More

    ಕೆಐಎ ಪರ್ಯಾಯ ಮಾರ್ಗ ಅಯೋಮಯ

    ಆರ್​.ತುಳಸಿಕುಮಾರ್​
    ಬೆಂಗಳೂರು: ಮಹಾನಗರದಿಂದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ (ಕೆಐಎ) ತಲುಪಲು ಬಳ್ಳಾರಿ ರಸ್ತೆಗೆ ಸಮಾನಾಂತರವಾಗಿ ನಿರ್ಮಿಸಿರುವ ಪರ್ಯಾಯ ಮಾರ್ಗ ಸೂಕ್ತ ನಿರ್ವಹಣೆ ಇಲ್ಲದೆ ಸೊರಗಿದೆ. ಏಳೆಂಟು ವರ್ಷಗಳ ಹಿಂದೆಯಷ್ಟೇ ನಿರ್ಮಿಸಿರುವ ಈ ಮಾರ್ಗವು ಈಗ ಹಳ್ಳಿಗಾಡಿನ ರಸ್ತೆಯಾಗಿ ಮಾರ್ಪಟ್ಟಿದೆ. ಇದರಿಂದಾಗಿ ಪರ್ಯಾಯ ಮಾರ್ಗ ಏರ್‌ಪೋರ್ಟ್‌ಗೆ ತೆರಳುವ ವಾಹನ ಚಾಲಕರಿಗೆ ದು:ಸ್ವಪ್ನವಾಗಿ ಕಾಡುತ್ತಿದೆ.

    ವರ್ತುಲ ರಸ್ತೆಯ ಹೆಣ್ಣೂರಿನಿಂದ ಕಣ್ಣೂರು, ಬಾಗಲೂರು ಮೂಲಕ ಏರ್‌ಪೋರ್ಟ್‌ವರೆಗಿನ ರಸ್ತೆಯನ್ನು ಪರ್ಯಾಯ ಮಾರ್ಗವನ್ನಾಗಿ ಗುರುತಿಸಲಾಗಿದೆ. ಆರು ಪಥಗಳ ಈ ಮಾರ್ಗವು 26 ಕಿ.ಮೀ. ಉದ್ದವಿದ್ದು, ಆರಂಭದಲ್ಲಿ ಟ್ಯಾಕ್ಸಿ ಚಾಲಕರು ಸೇರಿದಂತೆ ವಾಹನ ಸವಾರರನ್ನು ತನ್ನತ್ತ ಸೆಳೆದಿತ್ತು. ವರ್ಷಗಳು ಉರುಳಿದಂತೆ ನಿರ್ವಹಣೆ ಮಾಡದ ಕಾರಣ ಈ ಮಾರ್ಗವು ಹಾಳಾಗಿದ್ದು, ವಾಹನ ಚಲಾಯಿಸಲು ಸಾಧ್ಯವಾಗದ ಸ್ಥಿತಿ ನಿರ್ಮಾಣವಾಗಿದೆ.

    ಮಾರ್ಗದ ಉದ್ದಕ್ಕೂ ಅಡಿಗಡಿಗೂ ಗುಂಡಿಗಳು ಉಂಟಾಗಿವೆ. ಅರ್ಧ ಕಿ.ಮೀ.ಗೊಂದರಂತೆ ಮೀಡಿಯನ್‌ಗಳನ್ನು ತೆರವುಗೊಳಿಸಿ ತಿರುವುಗಳಿಗೆ ಅವಕಾಶ ಮಾಡಿಕೊಡಲಾಗಿದೆ. ಪಾಲಿಕೆ ಗಡಿ ಮುಕ್ತಾಯವಾಗುತ್ತಿದ್ದಂತೆ ರಸ್ತೆಯ ಎರಡೂ ಬದಿ ಕಸದ ರಾಶಿಯೇ ಬಿದ್ದಿದೆ. ಕೇಬಲ್ ಅಳವಡಿಸಲು ಹಾಗೂ ಇನ್ನಿತರ ಕಾರಣಕ್ಕಾಗಿ ರಸ್ತೆಅಗೆತ ಬಳಿಕ ರಸ್ತೆಯನ್ನು ಸರಿಪಡಿಸುವ ಕೆಲಸ ಆಗಿಯೇ ಇಲ್ಲ. ಜತೆಗೆ ರಸ್ತೆ ಬದಿ ಗಿಡ-ಗಂಟಿ, ಕಳೆ ಸಸ್ಯಗಳು ಬೆಳೆದು ರಾತ್ರಿ ಸಂಚಾರವನ್ನು ದುಸ್ತರಗೊಳಿಸಿದೆ. ರಸ್ತೆ ನಿರ್ವಹಣೆ ಮಾಡದಿದ್ದರೂ, ಫ್ಲೆಕ್ಸ್, ಜಾಹೀರಾತು ಫಲಕಗಳು ಎಗ್ಗಿಲ್ಲದೆ ಪ್ರದರ್ಶಿಸಲಾಗಿದೆ. ಇಡೀ ಮಾರ್ಗದಲ್ಲಿ ವಾಹನ ಚಾಲಕರು ರಕ್ಷಣೆ ಇಲ್ಲದೆ ಸಂಚರಿಸಬೇಕಿರುವುದು ಪರ್ಯಾಯ ಮಾರ್ಗದ ಆಶಯವನ್ನೇ ಪ್ರಶ್ನಿಸುವಂತಾಗಿದೆ.

    ನಿರ್ವಹಣೆಗೆ ಪಿಡಬ್ಲ್ಯುಡಿ ಹಿಂದೇಟು?:

    ಕೆಐಎ ಪರ್ಯಾಯ ಮಾರ್ಗವನ್ನು ಲೋಕೋಪಯೋಗಿ ಇಲಾಖೆ (ಪಿಡಬ್ಲ್ಯುಡಿ) ನಿರ್ಮಿಸಿ ನಿರ್ವಹಿಸುತ್ತಿದೆ. ಕೋವಿಡ್ ಸಾಂಕ್ರಾಮಿಕದ ಬಳಿಕ ನಿರ್ವಹಣೆ ವಿಚಾರದಲ್ಲಿ ಇಲಾಖೆ ಸಮರ್ಪಕವಾಗಿ ಕೆಲಸ ಮಾಡುತ್ತಿಲ್ಲ. ಅಲ್ಲಲ್ಲಿ ಗುಂಡಿ ಬಿದ್ದರೂ, ಅವುಗಳನ್ನು ಮುಚ್ಚದ ಕಾರಣ ನಂತರದ ದಿನಗಳಲ್ಲಿ ದೊಡ್ಡ ಹೊಂಡಗಳಾಗಿ ಮಾರ್ಪಡುತ್ತಿವೆ. ರಸ್ತೆಬದಿ ಮಣ್ಣು, ಮರಳು ತುಂಬಿದ್ದು ಸ್ವಚ್ಚಗೊಳಿಸದೆ ಹಾಗೆಯೇ ಬಿಡಲಾಗಿದೆ. ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ ಜಿಲ್ಲೆಗಳ ಕೆರೆಗಳಿಗೆ ನೀರು ತುಂಬಿಸುವ ಭಾರೀ ಕೊಳವೆಗಳನ್ನು ಈ ಮಾರ್ಗದ ಬದಿಯೇ ಹಾಕಲಾಗಿದೆ. ಪೈಪ್‌ಲೇನ್ ಅಳವಡಿಸಿದ ಬಳಿಕ ಅಗೆದ ಭಾಗವನ್ನು ಸರಿಯಾಗಿ ಮುಚ್ಚಿಲ್ಲ. ತ್ರೈಮಾಸಿಕ ಸ್ವಚ್ಚತೆ ಕಾರ್ಯವನ್ನು ಕೈಗೆತ್ತಿಕೊಳ್ಳದ ಕಾರಣ ಪರ್ಯಾಯ ಮಾರ್ಗ ಅನಾಥವಾಗಿದೆ ಎಂದು ಬಾಗಲೂರು ಗ್ರಾಮಸ್ಥರು ದೂರಿದ್ದಾರೆ.

    ಅಪೂರ್ಣ ಕಾಮಗಾರಿ:

    ಬಾಗಲೂರು ಬಳಿಯ ಬಂಡಿಕೊಡಿಗೇಹಳ್ಳಿ, ಮೈಲನಹಳ್ಳಿ ಕ್ರಾಸ್, ಚಾಗಲಟ್ಟಿ ಗ್ರಾಮದ ಬಳಿ ರಸ್ತೆ ಕಾಮಗಾರಿ ಈವರೆಗೂ ಪೂರ್ಣಗೊಂಡಿಲ್ಲ. ಭೂಸ್ವಾಧೀನ ಸಮಸ್ಯೆಯಿಂದಾಗಿ 10 ವರ್ಷಗಳೇ ಕಳೆದಿದ್ದರೂ ಪಿಡಬ್ಲ್ಯುಡಿ ಹಾಗೂ ಕೆಆರ್‌ಡಿಎಲ್ ತಮ್ಮ ಹೊಣೆ ನಿರ್ವಹಿಸಲ್ಲ. ಪಾಲಿಕೆ ಮಿತಿಯಲ್ಲಿ ರಸ್ತೆ ಉತ್ತಮವಾಗಿದ್ದರೂ, ರಸ್ತೆಬದಿ ಪಾರ್ಕಿಂಗ್ ಸವಾರರನ್ನು ಕಾಡುತ್ತಿದೆ. ಗೆದ್ದಲಹಳ್ಳಿ ಬಳಿ ರೈಲ್ವೆ ಅಂಡ್‌ಪಾಸ್ ಕಿರಿದಾಗಿದ್ದು, ಒಮ್ಮೆಲೆ ಎರಡೂ ಬದಿ ತಲಾ ಒಂದು ವಾಹನ ಮಾತ್ರ ಸಂಚರಿಸಬಹುದಾಗಿದೆ. ಅಂಡ್‌ಪಾಸ್ ವಿಸ್ತರಣೆಗೆ ಪಾಲಿಕೆ ಮುಂದಾಗಿದ್ದರೂ, ರೈಲ್ವೆ ಇಲಾಖೆ ಒಪ್ಪಿಗೆ ನೀಡದಿರುವುದು ಸಮಸ್ಯೆಯನ್ನು ಜೀವಂತ ಇಟ್ಟಿದೆ ಎಂದು ಸ್ಥಳೀಯರು ಆಕ್ಷೇಪಿಸಿದ್ದಾರೆ.

    ರಸ್ತೆ ದುರಸ್ತಿಗೆ ಶಾಸಕರ ನಿರ್ಲಕ್ಷ್ಯ?:

    ಹೆಣ್ಣೂರಿನಿಂದ ಏರ್‌ಪೋರ್ಟ್‌ವರೆಗೆ ಸಾಗುವ ರಸ್ತೆಯ ಪ್ರದೇಶವು ಸರ್ವಜ್ಞನಗರ, ಮಹದೇವಪುರ ಹಾಗೂ ಬ್ಯಾಟರಾಯನಪುರ ವಿಧಾನಸಭಾ ಕ್ಷೇತ್ರಕ್ಕೆ ಒಳಪಟ್ಟಿವೆ. ಇಲ್ಲಿನ ಶಾಸಕರು ಸಂಬಂಧಿಸಿದ ಇಲಾಖೆ ಮೇಲೆ ಒತ್ತಡ ಹೇರಿ ರಸ್ತೆ ದುರಸ್ತಿಪಡಿಸಲು ಪ್ರಯತ್ನಪಡುತ್ತಿಲ್ಲ. ಅದರಲ್ಲೂ ಇಬ್ಬರು ಸಚಿವರಾದ ಕೆ.ಜೆ.ಜಾರ್ಜ್, ಕೃಷ್ಣಬೈರೇಗೌಡ ಸಚಿವರಾಗಿದ್ದರೂ, ತಮ್ಮದೇ ಕ್ಷೇತ್ರದ ಜನರ ಅಹವಾಲಿಗೆ ಸ್ಪಂದಿಸುತ್ತಿಲ್ಲ ಎಂಬ ಆಕ್ಷೇಪ ಇದೆ. ನಗರದ ಪೂರ್ವ ಭಾಗ ಹಾಗೂ ಈ ಮಾರ್ಗದುದ್ದಕ್ಕೂ ಇರುವ ಹಲವು ಗ್ರಾಮ, ಬಡಾವಣೆಗಳ ಜನರ ಪ್ರಮುಖ ಸಂಪರ್ಕ ರಸ್ತೆಯಾಗಿದ್ದರೂ ಸುಗಮ ಸಂಚಾರಕ್ಕೆ ಅವಕಾಶ ಮಾಡಿಕೊಟ್ಟಿಲ್ಲವೆಂಬ ಟೀಕೆ ವ್ಯಕ್ತವಾಗಿದೆ.

    ರಸ್ತೆಬದಿ ಟ್ಯಾಕ್ಸಿ ನಿಲುಗಡೆ:

    ಏರ್‌ಪೋರ್ಟ್‌ಗೆ ಅತಿ ಸನಿಹದಲ್ಲಿರುವ ಬೇಗೂರು, ಚಕ್ಕನಹಳ್ಳಿ ಮೈಲನಹಳ್ಳಿ ಬಳಿ ರಸ್ತೆ ಬದಿಯೇ ನೂರಾರು ಟ್ಯಾಕ್ಸಿ ವಾಹನಗಳು ನಿಲುಗಡೆ ಮಾಡಲಾಗುತ್ತಿದೆ. ದಿನವಿಡೀ ಈ ವಾಹನಗಳು ಅಲ್ಲಿಯೇ ನಿಲ್ಲುವ ಕಾರಣ ವಾಹನ ಸಂಚಾರಕ್ಕೆ ಅಡ್ಡಿಯಾಗುತ್ತಿದೆ. ದಾಳಮ್ಮ ಸರ್ಕಲ್ ಬಳಿ ಸಿಗ್ನಲ್ ಇದ್ದರೂ ಸಂಚಾರ ಹಳಿ ತಪ್ಪಿದೆ. ಮಳೆ ಬಂದಾಗಲಂತೂ ಹೆಚ್ಚು ವಾಹನಗಳು ರಸ್ತೆಬದಿ ನಿಲ್ಲಿಸುವುದರಿಂದ ತುರ್ತಾಗಿ ಏರ್‌ಪೋರ್ಟ್ ತಲುಪಲು ಸಮಸ್ಯೆಯಾಗುತ್ತಿದೆ ಎಂಬ ದೂರು ಕೇಳಿಬಂದಿದೆ.

    ಎಲ್ಲೆಲ್ಲಿ ಸಮಸ್ಯೆ?:
    * ರಿಂಗ್ ರಸ್ತೆಯ ಹೆಣ್ಣೂರು ಜಂಕ್ಷನ್
    * ಗೆದ್ದಲಹಳ್ಳಿ ರೈಲ್ವೆ ಅಂಡರ್‌ಪಾಸ್
    * ಕೊತ್ತನೂರು-ಕೆ.ನಾರಾಯಣಪುರ ಕೂಡು ರಸ್ತೆ
    * ಕಣ್ಣೂರು ಗ್ರಾಮ ಜಂಕ್ಷನ್
    * ಮಿಟ್ಟಗಾನಹಳ್ಳಿ ಗೇಟ್ ಜಂಕ್ಷನ್
    * ಬಾಗಲೂರು ಜಂಕ್ಷನ್
    * ಬಂಡಿಕೊಡಿಗೇಹಳ್ಳಿ ಗ್ರಾಮ
    * ಮೈಲನಹಳ್ಳಿ
    * ದಾಳಮ್ಮ ಸರ್ಕಲ್

    ಬಾಗಲೂರು ಮೂಲಕ ಏರ್‌ಪೋರ್ಟ್‌ಗೆ ತೆರಳುವ ರಸ್ತೆ ತೀರಾ ಹಾಳಾಗಿದೆ. ರಸ್ತೆಗುಂಡಿಗಳಿರುವ ಕಾರಣ ವಾಹನ ಚಲಾಯಿಸಲು ಕಷ್ಟವಾಗುತ್ತಿದೆ. ದುರಸ್ತಿಪಡಿಸುವಂತೆ ಕೋರಿ 4-5 ತಿಂಗಳೇ ಹಿಂದೆಯೇ ಪಿಡಬ್ಲುೃಡಿ ಇಲಾಖೆಗೆ ಮನವಿಪತ್ರ ಸಲ್ಲಿಸಿದ್ದರೂ ಈವರೆಗೂ ರಸ್ತೆ ಸರಿಪಡಿಸಿಲ್ಲ.
    – ಬಿ. ಸುರೇಶಕುಮಾರ್​, ಬಾಗಲೂರು

    ಸರ್ಕಾರ ಏಳೆಂಟು ವರ್ಷಗಳ ಹಿಂದೆ ಏರ್‌ಪೋರ್ಟ್‌ಗೆ ಪರ್ಯಾಯ ರಸ್ತೆ ಅಭಿವೃದ್ಧಿಪಡಿಸಿತ್ತು. ಈಗ ಆ ರಸ್ತೆಯಲ್ಲಿ ವಾಹನ ಚಲಾಯಿಸಲು ಸಾಧ್ಯವಾಗದ ಸ್ಥಿತಿ ಇದೆ. ಬಹಳಷ್ಟು ಕಡೆ ಗುಂಡಿಗಳು ಉಂಟಾಗಿ ರಾತ್ರಿ ವೇಳೆ ಸಮಸ್ಯೆಯಾಗುತ್ತಿದೆ. ಅಲ್ಲಲ್ಲಿ ಬೀದಿದೀಪ ಇಲ್ಲದಿರುವುದು ಟ್ಯಾಕ್ಷಿ ಓಡಿಸಲು ಭಯವಾಗುತ್ತದೆ.
    – ಮೂರ್ತಿ, ಎಸ್.ಜಿ., ಟ್ಯಾಕ್ಸಿ ಚಾಲಕ, ಸಾತನೂರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts