More

    ಶಾಲೆಗೆ ಕೊಠಡಿ ಕೊರತೆ : ಹೆಬ್ರಿ ಶಾಲೆಯಲ್ಲಿ ದಾಖಲೆ ಸಂಖ್ಯೆ ವಿದ್ಯಾರ್ಥಿಗಳು ; 10 ತರಗತಿಗಳಿಗೆ ಬೇಡಿಕೆ

    ನರೇಂದ್ರ ಎಸ್.ಮರಸಣಿಗೆ ಹೆಬ್ರಿ

    ಸರ್ಕಾರಿ ಶಾಲೆಯಲ್ಲಿ ವಿದ್ಯಾರ್ಥಿಗಳು ಇಲ್ಲವೆಂದು ಕೆಲವೆಡೆ ಶಾಲೆಗಳು ಪಾಳುಬಿದ್ದರೆ, ಈ ಶಾಲೆಯಲ್ಲಿ ವಿದ್ಯಾರ್ಥಿಗಳು ತುಂಬಿ ಕೊಠಡಿ ಇಲ್ಲದೆ ಸಂಕಷ್ಟ ಅನುಭವಿಸುತ್ತಿದ್ದಾರೆ. ಇದು ಹೆಬ್ರಿ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ವ್ಯಥೆ. ಸರ್ಕಾರಿ ಶಾಲೆ ಎಂದರೆ ಮೂಗು ಮುರಿಯುವ ಈ ಕಾಲಘಟ್ಟದಲ್ಲಿ ದಾಖಲೆ ಸಂಖ್ಯೆಯ ವಿದ್ಯಾರ್ಥಿಗಳು ಶಾಲೆಯಲ್ಲಿದ್ದಾರೆ. ಸುಮಾರು 140 ವರ್ಷಗಳ ಇತಿಹಾಸ ಹೊಂದಿರುವ ಈ ಶಾಲೆಯಲ್ಲಿ ಈ ವರ್ಷ ಸುಮಾರು 650ಕ್ಕಿಂತ ಅಧಿಕ ವಿದ್ಯಾರ್ಥಿಗಳು ವಿದ್ಯಾರ್ಜನೆಗೆಯುತ್ತಿದ್ದಾರೆ. ಕೊಠಡಿ ಕೊರತೆಯಿಂದ ಸಂಕಷ್ಟದಲ್ಲಿ ತರಗತಿ ನಡೆಸಲಾಗುತ್ತಿದೆ.

    ಕೊಠಡಿ ಬೇಡಿಕೆ

    ಶಾಲೆಯಲ್ಲಿ ತರಗತಿಗಳು ಸಾಂಗವಾಗಿ ನಡೆಯಲು 10 ಕೊಠಡಿ ಬೇಡಿಕೆ ಇದೆ. ಸರ್ಕಾರದ ನಿಯಮದ ಪ್ರಕಾರ ಒಂದು ತರಗತಿಯಲ್ಲಿ 35ರಿಂದ 40 ಜನ ಕುಳಿತುಕೊಳ್ಳಬಹುದು. ಆದರೆ ಇಲ್ಲಿ 60ರಿಂದ 70 ವಿದ್ಯಾರ್ಥಿಗಳು ತರಗತಿಯಲ್ಲಿದ್ದಾರೆ.

    ಒಂದು ಹಾಲ್‌ನಲ್ಲಿ 5 ತರಗತಿ

    ಒಂದು ಹಾಲ್‌ನಲ್ಲಿ 5 ತರಗತಿ ಜೋಡಿಸಿಕೊಂಡು ಶಿಕ್ಷಕರು ಪಾಠ ಮಾಡುತ್ತಿದ್ದಾರೆ. ತರಗತಿಗಳು ಹತ್ತಿರ ಇರುವುದರಿಂದ, ಸಣ್ಣ ಮಕ್ಕಳಿಗೆ ಏಕಾಗ್ರತೆ ಕೊರತೆ ಉಂಟಾಗುತ್ತದೆ. ಶೀಘ್ರವಾಗಿ ಶಾಲೆಗೆ ಸರ್ಕಾರಿ ಕಟ್ಟಡ ನಿರ್ಮಿಸಬೇಕು ಎಂದು ಪಾಲಕರು ಆಗ್ರಹಿಸಿದ್ದಾರೆ.

    ಹಳೇ ವಿದ್ಯಾರ್ಥಿ ನೆರವು

    ಶಾಲೆ ವತಿಯಿಂದ ಹಳೇ ವಿದ್ಯಾರ್ಥಿ ಸಂಘಕ್ಕೆ 8 ಕೊಠಡಿ ಅವಶ್ಯಕತೆ ಇದೆ ಎಂದು ಬೇಡಿಕೆ ಇಟ್ಟಿದ್ದಾರೆ. ಹೆಬ್ರಿ ಉದ್ಯಮಿ ಸತೀಶ್ ಪೈ ಶಾಲೆ ಮೂಲ ಸೌಕರ್ಯಕ್ಕಾಗಿ ಸುಮಾರು 40 ಲಕ್ಷ ರೂ.ಗೂ ಅಧಿಕ ಮೊತ್ತ ವ್ಯಯಿಸಿದ್ದಾರೆ. ಎಲ್ಲರ ಬೇಡಿಕೆಯಂತೆ ಶಾಲೆಗೆ ಆದಷ್ಟು ಶೀಘ್ರ ಸುಸಜ್ಜಿತ ಕೊಠಡಿ ನಿರ್ಮಾಣದ ಅವಶ್ಯಕತೆ ಇದೆ.

    ಜನಪ್ರತಿನಿಧಿಗಳು ಗಮನಹರಿಸಲಿ

    ಶಾಲೆಗೆ ಅತ್ಯಂತ ತುರ್ತಾಗಿ ಕಟ್ಟಡ ನಿರ್ಮಿಸಬೇಕು. ಯಾವುದಾದರೂ ಅನುದಾನ ಒದಗಿಸಿಕೊಡಬೇಕು ಎಂದು ಪಾಲಕರು ಆಗ್ರಹಿಸಿದ್ದಾರೆ.
    ಶಾಲೆಗೆ ಹೆಚ್ಚುವರಿಯಾಗಿ 10 ಕೊಠಡಿ ಅವಶ್ಯಕತೆ ಇದೆ.

    ಮೇಲಾಧಿಕಾರಿಗಳ ಗಮನಕ್ಕೆ ತರಲಾಗಿದೆ. ಸದ್ಯಕ್ಕೆ ಒಂದು ಹಾಲ್‌ನಲ್ಲಿ 5 ತರಗತಿಗಳು ನಡೆಯುತ್ತಿದೆ. ದಾನಿಗಳ ಮೂಲಕ ಶಾಲೆಗೆ ಮೂಲಸೌಕರ್ಯ ಕಲ್ಪಿಸಲಾಗಿದೆ.
    -ಶರತ್, ಮುಖ್ಯಶಿಕ್ಷಕರು

    ಶತಮಾನ ಕಂಡ ಶಾಲೆಯಲ್ಲಿ ದಾಖಲೆ ಸಂಖ್ಯೆಯ ವಿದ್ಯಾರ್ಥಿಗಳಿದ್ದಾರೆ. ಆದ್ಯತೆ ನೆಲೆಯಲ್ಲಿ ಸುಮಾರು 10 ಕೊಠಡಿಗಳನ್ನು ಶೀಘ್ರವಾಗಿ ಶಿಕ್ಷಣ ಇಲಾಖೆ ನಮಗೆ ದೊರಕಿಸಿಕೊಡಬೇಕು. ಕೊಠಡಿ ಕೊರತೆಯಿಂದ ಪಾಠ ಪ್ರವಚನಗಳು ನಡೆಯಲು ಸಮಸ್ಯೆಯಾಗುತ್ತಿದೆ.
    -ತಿಪ್ಪೇಸ್ವಾಮಿ, ಎಸ್‌ಡಿಎಂಸಿ ಅಧ್ಯಕ್ಷ

    ಶಾಲೆಗೆ ಕೊಠಡಿ ಅಗತ್ಯದ ಕುರಿತು ಈಗಾಗಲೇ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಅನುಮೋದನೆ ದೊರೆತಿಲ್ಲ. ಶೀಘ್ರದಲ್ಲಿ ದೊರಕುವ ನಿರೀಕ್ಷೆ ಇದೆ.
    -ಗಣಪತಿ, ಡಿಡಿಪಿಐ, ಉಡುಪಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts