More

    ಕೆಂಪೇಗೌಡರಿಂದ ಕರ್ನಾಟಕ್ಕೆ ವಿಶ್ವಮಾನ್ಯತೆ

    ಮೈಸೂರು: ಕರ್ನಾಟಕಕ್ಕೆ ವಿಶ್ವಮಾನ್ಯತೆ ತಂದುಕೊಟ್ಟವರಲ್ಲಿ ನಾಡಪ್ರಭು ಕೆಂಪೇಗೌಡರು ಮೊದಲಿಗರು ಎಂದು ಸಾಹಿತಿ ಡಾ.ಸಿ.ಪಿ.ಕೃಷ್ಣಕುಮಾರ್ ಹೇಳಿದರು.


    ಅಖಿಲ ಕರ್ನಾಟಕ ಒಕ್ಕಲಿಗರ ಮಹಾಸಭಾ ಹಾಗೂ ಅಲೆಯನ್ಸ್ ಕ್ಲಬ್ ಆಫ್ ಮೈಸೂರ್ ನಾಲ್ವಡಿ ಸಹಯೋಗದಲ್ಲಿ ಶಿವರಾಮಪೇಟೆಯಲ್ಲಿರುವ ಸಂಘದ ಕಚೇರಿಯಲ್ಲಿ ಗುರುವಾರ ನಡೆದ ನಾಡಪ್ರಭು ಕೆಂಪೇಗೌಡರ 515 ನೇ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.


    ಕೆಂಪೇಗೌಡರು ಯುದ್ಧಪ್ರಿಯರಾಗಿರದೆ ಧರ್ಮಪ್ರಭುವಾಗಿದ್ದರು. ತಮ್ಮ ಸಮಾಜದ ಸೇವೆಯಿಂದಲೇ ನಾಡಿನಾದ್ಯಂತ ಮನೆಮಾತಾದವರು. ಬೆಂಗಳೂರು ಇಂದು ಅಪಾರ ಸಂಪತ್ತನ್ನು ಹೊಂದಿಕೊಂಡು ರಾಜಧಾನಿಯಾಗಿ ಕೋಟಿ ಜನರಿಗೆ ನೆರಳು ಕೊಡಲು ಕೆಂಪೇಗೌಡರ ಶ್ರಮ ಕಾರಣವಾಗಿದೆ. ರಾಜ್ಯದ ಜನತೆ ಅವರನ್ನು ಎಂದಿಗೂ ಮರೆಯಬಾರದು ಎಂದು ಹೇಳಿದರು.


    ಅಲಯನ್ಸ್ ಕ್ಲಬ್ ಆಫ್ ಇಂಟರ್‌ನ್ಯಾಷನಲ್ ನಿರ್ದೇಶಕ ಡಾ.ನಾಗರಾಜ ವಿ. ಭೈರಿ ಮಾತನಾಡಿ, ಕೆಂಪೇಗೌಡರು 1537ರಲ್ಲಿ ಬೆಂಗಳೂರಿಗೆ ಅಡಿಗಲ್ಲು ಇಟ್ಟರು. ಇನ್ನು 15 ವರ್ಷ ಕಳೆದರೆ ಬೆಂಗಳೂರಿಗೆ 500 ವರ್ಷ ತುಂಬುತ್ತದೆ. ಕೆಂಪೇಗೌಡರು ಯಲಹಂಕದ ಪ್ರಭುಗಳಾಗಿದ್ದರು.

    ಉತ್ತರಕ್ಕೆ ಶಿವಗಂಗೆ ದಕ್ಷಿಣಕ್ಕೆ ದೊಮ್ಮಲೂರನ್ನು ವಶಪಡಿಸಿಕೊಂಡು, ಇದರ ಮಧ್ಯೆ ಒಂದು ನಾಡನ್ನು ಕಟ್ಟಬೇಕೆಂದು ಕನಸನ್ನು ಕಂಡು ಬೆಂಗಳೂರಿಗೆ ಅಡಿಗಲ್ಲನ್ನು ಇಟ್ಟರು ಅವತ್ತಿನ ಕಾಲದಲ್ಲಿ ಎಲ್ಲ ವರ್ಗದ ದುಡಿಮೆ ಉದ್ಯಮಗಳಿಗೆ ಎಲ್ಲ ತರದ ಪೇಟೆಗಳನ್ನು ನಿರ್ಮಿಸಿದರು. ಆಗಿನ ಕಾಲದಲ್ಲಿ ಗಡಿಗಳನ್ನು ಗುರುತಿಸಿ ಸಾವಿರಾರು ಕೆರೆಕಟ್ಟಿಗಳನ್ನು ನಿರ್ಮಿಸಿದರು ಎಂದರು.


    ಕಸಾಪ ಮಾಜಿ ಜಿಲ್ಲಾಧ್ಯಕ್ಷ ಡಾ.ವೈ.ಡಿ.ರಾಜಣ್ಣ ಮಾತನಾಡಿ, ಕೆಂಪೇಗೌಡ ಅಭಿವೃದ್ಧಿ ಪ್ರಾಧಿಕಾರ ನಾಡಪ್ರಭು ಕೆಂಪೇಗೌಡರ ಸಾಧನೆಗಳನ್ನು ಮುಂದಿನ ಪೀಳಿಗೆಗೆ ತಿಳಿಸುವಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದರ ಮೂಲಕ ಕೆಂಪೇಗೌಡರ ಪರಂಪರೆ ಎಲ್ಲರಿಗೂ ತಿಳಿಯುವಂತಾಗಲಿ ಎಂದು ಹೇಳಿದರು.


    ಕಸಾಪ ಮಾಜಿ ಜಿಲ್ಲಾಧ್ಯಕ್ಷ ಚಂದ್ರಶೇಖರ್, ಮಹಾಸಭಾದ ಪ್ರಧಾನ ಕಾರ್ಯದರ್ಶಿ ಡಾ. ಇ.ಸಿ.ನಿಂಗರಾಜ್ ಗೌಡ, ಅಲಯನ್ಸ್ ಕ್ಲಬ್ ಇಂಟರ್ ನ್ಯಾಷನಲ್ ಮೈಸೂರು ಜಿಲ್ಲಾ ರಾಜ್ಯಪಾಲ ಸಿರಿ ಬಾಲು, ಸಂಸ್ಥೆ ಅಧ್ಯಕ್ಷ ಬೆಟ್ಟೇಗೌಡ ಮಾತನಾಡಿದರು.


    ಮಹಾಸಭಾ ಕೋಶಾಧ್ಯಕ್ಷ ಎಂ.ಎನ್.ಚಂದ್ರಶೇಖರ್, ಉಪಾಧ್ಯಕ್ಷೆ ಲಕ್ಷ್ಮೀದೇವಿ, ಜೆಡಿಎಸ್ ಜಿಲ್ಲಾಧ್ಯಕ್ಷ ನರಸಿಂಹಸ್ವಾಮಿ, ಮಹಾಸಭಾ ನಿರ್ದೇಶಕ ರವಿಕುಮಾರ್, ಅನಂತನಾರಾಯಣ, ಅಣ್ಣಾಜಿ ಗೌಡ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts