More

    ಅಧಿಕಾರಕ್ಕಿಂತ ಸಿದ್ಧಾಂತ ಮೆರೆದ ಧೀಮಂತ ನಾಯಕ

    ಪ್ರಭಾಕರ್​ ನಾಯ್ಕ್​ ಬಣ್ಣನೆ | ಡಾ. ಶ್ಯಾಮಾ ಪ್ರಸಾದ್​ ಯಶೋಗಾಥೆಯ ಉಪನ್ಯಾಸ

    ವಿಜಯವಾಣಿ ಸುದ್ದಿಜಾಲ ಉಡುಪಿ
    ವೃತ್ತಿಯಲ್ಲಿ ವಕೀಲರಾಗಿ, ಶಿಕ್ಷಣ ಕ್ಷೇತ್ರದ ಸಾಧಕರಾಗಿ ಹಾಗೂ ರಾಜಕೀಯ ಕ್ಷೇತ್ರದಲ್ಲಿ ಮಾದರಿ ಜನನಾಯಕರಾಗಿದ್ದ ಡಾ. ಶ್ಯಾಮಾ ಪ್ರಸಾದ್​ ಮುಖರ್ಜಿ ಅವರು ಪ್ರಾತಃಸ್ಮರಣೀಯರು. ಅಧಿಕಾರ ಮುಖ್ಯವಲ್ಲ, ಸಿದ್ಧಾಂತವೇ ಮುಖ್ಯವೆಂದು ಜನಸಂಘ ಸ್ಥಾಪಿಸಿ, ಹಿಂದುತ್ವಕ್ಕಾಗಿ ಜೀವ ಬಲಿದಾನ ಮಾಡಿದ ಧೀಮಂತ ನಾಯಕ ಎಂದು ಹಿರಿಯ ಲೆಕ್ಕ ಪರಿಶೋಧಕ ಗುಜ್ಜಾಡಿ ಪ್ರಭಾಕರ್​ ನಾಯ್ಕ್​ ಬಣ್ಣಿಸಿದರು.

    ಉಡುಪಿ ಕಡಿಯಾಳಿಯಲ್ಲಿರುವ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಸೋಮವಾರ ಆಯೋಜಿಸಿದ್ದ ಜನಸಂಘ ಸಂಸ್ಥಾಪಕ ಡಾ. ಶ್ಯಾಮಾ ಪ್ರಸಾದ್​ ಮುಖರ್ಜಿ ಯಶೋಗಾಥೆ ಕುರಿತು ಉಪನ್ಯಾಸ ನೀಡಿ ಮಾತನಾಡಿದರು.

    ಹಿಂದುಗಳ ಸಂರಕ್ಷಣೆಗೆ ಹೋರಾಟ

    ಡಾ. ಮುಖರ್ಜಿ ಅವರ ಜನನ, ಶಿಕ್ಷಣ, ರಾಜಕೀಯ ಕ್ಷೇತ್ರದ ಸಾಧನೆ, ಸಮರ್ಪಣಾ ಮನೋಭಾವ, ದೇಶ ವಿಭಜನೆಗಾಗಿ ಶೇಕ್​ ಅಬ್ದುಲ್ಲ ಹಾಗೂ ಜಿನ್ನಾ ಅವರ ಕುತಂತ್ರ, ನೆಹರು ಕುಮ್ಮಕ್ಕು, ಪಂಜಾಬ್​-ಬಂಗಾಲ ವಿಭಜನೆಗೆ ವಿರೋಧ, ಹೈದ್ರಾಬಾದ್​ ವಿಮೋಚನೆ, ಹಿಂದುಗಳ ಸಂರಕ್ಷಣೆಗೆ ಕೈಗೊಂಡ ಹೋರಾಟಗಳನ್ನು ಪ್ರಭಾಕರ್​ ನಾಯ್ಕ ಸಾಂದರ್ಭಿಕವಾಗಿ ವಿವರಿಸಿದರು.

    ಅಧ್ಯಕ್ಷತೆ ವಹಿಸಿದ್ದ ಬಿಜೆಪಿ ಜಿಲ್ಲಾಧ್ಯಕ್ಷ ಕಿಶೋರಕುಮಾರ್​ ಕುಂದಾಪುರ ಪ್ರಾಸ್ತಾವಿಕವಾಗಿ ಮಾತನಾಡಿದರು. ಉಪಾಧ್ಯಕ್ಷರಾದ ಪಾದಬೆಟ್ಟು ಪ್ರಕಾಶ್​ ಶೆಟ್ಟಿ, ಜಯರಾಮ್​ ಸಾಲಿಯಾನ್​, ಜಿಲ್ಲಾ ಮಹಿಳಾ ಮೋರ್ಚಾ ಅಧ್ಯೆ ಸಂಧ್ಯಾ ರಮೇಶ್​, ಶ್ಯಾಮಲಾ ಕುಂದರ್​, ನಳಿನಿ ಪ್ರದೀಪ್​, ಶಿವಕುಮಾರ್​ ಅಂಬಲಪಾಡಿ, ಗಿರೀಶ್​ ಅಂಚನ್​, ಪಕ್ಷದ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಪಾಲ್ಗೊಂಡಿದ್ದರು.

    ಜಿಲ್ಲಾ ಬಿಜೆಪಿ ಕಾರ್ಯಕರ್ತರು ಡಾ. ಶ್ಯಾಮಾ ಪ್ರಸಾದ್​ ಮುಖರ್ಜಿ ಭಾವಚಿತ್ರಕ್ಕೆ ಪುಷ್ಪ ಅರ್ಚಿಸಿದರು.

    ಮಾಧ್ಯಮ ಪ್ರಮುಖ್​ ಶ್ರೀನಿಧಿ ಹೆಗ್ಡೆ ಪರಿಚಯಿಸಿದರು. ಜಿಲ್ಲಾ ಪ್ರ.ಕಾರ್ಯದರ್ಶಿಗಳಾದ ದಿನಕರ ಶೆಟ್ಟಿ ಹೆರ್ಗ, ರೇಶ್ಮಾ ಯು. ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು.

    ಪ್ರಶ್ನೆಯಾಗಿಯೇ ಉಳಿದ ನಿಗೂಢ ಸಾವು

    ಕಾಶ್ಮೀರದಲ್ಲಿ ಪ್ರತ್ಯೇಕ ಧ್ವಜ, ಸಂವಿಧಾನ, ಪ್ರತ್ಯೇಕ ಪ್ರಧಾನಿ ವ್ಯವಸ್ಥೆ ಖಂಡಿಸಿ 1953ಲ್ಲಿ ಡಾ. ಮುಖರ್ಜಿ ದೇಶವ್ಯಾಪಿ ಹೋರಾಟ ಆರಂಭಿಸಿದರು. 1954 ಮೇ 11ರಂದು ಕಾಶ್ಮೀರದಲ್ಲಿ ನಡೆಯುತ್ತಿದ್ದ ಬೃಹತ್​ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದಾಗ, ಕಾಶ್ಮೀರ ಡಿಸಿ ಬಂದು ಶೇಖ್​ ಅಬ್ದುಲ್ಲ ನಿಮ್ಮೊಂದಿಗೆ ಮಾತನಾಡಲು ಬಯಸಿದ್ದು, ನನ್ನೊಂದಿಗೆ ಬನ್ನಿ ಎಂದು ಕಾರಿನಲ್ಲಿ ಕರೆದೊಯ್ದರು. ಅವರ ಸುಳಿವೇ ಸಿಗದ ರೀತಿಯಲ್ಲಿ ಗೃಹಬಂಧನದಲ್ಲಿಟ್ಟರು. ಬಳಿಕ ಕಾಶ್ಮೀರ ಸರ್ಕಾರ ಜೂನ್​ 23ರಂದು ಡಾ. ಮುಖರ್ಜಿ ನಿಧನರಾಗಿದ್ದಾರೆ ಎಂದು ಘೋಷಿಸಿದರು. ಅವರು ಹೇಗೆ ನಿಧನರಾದರು ಎನ್ನುವುದು ಇಂದಿಗೂ ನಿಗೂಢ ಪ್ರಶ್ನೆಯಾಗಿಯೇ ಉಳಿದಿದೆ ಎಂದು ಪ್ರಭಾಕರ್​ ನಾಯ್ಕ್​ ತಿಳಿಸಿದರು.

    ಜನಸಂಘಕ್ಕಾಗಿ, ಹಿಂದುತ್ವಕ್ಕಾಗಿ ತನ್ನ ಜೀವದೊಂದಿಗೆ ಸರ್ವಸ್ವವನ್ನೂ ತ್ಯಾಗ ಮಾಡಿದ ಡಾ. ಶ್ಯಾಮಾ ಪ್ರಸಾದ್​ ಮುಖರ್ಜಿ ಅವರ ಪರಿಶ್ರಮ ಬಿಜೆಪಿಯಲ್ಲಿರುವ ಇಂದಿನ ಯುವ ನಾಯಕರಿಗೆ ತಿಳಿದಿಲ್ಲ. ಓರ್ವ ರಾಜಕಾರಣಿ ಹೇಗಿರಬೇಕೆಂದು ತಿಳಿಸಲು ಅವರ ಪುಣ್ಯತಿಥಿ ಜೂ.23ರಿಂದ ಜನ್ಮದಿನವಾದ ಜು.6ರ ವರೆಗೂ ಪಕ್ಷದಿಂದ ವಿವಿಧ ಚಟುವಟಿಕೆ ಹಮ್ಮಿಕೊಳ್ಳಲಾಗಿದೆ.

    ಕಿಶೋರಕುಮಾರ್​ ಕುಂದಾಪುರ. ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts