More

    ಕರೊನಾ ಮಾರ್ಗಸೂಚಿ ಪ್ರಕಟಿಸಿದ ಕ್ಯಾಮ್ಸ್: ಪಾಲಕ ಸಂಘಟನೆ ವಿರೋಧ

    ಬೆಂಗಳೂರು ಕರೊನಾ ಹೊಸ ತಳಿ ಜೆಎನ್-1ರ ಹಿನ್ನೆಲೆಯಲ್ಲಿ ಅನಾರೋಗ್ಯಪೀಡಿತ ಮಕ್ಕಳನ್ನು ಶಾಲೆಗೆ ಕಳುಹಿಸುವುದಕ್ಕೆ ಅವಕಾಶ ನೀಡಬೇಡಿ ಎಂದು ಖಾಸಗಿ ಶಾಲಾ ಆಡಳಿತ ಮಂಡಳಿಗಳ ಒಕ್ಕೂಟ (ಕ್ಯಾಮ್ಸ್)ವು ತನ್ನ ವ್ಯಾಪ್ತಿಯ ಶಾಲೆಗಳಿಗೆ ನಿರ್ದೇಶನ ನೀಡಿದೆ.

    ಶಾಲೆಗಳಲ್ಲಿ ಕೈಗೊಳ್ಳಬೇಕಾದ ಮುನ್ನೆಚ್ಚರಿಕಾ ಕ್ರಮಗಳ ಮಾರ್ಗಸೂಚಿಯನ್ನು ಪ್ರಕಟಿಸಿದೆ. ವಿದ್ಯಾರ್ಥಿಗಳಿಗೆ ಜ್ವರ, ಸಾಂಕ್ರಾಮಿಕವಿದ್ದರೆ ನಿರ್ಲಕ್ಷಿಸದೆ ವೈದ್ಯಕೀಯ ಆರೈಕೆ ಪಡೆಯಲು ನಿರ್ದೇಶನ ನೀಡಿ. ಪರೀಕ್ಷೆ ಅಥವಾ ತರಗತಿಗಳು ಕೈತಪ್ಪಲಿವೆ ಎಂಬ ನೆಪ ನೀಡಿ ಮಕ್ಕಳನ್ನು ಶಾಲೆಗೆ ಕಳಹಿಸುವ ಪಾಲಕರನ್ನು ಪ್ರೋತ್ಸಾಹಿಸಬೇಡಿ ಕ್ಯಾಮ್ಸ್ ಪ್ರಧಾನ ಕಾರ್ಯದರ್ಶಿ ಡಿ.ಶಶಿಕುಮಾರ್ ತಿಳಿಸಿದ್ದಾರೆ.

    ಸಾಂಕ್ರಾಮಿಕ ಕುರಿತು ಶಾಲೆಗಳಲ್ಲಿ ಆತಂಕ ಸೃಷ್ಟಿಸಬೇಡಿ. ಅದರ ಬದಲಾಗಿ ಮುನ್ನೆಚ್ಚರಿಕೆ ವಹಿಸುವಂತೆ ತಿಳಿಸಬೇಕು. ವಿವಿಧ ರೂಪಾಂತರ ಇರುವುದರಿಂದ ಹೆಚ್ಚಿನ ಕಾಳಜಿ ವಹಿಸಿ ಸೋಂಕುಗಳ ಬಗ್ಗೆ ಎಚ್ಚರಿಕೆ ವಹಿಸಬೇಕು. ಗಾಳಿ ಸುದ್ದಿಗಳಿಗೆ ಕಿವಿಗೊಡಬೇಡಿ ಎಂದು ತಿಳಿಸಿದೆ.
    ನಿಯಮಿತ ತಪಾಸಣೆ ಮಾಡುವುದು, ಶಾಲಾ ಆವರಣವನ್ನು ಸ್ವಚ್ಛಗೊಳಿಸಿ ಸ್ಯಾನಿಟೈಸ್ ಮಾಡುವುದು, ವಾರದ ರಜೆ ಪಡೆದಿರುವ ಮಕ್ಕಳು, ಶಿಕ್ಷಕರು ಮತ್ತು ವೈದ್ಯಕೀಯ ಚಿಕಿತ್ಸೆ ಪಡೆಯುತ್ತಿರುವ ವಿದ್ಯಾರ್ಥಿಗಳಿಗೆ ಮಾಸ್ಕ್ ಧರಿಸಲು ಸೂಚಿಸುವಂತೆ ತಿಳಿಸಿದ್ದಾರೆ.

    ಶಾಲೆ ಮತ್ತು ಮನೆಯ ವಾತಾವರಣ ನೈರ್ಮಲ್ಯವಾಗಿರುವಂತೆ ಕ್ರಮ ಕೈಗೊಳ್ಳುವುದು. ಶಾಲೆಯಲ್ಲಿ ಹಠಾತ್ ಅಸ್ವಸ್ಥರಾದ ಮಕ್ಕಳನ್ನು ಪ್ರತ್ಯೇಕವಾಗಿರಿಸಿ ಎಚ್ಚರಿಕೆ ವಹಿಸುವುದು. ತಕ್ಷಣವೇ ಪಾಲಕರ ಗಮನಕ್ಕೆ ತಂದು ಸಲಹೆ ನೀಡುವುದು.

    ರಜಾ ದಿನಗಳಂದು ಪಾಲಕರೊಂದಿಗೆ ಯಾತ್ರಾ ಸ್ಥಳಗಳು, ಜನಸಂದಣಿಯಿಂದ ಕೂಡಿರುವ ಪ್ರವಾಸಿ ತಾಣಗಳಿಗೆ ಹೋಗುವ ವೇಳೆ ಎಚ್ಚರಿಕೆ ವಹಿಸಬೇಕು. ಒಂದು ವೇಳೆ ಶಾಲಾ ಪ್ರವಾಸ ಕೈಗೊಂಡಿದ್ದಲ್ಲಿ ಪೋರ್ಟಬಲ್ ಆಮ್ಲಜನಕ ಕಿಟ್ ಅನ್ನು ಕೊಂಡೊಯ್ಯಿರಿ. ಅಗತ್ಯವಿದ್ದಲ್ಲಿ ಕ್ಯಾಮ್ಸ್ ಅನ್ನು ಸಂಪರ್ಕಿಸುವಂತೆ ತಿಳಿಸಿದ್ದಾರೆ.

    ಮಾರ್ಗಸೂಚಿ ಪ್ರಕಟಿಸಿ ಮಕ್ಕಳಲ್ಲಿ ಆತಂಕ ಸೃಷ್ಟಿ: ಯೋಗಾನಂದ

    ಕರೊನಾ ಸೋಂಕಿಗೆ ಸಂಬಂಧಿಸಿದಂತೆ ಶಾಲೆಗಳಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಕುರಿತು ರಾಜ್ಯ ಸರ್ಕಾರವು ಯಾವುದೇ ತೀರ್ಮಾನ ಕೈಗೊಳ್ಳುವ ಮುನ್ನವೇ ಕ್ಯಾಮ್ಸ್ ಸಂಘಟನೆಯು ಮಾರ್ಗಸೂಚಿ ಪ್ರಕಟಿಸುವ ಮೂಲಕ ವಿದ್ಯಾರ್ಥಿಗಳು ಮತ್ತು ಪಾಲಕರಲ್ಲಿ ಆತಂಕ ಸೃಷ್ಟಿಸಿದೆ ಎಂದು ಶಾಲಾ ಪಾಲಕ ಸಂಘಟನೆ ಅಧ್ಯಕ್ಷ ಬಿ.ಎನ್. ಯೋಗಾನಂದ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
    ಕ್ರಿಸ್‌ಮಸ್, ಹೊಸ ವರ್ಷ ಸೇರಿ ಹಲವು ಆಚರಣೆಗಳು ಬರುತ್ತಿವೆ. ಇಂತಹ ಸಮಯದಲ್ಲಿ ಮಾರ್ಗಸೂಚಿ ಪ್ರಕಟಿಸುವುದರಿಂದ ಶಾಲೆಗಳಲ್ಲಿ ಅನಗತ್ಯವಾಗಿ ಆತಂಕ ಸೃಷ್ಟಿಯಾಗಲಿದೆ. ಮಾರ್ಗಸೂಚಿಯನ್ನು ಪ್ರಕಟಿಸಲು ಅಧಿಕಾರ ನೀಡಿದವರಾರು ಎಂದು ಪ್ರಶ್ನಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts