More

    ಬನ್ನೇರುಘಟ್ಟದಲ್ಲಿ ಚಿರತೆ ಸಫಾರಿ

    ವಿಜಯವಾಣಿ ಸುದ್ದಿಜಾಲ ಆನೇಕಲ್
    ಬನ್ನೇರುಘಟ್ಟ ಜೈವಿಕ ಉದ್ಯಾನದಲ್ಲಿ ದೇಶದಲ್ಲಿ ಅತಿ ದೊಡ್ಡದಾದ ಚಿರತೆ ಸಫಾರಿಗೆ ಪರಿಸರ ಮತ್ತು ಅರಣ್ಯ ಸಚಿವ ಈಶ್ವರ್ ಖಂಡ್ರೆ ಇತ್ತೀಚೆಗೆ ಚಾಲನೆ ನೀಡಿದ್ದಾರೆ.
    ಹುಲಿ, ಸಿಂಹ, ಕರಡಿ ಸಫಾರಿಯ ಜತೆಗೆ ಚಿರತೆ ಸಫಾರಿಯೂ ಹೊಸ ಸೇರ್ಪಡೆಯಾಗಿದ್ದು, ಪ್ರವಾಸಿಗರಿಗೆ ಹೊಸ ಆಕರ್ಷಣೆಯಾಗಿದೆ.
    8 ಚಿರತೆಗಳನ್ನು ತೆರೆದ ವನ ಪ್ರದೇಶದಲ್ಲಿ ಸಫಾರಿಗೆ ಬಿಡಲಾಗಿದೆ. ಇದು ಈ ಉದ್ಯಾನದ ಮತ್ತೊಂದು ಆಕರ್ಷಣೆಯಾಗಿದ್ದು, ಪ್ರವಾಸಿಗರು ಮತ್ತು ಸಂದರ್ಶಕರನ್ನು ಸೆಳೆಯುತ್ತಿದೆ. 20 ಹೆಕ್ಟೇರ್ ಪ್ರದೇಶದಲ್ಲಿ ಒಟ್ಟು 4.5 ಕೋಟಿ ರೂ.ವೆಚ್ಚದಲ್ಲಿ ಚಿರತೆ ಸಫಾರಿ ರೂಪಿಸಲಾಗಿದೆ. ಇಡೀ ಪ್ರದೇಶಕ್ಕೆ 4.5 ಮೀಟರ್ ಎತ್ತರದ ಲಂಬ ಚೈನ್ ಲಿಂಕ್ ಜಾಲರಿ ಅಳವಡಿಸಲಾಗಿದ್ದು, ಎಂಎಸ್ ಶೀಟ್‌ಗಳನ್ನು 1.5 ಮೀಟರ್ ಎತ್ತರವಿರುವ 30ಡಿಗ್ರಿ ಇಳಿಜಾರಿನ ಕೋನದಲ್ಲಿ ಹಾಕುವ ಮೂಲಕ ಚಿರತೆಗಳು ಹೊರಗೆ ಬಾರದಂತೆ ಎಚ್ಚರ ವಹಿಸಲಾಗಿದೆ.
    ಬನ್ನೇರುಘಟ್ಟ ಸುತ್ತಮುತ್ತ ಬೆಟ್ಟಗುಡ್ಡಗಳಿದ್ದು, ಇದು ಚಿರತೆಗಳು ವಾಸಿಸಲು ಉತ್ತಮ ತಾಣವಾಗಿದೆ. ಹೀಗಾಗಿಯೇ ಇಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಚಿರತೆಗಳೂ ಇವೆ. ಈ ಪೈಕಿ ಹೊಲ, ಗದ್ದೆಗಳಲ್ಲಿ ಹೆಣ್ಣು ಚಿರತೆಗಳು ಮರಿ ಹಾಕಿ ಹೋಗುವ ಸಂದರ್ಭದಲ್ಲಿ ಅಂತಹ ಮರಿಗಳನ್ನು ತಂದು ಉದ್ಯಾನದಲ್ಲಿ ಪಾಲನೆ ಮಾಡಲಾಗುತ್ತದೆ. ಇನ್ನು ಚಿರತೆ ಸಫಾರಿಯಲ್ಲಿ 6 ಮಂದಿ ಪ್ರಾಣಿ ಪಾಲಕರಿದ್ದು, ಚಿರತೆಗಳ ನಿರ್ವಹಣೆ ಮಾಡಲಿದ್ದಾರೆ. ಸಫಾರಿಯಲ್ಲಿ ಎರಡು ಪ್ರಾಣಿ ಸಂಕೀರ್ಣಗಳನ್ನು ನಿರ್ಮಿಸಲಾಗಿದ್ದು, ಪ್ರತಿ ಸಂಕೀರ್ಣದಲ್ಲಿ 6 ಪ್ರಾಣಿ ಮನೆಗಳನ್ನು ನಿರ್ಮಿಸಲಾಗಿದೆ. ಇದಕ್ಕೆ ಹೊಂದಿಕೊಂಡಂತೆ ಸಣ್ಣ ಕ್ರಾಲ್ ಪ್ರದೇಶವನ್ನು ನಿರ್ಮಿಸಲಾಗಿದೆ. ಬನ್ನೇರುಘಟ್ಟ ಜೈವಿಕ ಉದ್ಯಾನವನಕ್ಕೆ ಬರುವ ಪ್ರವಾಸಿಗರು ಕಳೆದ ಎರಡು ದಿನಗಳಿಂದ ಹೋಗಿ ಮರಿಗಳ ತುಂಟಾಟ ನೋಡಿ ಖುಷಿ ಪಡುತ್ತಿದ್ದಾರೆ.

    ಚಿರತೆಗಳ ಆವಾಸಕ್ಕೆ ಉತ್ತಮ ಪ್ರದೇಶ ಈ ಪ್ರದೇಶದಲ್ಲಿ ಸುತ್ತಲೂ ಚೈನ್‌ಲಿಂಕ್ ಮೆಸ್ ಮತ್ತು ರೈಲ್ವೆ ಕಂಬಿಗಳೊಂದಿಗೆ ಭದ್ರಪಡಿಸಲಾಗಿದೆ. ಚಿರತೆ ಸಫಾರಿ ಪ್ರದೇಶವೂ ನೈಸರ್ಗಿಕ ಬಂಡೆ ಮತ್ತು ಕಾಡಿನಂತಹ ವಾತಾವರಣದೊಂದಿಗೆ ಆವರಿಸಿರುವುದರಿಂದ ಸಂಪೂರ್ಣ ಪ್ರದೇಶ ಚಿರತೆಗಳ ಆವಾಸಕ್ಕೆ ಉತ್ತಮ ಪ್ರದೇಶವಾಗಿದೆ ಎಂದು ಉದ್ಯಾನದ ಕಾರ್ಯನಿರ್ವಾಹಕ ನಿರ್ದೇಶಕ ಸೂರ್ಯಸೇನ್ ತಿಳಿಸಿದರು. ಚಿರತೆ ಸಫಾರಿಗೆ ಪ್ರವಾಸಿಗರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಚಿರತೆಗಳನ್ನು ವಾಹನದ ಸಮೀಪದಲ್ಲಿಯೇ ವೀಕ್ಷಿಸಿ ಸಂತಸಪಟ್ಟರು. ಎಲ್ಲ ಟ್ರಿಪ್‌ಗಳಲ್ಲಿಯೂ ಚಿರತೆಗಳು ಪ್ರವಾಸಿಗರಿಗೆ ಕಂಡವು. ರಸ್ತೆಯ ಪಕ್ಕದಲ್ಲಿಯೇ ಚಿರತೆಗಳು ಖುಷಿ ಖುಷಿಯಿಂದ ಓಡಾಡುತ್ತಿರುವ ದೃಶ್ಯ ಪ್ರವಾಸಿಗರಿಗೆ ಮುದ ನೀಡಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts