More

    ಜೀವನವು ಜಗತ್ತಿನ ಶ್ರೇಯಸ್ಸಿಗಾಗಿ ವಿನಿಯೋಗವಾಗಲಿ

    ಜೀವನವು ಜಗತ್ತಿನ ಶ್ರೇಯಸ್ಸಿಗಾಗಿ ವಿನಿಯೋಗವಾಗಲಿ ನ್ಯಾಯಾಧಿಪತಿ ತನ್ನ ಮತಿಮನಸುಗಳನೆಲ್ಲ|
    ಸ್ವೀಯಲಾಭಸ್ಮರಣೆಯುಳಿದು ವಿವದಿಗಳಾ||
    ದಾಯನಿರ್ಣಯಕೆ ಯೋಜಿಸುವಂತೆ, ನೀಂ ಜಗದ|
    ಶ್ರೇಯಸ್ಸಿಗುಜ್ಜುಗಿಸು-ಮಂಕುತಿಮ್ಮ||814||

    ನ್ಯಾಯಾಧಿಪತಿಯು ಸ್ವಂತ ಲಾಭವನ್ನು ಸ್ಮರಿಸದೆಯೇ ತನ್ನ ಮತಿ ಮನಸ್ಸುಗಳನ್ನೆಲ್ಲಾ ವಾದ ವಿವಾದಗಳೆಡೆಗೆ ಹರಿಸಿ, ವಿವಾದಗಳ ದೂರಿನ ನಿರ್ಣಯಕ್ಕೆ ಯೋಜಿಸುವ ಹಾಗೆಯೇ, ನೀನು ನಿನ್ನ ಜೀವನವನ್ನು ಜಗತ್ತಿನ ಶ್ರೇಯಸ್ಸಿಗಾಗಿ ವಿನಿಯೋಗಿಸು ಎನ್ನುತ್ತದೆ ಈ ಕಗ್ಗ. ನ್ಯಾಯಾಲಯವೆನ್ನುವುದು ಸತ್ಯ-ಧರ್ಮವನ್ನು, ಮಾನವೀಯತೆಯನ್ನು ಎತ್ತಿಹಿಡಿಯುವ ನ್ಯಾಯದೇವತೆಯು ನೆಲೆಸಿರುವ ತಾಣ. ಅಲ್ಲಿರುವ ನ್ಯಾಯಪೀಠಕ್ಕೆ ವಿಶೇಷವಾದ ಮಹತ್ವವಿದೆ. ಅರ್ಹರಲ್ಲದವರು ಅದನ್ನು ಏರುವುದಕ್ಕೆ ಸಾಧ್ಯವಿಲ್ಲ. ತನ್ನ ಸಾಮರ್ಥ್ಯದ ಬಗೆಗೆ ಆತ್ಮವಿಶ್ವಾಸ ಇದ್ದರಷ್ಟೇ ಆ ಸ್ಥಾನದಲ್ಲಿ ಕುಳಿತು ಸಮರ್ಪಕವಾಗಿ ಕೆಲಸವನ್ನು ಮಾಡಲು ಸಾಧ್ಯ. ನ್ಯಾಯಾಧೀಶರು ಮೊಕದ್ದಮೆಗೆ ಸಂಬಂಧಿಸಿದಂತೆ ವಾದಿ ಮತ್ತು ಪ್ರತಿವಾದಿ ವಕೀಲರು ಮಂಡಿಸುವ ವಾದವನ್ನು , ಸಾಕ್ಷಿಗಳ ಮಾತುಗಳನ್ನು, ಹಾಜರು ಪಡಿಸಿದ ಪುರಾವೆ, ಅಂಕಿ-ಅಂಶಗಳನ್ನು ಬಹಳ ಏಕಾಗ್ರತೆಯಿಂದ ಆಲಿಸುತ್ತಾರೆ, ದಾಖಲಿಸಿಕೊಳ್ಳುತ್ತಾರೆ. ವಾದ-ಪ್ರತಿವಾದವು ನಡೆದ ಮೇಲೆ ಮತ್ತೊಮ್ಮೆ ಎಲ್ಲವನ್ನೂ ಸೂಕ್ಷ್ಮವಾಗಿ ಅವಲೋಕಿಸಿ ಅಂತಿಮ ತೀರ್ಪನ್ನು ನೀಡುತ್ತಾರೆ. ದುಷ್ಟ ಕಾರ್ಯವನ್ನು ಮಾಡಿದವನಿಗೆ ಶಿಕ್ಷೆಯಾಗಬೇಕು, ಸಂತ್ರಸ್ತರಿಗೆ ನ್ಯಾಯ ಸಿಗಬೇಕು, ನಿರಪರಾಧಿಗೆ ತೊಂದರೆಯಾಗಬಾರದು ಎನ್ನುವುದು ನ್ಯಾಯಾಧೀಶರ ಮುಖ್ಯ ಗುರಿ.

    ನಿರ್ಭಾವುಕತೆಯಿಂದ ತೀರ್ಪ: ವಿವಾದಿಗಳಲ್ಲಿ ಒಬ್ಬರು ತನ್ನ ಸಂಬಂಧಿಕರು ಎಂದೋ, ಪ್ರಭಾವಿ ವ್ಯಕ್ತಿಯೆಂದೋ ತಾರತಮ್ಯ ವನ್ನು ಎಸಗುವುದಿಲ್ಲ. ಯಾರ ಪರವಾಗಿ ತೀರ್ಪಿತ್ತರೆ ತನಗೆ ಹೆಚ್ಚು ಲಾಭ ಎಂದೂ ಯೋಚಿಸುವುದಿಲ್ಲ ಅಥವಾ ತೀರ್ಪು ನೀಡುವುದರಿಂದ ತನಗೆ ಬರುವ ಭಾಗ್ಯವೇನು ಎಂದೂ ಲೆಕ್ಕ ಹಾಕುವುದಿಲ್ಲ. ಮತಿ- ಮನಸ್ಸುಗಳನ್ನು ವಾದ ಸರಣಿಯಲ್ಲಿ ಮಗ್ನಗೊಳಿಸಿ, ಹಲವು ಆಯಾಮಗಳಿಂದ ಪ್ರಕರಣವನ್ನು ಗ್ರಹಿಸಿ, ಸಂಯಮ ಮತ್ತು ನಿರ್ಭಾವುಕತೆಯಿಂದ ತೀರ್ಪನ್ನು ನೀಡುತ್ತಾರೆ. ತನಗೆ ವಹಿಸಿದ ಕೆಲಸವನ್ನು ನಿಷ್ಠೆ ಮತ್ತು ಶ್ರದ್ಧೆಯಿಂದ ಮಾಡುವದಷ್ಟೇನ್ಯಾಯಾಧೀಶರಿಗೆ ಮುಖ್ಯವಾಗಿರುತ್ತದೆ. ಅದರ ಹೊರತಾಗಿ ಮೋಹ, ಮತ್ಸರ, ಉಪೇಕ್ಷೆ, ಪೂರ್ವಗ್ರಹಗಳು ಅವರಲ್ಲಿ ಇರುವು ದಿಲ್ಲ. ಇದರಿಂದಾಗಿ ಪ್ರಾಮಾಣಿಕವಾದ ಪ್ರಯತ್ನ ತನ್ಮೂಲಕ ಸಮಂಜಸವಾದ ನ್ಯಾಯನಿರ್ಣಯವು ಸಾಧ್ಯವಾಗುತ್ತದೆ.

    ಹೆಚ್ಚುತ್ತಿವೆ ದುರಿತಗಳು: ಲೌಕಿಕ ಬದುಕಿನಲ್ಲೂ ನ್ಯಾಯನಿರ್ಣಯದ ಸಂದರ್ಭಗಳು ಎದುರಾಗುತ್ತವೆ. ಸರಿ-ತಪ್ಪನ್ನು ನಿರ್ಧರಿಸಲಾಗದೆ ಗೊಂದಲ ವಾಗುವುದು ಇದೆ. ಎಷ್ಟೋ ಸಲ ಕೆಡುಕು ಎಂದು ತಿಳಿದಿದ್ದರೂ ಮೋಹವಶವಾಗಿ ಅದನ್ನು ಸಮರ್ಥಿಸಿಕೊಳ್ಳುವುದು, ಒಳಿತನ್ನು ರಕ್ಷಿಸದೆ ಮೌನವಹಿಸುವುದು ನಡೆಯುತ್ತದೆ. ದುಷ್ಕೃತ್ಯಗಳನ್ನು ತಡೆದರೆ ತನಗೆ ತೊಂದರೆಯಾಗಬಹುದೇನೋ ಎಂದು ಹಿಂಜರಿಯುವ ಮತ್ತು ಸತ್ಕಾರ್ಯವನ್ನು ಮಾಡುವುದರಿಂದ ತನಗೇನು ಲಾಭವೆಂದು ಲೆಕ್ಕ ಹಾಕುವ ಮನೋಸ್ಥಿತಿಯಿಂದಾಗಿ ಸಮಾಜದಲ್ಲಿ ದುರಿತಗಳು ಹೆಚ್ಚುತ್ತಿವೆ.

    ಸತ್ಪ್ರಜೆಯ ಕರ್ತವ್ಯ: ಭಾವ-ಬುದ್ಧಿಗಳಿಂದ ಕೂಡಿದ, ಸಂವಹನ, ಸಂವೇದನೆಗಳೊಂದಿಗೆ ಸಂಘಟಿತನಾಗಿ ಬಾಳಬಲ್ಲ ಮನುಷ್ಯನಿಗೆ ಲೋಕ ಸಂಸಾರದಲ್ಲಿ ಗುರುತರವಾದ ಹೊಣೆಗಾರಿಕೆ ಇದೆ. ಲೋಕವೆನ್ನುವ ನ್ಯಾಯಾಲಯದಲ್ಲಿ ಪ್ರತಿನಿತ್ಯವೂ ಹತ್ತುಹಲವು ಸಮಸ್ಯೆ-ಸಂದಿಗ್ಧಗಳು ಎದುರಾಗುತ್ತವೆ. ಕೆಲವೊಂದು ವೈಯಕ್ತಿಕವಾಗಿಯಷ್ಟೇ ಕಾಡಿದರೆ, ಇನ್ನು ಕೆಲವು ಸಮಷ್ಟಿಯನ್ನೇ ತೊಂದರೆಗೆ ಈಡುಮಾಡುತ್ತವೆ. ಇಂಥ ಸಂದರ್ಭದಲ್ಲಿ ವ್ಯಕ್ತಿಯು ನ್ಯಾಯಾದೀಶನಂತೆ ನಿಷ್ಠೆ, ತಾಳ್ಮೆ ಮತ್ತು ಜಾಣ್ಮೆಯಿಂದ ವ್ಯವಹರಿಸಬೇಕು. ಸಮಸ್ಯೆಯ ಮೂಲವನ್ನು ಸೂಕ್ಷ್ಮವಾಗಿ ಗಮನಿಸುವ ವಿವೇಕ, ನ್ಯಾಯ- ಧರ್ಮಗಳನ್ನು ಎತ್ತಿಹಿಡಿಯುವ ಧೈರ್ಯ, ದುಷ್ಕಾರ್ಯಗಳನ್ನು ವಿರೋಧಿಸಿ ಸತ್ಕಾರ್ಯಕ್ಕೆ ಬೆಂಬಲವನ್ನು ನೀಡುವ ಕರ್ತವ್ಯ ಪ್ರಜ್ಞೆ ಆತನಲ್ಲಿ ಜಾಗೃತವಾಗಬೇಕು. ತನ್ನ ಮನೆ, ಸಂಸಾರ, ಮತ ಎನ್ನುವ ಮಿತಿಯಲ್ಲಿ ಮಾತ್ರ ಯೋಚಿಸದೆ ಜಗತ್ತಿನ ಏಳಿಗೆಗಾಗಿ ಶ್ರಮಿಸುವುದು ಸತ್ಪ್ರಜೆಯ ಕರ್ತವ್ಯ.

    ಹೀಗೆ ಸಮಸ್ಯೆ-ಸವಾಲುಗಳನ್ನು ಎದುರಿಸುವ ಮತ್ತು ನಿರ್ಮಮ ಭಾವದಿಂದ ಪರಿಹರಿಸುವ ಪ್ರಯತ್ನದಲ್ಲಿ ಜೀವನಾನುಭವವು ಬೆಳೆಯುತ್ತದೆ. ಮನಸ್ಸಿನ ಸಂಕುಚಿತತೆಯು ತೊಲಗಿ ಜಗದ ಶ್ರೇಯಸ್ಸನ್ನು ಹಾರೈಸುವ ಮತ್ತು ಅದಕ್ಕಾಗಿ ಪ್ರಯತ್ನಿಸುವ ಉತ್ಸಾಹವು ಜೀವನವನ್ನು ಅರ್ಥಪೂರ್ಣವಾಗಿಸುತ್ತದೆ.

    (ಲೇಖಕರು ಉಪನ್ಯಾಸಕರು, ಕವಯಿತ್ರಿ)
    (ಪ್ರತಿಕ್ರಿಯಿಸಿ: [email protected], [email protected])

    NEET ವಿವಾದ: ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣದಲ್ಲಿ ಪ್ರಾಂಶುಪಾಲರ ಬಂಧನ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts