More

    ಕೊಡಗು, ಕೇರಳ ಮಾಸ್ಟರ್ಸ್ ಹಾಕಿ ಪಂದ್ಯಕ್ಕೆ ತೆರೆ

    ಗೋಣಿಕೊಪ್ಪ : ಪೊನ್ನಂಪೇಟೆ ಟರ್ಫ್ ಮೈದಾನದಲ್ಲಿ ಮೊದಲ ಬಾರಿಗೆ ನಡೆದ ಕೊಡಗು – ಕೇರಳ ಮಾಸ್ಟರ್ಸ್ ಹಾಕಿ ಕಪ್‌ಗೆ ಭಾನುವಾರ ವರ್ಣರಂಜಿತ ತೆರೆ ಬಿತ್ತು. ಕಳೆದ ಮೂರು ದಿನಗಳಲ್ಲಿ ಮಹಿಳೆಯರು ಹಾಗೂ ಪುರುಷರು ಉತ್ತಮ ಪ್ರದರ್ಶನ ನೀಡುವ ಮೂಲಕ ಪ್ರೇಕ್ಷಕರ ಮನ ಗೆದ್ದರು. ಒಟ್ಟು 17 ತಂಡಗಳು ಭಾಗವಹಿಸಿದ್ದವು.


    ಅಂತಿಮ ಪಂದ್ಯದಲ್ಲಿ 30 ಮೇಲ್ಪಟ್ಟ ಮಹಿಳೆಯರ ವಿಭಾಗದಲ್ಲಿ ಕೂರ್ಗ್ ಲೆಜೆಂಡ್ ತಂಡವು ಕೇರಳ ಮಾಸ್ಟರ್ಸ್ ವಿರುದ್ಧ 1-0 ಗೋಲಿನ ಅಂತರದಿಂದ ಜಯಗಳಿಸಿ ಚಾಂಪಿಯನ್ ಪಟ್ಟ ಅಲಂಕರಿಸಿತು. 40 ವರ್ಷ ವಿಭಾಗದಲ್ಲಿ ವಯಸ್ಸಿನ ಮೇಲ್ಪಟ್ಟ ಮಹಿಳೆಯರ ವಿಭಾಗದಲ್ಲಿ ಕೂರ್ಗ್ ಬ್ಲಾಸ್ಟರ್ ತಂಡ ಕೇರಳ ಮಾಸ್ಟರ್ಸ್ ತಂಡವನ್ನು 4-2 ಗೋಲಿನ ಅಂತರದಿಂದ ಮಣಿಸಿ ವಿನ್ನರ್ಸ್ ಆಗಿ ಹೊರಹೊಮ್ಮಿತು.


    ಕೇರಳ ಮಾಸ್ಟರ್ಸ್ ತಂಡ ರನ್ನರ್ ಅಪ್ ಪ್ರಶಸ್ತಿಗೆ ತೃಪ್ತಿ ಪಟ್ಟುಕೊಂಡಿತ್ತು. 32 ವಯಸ್ಸಿನ ಮೇಲ್ಪಟ್ಟ ಪುರುಷರ ವಿಭಾಗದಲ್ಲಿ ಕೂರ್ಗ್ ಹಾಕ್ಸ್ ತಂಡವು ಕೊಣನಕಟ್ಟೆ ವಿರುದ್ಧ 1-0 ಅಂತರದ ಗೋಲು ಗಳಿಸಿ ಜಯ ನಗೆಬೀರಿತು. ಕೊಣನಕಟ್ಟೆ ತಂಡವು ರನ್ನರ್ಸ್ ಅಪ್ ಪಡೆಯಿತು.


    42 ವಯಸ್ಸಿನ ಮೇಲ್ಪಟ್ಟ ಪುರುಷರ ವಿಭಾಗದಲ್ಲಿ ಕೊಣಕಟ್ಟೆ ತಂಡವನ್ನು 5-0 ಗೋಲಿನ ಬಾರಿ ಅಂತರದಿಂದ ಸೋಲಿಸಿ ಕೂರ್ಗ್ ಹಾಕ್ಸ್ ತಂಡ ಮಾಸ್ಟರ್ಸ್ ಕಪ್ ಪ್ರಶಸ್ತಿ ಪಡೆದು ಚಾಂಪಿಯನ್ ಪಟ್ಟ ಪಡೆಯಿತು. ರನ್ನರ್ ಅಪ್ ಪ್ರಶಸ್ತಿಯನ್ನು ಕೊಣನಕಟ್ಟೆ ತಂಡವು ಪಡೆದುಕೊಂಡಿತು.


    ಕೊಡಗು – ಕೇರಳದ ನಡುವೆ ಮತ್ತಷ್ಟು ಸೌಹಾರ್ದತೆಯನ್ನು ಕ್ರೀಡೆಯ ಮೂಲಕ ಕಾಪಾಡಲು ಹಾಗೂ ಹಾಕಿ ಕ್ರೀಡೆಗೆ ಉತ್ತೇಜನ ನೀಡುವ ಸಲುವಾಗಿ ಇಂತಹ ಪ್ರಯತ್ನ ಆರಂಭದಲ್ಲಿಯೇ ಯಶಸ್ಸು ಲಭಿಸಿದೆ ಎಂದು ಒಲಿಂಪಿಯನ್ ಹಾಗೂ ಅರ್ಜುನ ಪ್ರಶಸ್ತಿ ವಿಜೇತ ಅಂಜಪರವಂಡ ಬಿ.ಸುಬ್ಬಯ್ಯ ಹೇಳಿದರು.
    ಮೇಕೆರಿರ ಬೆಲ್ಲು ಕುಟ್ಟಪ್ಪ ಮೊದಲ ಪ್ರಯತ್ನದಲ್ಲಿ ಕೇರಳ ರಾಜ್ಯದ ತಂಡವನ್ನು ಕೊಡಗಿಗೆ ತರುವ ಮೂಲಕ ವಯಸ್ಕರ ನಡುವೆ ಹಾಕಿ ಆಟ ಪ್ರದರ್ಶನ ನೀಡಿದ್ದಾರೆ. ಇದರಿಂದ ಯುವಕರಲ್ಲಿ ಹಾಕಿ ಕ್ರೀಡೆಗೆ ಇನ್ನಷ್ಟು ಪ್ರೋತ್ಸಾಹ ನೀಡಿದಂತಾಗುತ್ತದೆ. ಇಂತಹ ಕ್ರೀಡೆ ನಿರಂತರವಾಗಿ ನಡೆಯಲಿ ಎಂದು ಆಶಿಸಿದರು.


    ಆಯೋಜಕರಾದ ಮೇಕೇರಿರ ಬೆಲ್ಲು ಕುಟ್ಟಪ್ಪ ಮಾತನಾಡಿ, ಹೊರ ದೇಶದಲ್ಲಿ ಇದ್ದರೂ ಹಾಕಿ ಆಟ ಮತ್ತಷ್ಟು ಜೀವಂತವಾಗಿಸುವ ಪ್ರಯತ್ನದಲ್ಲಿ ಕೊಡಗಿನಲ್ಲಿ ಮೊದಲ ಪ್ರಯತ್ನ ಮಾಡಲಾಗಿದೆ. ಪ್ರತಿ ವರ್ಷವೂ ಈ ಪ್ರಯತ್ನ ಮುಂದುವರಿಯಲಿದೆ ಎಂದರು.


    ಮಾಜಿ ಒಲಿಂಪಿಯನ್ ಸಿ.ಎಸ್.ಪೂಣಚ್ಚ, ಕೊಡವ ಹಾಕಿ ಅಕಾಡೆಮಿ ಅಧ್ಯಕ್ಷ ಪಾಂಡಂಡ ಬೋಪಣ್ಣ, ಹಾಕಿ ಕೂರ್ಗ್ ಅಧ್ಯಕ್ಷ ಪಳಂಗಡ ಲವಾ, ಹಾಕಿ ಅಕಾಡೆಮಿ ಸದಸ್ಯರಾದ ಸುರೇಶ್, ಸೋಮಯ್ಯ ಹಾಗೂ ಕುಂಡ್ಯೋಳಂಡ ಹಾಕಿ ನಮ್ಮೆ ಅಧ್ಯಕ್ಷ ರಮೇಶ್, ಸಂಚಾಲಕ ದಿನೇಶ್ ಕಾರ್ಯಪ್ಪ, ಕೇರಳ ಹಾಕಿ ಕಾರ್ಯದರ್ಶಿ ಸಿ.ಟಿ.ಶೋಜಿ, ಕೇರಳದ ಶಾಲಿ ತಾಚರ್ ಸೇರಿದಂತೆ ಗಣ್ಯರು ಮಾತನಾಡಿದರು.


    ತೀರ್ಪುಗಾರರಾಗಿ ಕೌಶಿಕ್, ಸೋಮಣ್ಣ ಹಾಗೂ ತೃಪ್ತಿ ಪೊನ್ನಮ್ಮ ಕಾರ್ಯ ನಿರ್ವಹಿಸಿದರು. ಚೆಪ್ಪುಡೀರ ಕಾರ್ಯಪ್ಪ, ಚೋಕಿರ ಅನಿತಾ ಹಾಗೂ ಕೇರಳದ ಶಾಲಿ ತಾಚರ್ ವೀಕ್ಷಕ ವಿವರಣೆ ನೀಡಿದರು. ಅಂತಾರಾಷ್ಟ್ರೀಯ ಹಾಕಿ ಕ್ರೀಡಾಪಟುಗಳು, ಒಲಿಂಪಿಯನ್ ಗಳು ಈ ಪಂದ್ಯಾವಳಿಯಲ್ಲಿ ಭಾಗವಹಿಸಿದ್ದರು.
    ವಿಜೇತ ತಂಡಗಳಿಗೆ ಹೊರ ದೇಶದಲ್ಲಿ ಪಂದ್ಯಾವಳಿಯಲ್ಲಿ ಭಾಗವಹಿಸುವ ಅವಕಾಶ ಕಲ್ಪಿಸಲಾಯಿತು. ಮಳೆಯ ನಡುವೆ ಪೊನ್ನಂಪೇಟೆ ಟರ್ಫ್ ಮೈದಾನದಲ್ಲಿ ಪಂದ್ಯಾವಳಿಯು ರೋಚಕವಾಗಿ ನಡೆಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts