More

    ರಿ-ರಿಲೀಸ್​ 3.0! ಮತ್ತೊಮ್ಮೆ, ಮಗದೊಮ್ಮೆ ಬಿಡುಗಡೆಯಾಗುತ್ತಿವೆ ಚಿತ್ರಗಳು

    | ಹರ್ಷವರ್ಧನ್​ ಬ್ಯಾಡನೂರು

    ಅತ್ತ ನರೇಂದ್ರ ಮೋದಿಯವರು ಮೂರನೇ ಬಾರಿಗೆ ಪ್ರಧಾನ ಮಂತ್ರಿಯಾಗಿ ಪದಗ್ರಹಣ ಮಾಡುತ್ತಿದ್ದರೆ, ಇತ್ತ ಹಳೆಯ ಹಿಟ್​ ಸಿನಿಮಾಗಳು ಸಹ ಮತ್ತೊಮ್ಮೆ, ಮಗದೊಮ್ಮೆ ರಿಲೀಸ್​ ಆಗುತ್ತಿವೆ. ರಾಜ್ಯದಲ್ಲಿ ಥಿಯೇಟರ್​ಗಳ ಉಳಿವಿಗೆ ಹಳೆಯ ಹಿಟ್​ ಚಿತ್ರಗಳೂ ಬೇಕೇಬೇಕು ಎಂಬ ಮಾತುಗಳು ಕೇಳಿಬರುತ್ತಿವೆ. ಕಳೆದ ಎರಡು ತಿಂಗಳಲ್ಲಿ 15ಕ್ಕೂ ಹೆಚ್ಚು ಸಿನಿಮಾಗಳು ಥಿಯೇಟರ್​ಗಳಲ್ಲಿ ರಿ-ರಿಲೀಸ್​ ಆಗಿವೆ.

    ಪ್ರೇಕ್ಷಕ ನೀ ಬೇಗನೆ ಬಾರೋ…
    ಪ್ರತಿ ವರ್ಷ ಆಗೊಮ್ಮೆ ಈಗೊಮ್ಮೆ ಕೆಲವು ಹಳೆಯ ಸಿನಿಮಾಗಳು ರಿ-ರಿಲೀಸ್​ ಆಗುತ್ತಿದ್ದುದು ಸಾಮಾನ್ಯ. ಆದರೆ, ಈ ವರ್ಷ ಮೇ ಮತ್ತು ಜೂನ್​ನಲ್ಲಿ ಹೊಸ ಸಿನಿಮಾಗಳಷ್ಟೇ ಸಂಖ್ಯೆಯಲ್ಲಿ ಹಳೆಯ ಸಿನಿಮಾಗಳೂ ತೆರೆಗೆ ಬಂದಿವೆ. ಡಾ. ವಿಷ್ಣುವರ್ಧನ್​ ಅಭಿನಯಿಸಿದ್ದ 1986ರ ಹಿಟ್​ ಸಿನಿಮಾ “ಕೃಷ್ಣ ನೀ ಬೇಗನೆ ಬಾರೋ’ ರಾಜ್ಯಾದ್ಯಂತ 30ಕ್ಕೂ ಅಧಿಕ ಮಲ್ಟಿಪ್ಲೆಕ್ಸ್​ ಮತ್ತು ಸಿಂಗಲ್​ ಸ್ಕ್ರೀನ್​ ಥಿಯೇಟರ್​ಗಳಲ್ಲಿ ಕಳೆದ ಮೇ 17ರಂದು ರಿಲೀಸ್​ ಆಗಿತ್ತು.

    ರಿ-ರಿಲೀಸ್​ 3.0! ಮತ್ತೊಮ್ಮೆ, ಮಗದೊಮ್ಮೆ ಬಿಡುಗಡೆಯಾಗುತ್ತಿವೆ ಚಿತ್ರಗಳು

    ಮತ್ತೆ ಬಂತು ಎ
    ಉಪೇಂದ್ರ ನಟಿಸಿ, ನಿರ್ದೇಶಿಸಿದ್ದ “ಎ’ ಚಿತ್ರ ಕೂಡ ಕಳೆದ ಮೇ 17ರಂದು ರಾಜ್ಯಾದ್ಯಂತ ಬಿಡುಗಡೆಯಾಗಿದ್ದು, ಇದೀಗ ನಾಲ್ಕನೇ ವಾರಕ್ಕೆ ಎಂಟ್ರಿ ಕೊಟ್ಟಿದೆ. ಇದೇ ಸಮಯದಲ್ಲಿ ರಿಲೀಸ್​ ಆದ ಕೆಲ ಹೊಸ ಸಿನಿಮಾಗಳು ಸಹ ಥಿಯೇಟರ್​ಗಳಲ್ಲಿ ನಾಲ್ಕು ವಾರ ಪೂರೈಸಲು ಸಾಧ್ಯವಾಗಿಲ್ಲ ಎಂಬುದು ನೆನಪಿರಲಿ!

    ಪುನೀತ್​ ಹ್ಯಾಟ್ರಿಕ್​ ರಿ-ರಿಲೀಸ್​
    ಪುನೀತ್​ ರಾಜಕುಮಾರ್​ ಅಭಿನಯಿಸಿದ್ದ “ಪವರ್​’ ಮತ್ತು “ಅಂಜನಿಪುತ್ರ’ ಚಿತ್ರಗಳು ಮೇ 10ರಂದು ಒಂದೇ ದಿನ ರಿ&ರಿಲೀಸ್​ ಆಗಿದ್ದು ವಿಶೇಷ. “ಪವರ್​’ 70 ಥಿಯೇಟರ್​ಗಳಲ್ಲಿ ಬಿಡುಗಡೆಯಾಗಿದ್ದರೆ, “ಅಂಜನಿಪುತ್ರ’ 100ಕ್ಕೂ ಹೆಚ್ಚು ಸ್ಕ್ರೀನ್​ಗಳಲ್ಲಿ ರಿಲೀಸ್​ ಆಗಿತ್ತು. ಮೇ 17ರಂದು ಪುನೀತ್​ ರಾಜಕುಮಾರ್​ ಹುಟ್ಟುಹಬ್ಬವಿದ್ದ ಕಾರಣ, ಅಭಿಮಾನಿಗಳು ತಮ್ಮ ನೆಚ್ಚಿನ ನಟನ ಸಿನಿಮಾಗಳನ್ನು ಮತ್ತೊಮ್ಮೆ ಥಿಯೇಟರ್​ಗಳಲ್ಲಿ ನೋಡಿ ಸಂಭ್ರಮಿಸಿದರು. ಹಾಗೇ ಥಿಯೇಟರ್​ಗಳ ಮುಂದೆ ಮತ್ತೊಮ್ಮೆ ಪುನೀತ್​ ಕಟೌಟ್​ ಕಟ್ಟಿ ಸಡಗರದಿಂದ ರಿ-ರಿಲೀಸ್​ ಆಚರಿಸಿದರು.

    ರಿ-ರಿಲೀಸ್​ 3.0! ಮತ್ತೊಮ್ಮೆ, ಮಗದೊಮ್ಮೆ ಬಿಡುಗಡೆಯಾಗುತ್ತಿವೆ ಚಿತ್ರಗಳು

    ಜಾಕಿ ಸಂಭ್ರಮ
    ಅಂದಹಾಗೆ ಈ ವರ್ಷ ಐಪಿಎಲ್​ ಮತ್ತು ಲೋಕಸಭಾ ಚುನಾವಣೆಯ ನಡುವೆ ಹೊಸ ಸಿನಿಮಾಗಳು ಪ್ರೇಕ್ಷಕರನ್ನು ಸೆಳೆಯಲು ಹರಸಾಹಸ ಪಡುವಂತಾಗಿತ್ತು. ಜತೆಗೆ ಸ್ಟಾರ್​ ಸಿನಿಮಾಗಳೂ ಇಲ್ಲದ ಕಾರಣ ಥಿಯೇಟರ್​ಗಳು ಬಾಗಿಲು ಮುಚ್ಚುವ ಆತಂಕ ಪ್ರಾರಂಭವಾಗಿತ್ತು. ಆಗ ಪುನೀತ್​ ರಾಜಕುಮಾರ್​ ಅವರ “ಜಾಕಿ’ ಚಿತ್ರವನ್ನು ಮಾ. 15ರಂದು ರಿ-ರಿಲೀಸ್​ ಮಾಡಲಾಯಿತು. ನೂರಕ್ಕೂ ಹೆಚ್ಚು ಥಿಯೇಟರ್​ಗಳಲ್ಲಿ ಮರುಬಿಡುಗಡೆಯಾದ “ಜಾಕಿ’ ಚಿತ್ರವನ್ನು ಕೆಲವೆಡೆ ಮುಂಜಾನೆ 4.30 ಪ್ರದರ್ಶನ ಆಯೋಜಿಸಲಾಗಿತ್ತು.

    ಮತ್ತೊಮ್ಮೆ “ರಾರ್ಬಟ್​’ ಜಾತ್ರೆ
    ಈ ವಾರವೂ ಹೇಳಿಕೊಳ್ಳುವಂತಹ ಸಿನಿಮಾಗಳು ರಿಲೀಸ್​ ಆಗದ ಕಾರಣ, ದರ್ಶನ್​ ಅಭಿನಯದ “ರಾರ್ಬಟ್​’ ಚಿತ್ರವನ್ನು ರಿ-ರಿಲೀಸ್​ ಮಾಡಲಾಗಿದೆ. 100ಕ್ಕೂ ಹೆಚ್ಚು ಸ್ಕ್ರೀನ್​ಗಳಲ್ಲಿ “ರಾರ್ಬಟ್​’ ಸಿನಿಮಾ ಮರುಬಿಡುಗಡೆಯಾಗಿದೆ.

    ರಿ-ರಿಲೀಸ್​ 3.0! ಮತ್ತೊಮ್ಮೆ, ಮಗದೊಮ್ಮೆ ಬಿಡುಗಡೆಯಾಗುತ್ತಿವೆ ಚಿತ್ರಗಳು

    ಹೊಸ ಚಿತ್ರಗಳಿಗೆ ಪೆಟ್ಟು
    ಇತ್ತೀಚಿನ ದಿನಗಳಲ್ಲಿ ಸ್ಟಾರ್​ ನಟರ ಹಳೆಯ ಹಿಟ್​ ಸಿನಿಮಾಗಳು ರಿ&ರಿಲೀಸ್​ ಆಗುತ್ತಿರುವ ಕಾರಣ ಹೊಸ ಚಿತ್ರಗಳಿಗೆ ಕೆಲವೆಡೆ ಸಮಸ್ಯೆ ಎದುರಾಗಿದೆ ಎನ್ನುವ ಮಾತುಗಳೂ ಕೇಳಿಬರುತ್ತಿವೆ. ಕೆಲವೆಡೆ ಪ್ರಮುಖ ಥಿಯೇಟರ್​ಗಳೂ ಸಿಗದೇ ಹೊಸಬರು ಪರದಾಡುವಂತಾಗಿದೆ ಎನ್ನಲಾಗಿದೆ. “ಹಾಗೇ ಎಲ್ಲ ಹಳೆಯ ಹಿಟ್​ ಸಿನಿಮಾಗಳೂ ಮತ್ತೊಮ್ಮೆ ಹೌಸ್​ಫುಲ್​ ಆಗುತ್ತಿವೆ ಎಂದು ಹೇಳಲು ಕಷ್ಟ. ಏಕೆಂದರೆ ನಮ್ಮ ಚಿತ್ರಮಂದಿರದಲ್ಲೇ ಭಾನುವಾರ ರಜಾ ದಿನವೂ ಕೇವಲ 60 ಜನರಷ್ಟೇ ಪ್ರೇಕ್ಷಕರಿದ್ದರು’ ಎಂದು ಹೇಳಿಕೊಳ್ಳುತ್ತಾರೆ ಹೆಸರು ಹೇಳಲು ಇಚ್ಛಿಸದ ಥಿಯೇಟರ್​ ಮಾಲೀಕರು.

    ಪರಭಾಷೆ ಚಿತ್ರಗಳೂ ರಿ-ರಿಲೀಸ್​
    ಕನ್ನಡದ “ಸಿಂಗಾಪೂರ್​ನಲ್ಲಿ ರಾಜಾ ಕುಳ್ಳ’, “ಸಾಹಸ ಸಿಂಹ’ ಸೇರಿ ಇನ್ನೂ ಕೆಲ ಚಿತ್ರಗಳು ಇದೀಗ ರಿ&ರಿಲೀಸ್​ಗೆ ರೆಡಿಯಾಗಿವೆ. ಅದರ ಜತೆ ಜತೆಗೇ ಕರ್ನಾಟದಲ್ಲಿ ಅದರಲ್ಲೂ ಹೆಚ್ಚಾಗಿ ಬೆಂಗಳೂರಿನಲ್ಲಿ ಪರಭಾಷೆಯ ಸಿನಿಮಾಗಳೂ ಸಹ ರಿ-ರಿಲೀಸ್​ ಆಗಿವೆ. ಪವನ್​ ಕಲ್ಯಾಣ್​ ಅಭಿನಯದ ತೆಲುಗಿನ “ತಮ್ಮುಡು’, ಕಮಲ್​ ಹಾಸನ್​ ನಟಿಸಿದ್ದ “ಇಂಡಿಯನ್​’, “ಸೂರ್ಯ ನಾಯಕನಾಗಿದ್ದ “ಜಿನಿ’ ಮತ್ತು ಅಜಿತ್​ ಅಭಿನಯದ ತಮಿಳಿನ “ಎನ್ನೈ ಅರಿಂದಾಳ್​’ ಚಿತ್ರದ ತೆಲುಗು ರಿಮೇಕ್​ “ಸತ್ಯದೇವ್​ ಐಪಿಎಸ್​’ ಕೂಡ ರಿ&ರಿಲೀಸ್​ ಆಗಿವೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts