More

    ಜಿನ್ನೇನಹಳ್ಳಿಯಲ್ಲಿ ಕೃಷಿಕನ ಮೇಲೆ ಚಿರತೆ ದಾಳಿ

    ಹಿರೀಸಾವೆ: ಹೋಬಳಿಯ ಜಿನ್ನೇನಹಳ್ಳಿ ಗ್ರಾಮದಲ್ಲಿ ಇತ್ತೀಚೆಗೆ ರೈತನ ಮೇಲೆ ಚಿರತೆ ದಾಳಿ ಮಾಡಿ ಗಾಯಗೊಳಿಸಿದೆ.


    ಗ್ರಾಮದ ನಿವಾಸಿ ರಾಜು ಚಿರತೆ ದಾಳಿಯಿಂದ ಗಾಯಗೊಂಡವರು. ರಾಜು ಅವರ ಪತ್ನಿ ಮೇಕೆಗಳನ್ನು ಮೇಯಿಸಲು ಗ್ರಾಮದ ಹೊರ ಭಾಗದಲ್ಲಿರುವ ಕಟ್ಟೆಯ ಬಳಿಗೆ ತೆರಳಿದ್ದರು. ಒಂದು ಮೇಕೆ ಕಾಣೆಯಾಗಿತ್ತು. ಈ ವಿಷಯವನ್ನು ಮನೆಯವರಿಗೆ ತಿಳಿಸಿದ್ದಾರೆ.


    ರಾಜು ಮತ್ತು ಕುಟುಂಬದವರು ಕಟ್ಟೆಯ ಏರಿಯಲ್ಲಿನ ಕುರುಚಲ ಗಿಡಗಳ ಪೊದೆಯಲ್ಲಿ ಹುಡುಕಾಡುತಿದ್ದ ವೇಳೆ ಪೊದೆಯೊಳಗಿದ್ದ ಚಿರತೆ ಇವರತ್ತ ನುಗ್ಗಿದ್ದು ಕುತ್ತಿಗೆ ಭಾಗಕ್ಕೆ ಅದರ ಉಗುರುಗಳು ತಾಗಿವೆ. ತಕ್ಷಣ ರಾಜು ತನ್ನ ಕೈಯಲ್ಲಿದ್ದ ಮರದ ಕೋಲಿನಿಂದ ಚಿರತೆಗೆ ಹೊಡೆದು ಕೆಳಗೆ ಬಿದ್ದಿದ್ದಾರೆ.


    ಅಲ್ಲೇ ಸ್ವಲ್ಪ ದೂರದಲ್ಲಿದ್ದ ಪತ್ನಿ ಹಾಗೂ ಮಕ್ಕಳು ಕಿರುಚಾಡುತ್ತ ಓಡಿ ಅಲ್ಲಿಗೆ ಬಂದಾಗ ಚಿರತೆ ಅಲ್ಲಿಂದ ಪರಾರಿಯಾಗಿದೆ. ಉಗುರು ತಾಗಿದ ಪರಿಣಾಮ ಗಾಯಗೊಂಡಿದ್ದ ರಾಜು ಹಿರೀಸಾವೆಯ ಖಾಸಗಿ ಕ್ಲಿನಿಕ್‌ನಲ್ಲಿ ಚಿಕಿತ್ಸೆ ಪಡೆದಿದ್ದಾರೆ.


    ಕಳೆದ 15 ದಿನಗಳಿಂದ ಈ ಭಾಗದಲ್ಲಿ ಚಿರತೆ ಕಾಣಿಸಿಕೊಳ್ಳುತಿದ್ದು ಜಾನುವಾರುಗಳು ಹಾಗೂ ನಾಯಿಗಳ ಮೇಲೆ ದಾಳಿ ಮಾಡಿ ಎಳೆದುಕೊಂಡು ಹೋಗುತ್ತಿದ್ದೆ ಎಂದು ರಾಜು ತಿಳಿಸಿದ್ದಾರೆ. ವಿಷಯ ತಿಳಿದ ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದು ಚಿರತೆ ಕಾಣಿಸಿಕೊಂಡಿರುವ ಸ್ಥಳಕ್ಕೆ ಬೋನು ಅಳವಡಿಸಿ ಸೆರೆ ಹಿಡಿಯಲು ಕ್ರಮ ಕೈಗೊಳ್ಳಲಾಗುವುದು ಎಂದು ವಲಯ ಅರಣ್ಯ ಅಧಿಕಾರಿ ಪಲ್ಲವಿ ತಿಳಿಸಿದ್ದಾರೆ.


    ಆರೋಪ: ಚಿರತೆ ದಾಳಿಗೆ ಒಳಗಾಗಿ 2 ದಿನ ಕಳೆದರೂ ಕಂದಾಯ ಇಲಾಖೆ ಮತ್ತು ಸ್ಥಳೀಯ ಗ್ರಾಮ ಪಂಚಾಯಿತಿ ಅಧಿಕಾರಿಗಳು ಗಾಯಾಳುವನ್ನು ಭೇಟಿ ಮಾಡಿಲ್ಲ. ಅಗತ್ಯ ಚಿಕಿತ್ಸೆಯನ್ನು ಕೊಡಿಸಿಲ್ಲ ಮತ್ತು ಧೈರ್ಯವನ್ನು ಹೇಳಿಲ್ಲ ಎಂದು ಗ್ರಾಮದವರಾದ ಮೈಸೂರಿನ ಆಡಳಿತ ತರಬೇತಿ ಸಂಸ್ಥೆಯ ವಿಕೋಪ ನಿರ್ವಹಣೆ ತಜ್ಞ ಡಾ.ಪರಮೇಶ್ ಆರೋಪಿಸಿದ್ದಾರೆ. ಸ್ಥಳೀಯ ಸಂಸ್ಥೆ ಆಡಳಿತ ಇಂಥ ಘಟನೆ ನಡೆದಾಗ ಸ್ಪಂದಿಸಿ ಸಮಸ್ಯೆ ಬಗೆಹರಿಸುವ ಬಗ್ಗೆ ಗಮನಹರಿಸಬೇಕು ಎಂದು ಆಗ್ರಹಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts