More

    ಕನ್ನಡಿಗರಿಗೆ ಉದ್ಯೋಗದಲ್ಲಿ ಮೀಸಲಾತಿಗಾಗಿ ಮೊಳಗಿದ ರಣಕಹಳೆ

    ಬೆಂಗಳೂರು: ಕೇಂದ್ರ ಮತ್ತು ರಾಜ್ಯ ಸರ್ಕಾರಿ ಹಾಗೂ ಖಾಸಗಿ ವಲಯದಲ್ಲಿ ಕನ್ನಡಿಗರಿಗೆ ಶೇ.80ರಷ್ಟು ಉದ್ಯೋಗ ಮೀಸಲಿಡಬೇಕು. ಇದಕ್ಕಾಗಿ ಅಗತ್ಯ ಕಾಯಿದೆಯನ್ನು ಸರ್ಕಾರ ರೂಪಿಸಬೇಕೆಂಬುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಮಂಗಳವಾರ ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷ ಟಿ.ಎ.ನಾರಾಯಣಗೌಡ ನೇತೃತ್ವದಲ್ಲಿ ರಾಜಧಾನಿ ಬೆಂಗಳೂರು ಸೇರಿ ರಾಜ್ಯವ್ಯಾಪಿ ಪ್ರತಿಭಟನೆ ನಡೆದಿದ್ದು ಎಲ್ಲೆಡೆ ‘ಕನ್ನಡ ಹೋರಾಟದ ರಣಕಹಳೆ’ ಮೊಳಗಿದೆ.
    ನಗರದ ಫ್ರೀಡಂ ಪಾರ್ಕ್‌ನಲ್ಲಿ ನಡೆದ ಪ್ರತಿಭಟನೆ ವೇಳೆ ಟಿ.ಎ ನಾರಾಯಣಗೌಡ ಮಾತನಾಡಿ, ಬೆಂಗಳೂರನ್ನು ಕೇಂದ್ರಾಡಳಿತ ಪ್ರದೇಶ ಮಾಡಿದರೆ ರಕ್ತದೋಕುಳಿ ಹರಿಯುತ್ತದೆ. ಜತೆಗೆ ಉತ್ತರ ಭಾರತದ ರಾಜ್ಯಗಳ ಜನರ ವಲಸೆ ತಡೆಗಟ್ಟಬೇಕು ಎಂದು ಆಗ್ರಹಿಸಿದರು.
    ಹಕ್ಕೊತ್ತಾಯದ ಮನವಿಯನ್ನು ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಸಲ್ಲಿಸಿ ಉದ್ಯೋಗ ಕ್ಷೇತ್ರದಲ್ಲಿ ಕನ್ನಡಿಗರಿಗೆ ಮೀಸಲು ಕಾಯ್ದೆ ಜಾರಿ ಆಗುವವರೆಗೂ ನಮ್ಮ ಹೋರಾಟ ಮುಂದುವರಿಯಲಿದೆ ಎಂದು ಎಚ್ಚರಿಸಿದರು.
    ಸರೋಜಿನಿ ಮಹಿಷಿ ವರದಿ ಜಾರಿ, ‘ಸಿ’ ಮತ್ತು ‘ಡಿ ’ ದರ್ಜೆಯ ಹುದ್ದೆಗಳಲ್ಲಿ ಶೇ.೧೦೦ರಷ್ಟು ಉದ್ಯೋಗಗಳನ್ನು ಕನ್ನಡಿಗರಿಗೆ ನೀಡಬೇಕು. ಇತರೆ ವರ್ಗಗಳಲ್ಲಿ ಶೇ.೮೦ರಷ್ಟು ಉದ್ಯೋಗ ನೀಡುವಂತೆ ಸರ್ಕಾರವನ್ನು ಒಕ್ಕೂರಲಿನಿಂದ ಆಗ್ರಹಿಸಿದರು.
    ಸರ್ಕಾರದ ವಿರುದ್ಧ ನಾರಾಯಣ ಗೌಡ ಗುಡುಗು:
    ಈ ಹಿಂದೆ ನನ್ನ ಮೇಲೆ ಒಂದೇ ದಿನ ೧೬ ಪ್ರಕರಣ ಹಾಕಲಾಯಿತು. ೨ ದಿವಸ ಊಟ ತಿಂಡಿ ಕೊಡದ ಹಾಗೆ ಮಾಡಿದರು. ಆದರೂ ನನ್ನ ಶಕ್ತಿ ಕುಂದಿಲ್ಲ. ನಾಡು-ನುಡಿಗಾಗಿ, ಕನ್ನಡನಾಡಿನ ಮಕ್ಕಳ ಬದುಕಿಗಾಗಿ ಹೋರಾಡಿ ಸಾಯುತ್ತೇನೆ. ಯಾವುದೇ ಸರ್ಕಾರ ಇರಲಿ, ಸರ್ಕಾರಕ್ಕೆ ಹೆದರಿ ಮನೆ ಸೇರುವ ಮಗ ನಾನಲ್ಲ ಮತ್ತು ಕರವೇ ಕಾರ್ಯಕರ್ತರು ಅಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮೇಲೆ ನಂಬಿಕೆಯಿದೆ. ಕನ್ನಡ ಗಡಿ ಕಾವಲು ಸಮಿತಿ ಅಧ್ಯಕ್ಷರಾಗಿ ಕೆಲಸ ಮಾಡಿರುವ ಹಿನ್ನೆಲೆಯಲ್ಲಿ ಅವರ ಅಂತರಂಗದಲ್ಲಿ ಕನ್ನಡ ಕಳಕಳಿಯಿದೆ. ಕನ್ನಡಿಗರ ಪರವಾದ ಕಾಯ್ದೆ ಜಾರಿಗೆ ತರುತ್ತಾರೆ ಎಂಬ ನಂಬಿಕೆಯಿದೆ ಎಂದರು.
    ರಾಮಕೃಷ್ಣ ಹೆಗಡೆ ಅವರು ಸಿಎಂ ಆಗಿದ್ದಾಗ ಕನ್ನಡರಿಗೆ ಯಾವ, ಯಾವ ಹಂತದಲ್ಲಿ ಉದ್ಯೋಗ ಕೊಡಬೇಕು ಎಂದು ಸಮಿತಿ ನೀಡಿದ್ದ ವರದಿಯನ್ನು ಜಾರಿ ಮಾಡಬೇಕಿತ್ತು. ಆದರೆ ಭಾಷಾ ಅಲ್ಪಸಂಖ್ಯಾತ ರಾಜಕಾರಣಿಗಳು, ಉದ್ಯಮಿಗಳಿಗೆ ಮಣಿದ ಪರಿಣಾಮ ಅದು ಜಾರಿಗೆ ಬಂದಿಲ್ಲ. ಸರೋಜಿನಿ ಮಹಿಷಿ ವರದಿ ಜಾರಿಗೆ ಕರವೇ ನಿರಂತರ ಹಕ್ಕೋತ್ತಾಯ ಮಾಡುತ್ತಲೇ ಇದೆ. ಆದರೆ ಯಾವುದೇ ಪ್ರಯೋಜನವಾಗಿಲ್ಲ. ಉತ್ತರ ಭಾರತದ ರಾಜ್ಯಗಳ ಜನರ ವಲಸೆ ಹೆಚ್ಚಾಗುತ್ತಿದೆ ಈ ಹಿನ್ನೆಲೆಯಲ್ಲಿ ಎಲ್ಲ ಉದ್ಯಮಗಳಲ್ಲಿ ಕನ್ನಡದ ಮಕ್ಕಳು ಬದುಕು ಕಳೆದುಕೊಳ್ಳುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
    ಚಿತ್ರನಟ ಪ್ರೇಮ್, ನಟಿ ಪೂಜಾಗಾಂಧಿ, ರೈತ ಮುಖಂಡ ವೀರಸಂಗಯ್ಯ ಸೇರಿದಂತೆ ಕನ್ನಡಪರ ಸಂಘಟನೆಗಳ ಮುಖಂಡರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

    ಚಿತ್ರನಟರ ವಿರುದ್ಧ ಗುಡುಗಿನ ನಾರಾಯಣಗೌಡ:
    ನಟರು ಸೂಪರ್ ಸ್ಟಾರ್ ಅನ್ನುವುದಕ್ಕಿಂತ ಮೊದಲು ನಾವು ಕನ್ನಡಿಗರು ಎಂಬುದನ್ನು ಮರೆಯಬಾರದು. ೫ ರಿಂದ ೧೦ ಕೋಟಿ ತೆಗೆದುಕೊಳ್ಳುವ ನಟರು ಸೂಪರ್ ಸ್ಟಾರ್ ಆಗಿದ್ದೀರಿ ಎಂದರೆ ಅದಕ್ಕೆ ಕನ್ನಡಿಗರು ಕಾರಣ. ನೀವು ಕನ್ನಡ ತಾಯಿ ಗರ್ಭದಿಂದ ಆಚೆಗೆ ಬಂದಿದ್ದೀರಿ. ನಿಮಗೆ ನಿಜವಾದ ಕಾಳಜಿ ಇರುವುದಾದರೆ ಕನ್ನಡ ಸಂಬಂಧಿಸಿದ ವಿಚಾರಕ್ಕೆ ಬೀದಿಗೆ ಬಬಂದು ಹೋರಾಟ ಮಾಡಿ ಎಂದು ಮನವಿ ಮಾಡಿದರು.
    ನಟಿ ಪೂಜಾಗಾಂಧಿ ಅವರ ಮಾತೃ ಭಾಷೆ ಬೇರೆ, ಆದರೆ ಕಾಯದ ಭಾಷೆ ಕನ್ನಡ ಎಂಬುವುದನ್ನು ತೋರಿಸುತ್ತಿದ್ದಾರೆ. ರೀಲ್‌ನಲ್ಲಿ ಅಲ್ಲ, ರೀಯಲ್ ಆಗಿ ತೋರಿಸುತ್ತಿದ್ದಾರೆ. ಜ್ಞಾನಪೀಠ ಪ್ರಶಸ್ತಿ ತಂದುಕೊಟ್ಟ ಸಾಹಿತಿಗಳ ಮಾತೃ ಭಾಷೆ ಬೇರೆ ಬೇರೆ. ಆದರೆ ಕನ್ನಡದ ನಾಡಿಮಿಡಿತ ಅವರ ಅಂತರಂಗದಲ್ಲಿತ್ತು ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts