃಷಿ ಭೂಮಿಯಲ್ಲಿ ವ್ಯವಸಾಯ ಮಾಡುತ್ತಿದ್ದಾನೆಂದು ಮೂಲ ಮಾಲೀಕನ ಹೆಸರಲ್ಲಿ ಉಪ ತಹಶೀಲ್ದಾರ್, ಬೋನಫೈಡ್ (ಕಾನೂನಾತ್ಮ ದೃಢೀಕೃತ ಪ್ರಮಾಣ ಪತ್ರ) ಸರ್ಟಿಫೀಕೇಟ್ ಕೊಡಲಾಗುತ್ತದೆ. ಈ ಸರ್ಟಿಫೀಕೇಟ್‌ನಿಂದ ಸಾಲ ಸೌಲಭ್ಯ, ಸಬ್ಸಿಡಿ, ವಾಹನ ಖರೀದಿ ಸೇರಿ ಕೃಷಿಕರಿಗಿರುವ ಇನ್ನಿತರ ಸರ್ಕಾರಿ ಸೌಲಭ್ಯ ಪಡೆಯಲು ಸಹಕಾರಿಯಾಗುತ್ತದೆ.

    ನಿಯಮ ಏನಿದೆ?
    – ಆನ್‌ಲೈನ್‌ನಲ್ಲಿ ಬರುವ ಬೋನಫೈಡ್  ಸರ್ಟಿಫಿಕೇಟ್ ಅಸಲಿಯೋ ನಕಲಿಯೋ ಪರಿಶೀಲಿಸಬೇಕು
    – ಬೋನಫೈಡ್ ಜತೆ ಪಹಣಿ ಸಲ್ಲಿಸಿರಬೇಕು. ಎರಡರಲ್ಲಿನ ಮಾಹಿತಿಯ ಅಸಲಿತನ ನೋಡಬೇಕು
    – ಒಂದು ವೇಳೆ ಪಹಣಿ ಸಲ್ಲಿಸಿರದಿದ್ದರೆ ವಾಹನದ ನೋಂದಣಿ ಪ್ರಕ್ರಿಯೆಯನ್ನು ತಿರಸ್ಕರಿಸಬೇಕು.
    ಬೋನಫೈಡ್ ದಂಧೆ ಬಯಲಿಗೆಳೆದ ಲೋಕಾಯುಕ್ತಕೃಷಿ ಜಮೀನು ಹೊಂದಿರುವುದಾಗಿ ಬೋನಫೈಡ್ ಸರ್ಟಿಫಿಕೇಟ್, ಆರ್‌ಟಿಸಿ ದಾಖಲೆಗಳನ್ನು ಪೋರ್ಜರಿ ಮಾಡಿ ಟ್ರ್ಯಾಕ್ಟರ್‌ಗಳನ್ನು ನೋಂದಣಿ ಮಾಡಿರುವುದು ಕಂಡುಬಂದಿದೆ. 1000ಕ್ಕೂ ಹೆಚ್ಚು ದಾಖಲಾತಿಗಳು ಪತ್ತೆಯಾಗಿವೆ. ಸರ್ಕಾರಕ್ಕೆ ತೆರಿಗೆ ನಷ್ಟ ಮಾಡಿರುವ ಆರೋಪದಲ್ಲಿ ಆರ್‌ಟಿಒ, ಎಫ್ ಡಿಎ , ಮಧ್ಯವರ್ತಿಯನ್ನು ಬಂಧಿಸಲಾಗಿದೆ. ಬೋನಫೈಡ್ ಸರ್ಟಿಫಿಕೇಟ್‌ಗಳು ನಾಡಕಚೇರಿಯಲ್ಲಿ ಕೊಡಲಾಗುತ್ತದೆ. ಹೀಗಾಗಿ ಸರ್ಟಿಫಿಕೇಟ್‌ಗಳು ಎಲ್ಲಿ ಸೃಷ್ಟಿಯಾಗಿವೆ ಎಂಬುದರ ಬಗ್ಗೆಯೂ ತನಿಖೆ ನಡೆಯುತ್ತಿದೆ.
    ವಂಶಿಕೃಷ್ಣ_ಎಸ್‌ಪಿ, ಲೋಕಾಯುಕ್ತ

    ಒಂದೂವರೆ ತಿಂಗಳಿಂದ ನಾಪತ್ತೆ

    ದಂಧೆಯ ಬಗ್ಗೆ ಲೋಕಾಯುಕ್ತದಲ್ಲಿ ದೂರು ದಾಖಲಾಗುತ್ತಿದ್ದಂತೆ ಕಳೆದ ಒಂದೂವರೆ ತಿಂಗಳಿಂದ ಆರ್‌ಟಿಒ ಶಿವಕುಮಾರ್ ಹಾಗೂ ಎಫ್ ಡಿಎ ರಚಿತ್ ರಾಜ್ ಕಚೇರಿಗೆ ಬರುತ್ತಿರಲಿಲ್ಲ. ಅವರ ಕೆಲಸವನ್ನು ಕೆಳಹಂತದ ಸಿಬ್ಬಂದಿಯೇ ಮಾಡುತ್ತಿದ್ದರು ಎಂದು ಸಾರಿಗೆ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

    ಟ್ರಾನ್‌ರ್ ಹೆಸರಲ್ಲಿ ವಸೂಲಿ

    ಎಸ್‌ಡಿಎ ಆಗಿದ್ದ ರಚಿತ್ ರಾಜ್‌ಗೆ ಇತ್ತೀಚೆಗಷ್ಟೇ ಎಫ್ ಡಿಎ  ಹುದ್ದೆಗೆ ಮುಂಬಡ್ತಿ ಕೊಡಲಾಗಿತ್ತು. ರಚಿತ್, ಬೋನಫೈಡ್ ಅಕ್ರಮದ ಜತೆಗೆ ಸಾರಿಗೆ ಇಲಾಖೆ ಕ್ಲರಿಕಲ್ ಸಿಬ್ಬಂದಿಯನ್ನು ವರ್ಗಾವಣೆ ಮಾಡಿಸಿಕೊಡುವುದಾಗಿ ಹಣ ಪಡೆಯುತ್ತಿದ್ದ. ಕೆಲವರಿಗೆ ವರ್ಗಾವಣೆ ಮಾಡಿಸಿದರೆ ಇನ್ನು ಕೆಲವರಿಗೆ ವರ್ಗಾವಣೆಯೂ ಮಾಡಿಸದೆ ಹಣವೂ ವಾಪಸ್ ಕೊಡದೆ ವಂಚಿಸಿದ್ದಾನೆ ಎಂಬ ಆರೋಪವೂ ಕೇಳಿಬಂದಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts