More

    ಕಾಯಕಲ್ಪ ನಿರೀಕ್ಷೆಯಲ್ಲಿ ಕಾಸರಗೋಡು ಸೀರೆ : ಘಟಕಕ್ಕೆ ಅಗತ್ಯವಿದೆ ಸರ್ಕಾರದ ನೆರವು

    ಪುರುಷೋತ್ತಮ ಪೆರ್ಲ ಕಾಸರಗೋಡು

    ಕಾಸರಗೋಡು ಜಿಲ್ಲೆಗೆ ಪ್ರಸಿದ್ಧಿ ತಂದುಕೊಟ್ಟ ಸೀರೆ ನಿರ್ಮಾಣ ಘಟಕ ತನ್ನ ಗತ ವೈಭವಕ್ಕೆ ಮರಳಲು ಹವಣಿಸುತ್ತಿದೆ. ಕೇರಳದ ಸಾಂಪ್ರದಾಯಿಕ ಸೀರೆಗಿಂತ ವಿಭಿನ್ನ ಶೈಲಿಯಲ್ಲಿ ಕರಾವಳಿ ಮೆರಗನ್ನು ಮೈಗೂಡಿಸಿಕೊಂಡು ಆಕರ್ಷಣೀಯವೆನಿಸಿದ ಸೀರೆಯ ಘಟಕದ ಪುನಶ್ಚೇತನಕ್ಕೆ ಈಗ ಸರ್ಕಾರದ ನೆರವು ಅಗತ್ಯವಿದೆ.

    ಕೇರಳ-ಕರ್ನಾಟಕದ ವಿವಿಧೆಡೆ ಪ್ರಸಿದ್ಧಿಯಾಗಿರುವ ಕಾಸರಗೋಡಿನ ಕೈಮಗ್ಗದ ಸೀರೆ ಉದ್ದಿಮೆ ಕಾರ್ಮಿಕರ ಕೊರತೆ ಜತೆಗೆ ಸರ್ಕಾರದ ಪ್ರೋತ್ಸಾಹದ ಕೊರತೆಯಿಂದ ಸೊರಗಲಾರಂಭಿಸಿದೆ. ಒಂದು ಕಾಲದಲ್ಲಿ ನಿರ್ದಿಷ್ಟ ಕುಲದವರು ಮಾತ್ರ ನೇಯ್ಗೆ ಮಾಡುತ್ತಿದ್ದರು. ಇಂದು ಎಲ್ಲ ಸಮುದಾಯದವರು ನೇಯ್ಗೆ ಮಾಡುತ್ತಿದ್ದರೂ ಈ ಕ್ಷೇತ್ರದಲ್ಲಿ ಕಾರ್ಮಿಕರ ಕೊರತೆಯೇ ಸಮಸ್ಯೆಯಾಗಿದೆ. 600 ಮಂದಿ ಕಾರ್ಮಿಕರಿದ್ದ ಸೀರೆ ಸಂಸ್ಥೆಯಲ್ಲಿ ಪ್ರಸ್ತುತ 25 ಮಹಿಳೆ ಹಾಗೂ 10 ಪುರುಷ ಕಾರ್ಮಿಕ ಮಾತ್ರ ಕಾರ್ಯನಿರ್ವಹಿಸುತ್ತಿದ್ದಾರೆ.

    ಕಾಯಕಲ್ಪ ನಿರೀಕ್ಷೆಯಲ್ಲಿ ಕಾಸರಗೋಡು ಸೀರೆ : ಘಟಕಕ್ಕೆ ಅಗತ್ಯವಿದೆ ಸರ್ಕಾರದ ನೆರವು

    ಕಾಸರಗೋಡು ಸೀರೆ ಘಟಕಕ್ಕೆ ಜಿಲ್ಲಾಧಿಕಾರಿ ಕೆ. ಇನ್ಬಾಶೇಖರ್ ನೇತೃತ್ವದ ಅಧಿಕಾರಿಗಳ ತಂಡ ಭೇಟಿ ನೀಡಿದರು.

    ಯೋಜನೆ ಸಿದ್ಧ

    ಕಾಸರಗೋಡಿನ ಸ್ವಂತ ಉತ್ಪನ್ನ, ಭಾರತೀಯ ಕೈಮಗ್ಗದ ಬ್ರಾೃಂಡ್ ಕಾಸರಗೋಡು ಸಾರಿ ನಿರ್ಮಾಣ ಕೇಂದ್ರಕ್ಕೆ ಪುನಶ್ಚೇತನ ನೀಡಲು ಜಿಲ್ಲಾಡಳಿತ ಯೋಜನೆ ಸಿದ್ಧಪಡಿಸುತ್ತಿದೆ. ಪ್ರಸಕ್ತ ಕಾಸರಗೋಡು ಸೀರೆ ನಿರ್ಮಾಣ ಘಟಕಕ್ಕೆ ಸರ್ಕಾರದ ನೆರವು ಅತ್ಯಗತ್ಯ ಎಂಬ ಅಂಶವನ್ನು ಕೇಂದ್ರಕ್ಕೆ ಇತ್ತೀಚೆಗೆ ಭೇಟಿ ನೀಡಿದ ಜಿಲ್ಲಾಧಿಕಾರಿ ಕೆ. ಇನ್ಬಾಶೇಖರ್ ನೇತೃತ್ವದ ಅಧಿಕಾರಿಗಳ ತಂಡ ಮನಗಂಡಿದೆ.

    2009 ರಲ್ಲಿ ಕಾಸರಗೋಡು ಸೀರೆಯನ್ನು ಭೌಗೋಳಿಕ ಸೂಚಕ ಉತ್ಪನ್ನವಾಗಿ ಘೋಷಿಸುವಂತೆ ಕೇರಳ ಸರ್ಕಾರ ಅರ್ಜಿ ಸಲ್ಲಿಸಿದ್ದು, ಈ ಹಿನ್ನೆಲೆಯಲ್ಲಿ 2010ರಿಂದ, ಕೇಂದ್ರ ಸರ್ಕಾರ ಇದನ್ನು ಜಿಯೋ ಸೂಚಕ ಸ್ಥಾನಮಾನ ಹೊಂದಿರುವ ಉತ್ಪನ್ನವೆಂದು ಗುರುತಿಸಿದೆ. ಪ್ರಸಕ್ತ ಕಾಸರಗೋಡು ಸೀರೆಗಳನ್ನು ಭಾರತೀಯ ಹ್ಯಾಂಡ್‌ಲೂಂ ಬ್ರಾಂಡ್ ಮತ್ತು ಕೇರಳ ಹ್ಯಾಂಡ್‌ಲೂಂ ಬ್ರಾಂಡ್ ಮುದ್ರೆಯುಳ್ಳ ಉತ್ಪನ್ನಗಳಾಗಿ ಮಾರಾಟ ಮಾಡಲಾಗುತ್ತದೆ.

    ಕಾಸರಗೋಡು ಸೀರೆ ತನ್ನದೇ ಆದ ಮಾರುಕಟ್ಟೆ ಹೊಂದಿದ್ದು, ಹತ್ತಿಯಿಂದ ತಯಾರಿಸುವ ಕಾರಣ ಪ್ರಸಿದ್ಧಿ ಪಡೆದಿದೆ. ಕಾಸರಗೋಡು ನೇಕಾರರ ಸಹಕಾರಿ ಉತ್ಪಾದನೆ ಮತ್ತು ಮಾರಾಟ ಸಂಸ್ಥೆ 1938ರಲ್ಲಿ ಸ್ಥಾಪನೆಗೊಂಡಿದೆ. ಸೊಸೈಟಿ ವಿಶೇಷವಾಗಿ ’ಕಾಸರಗೋಡು ಸಾರಿ’ ಉತ್ಪಾದನೆ ಮತ್ತು ಮಾರಾಟ ಮಾಡುವುದರ ಜತೆಗೆ ನೇಯ್ಗೆ ತರಬೇತಿ ನೀಡುವ ಮೂಲಕ ಈ ಸಂಪ್ರದಾಯ ಪೋಷಿಸಿಕೊಂಡು ಬಂದಿದೆ.

    ಮೂರು ಶತಮಾನದ ಇತಿಹಾಸ

    ಕಾಸರಗೋಡಿನ ನೇಯ್ಗೆ ಪರಂಪರೆಗೆ ಸುಮಾರು ಮೂರು ಶತಮಾನಗಳ ಇತಿಹಾಸವಿದೆ. ಕೇರಳದಲ್ಲಿ ಇರುವ ನಾಲ್ಕು ಪ್ರಮುಖ ನೇಯ್ಗೆ ಸಂಪ್ರದಾಯಗಳಲ್ಲಿ ಕಾಸರಗೋಡು ಸಾರಿ ಒಂದಾಗಿದೆ. ಕೇರಳದ ಬಾಲರಾಮಪುರಂ, ಕುತ್ತಂಪಲ್ಲಿ ಮತ್ತು ಚೆಂದಮಂಗಲಂನಲ್ಲಿ ಕೈಮಗ್ಗದ ಉತ್ಪನ್ನಗಳು ಹೆಸರುವಾಸಿಯಾಗಿವೆ. ಜ್ಯಾಕ್ವಾರ್ಡ್ ಅಥವಾ ಡೋಬಿ ತಂತ್ರ ಬಳಸಿಕೊಂಡು ಕಾಸರಗೋಡು ಸಾರಿಯನ್ನು ಆಕರ್ಷಕವಾಗಿ ನೇಯಲಾಗುತ್ತದೆ. ಈ ಸೀರೆಗಳನ್ನು 60 ರಿಂದ 100ರ ತನಕ ಥ್ರೆಡ್ ಎಣಿಕೆಯೊಂದಿಗೆ ತಯಾರಿಸಲಾಗುತ್ತಿದ್ದು, ಹೆಚ್ಚು ನಾಜೂಕಿಗೆ ಕಾರಣವಾಗುತ್ತಿದೆ.

    ಜಿಲ್ಲೆಗೆ ಅಭಿಮಾನವಾಗಿರುವ ಕಾಸರಗೋಡು ಸೀರೆ ಉದ್ದಿಮೆಯನ್ನು ಪ್ರವಾಸೋದ್ಯಮ ಕ್ಷೇತ್ರದೊಂದಿಗೆ ಜೋಡಿಸಿ ಮಾರುಕಟ್ಟೆ ಕಂಡುಕೊಳ್ಳುವ ಮೂಲಕ ಉತ್ಪಾದನೆ ಹೆಚ್ಚಿಸಲು ಕ್ರಮಕೈಗೊಳ್ಳಲಾಗುವುದು. ಸಭೆ ಆಯೋಜಿಸಲು ಡಿಟಿಪಿಸಿ ಕಾರ್ಯದರ್ಶಿಗೆ ಸೂಚಿಸಲಾಗಿದೆ. ಕಾಸರಗೋಡು ಅಭಿವೃದ್ಧಿ ಪ್ಯಾಕೇಜ್‌ನಲ್ಲಿ ಸೇರ್ಪಡೆಗೊಳಿಸಿ, ಕಾಸರಗೋಡಿನ ಸೀರೆಗಳ ಉದ್ದಿಮೆಯ ಪುನಶ್ಚೇತನಕ್ಕಾಗಿ ವಿನೂತನ ಯೋಜನೆ ತಯಾರಿಸಲು ಕ್ಷೇತ್ರದ ತಜ್ಞರೊಂದಿಗೆ ಚರ್ಚೆ ನಡೆಸಲಾಗುವುದು.

    – ಕೆ.ಇನ್ಬಾಶೇಖರ್, ಜಿಲ್ಲಾಧಿಕಾರಿ, ಕಾಸರಗೋಡು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts