More

    ಕಲ್ಕಿ 2898 ಎಡಿ ಎಂಬ ಮಾಯಾಲೋಕ; ಭೂತ- ಭವಿಷ್ಯಗಳ ರೋಮಾಂಚಕ ಪಯಣ

    ಚಿತ್ರ: ಕಲ್ಕಿ 2898 ಎಡಿ
    ನಿರ್ದೇಶಕ: ನಾಗ್ ಅಶ್ವಿನ್
    ನಿರ್ಮಾಪಕ: ಸಿ.ಅಶ್ವಿನಿ ದತ್
    ತಾರಾಗಣ: ಪ್ರಭಾಸ್, ಅಮಿತಾಭ್ ಬಚ್ಚನ್, ಕಮಲ್ ಹಾಸನ್, ದೀಪಿಕಾ ಪಡುಕೋಣೆ, ದಿಶಾ ಪಟಾನಿ, ಶೋಭನಾ ಮತ್ತಿತರರು.
    ರೇಟಿಂಗ್: 3.5

    ಶಿವ ಸ್ಥಾವರಮಠ
    ಮುಂದಿನ ಕಾಲವನ್ನು ಕಂಡವರು ಯಾರು? ಎಲ್ಲದರಲ್ಲೂ ತಂತ್ರಜ್ಞಾನ ಮುಂದುವರಿದು ನಾಳೆ ಹೊಟ್ಟೆಗೂ ನಾವು ವಿದ್ಯುತ್ ಆಶ್ರಯಿಸಬೇಕಾಗುತ್ತದೆಯೇ? ಇದನ್ನು ಊಹಿಸಲು ಅಸಾಧ್ಯ. ಆದರೆ ಇಂತಹ ಕಾಲ ಬಂದರೂ ಬರಬಹುದು ಎಂಬುದನ್ನು ನಿರ್ದೇಶಕ ನಾಗ್ ಅಶ್ವಿನ್, ಪೌರಾಣಿಕ ಹಾಗೂ ವೈಜ್ಞಾನಿಕ ಅಂಶಗಳೊಂದಿಗೆ ‘ಕಲ್ಕಿ 2898 ಎಡಿ’ ಸಿನಿಮಾದಲ್ಲಿ ಕಂಡಿದ್ದಾರೆ.
    ಮಹಾಭಾರತದ ಕುರುಕ್ಷೇತ್ರ ಯುದ್ಧದ ಒಂದು ಭಾಗದಿಂದ ಆರಂಭವಾಗುವ ಕಥೆಯು ಬಳಿಕ ಆಧುನಿಕತೆಗೆ ತೆರೆದುಕೊಳ್ಳುತ್ತದೆ. ದ್ವಾಪರ ಹಾಗೂ ಕಲಿಯುಗ ಈ ಎರಡು ಯುಗಗಳನ್ನು ಸಮೀಕರಿಸಿ ಕಥೆ ಹೇಳುವಲ್ಲಿ ನಿರ್ದೇಶಕ ನಾಗ್ ಅಶ್ವಿನ್ ಯಶಸ್ವಿಯಾಗಿದ್ದಾರೆ. ಇದಕ್ಕೆ ಸಾಕಷ್ಟು ಅಧ್ಯಯನ ಮಾಡಿರುವುದು ಎದ್ದು ಕಾಣುತ್ತದೆ.
    ಕಾಂಪ್ಲೆಕ್ಸ್ ಸಾಮ್ರಾಜ್ಯದಲ್ಲಿ ಸುಪ್ರೀಂ ಯಾಸ್ಕಿನ್ (ಕಮಲ್ ಹಾಸನ್)ನದೇ ಅಧಿಪತ್ಯ. ಸಾವು ಬರಬಾರದು ಎಂದು ಗರ್ಭಿಣಿಯರ ಭ್ರೂಣದ ಶಕ್ತಿಯಿಂದ ತನ್ನ ಶಕ್ತಿಯನ್ನು ಹೆಚ್ಚಿಸಿಕೊಳ್ಳುತ್ತಿರುತ್ತಾನೆ. ಆದರೂ ಶಕ್ತಿ ಒದಗಿರುವುದಿಲ್ಲ. ಕೊನೆಗೆ ಸೇವಕಿ (ದೀಪಿಕಾ ಪಡುಕೋಣೆ) ಭ್ರೂಣದ ಅರ್ಧ ಶಕ್ತಿ ಪಡೆಯುತ್ತಾನಾದರೂ, ಅಷ್ಟೊತ್ತಿಗೆ ಆಕೆ ಆ ಸಾಮ್ರಾಜ್ಯದಿಂದ ತಪ್ಪಿಸಿಕೊಂಡು ಸಂಬಾಲಾ ಸಾಮ್ರಾಜ್ಯಕ್ಕೆ ಪಾರಾಗುತ್ತಾಳೆ. ಈ ಸಮಯದಲ್ಲಿ ತೊಂದರೆಗಳು ಎದುರಾದಾಗ ಅಶ್ವತ್ಥಾಮ (ಅಮಿತಾಭ್ ಬಚ್ಚನ್) ಬಂದು ಪಾರು ಮಾಡುತ್ತಾನೆ. ಇದು ಕಥೆಯ ಒಂದು ಎಳೆ. ಕಲಿಯುಗದಲ್ಲಿ ಅಶ್ವತ್ಥಾಮನ ಅವತಾರ ಯಾವ ಕಾರಣಕ್ಕೆ? ಅಷ್ಟಕ್ಕೂ ಸುಮತಿ ಗರ್ಭದಲ್ಲಿರುವ ಮಗು ಯಾರು? ಇಂತಹ ಅಧುನಿಕ ಕಾಲದಲ್ಲಿ ಸುಪ್ರೀಂ ಯಾಸ್ಕಿನ್ ಶಕ್ತಿ ಹೆಚ್ಚಿಸಿಕೊಳ್ಳಲು ಸಾಧ್ಯವೇ ಎಂಬ ಕುತೂಹಲ ಚಿತ್ರಕಥೆಯದ್ದು.
    ದೀಪಿಕಾ ಪಡುಕೋಣೆ (ಸುಮತಿ) ಹಾಗೂ ಅಮಿತಾಭ್ ಬಚ್ಚನ್ (ಅಶ್ವತ್ಥಾಮ) ಪಾತ್ರಗಳು ಮುಖ್ಯ ಪಾತ್ರವಹಿಸಿವೆ. ನಟ ಪ್ರಭಾಸ್ (ಭೈರವ) ಪಾತ್ರ ಇಂಡ್ರೋಕ್ಷನ್ ರೀತಿಯಲ್ಲಿದ್ದು, ಸಾಹಸ ದೃಶ್ಯಗಳಲ್ಲಿ ಚೆನ್ನಾಗಿ ತೋರಿಸಲಾಗಿದೆ. ಜತೆಗಾರ ‘ಬುಜ್ಜಿ’ ಗಮನಸೆಳೆಯುತ್ತದೆ. ನಾಯಕಿ ದಿಶಾ ಪಟಾನಿ, ನಟರಾದ ದುಲ್ಖರ್ ಸಲ್ಮಾನ್, ವಿಜಯ ದೇವರಕೊಂಡ, ಬ್ರಹ್ಮನಂದಂ, ನಿರ್ದೇಶಕರಾದ ಎಸ್.ಎಸ್.ರಾಜಮೌಳಿ, ರಾಮ್‌ಗೋಪಾಲ್ ವರ್ಮ ಬಂದು ಹೋದರು ಕಥೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.
    ಸಂಬಾಲಾ ಹಾಗೂ ಕಾಂಪ್ಲೆಕ್ಸ್ ಸಾಮ್ರಾಜ್ಯವನ್ನು ಗ್ರಾಫಿಕ್ ಡಿಸೈನ್‌ನಲ್ಲಿ ದೃಶ್ಯಕಾವ್ಯದಂತೆ ಕಟ್ಟಲಾಗಿದ್ದು ತಾಂತ್ರಿಕತೆಯನ್ನು ಗರಿಷ್ಠವಾಗಿ ಬಳಸಲಾಗಿದೆ. ಅದ್ದೂರಿ ಸೆಟ್‌ಗಳು, ಹೈ ಟೆಕ್ನಾಲಜಿ ವಾಹನಗಳು ರೋಮಾಂಚನ ಮೂಡಿಸಿ, ಹಾಲಿವುಡ್ ಸಿನಿಮಾಗೆ ಕರೆದುಕೊಂಡು ಹೋಗುತ್ತವೆ. ಪ್ರತಿಯೊಬ್ಬ ಪಾತ್ರಧಾರಿಗೂ ವಸಲಂಕಾರ ಒಪ್ಪಿದ್ದು, ಕಲೆಗಾರನ ಕಸುವು ಕೆಲಸ ಮಾಡಿದೆ. ಮೈನವಿರೇಳಿಸುವ ಸಾಹಸ ದೃಶ್ಯಗಳು ಇಡೀ ಚಿತ್ರವನ್ನು ಸೂಜಿಗಲ್ಲಿನಂತೆ ಹಿಡಿದಿಟ್ಟುಕೊಳ್ಳುತ್ತವೆ. ಇದು ಚಿತ್ರದ ಹೈಲೈಟ್. ಜೊರ್ಡ್ಜೆ ಸ್ಟೋಜಿಲ್ಕೋವಿಕ್ ಛಾಯಾಗ್ರಹಣದ ಪರಿಶ್ರಮ ಎದ್ದು ಕಾಣುತ್ತದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts