More

    ಎಸ್ಸೆಸ್ಸೆಲ್ಸಿ ಫಲಿತಾಂಶ ಕುಸಿತಕ್ಕೆ ವೆಬ್‌ಕಾಸ್ಟಿಂಗ್ ಕಾರಣವಲ್ಲ ಎಂದ ಕ್ಯಾಮ್ಸ್, ಹಾಗಾದರೆ ನಿಜವಾದ ಕಾರಣವೇನು?

    ಬೆಂಗಳೂರು ರಾಜ್ಯದ ಎಸ್ಸೆಸ್ಸೆಲ್ಸಿ ಫಲಿತಾಂಶ ಕುಸಿತದ ಮೂಲಕ ರಾಜ್ಯಪಠ್ಯಕ್ರಮ ಶಾಲೆಗಳನ್ನು ಮುಗಿಸುವ ಹುನ್ನಾರವಿದೆ. ಶಿಕ್ಷಣ ಇಲಾಖೆಯ ಅಧಿಕಾರಿಗಳ ಬೇಜವಾಬ್ದಾರಿತನದಿಂದ ರಾಜ್ಯದ ಶಿಕ್ಷಣ ವ್ಯವಸ್ಥೆ ಅಂತಂತ್ರಗೊಂಡಿದೆ. ಕೂಡಲೇ ಇಂತಹ ಅಧಿಕಾರಿಗಳನ್ನು ಎತ್ತಂಗಡಿಗೆ ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಮುಂದಾಗಬೇಕು ಎಂದು ಕರ್ನಾಟಕ ಖಾಸಗಿ ಶಾಲಾ ಆಡಳಿತ ಮಂಡಳಿಗಳು, ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಸಮನ್ವಯ ಸಮಿತಿ (ಕೆಪಿಎಂಟಿಸಿಸಿ) ಆಗ್ರಹಿಸಿದೆ.

    ಸರ್ಕಾರವು ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಬಿಸಿ ಮುಟ್ಟಿಸಿ, ಶಿಕ್ಷಣ ಹಾಗೂ ಕಲಿಕಾ ಗುಣಮಟ್ಟ ಸುಧಾರಣೆಗೆ ಕ್ರಮ ವಹಿಸದಿದ್ದರೆ, ಅನಿವಾರ್ಯವಾಗಿ ಸಾಂಕೇತಿಕ ಪ್ರತಿಭಟನೆಗೂ ನಾವು ಮುಂದಾಗಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿತು.

    ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೆಪಿಎಂಟಿಸಿಸಿ ಸಂಚಾಲಕ ಡಿ. ಶಶಿಕುಮಾರ್, ಸಿಸಿಕ್ಯಾಮರಾ ಮತ್ತು ವೆಬ್‌ಕಾಸ್ಟಿಂಗ್ ವ್ಯವಸ್ಥೆಯಿಂದ ಎಸ್ಸೆಸ್ಸೆಲ್ಸಿ ಫಲಿತಾಂಶ ಶೇ.30ರಷ್ಟು ಕುಸಿದಿದೆ ಎಂಬ ಅಧಿಕಾರಿಗಳ ಹೇಳಿಕೆ ಸಂಪೂರ್ಣ ಸುಳ್ಳು. ಫಲಿತಾಂಶ ಕುಸಿಯಲು ಇಲಾಖಾ ಅಧಿಕಾರಿಗಳ ಬೇಜವಾಬ್ದಾರಿಯೇ ಕಾರಣ. ಅಸಲಿಗೆ ನಮಗಿರುವ ಮಾಹಿತಿ ಪ್ರಕಾರ ಶೇ.20 ಕೃಪಾಂಕ ನೀಡಿದರೂ ಪಾಸಾಗದಂತಹ ಸಾಕಷ್ಟು ವಿದ್ಯಾರ್ಥಿಗಳಿಗೆ ವಿವಿಧ ವಿಷಯಗಳಲ್ಲಿ 14, 15, 16 ಅಂಕ ಪಡೆದಿದ್ದರೆ ಅವರಿಗೆ ಕರೆಕ್ಷನ್ ಮಾಡುವಾಗ 20 ಅಂಕಗಳಿಗೆ ಹೆಚ್ಚಿಸಲಾಗಿದೆ. ಇದರಿಂದ ಅವರು ಕೃಪಾಂಕಕ್ಕೆ ಅರ್ಹರಾಗಿ ಪಾಸಾಗಿದ್ದಾರೆ. ಇಲ್ಲದಿದ್ದರೆ ಇನ್ನಷ್ಟು ಫಲಿತಾಂಶ ಕುಸಿಯುತ್ತಿತ್ತು ಎಂದು ಆರೋಪಿಸಿದರು.

    ಗುಣಮಟ್ಟ ಕುಸಿತ:

    ಶಾಲಾ ಶಿಕ್ಷಣದಲ್ಲಿ ಕಲಿಕೆಯ ಗುಣಮಟ್ಟ ಸಂಪೂರ್ಣವಾಗಿ ಕುಸಿದಿದೆ. ಗುಣಮಟ್ಟ ಹೆಚ್ಚಿಸಲು ಪರಿಣಾಮಕಾರಿಯಾಗಿ ರೂಪುರೇಷೆಗಳನ್ನು ಮಾಡಬೇಕಾದ ಅಧಿಕಾರಿಗಳು ದಿನಕ್ಕೊಂದು ನಿಯಮ ಮಾಡಿಕೊಂಡು ಖಾಸಗಿ ಶಾಲೆಗಳ ಮೇಲೆ ದಬ್ಬಾಳಿಕೆ, ಕಿರುಕುಳ, ಭ್ರಷ್ಟಾಚಾರಕ್ಕೆ ದಾರಿ ಮಾಡಿಕೊಡುತ್ತಿದ್ದಾರೆ. ಯಾವುದೇ ನಿಯಮಗಳನ್ನು ಮಾಡುವಾಗಲೂ ಭಾಗೀದಾರರ ಅಭಿಪ್ರಾಯ ಪಡೆಯದೆ ಸರ್ವಾಧಿಕಾರಿಗಳಂತೆ ವರ್ತಿಸುತ್ತಿದ್ದಾರೆ. ಇದರ ಹಿಂದೆ ದಲಿತ, ಅಲ್ಪಸಂಖ್ಯಾತ, ಹಿಂದುಳಿದ ವರ್ಗವೂ ಸೇರಿ ಶೇ.90 ಮಕ್ಕಳು ಓದುತ್ತಿರುವ ರಾಜ್ಯ ಪಠ್ಯಕ್ರಮದ ಶಾಲೆಗಳನ್ನು ಮುಗಿಸುವ ಹುನ್ನಾರೂ ಇದೆ. ಇದರ ಜೊತೆಗೆ ಕನ್ನಡದ ಅಸ್ತಿತ್ವವೂ ಕಳೆದುಹೋಗುತ್ತಿದೆ. ಹಾಗಾಗಿ ಮುಖ್ಯಮಂತ್ರಿಗಳು ಕೂಡಲೇ ಎಚ್ಚೆತ್ತು ಅಧಿಕಾರಿಗಳಿಗೆ ಬಿಸಿ ಮುಟ್ಟಿಸಬೇಕು ಎಂದು ಒತ್ತಾಯಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts