More

    ಮುಸ್ಲಿಮರ ಸ್ಮಶಾನಕ್ಕೆ ಜಮೀನು: ಮಾಹಿತಿ ಕೇಳಿದ ಹೈಕೋರ್ಟ್

    ಬೆಂಗಳೂರು : ಬೆಂಗಳೂರು ದಕ್ಷಿಣ ತಾಲೂಕಿನ ಬೇಗೂರು ಗ್ರಾಮದಲ್ಲಿನ ಪುರಾತನ ಕಲ್ಯಾಣಿ ಮತ್ತು ಹಲವು ವರ್ಷಗಳ ಹಳೆಯ ಜಮೀನನ್ನು ಮುಸ್ಲಿಮರ ಸ್ಮಶಾನಕ್ಕಾಗಿ ಮಂಜೂರು ಮಾಡಿರುವ ಕ್ರಮ ಪ್ರಶ್ನಿಸಿರುವ ಅರ್ಜಿ ಸಂಬಂಧ ಸೂಕ್ತ ಮಾಹಿತಿ ಪಡೆದು ತಿಳಿಸುವಂತೆ ಸರ್ಕಾರಿ ವಕೀಲರಿಗೆ ಹೈಕೋರ್ಟ್ ನಿರ್ದೇಶನ ನೀಡಿದೆ.

    ಬೇಗೂರು ಗ್ರಾಮದ ಬಿ.ಎಲ್. ಶಿಲ್ಪ ಗಣೇಶ್ ಎಂಬುವರು ಸೇರಿ ಹಲವರು ಸಲ್ಲಿಸಿದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಸಿಜೆ ಎನ್.ವಿ. ಅಂಜಾರಿಯಾ ಮತ್ತು ನ್ಯಾಯಮೂರ್ತಿ ಕೆ.ವಿ. ಅರವಿಂದ್ ಅವರ ವಿಭಾಗೀಯ ಪೀಠ ವಿಚಾರಣೆ ನಡೆಸಿತು.

    ಅರ್ಜಿದಾರ ಪರವಾಗಿ ವಾದ ಮಂಡಿಸಿದ ಹಿರಿಯ ವಕೀಲ ಅಶೋಕ್ ಹಾರನಹಳ್ಳಿ, ಬೇಗೂರು ಗ್ರಾಮದ ಸರ್ವೇ ಸಂಖ್ಯೆ 359ರಲ್ಲಿ 1 ಎಕರೆ 26 ಗುಂಟೆ ಜಮೀನನ್ನು ಗುಂಡುತೋಪು, ಖರಾಬ್ ಜಮೀನು ಎಂಬುದಾಗಿ ಗುರುತಿಸಲಾಗಿದೆ. ಅಲ್ಲದೆ ಅದೇ ಜಾಗದಲ್ಲಿ ಕಲ್ಯಾಣಿ ಇರುವುದರಿಂದ ಈ ಗ್ರಾಮಸ್ಥರು ಜಾಗದ ಜತೆಗೆ ಭಾವನಾತ್ಮಕ ಹಾಗೂ ಧಾರ್ಮಿಕ ಬಂಧ ಹೊಂದಿದ್ದಾರೆ. ಕಲ್ಯಾಣಿಯ ಸುತ್ತಲೂ 11 ಬೃಹತ್ ಮರಗಳಿವೆ. ಸುತ್ತಲ ಕಟ್ಟಡಗಳಲ್ಲಿ ನಾಗೇಶ್ವರ, ನಂದಿ ಮತ್ತಿತರ ಮೂರ್ತಿಗಳಿವೆ. ಈ ಜಮೀನನ್ನು ಬ್ರಾಹ್ಮಣ ಮತ್ತು ಜೈನರ ಅಂತ್ಯಕ್ರಿಯೆಗಾಗಿ ಬಳಕೆ ಮಾಡಲಾಗುತ್ತಿದೆ ಎಂದು ನ್ಯಾಯಪೀಠದ ಗಮನಕ್ಕೆ ತಂದರು.

    ಈ ಜಮೀನನ್ನು ಹಸಿರು ಪ್ರದೇಶವನ್ನಾಗಿ ಸಂರಕ್ಷಣೆ ಮಾಡಬೇಕು. ಕಲ್ಯಾಣವನ್ನು ಪುನಶ್ಚೇತನ ಮಾಡಿ ಸುತ್ತಲ ಪ್ರದೇಶವನ್ನು ಸಾರ್ವಜನಿಕ ಉದ್ಯಾನವನ್ನಾಗಿ ಮಾಡುವಂತೆ ಸೂಚನೆ ನೀಡಬೇಕು. ಮಾತ್ರವಲ್ಲದೆ, ಮುಂದಿನ ಆದೇಶದ ವರೆಗೂ ಮುಸ್ಲಿಂ ಸಮುದಾಯಕ್ಕಾಗಿ ಮಂಜೂರು ಮಾಡಿರುವ ಈ ಸ್ಥಳದಲ್ಲಿ ಕಲ್ಯಾಣವನ್ನು ಮುಚ್ಚುವುದು, ಮರಗಳನ್ನು ಕಡಿಯುವುದು, ಯಾವುದೇ ರೀತಿಯ ಕಾಮಗಾರಿ ಮತ್ತು ಕಾಂಪೌಂಡ್ ಕಟ್ಟದಂತೆ ನಿರ್ದೇಶನ ನೀಡಬೇಕು ಎಂದು ಕೋರಿದರು.

    ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಸರ್ಕಾರಿ ವಕೀಲರಾದ ನೀಲೋಫರ್ ಅಕ್ಬರ್ ಯಾವ ಉದ್ದೇಶಕ್ಕಾಗಿ ಜಮೀನು ಮಂಜೂರು ಮಾಡಲಾಗಿದೆ ಎಂಬುದರ ಕುರಿತು ಮಾಹಿತಿ ಪಡೆಯಬೇಕಾಗಿದೆ. ಆದ್ದರಿಂದ ಸರ್ಕಾರದಿಂದ ಮಾಹಿತಿ ಪಡೆಯಲು ಕಾಲಾವಕಾಶ ನೀಡಬೇಕು ಎಂದು ಕೋರಿದರು. ಇದನ್ನು ಪರಿಗಣಿಸಿದ ನ್ಯಾಯಪೀಠ, ಅರ್ಜಿದಾರರ ಆರೋಪಕ್ಕೆ ಸಂಬಂಧಿಸಿದಂತೆ ಸೂಕ್ತ ಮಾಹಿತಿ ಪಡೆದು ತಿಳಿಸುವಂತೆ ನಿರ್ದೇಶನ ನೀಡಿ ವಿಚಾರಣೆಯನ್ನು ಮುಂದೂಡಿತು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts