More

    ರಾಜಕಾಲುವೆ ತೆರವು ಕಾನೂನು ಪ್ರಕಾರ ಕ್ರಮ: ಡಿಸಿಎಂ ಶಿವಕುಮಾರ್ ಸ್ಪಷ್ಟನೆ

    ಬೆಂಗಳೂರು: ನಟ ದರ್ಶನ್ ಸೇರಿದಂತೆ ನಗರದ ರಾಜಕಾಲುವೆಗಳ ಮೇಲೆ ಕಟ್ಟಡಗಳನ್ನು ಯಾರೇ ನಿರ್ಮಿಸಿದ್ದರೂ, ಅವುಗಳನ್ನು ಕಾನೂನು ಪ್ರಕಾರವೇ ತೆರವುಗೊಳಿಸಲಾಗುವುದು ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.

    ಬಿಬಿಎಂಪಿ ಕಚೇರಿಯಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಂಗಳೂರಿನ ವಿವಿಧೆಡೆ ರಾಜಕಾಲುವೆಗಳ ಒತ್ತುವರಿ ಆಗಿವೆ. ನಟ ದರ್ಶನ ಸೇರಿ ಯಾರೇ ಒತ್ತುವರಿ ಮಾಡಿದ್ದರೂ ತೆರವು ವಿಚಾರದಲ್ಲಿ ರಾಜೀ ಇಲ್ಲ. ಎಲ್ಲರನ್ನು ಒಂದೇ ದೃಷ್ಟಿಯಿಂದ ನೋಡಲಾಗುವುದು ಎಂದು ಸ್ಪಷ್ಟಪಡಿಸಿದರು.

    ಪ್ರಸ್ತುತ ದರ್ಶನ್ ಪೊಲೀಸ್ ಕಸ್ಟಡಿಯಲ್ಲಿದ್ದು, ಈಗಾಗಲೇ ಅವರ ವಿರುದ್ಧ ದಾಖಲಾಗಿರುವ ಪ್ರಕರಣಗಳು ಒಂದೊಂದಾಗಿ ಮುನ್ನೆಲೆಗೆ ಬರುತ್ತಿದೆ. ಇವುಗಳಲ್ಲಿ ರಾಜರಾಜೇಶ್ವರಿನಗರದಲ್ಲಿ ಸ್ವಂತ ಮನೆ ನಿರ್ಮಿಸಿರುವ ಕಟ್ಟಡವು ರಾಜಕಾಲುವೆ ಮೇಲಿದೆ ಎಂಬ ಆಕ್ಷೇಪ ವ್ಯಕ್ತವಾಗಿದೆ.

    ಏನಿದು ಪ್ರಕರಣ?:

    2016ರಲ್ಲಿ ಪಾಲಿಕೆಯು ನಗರದಲ್ಲಿ ರಾಜಕಾಲುವೆ ಒತ್ತುವರಿ ತೆರವು ಕಾರ್ಯಾಚರಣೆ ಕೈಗೆತ್ತಿಕೊಂಡಿದ್ದ ವೇಳೆ ನಟ ದರ್ಶನ್ ಹಾಗೂ ಕಾಂಗ್ರೆಸ್ ಮುಖಂಡ ಶಾಮನೂರು ಶಿವಶಂಕರಪ್ಪ ಒಡೆತನದ ಆಸ್ಪತ್ರೆಯ ಕಟ್ಟಡವು ರಾಜಕಾಲುವೆ ಮೇಲಿದ್ದಕ್ಕೆ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ಷೇಪ ವ್ಯಕ್ತವಾಗಿತ್ತು. ಜತೆಗೆ ಆರ್.ಆರ್.ನಗರದ ಐಡಿಯಲ್ ಹೋಮ್ಸ್ ಲೇಔಟ್‌ನ ಹಲವು ಭಾಗ ರಾಜಕಾಲುವೆ ಒತ್ತುವರಿ ಮಾಡಿ ನಿರ್ಮಿಸಿರುವುದು ಬಾರೀ ಸದ್ದು ಮಾಡಿತ್ತು. ಆ ಸಂದರ್ಭದಲ್ಲಿ ನಗರ ಜಿಲ್ಲಾ ಭೂ ದಾಖಲೆಗಳ ಜಂಟಿ ನಿರ್ದೇಶಕರು ಬಿಬಿಎಂಪಿಯ ಆಗಿನ ಆಯುಕ್ತ ಮಂಜುನಾಥ್ ಪ್ರಸಾದ್‌ಗೆ ವರದಿ ಸಲ್ಲಿಸಿದ್ದರು. ಆ ವರದಿಯಲ್ಲಿ ಆರ್.ಆರ್.ನಗರದಲ್ಲಿ 7 ಎಕರೆ 31 ಗುಂಟೆ ಪ್ರದೇಶದ ರಾಜಾಕಾಲುವೆ ಒತ್ತುವರಿಗೆ ಒಳಗಾಗಿದೆ ಎಂಬುದನ್ನು ದೃಢಪಡಿಸಿದ್ದರು. ಆದರೆ, ಲೇಔಟ್ ಹಾಗೂ ಆಸ್ಪತ್ರೆಯು 1969ರಲ್ಲೇ ಬೆಂಗಳೂರು ನಗರ ಅಭಿವೃದ್ಧಿ ಟ್ರಸ್ಟ್‌ನಿಂದ (ಸಿಐಟಿಬಿ) ಒಪ್ಪಿಗೆ ಪಡೆದಿದ್ದು, 1989ರಲ್ಲಿ ಪರಿಷ್ಕೃತ ಯೋಜನೆಗೆ ಬಿಡಿಎ ಅನುಮೋದನೆ ನೀಡಿತ್ತು. ಈ ಕಾರಣದಿಂದಾಗಿ ಅಲ್ಲಿನ ಕಟ್ಟಡಗಳನ್ನು ತೆರವು ಮಾಡಿರಲಿಲ್ಲ.

    ಈ ವಿಚಾರವಾಗಿ 2003ರಲ್ಲಿ ರಾಜರಾಜೇಶ್ವರಿ ಪ್ರತಿಷ್ಠಾಪನಾ ಸಮಿತಿಯು ಹೈಕೋರ್ಟ್‌ನಲ್ಲಿ ಪಿಐಎಲ್ ದಾಖಲಿಸಿ ರಾಜಕಾಲುವೆ ಒತ್ತುವರಿ ಮಾಡಿರುವುದರಿಂದ ಲೇಔಟ್‌ಗೆ ನೀಡಿದ್ದ ಅನುಮೋದನೆಯನ್ನು ಹಿಂಪಡೆಯುವಂತೆ ಮನವಿ ಮಾಡಿತ್ತು. ಇದನ್ನಾಧರಿಸಿ ನ್ಯಾಯಾಲಯವು ಬಿಡಿಎ ಹಾಗೂ ನಗರ ಜಿಲ್ಲಾಡಳಿತಕ್ಕೆ ತನಿಖೆ ನಡೆಸುವಂತೆ ನಿರ್ದೇಶನ ನೀಡಿತ್ತು. ತನಿಖೆ ನಡೆಸಿದಾಗ 7 ಎಕರೆ 6 ಗುಂಟೆ ಸರ್ಕಾರಿ ಜಮೀನು ಒತ್ತುವರಿಯಾಗಿರುವುದು ದೃಢಪಟ್ಟಿತ್ತು. ಬಿಡಿಎ ಕೂಡ ಆಸ್ಪತ್ರೆ ಸೇರಿ 63 ಕಟ್ಟಡಗಳು ಒತ್ತುವರಿ ಜಾಗದಲ್ಲಿ ನಿರ್ಮಿಸಲ್ಪಟ್ಟಿವೆ ಎಂದು ಕೋರ್ಟ್‌ಗೆ ಮಾಹಿತಿ ನೀಡಿತ್ತು. ಮುಂದಿನ ಕ್ರಮಕ್ಕಾಗಿ ಹೈಕೋರ್ಟ್ ವರದಿಯನ್ನು ಆಗಿನ ನಗರ ಜಿಲ್ಲಾಧಿಕಾರಿಗೆ ರವಾನಿಸಿತ್ತು. ಈ ವಿಚಾರವಾಗಿ 2007ರಲ್ಲಿ ಲೇಔಟ್ ಡೆವಲಪರ್ ನ್ಯಾಯಾಲಯದ ಮೆಟ್ಟಿಲು ಹತ್ತಿದ್ದರು. ಆ ಬಳಿಕ ಕೆಲ ವರ್ಷ ಒತ್ತುವರಿ ತೆರವು ವಿಚಾರದಲ್ಲಿ ಯಾವುದೇ ಕ್ರಮ ಆಗಿರಲಿಲ್ಲ.

    ಹಿಂದಿನ ಕಾಂಗ್ರೆಸ್ ಸರ್ಕಾರದಲ್ಲಿ ಕಾನೂನು ಸಚಿವರಾಗಿದ್ದ ಟಿ.ಬಿ.ಜಯಚಂದ್ರ ಅವರು ನಟ ದರ್ಶನ್ ಹಾಗೂ ಆಸ್ಪತ್ರೆಯಿಂದ ಒತ್ತುವರಿ ಆಗಿಲ್ಲ ಎಂದು ಹೇಳಿಕೆ ನೀಡಿದ ಬಳಿಕ ಈ ಪ್ರಕರಣ ತಣ್ಣಗಾಗಿತ್ತು. ಆದರೂ ಈ ವಿವಾರದಲ್ಲಿ ಅಧಿಕೃತ ಪ್ರಕಟಣೆ ಬಿಬಿಎಂಪಿಯಿಂದ ಹೊರಬೀಳದ ಕಾರಣ ಆರ್.ಆರ್.ನಗರ ಒತ್ತುವರಿ ಪ್ರಕರಣ ಆಗಾಗ್ಗೆ ಚರ್ಚೆಗೆ ಬರುತ್ತಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts