ತಾಳಿ ಕಟ್ಟುವ ವೇಳೆ ಕಣ್ಣೀರಿಟ್ಟ ಆರತಿ ಸಿಂಗ್! ಕೃಷ್ಣ-ಕಾಶ್ಮೀರ ದಂಪತಿಗೆ ಹಿಗ್ಗಾಮುಗ್ಗಾ ಜಾಡಿಸಿದ ನೆಟ್ಟಿಗರು

WhatsApp Image 2024-04-26 at 8.33.17 PM
Published on

ಮುಂಬೈ: ನಟಿ, ಹಿಂದಿ ಬಿಗ್ ಬಾಸ್​ ಸೀಸನ್​ 13ರ ಸ್ಪರ್ಧಿಯಾಗಿದ್ದ ಆರತಿ ಸಿಂಗ್ ತನ್ನ ಕುಟುಂಬಸ್ಥರು ನಿಶ್ಚಯಿಸಿದ ಉದ್ಯಮಿ ದೀಪಕ್ ಚೌಹಾಣ್ ಅವರೊಂದಿಗೆ ಇದೀಗ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದು, ಮಾಂಗಲ್ಯಧಾರಣೆ ವೇಳೆ ಕಣ್ಣೀರಿಟ್ಟ ದೃಶ್ಯ ಸದ್ಯ ಕ್ಯಾಮರಾದಲ್ಲಿ ಸೆರೆಯಾಗಿದೆ. ಇದಲ್ಲದೇ ನಟಿಯ ಮದುವೆಗೆ ಕೃಷ್ಣ-ಕಾಶ್ಮೀರ ದಂಪತಿ ಧರಿಸಿದ್ದ ಉಡುಗೆಯ ಬಣ್ಣ ನೋಡಿದ ನೆಟ್ಟಿಗರು ಸಾಮಾಜಿಕ ಜಾಲತಾಣದಲ್ಲಿ ಹಿಗ್ಗಾಮುಗ್ಗಾ ಜಾಡಿಸಿದ್ದಾರೆ.

ಹಿಂದೂ ವಿವಾಹಕ್ಕೆ ಬಿಳಿ ಬಟ್ಟೆಗಳನ್ನು ಧರಿಸಿದ್ದಕ್ಕಾಗಿ ದಂಪತಿಗಳನ್ನು ಟೀಕಿಸಿದ ನೆಟ್ಟಿಗರು, ಅವರ ವಿರುದ್ಧ ವ್ಯಾಪಕವಾಗಿ ಅಸಮಾಧಾನ ಹೊರಹಾಕಿದ್ದಾರೆ. ಏಪ್ರಿಲ್ 25, 2024ರಂದು ಜುಹುವಿನ ಇಸ್ಕಾನ್ ದೇವಸ್ಥಾನದಲ್ಲಿ ಮದುವೆಯಾದ ಈ ಜೋಡಿ, ಬಾಲಿವುಡ್​ ಗಣ್ಯರು ಸೇರಿದಂತೆ ಸ್ಟಾರ್​ ಕ್ರಿಕೆಟಿಗರ ಸಮ್ಮುಖದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಅದ್ದೂರಿ ಮದುವೆ ಸಮಾರಂಭದಲ್ಲಿ ಕೆಂಪು ಬಣ್ಣದ ಲೆಹೆಂಗಾದಲ್ಲಿ ಕಂಗೊಳಿಸಿದ ಆರತಿ, ನೋಡುಗರ ಕಣ್ಮನ ಸೆಳೆದರು.

ನಟಿಯ ಮದುವೆ ಸಮಾರಂಭದ ಹಲವಾರು ಫೋಟೋಗಳು ಮತ್ತು ವೀಡಿಯೊಗಳು ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಆರತಿ ಅಭಿಮಾನಿಗಳು ಹಾಗೂ ಸಿನಿ ತಾರೆಯರು ಶುಭಾಶಯಗಳನ್ನು ತಿಳಿಸಿದ್ದಾರೆ. ಇನ್ನು ತನ್ನ ವಿವಾಹದ ಬಗ್ಗೆ ಮನಬಿಚ್ಚಿ ಮಾತನಾಡಿದ ನಟಿ, "ಇದು ಕಂಪ್ಲೀಟ್ ಅರೆಂಜ್​ ಮ್ಯಾರೇಜ್​. ನಮ್ಮ ಕುಟುಂಬಸ್ಥರು ನಿಶ್ಚಯಿಸಿದ ಈ ಮದುವೆಗೆ ನಾನು ಒಪ್ಪಿಗೆ ಸೂಚಿಸಿದೆ. ಈ ವರ್ಷದ ಮೊದಲ ದಿನವೇ ಖುದ್ದಾಗಿ ದೀಪಕ್​ ನಮ್ಮಿಬ್ಬರ ಮದುವೆ ವಿಷಯವನ್ನು ನನ್ನೊಂದಿಗೆ ಪ್ರಸ್ತಾಪಿಸಿ, ಉಂಗುರ ತೊಡಿಸಿದರು" ಎಂದರು.

"ದೆಹಲಿಯಲ್ಲಿರುವ ನಮ್ಮ ಗುರೂಜಿಯವರ ದೇವಸ್ಥಾನದಲ್ಲಿ ಇಬ್ಬರು ಉಂಗುರ ಬದಲಿಸಿಕೊಂಡೆವು. ಆ ಸಂದರ್ಭವೇ ನನ್ನ ಎಂಗೇಜ್​ಮೆಂಟ್ ಎಂದು ಒಪ್ಪಿ, ನಮ್ಮ ಕುಟಂಬಸ್ಥರೊಂದಿಗೆ ಮದುವೆ ದಿನಾಂಕವನ್ನು ನಿಗದಿಪಡಿಸಿಕೊಂಡೆವು" ಎಂದು ಹೇಳಿದ್ದಾರೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net