More

    ಧಾರಕಾರ ಮಳೆಯಿಂದ ಹಲವೆಡೆ ಭೂ ಕುಸಿತ

    ಮೂಡಿಗೆರೆ: ತಾಲೂಕಿನಲ್ಲಿ ಕಳೆದೊಂದು ವಾರದಿಂದ ಸುರಿಯುತ್ತಿರುವ ಧಾರಕಾರ ಮಳೆಯಿಂದ ಕೆಲವು ಕಡೆ ವಿದ್ಯುತ್ ಕಂಬಗಳು ಬಿದ್ದು ವಿದ್ಯುತ್ ಸಮಸ್ಯೆ ಉಂಟಾಗಿದೆ. ಕೆಲವು ಕಡೆ ಭೂ ಕುಸಿತ ಉಂಟಾಗಿ ಸಂಚಾರಕ್ಕೆ ತೊಂದರೆಯಾಗಿದೆ. ಮಳೆ ಹೆಚ್ಚಾಗಿದ್ದರಿಂದ ಶುಕ್ರವಾರ ಪ್ರಾಥಮಿಕ ಮತ್ತು ಪ್ರೌಢ ಶಾಲೆ ಹಾಗೂ ಅಂಗನವಾಡಿಗೆ ರಜೆ ಘೋಷಿಸಲಾಗಿತ್ತು.
    ಊರುಬಗೆ, ಬೈರಾಪುರ, ಸತ್ತಿಗನಹಳ್ಳಿ, ಮೇಕನಗದ್ದೆ, ದೇವರುಂದ, ಹೊಸಳ್ಳಿ, ಹೊಸಕೆರೆ, ಹಳೆಕೆರೆ, ಗೌಡಳ್ಳಿ, ಬಿಳ್ಳೂರು, ಬೆಟ್ಟಗೆರೆ, ಮೂಲರಹಳ್ಳಿ, ಗುತ್ತಿ, ಕುಂದೂರು, ಸಾರಗೋಡು, ತಳವಾರ ಸೇರಿದಂತೆ ಪಶ್ಚಿಮ ಘಟ್ಟದ ತಪ್ಪಲಿನ ಅರಣ್ಯ ವ್ಯಾಪ್ತಿಯ ಗ್ರಾಮಗಳಲ್ಲಿ ಭಾರಿ ಮಳೆಯಾಗುತ್ತಿರುವುದರಿಂದ ಜನ ಜೀವನ ಅಸ್ತವ್ಯಸ್ತವಾಗಿದೆ. ಕಿರುಗುಂದ, ಬೆಟ್ಟದಮನೆ, ಜನ್ನಾಪುರ, ಹಂತೂರು, ಉಗ್ಗೆಹಳ್ಳಿ, ಅಂಗಡಿ, ಗೋಣಿಬೀಡು, ಕಮ್ಮರಗೋಡು, ಚಂದ್ರಪುರ, ಮಾಕೋನಹಳ್ಳಿ, ನಂದಿಪುರ, ಬಿಳಗುಳ ಭಾಗದಲ್ಲಿ ಕೆಲವೊಮ್ಮೆ ಬಿಡುವು ನೀಡಿದರೂ ಮತ್ತೆ ಧಾರಾಕಾರವಾಗಿ ಸುರಿಯುತ್ತಿದೆ.
    ಮಳೆ ಹೆಚ್ಚಾಗಿರುವುದರಿಂದ ಗ್ರಾಮೀಣ ಭಾಗದಲ್ಲಿ ವಿದ್ಯುತ್ ಆಗಾಗ ಕೈ ಕೊಡುತ್ತಿದೆ. ಗೋಣಿಬೀಡು ವ್ಯಾಪ್ತಿಗೆ ಮೂಡಿಗೆರೆ ಪಟ್ಟಣದಿಂದ ವಿದ್ಯುತ್ ಪೂರೈಕೆಯಾಗುವ ಒಂದು ಮಾರ್ಗ ಕಾಫಿ ತೋಟದೊಳಗೆ ಹಾದು ಹೋಗಿರುವುದರಿಂದ ಆಗಾಗ ಮರಗಳು ವಿದ್ಯುತ್ ತಂತಿ ಮೇಲೆ ಬಿದ್ದು, ವಿದ್ಯುತ್ ಪೂರೈಕೆ ಕಡಿತಗೊಳ್ಳುತ್ತಿದೆ. ಕಾಡುಬಳ್ಳಿಗಳು ವಿದ್ಯುತ್ ಕಂಬದ ತುದಿಯವರೆಗೂ ಹಬ್ಬಿರುವುದರಿಂದ ಸಮಸ್ಯೆಯಾಗುತ್ತಿದೆ. ವಿದ್ಯುತ ಕಡಿತದಿಂದ ಪಟ್ಟಣ ಸೇರಿದಂತೆ ಗ್ರಾಮೀಣ ಭಾಗಗಳಲ್ಲಿ ಕುಡಿಯುವ ನೀರಿಗೆ ತೀವ್ರ ತೊಂದರೆಯಾಗಿದೆ.
    119 ವರ್ಷ ಹಳೆಯದಾದ ಬೆಟ್ಟದಮನೆ ಹೇಮಾವತಿ ನದಿ ಸೇತುವೆ ಕಳೆದ ವರ್ಷ ಒಂದು ಭಾಗ ಕುಸಿದಿತ್ತು. ಈಗ ಅದೆ ಜಾಗದಲ್ಲಿ ಮತ್ತೆ ಕುಸಿತ ಉಂಟಾಗಿದ್ದು, ಪಿಡಬ್ಲ್ಯೂಡಿ ಅಧಿಕಾರಿಗಳು ತಾತ್ಕಾಲಿಕವಾಗಿ ದುರಸ್ತಿ ಪಡಿಸಿದ್ದಾರೆ. ಪಕ್ಕದಲ್ಲಿ ಹೊಸ ಸೇತುವೆ ನಿರ್ಮಾಣ ಕಾಮಗಾರಿ ಆರಂಭವಾಗಿ 8 ವರ್ಷ ಕಳೆದಿದ್ದರೂ ಕಾಮಗಾರಿ ಇನ್ನು ಮುಗಿದಿಲ್ಲ. ಮಳೆ ಆರಂಭವಾಗುವ ಮುನ್ನ ಹೊಸ ಸೇತುವೆ ಎರಡು ಬದಿ ರಸ್ತೆಗೆ ಮಣ್ಣು ಸುರಿದಿರುವುದರಿಂದ ಓಡಾಡಲು ದುಸ್ತರವಾಗಿದೆ. ಮೂಡಿಗೆರೆ-ಸಕಲೇಶಪುರ ರಸ್ತೆಯಲ್ಲಿ ಸಂಚರಿಸುವ ವಾಹನಗಳ ಪರಿಸ್ಥಿತಿ ಹೇಳ ತೀರದಾಗಿದೆ. ಕೊಲ್ಲಿಬೈಲ್ ನಿಂದ ಭೂತನಕಾಡು ಗ್ರಾಮಕ್ಕೆ ಹೋಗುವ ಜಿಪಂಗೆ ಸೇರಿದ ರಸ್ತೆಯಲ್ಲಿ ಮಳೆಯಿಂದ ಭೂಕುಸಿತ ಉಂಟಾಗಿದೆ. ಇದರಿಂದ ಈ ರಸ್ತೆಯಲ್ಲಿ ತೆರಳುವ ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರಿಗೆ ತೊಂದರೆಯಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts