More

    ಸಮುದಾಯ ಭವನದಲ್ಲಿ ಶುಚಿತ್ವಕ್ಕೆ ಆದ್ಯತೆ ಸಿಗಲಿ

    ಕುಶಾಲನಗರ: ತಾಲೂಕಿನ ನಂಜರಾಯಪಟ್ಟಣ ಗ್ರಾಪಂ ವ್ಯಾಪ್ತಿಯ ರಂಗಸಮುದ್ರ ಗ್ರಾಮದ ಕಟ್ಟೆಹಾಡಿ ಗಿರಿಜನ ಹಾಡಿಯಲ್ಲಿ ನಿರ್ಮಾಣಗೊಂಡಿರುವ ಸಮುದಾಯ ಭವನವನ್ನು ಸ್ಥಳೀಯ ನಿವಾಸಿಗಳ ಬಳಕೆಗೆ ನೀಡಲಾಯಿತು.

    ಭಾರಿ ಮಳೆಗೆ ಬೃಹತ್ ಮರ ಭವನದ ಮೇಲೆ ಬಿದ್ದು ಕಟ್ಟಡದ ಒಂದು ಭಾಗಕ್ಕೆ ತೀವ್ರ ಹಾನಿಯಾಗಿತ್ತು. ನಂತರ ಮಳೆಹಾನಿ ಪರಿಹಾರ ನಿಧಿಯಲ್ಲಿ ಕಟ್ಟಡ ದುರಸ್ತಿಗೊಳಿಸಿ ಮೇಲಂತಸ್ತಿಗೆ ಛಾವಣಿ ಅಳವಡಿಸಿ ಕೀಲಿಕೈ ಹಸ್ತಾಂತರಿಸಲಾಯಿತು.

    ಸಮುದಾಯ ಭವನದಲ್ಲಿನ ಕಾರ್ಯಚಟುವಟಿಕೆಗಳ ಆರಂಭಕ್ಕೆ ಚಾಲನೆ ನೀಡಿ ಮಾತನಾಡಿದ ನಂಜರಾಯಪಟ್ಟಣ ಗ್ರಾಪಂ ಅಧ್ಯಕ್ಷ ಸಿ.ಎಲ್.ವಿಶ್ವ, ಈ ಭಾಗದ ಪರಿಶಿಷ್ಟ ಪಂಗಡದವರ ಶುಭ ಸಮಾರಂಭ, ಸಾಮಾಜಿಕ ಕಾರ್ಯಕ್ರಮಗಳಿಗೆ ಈ ಭವನ ಅನುಕೂಲವಾಗಲಿದೆ. ಹಾಗಾಗಿ ಇದರ ಸದುಪಯೋಗ ಪಡೆದುಕೊಳ್ಳುವುದರೊಂದಿಗೆ ಶುಚಿತ್ವಕ್ಕೆ ಎಲ್ಲರೂ ಪ್ರಾಮುಖ್ಯತೆ ಒದಗಿಸಬೇಕೆಂದರು.

    ಒಂದು ಕಾಲದಲ್ಲಿ ಕಾಡುಮಯ ವಾತಾವರಣದಲ್ಲಿದ್ದ ಕಟ್ಟೆಹಾಡಿ ಇಂದು ಉತ್ತಮ ಸ್ಥಿತಿಯಲ್ಲಿದೆ. ಗ್ರಾಪಂ ಸದಸ್ಯರ ಕಾಳಜಿಯಿಂದ ಜನರಿಗೆ ಸರ್ಕಾರದ ಸವಲತ್ತು, ಮೂಲ ಸೌಕರ್ಯ ದೊರಕುತ್ತಿದೆ. ಸಮಾಜ ಕಲ್ಯಾಣ ಇಲಾಖೆ, ಐಟಿಡಿಪಿ ವತಿಯಿಂದ ಕೂಡ ಹಕ್ಕುಪತ್ರ, ಮನೆ ನಿರ್ಮಾಣ, ಅಗತ್ಯ ದಾಖಲಾತಿಗಳನ್ನು ಕಲ್ಪಿಸಲಾಗಿದೆ. ಕೆಲವು ತಾಂತ್ರಿಕ ಕಾರಣಗಳಿಂದ ಸೌಲಭ್ಯ ವಂಚಿತರಾಗಿರುವ ಇಲ್ಲಿನ ಕೆಲವು ನಿವಾಸಿಗಳಿಗೆ ಸೌಲಭ್ಯ ಕಲ್ಪಿಸಲು ಇಲಾಖೆ ಅಧಿಕಾರಿಗಳು ಕ್ರಮವಹಿಸಬೇಕಿದೆ ಎಂದು ಆಗ್ರಹಿಸಿದರು.

    ಸದಸ್ಯ ಆರ್.ಕೆ.ಚಂದ್ರ ಮಾತನಾಡಿ, ಹಾಡಿಯಲ್ಲಿರುವ 28 ಕುಟುಂಬಗಳ 120 ಕ್ಕೂ ಅಧಿಕ ಜನರು ತಮ್ಮ ಮನೆ ಶುಭ ಕಾರ್ಯಗಳಿಗೆ ದೂರದ ಹೊಸಪಟ್ಟಣ, ಕಂಬಿಬಾಣೆ ಭವನಗಳನ್ನು ಆಶ್ರಯಿಸಬೇಕಿತ್ತು. ಇದೀಗ ಹಾಡಿಯ ಒಳಭಾಗದಲ್ಲೇ ಅವರಿಗೆ ಭವನ ಒದಗಿಸಿ ಅನುಕೂಲ ಒದಗಿಸಲಾಗಿದೆ ಎಂದು ತಿಳಿಸಿದರು.

    ಗ್ರಾಪಂ ಉಪಾಧ್ಯಕ್ಷೆ ಕುಸುಮಾ, ಸದಸ್ಯರಾದ ಮಾವಾಜಿ ರಕ್ಷಿತ್, ಸಮೀರ, ಗಿರಿಜಮ್ಮ, ಜಾಜಿ, ಸಂಜೀವಿನಿ ಒಕ್ಕೂಟದ ಪದಾಧಿಕಾ ರಿಗಳಾದ ಸರಿತಾ, ವಿದ್ಯಾ, ಗ್ರಾಪಂ ಸಿಬ್ಬಂದಿಗಳಾದ ಮಲ್ಲಿಕಾರ್ಜುನ, ರಂಜಿತ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts