More

    ಸಾರ್ವಜನಿಕ ಸ್ಥಳದಲ್ಲಿ ಲೋಡ್‌ಗಟ್ಟಲೆ ತ್ಯಾಜ್ಯ: ಬಂಟ್ವಾಳ ಪುರಸಭೆಯ ಮುಖ್ಯಾಧಿಕಾರಿಯಿಂದ ಠಾಣೆಗೆ ದೂರು

    ಬಂಟ್ವಾಳ: ಮೊಬೈಲ್ ಅಂಗಡಿಯ ಲೋಡ್‌ಗಟ್ಟಲೆ ತ್ಯಾಜ್ಯ ಹಾಗೂ ಅಪಾಯಕಾರಿಯಾಗಿರುವ ಟ್ಯೂಬ್‌ಲೈಟ್ ತ್ಯಾಜ್ಯವನ್ನು ಸಾರ್ವಜನಿಕ ಸ್ಥಳದಲ್ಲಿ ಸುರಿದಿರುವ ವಿರುದ್ಧ ಬಂಟ್ವಾಳ ಪುರಸಭೆಯ ಮುಖ್ಯಾಧಿಕಾರಿ ಬಂಟ್ವಾಳ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

    ಅಂಗಡಿಯೊಂದರ ಬಿಲ್, ದೂರವಾಣಿ ಸಂಖ್ಯೆ ಪತ್ತೆ

    ಬಂಟ್ವಾಳ ಪುರಸಭೆ ವ್ಯಾಪ್ತಿಯಲ್ಲಿ ಸ್ವಚ್ಛತೆಗಾಗಿ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡರೂ ಕೆಲವೊಂದು ನಾಗರಿಕರು ಹಾಗೂ ಅಂಗಡಿ ವ್ಯಾಪಾರಿಗಳ ಅಸಹಕಾರದಿಂದ ಸ್ವಚ್ಛತೆ ಕಾಪಾಡಿಕೊಳ್ಳುವುದು ಸವಾಲಾಗುತ್ತಿದೆ. ಬಿ.ಸಿ.ರೋಡಿನ ಬಳಿಯ ಕಂಚಿಕಾರ ಪೇಟೆಯಲ್ಲಿ ಕಸದ ರಾಶಿ ಕಂಡು ಬಂದಿದ್ದು ಪುರಸಭಾ ಆರೋಗ್ಯ ನಿರೀಕ್ಷಕ ರತ್ನ ಪ್ರಸಾದ್ ಕಸದ ರಾಶಿಯಲ್ಲಿ ಹುಡುಕಾಡಿದಾಗ ಬಿ.ಸಿ.ರೋಡಿನ ಮೊಬೈಲ್ ಅಂಗಡಿಯೊಂದರ ಬಿಲ್, ದೂರವಾಣಿ ಸಂಖ್ಯೆ ಪತ್ತೆಯಾಗಿದೆ.

    ಕೇಸು ದಾಖಲಿಸುವಂತೆ ಪೊಲೀಸ್ ಠಾಣೆಗೆ ದೂರು

    ಸಂಬಂಧಪಟ್ಟ ಮೊಬೈಲ್ ಅಂಗಡಿಗೆ ದಂಡ ಕಟ್ಟುವಂತೆ ಸೂಚಿಸಿದ್ದು ಅಂಗಡಿ ಮಾಲೀಕ ನಿರಾಕರಿಸಿದ್ದಾನೆ ಎನ್ನಲಾಗಿದೆ. ಸಾರ್ವಜನಿಕ ಸ್ಥಳದಲ್ಲಿ ಕಸ ಎಸೆದು ಪರಿಸರ ಮಾಲಿನ್ಯ ಉಂಟುಮಾಡಿರುವ ಅಂಗಡಿಯ ವಿರುದ್ಧ ಕೇಸು ದಾಖಲಿಸುವಂತೆ ಪೊಲೀಸ್ ಠಾಣೆಗೆ ನೀಡಿರುವ ದೂರಿನಲ್ಲಿ ತಿಳಿಸಲಾಗಿದೆ.

    ರಿಕ್ಷಾ ಚಾಲಕನ ಸಹಕಾರ

    ಹೊರ ರಾಜ್ಯದಿಂದ ಬಂದಿರುವ ಅನೇಕ ಮಂದಿ ವ್ಯಾಪಾರಿಗಳು ಬಿ.ಸಿ.ರೋಡಿನಲ್ಲಿ ಅಂಗಡಿಗಳನ್ನು ನಡೆಸುತ್ತಿದ್ದಾರೆ. ಅಂಗಡಿಗಳಲ್ಲಿ ಸೃಷ್ಟಿಯಾಗುವ ಕಸವನ್ನು ರಾತ್ರಿಯ ವೇಳೆ ರಿಕ್ಷಾ ಚಾಲಕನೋರ್ವ ಕೊಂಡೊಯ್ದು ಸಾರ್ವಜನಿಕ ಸ್ಥಳ, ರಸ್ತೆ ಬದಿಯಲ್ಲಿ ಎಸೆದು ಹೋಗುತ್ತಿರುವುದು ಪುರಸಭಾಧಿಕಾರಿಗಳ ಗಮನಕ್ಕೆ ಬಂದಿದೆ. ಬಿ.ಸಿ.ರೋಡಿನ ಕೆಲವೊಂದು ಅಂಗಡಿಗಳ ತ್ಯಾಜ್ಯವನ್ನು ಇದೇ ರಿಕ್ಷಾ ಚಾಲಕ ಪಡೆದು ರಸ್ತೆ ಬದಿಗಳಲ್ಲಿ ಎಸೆಯುತ್ತಿದ್ದಾನೆ. ಈತನ ವಿರುದ್ಧವೂ ಕಾನೂನು ಕ್ರಮ ಕೈಗೊಳ್ಳಬೇಕೆನ್ನುವ ಆಗ್ರಹ ಕೇಳಿ ಬಂದಿದೆ.

    ಟ್ಯೂಬ್‌ಲೈಟ್‌ಗಳ ತ್ಯಾಜ್ಯ

    ಬ್ರಹ್ಮಶ್ರೀ ನಾರಾಯಣ ಗುರು ವೃತ್ತದ ಬಳಿಯ ಇಳಿಜಾರು ಗುಂಡಿಯಲ್ಲಿ ಪಿಕ್‌ಅಪ್ ವಾಹನದಲ್ಲಿ ತಂದು ಟ್ಯೂಬ್‌ಲೈಟ್‌ಗಳನ್ನು ಎಸೆದು ಹೋಗಿರುವ ಘಟನೆ ಬೆಳಕಿಗೆ ಬಂದಿದೆ. ಗಾಜುಗಳಿರುವ ಅಪಾಯಕಾರಿ ತ್ಯಾಜ್ಯ ತೋಡಿನ ಮೂಲಕ ನದಿಯನ್ನು ಸೇರಿ ನೀರು ಕಲುಷಿತಗೊಳ್ಳುವ ಸಾಧ್ಯತೆ ಇದ್ದು ತ್ಯಾಜ್ಯ ಎಸೆದಿರುವ ಪಿಕ್‌ಅಪ್ ವಾಹನ ಚಾಲಕನ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts