More

    ಕೆ.ಸಿ. ಜನರಲ್ ಆಸ್ಪತ್ರೆ 200 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿ

    ಬೆಂಗಳೂರು: ಮಲ್ಲೇಶ್ವರದಲ್ಲಿರುವ ಕೆ.ಸಿ.ಜನರಲ್ ಆಸ್ಪತ್ರೆಯನ್ನು ಮೇಲ್ದರ್ಜೆಗೇರಿಸಲು 200 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲಾಗುವುದು ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.

    ಆಸ್ಪತ್ರೆಗೆ ಶನಿವಾರ ಭೇಟಿ ನೀಡಿ ಪರಿಶೀಲನೆ ನಡೆಸಿದ ಸಚಿವರು, ಟ್ರಾಮಾ ಸೆಂಟರ್, ತಾಯಿ ಮತ್ತು ಮಕ್ಕಳ ಆಸ್ಪತ್ರೆ ಸೇರಿ ವಿವಿಧ ಅಭಿವೃದ್ಧಿ ಕಾಮಗಾರಿಗಳ ಕುರಿತು ಅಧಿಕಾರಿಗಳೊಂದಿಗೆ ಸಭೆ ನಡೆಸಿದರು. ಈ ವೇಳೆ 200 ಕೋಟಿ ರೂ. ವೆಚ್ಚದಲ್ಲಿ ಆಸ್ಪತ್ರೆಯನ್ನು ಅಭಿವೃದ್ಧಿ ಪಡಿಸುವ ಮೂಲಕ ಜನರಿಗೆ ಗುಣಮಟ್ಟದ ಸೇವೆ ಒದಗಿಸಲು ಕ್ರಮ ವಹಿಸುವುದಾಗಿ ಹೇಳಿದರು.

    ಆಸ್ಪತ್ರೆ ಆವರಣದಲ್ಲಿ 35 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ 50 ಹಾಸಿಗೆಗಳ ಸಾಮರ್ಥ್ಯದ ಟ್ರಾಮಾಕೇರ್ ಸೆಂಟರ್ ಕಾಮಗಾರಿ ಪರಿಶೀಲಿಸಿ, ಮಾರ್ಚ್ ಅಂತ್ಯದೊಳಗೆ ಕಾಮಗಾರಿ ಪೂರ್ಣಗೊಳಿಸುವಂತೆ ಸೂಚನೆ ನೀಡಿದರು. ಇದೇ ವೇಳೆ ಆಸ್ಪತ್ರೆಯಲ್ಲಿನ ತುರ್ತು ನಿಗಾ ಘಟಕವನ್ನು ನೂತನವಾಗಿ ನಿರ್ಮಾಣಗೊಳ್ಳಲಿರುವ ಟ್ರಾಮಾಕೇರ್ ಸೆಂಟರ್‌ಗೆ ಸ್ಥಳಾಂತರಿಸುವ ಬಗ್ಗೆಯೂ ಚರ್ಚಿಸಿದರು.

    ತಾಯಿ ಮತ್ತು ಮಕ್ಕಳ ಆಸ್ಪತ್ರೆ: ಆಸ್ಪತ್ರೆ ಆವರಣದಲ್ಲಿ ಹೊಸದಾಗಿ 66.78 ಕೋಟಿ ರೂ. ವೆಚ್ಚದಲ್ಲಿ 200 ಹಾಸಿಗೆಗಳ ಸಾಮರ್ಥ್ಯದ ತಾಯಿ ಮತ್ತು ಮಕ್ಕಳ ಆಸ್ಪತ್ರೆ ಕಟ್ಟಡ ಕಾಮಗಾರಿ ಪ್ರಾರಂಭಿಸಲಾಗುತ್ತಿದೆ. ಇದರ ಶಂಕುಸ್ಥಾಪನೆ ಕಾರ್ಯಕ್ಕೆ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು.

    ಮಧ್ಯರಾತ್ರಿವರೆಗೂ ಔಷಧಿ ಪೂರೈಕೆ: ಚಿಕಿತ್ಸೆಗಾಗಿ ಆಸ್ಪತ್ರೆಗೆ ಬರುವ ರೋಗಿಗಳು ಔಷಧಿಗಾಗಿ ಹೊರಗೆ ಹೋಗುವ ಸ್ಥಿತಿ ತಪ್ಪಬೇಕು. ಹಾಗಾಗಿ ಆಸ್ಪತ್ರೆ ಆವರಣದಲ್ಲಿರುವ ಖಾಸಗಿ ಔಷಧಾಲಯಗಳಿಗೆ ಗೇಟ್ ಪಾಸ್ ನೀಡಿ, ಸರ್ಕಾರಿ ಔಷಧಾಲಯವನ್ನೇ ಮಧ್ಯರಾತ್ರಿ ವರೆಗೂ ತೆರೆಯಲು ಸಿಬ್ಬಂದಿ ನೇಮಕ ಸೇರಿ ಅಗತ್ಯ ಕ್ರಮ ಕೈಗೊಳ್ಳೂವಂತೆ ಹೇಳಿದರು. ಅದೇ ರೀತಿ ಹೃದಯಾಘಾತ ಸೇರಿ ಹೃದಯ ಸಂಬಂಧಿ ಸಮಸ್ಯೆಯಿಂದ ಬರುವವರಿಗೆ ತುರ್ತು ಚಿಕಿತ್ಸೆ ನೀಡಲು ಸ್ಥಾಪಿಸಿರುವ ಜಯದೇವ ಹೃದ್ರೋಗ ಘಟಕಕ್ಕೆ ರಾತ್ರಿ 10 ಗಂಟೆ ವರೆಗೂ ಕಾರ್ಯನಿರ್ವಹಿಸುವಂತೆ ಕ್ರಮವಹಿಸಲು ಅಧಿಕಾರಿಗಳಿಗೆ ಸೂಚಿಸಿದರು.

    ಈ ವೇಳೆ ಆರೋಗ್ಯ ಇಲಾಖೆ ಆಯುಕ್ತ ಡಿ. ರಂದೀಪ್, ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕಿ ಇಂದರಾ ಕಬಾಡೆ, ಸ್ಥಾನಕ ವೈದ್ಯಾಧಿಕಾರಿ ಡಾ. ಮೋಹನ್ ಸೇರಿ ಇಲಾಖೆ ಹಾಗೂ ಆಸ್ಪತ್ರೆಯ ಅಧಿಕಾರಿಗಳು ಹಾಜರಿದ್ದರು.

    ಆಸ್ಪತ್ರೆಯಲ್ಲಿನ ಅಭಿವೃದ್ಧಿ ಕಾಮಗಾರಿಗಳು:
    * 66.78 ಕೋಟಿ ವೆಚ್ಚದಲ್ಲಿ 200 ಹಾಸಿಗೆಯ ತಾಯಿ ಮತ್ತು ಮಕ್ಕಳ ಆಸ್ಪತ್ರೆ ನಿರ್ಮಾಣ
    * 35 ಕೋಟಿ ರೂ. ವೆಚ್ಚದಲ್ಲಿ ಟ್ರಾಮಾಕೇರ್ ಸೆಂಟರ್ ಕಾಮಗಾರಿ ಮಾರ್ಚ್‌ವೇಳೆಗೆ ಪೂರ್ಣ
    * 38.28 ಕೋಟಿ ರೂ. ವೆಚ್ಚದಲ್ಲಿ ಭೋದಕ ವಿಭಾಗ ಕಟ್ಟಡ ನಿರ್ಮಾಣ
    * 4.28 ಕೋಟಿ ವೆಚ್ಚದಲ್ಲಿ ಶವಾಗಾರ ಕೊಠಡಿ
    * 4.80 ಕೋಟಿ ವೆಚ್ಚದ ಅಗ್ನಿ ಶಾಮಕ ವ್ಯವಸ್ಥೆ
    * 2 ಕೋಟಿ ವೆಚ್ಚದಲ್ಲಿ ಲಾಂಡ್ರಿ ವ್ಯವಸ್ಥೆ
    * 38 ಲಕ್ಷ ರೂ. ವೆಚ್ಚದಲ್ಲಿ ಜೈವಿಕ ವೈದ್ಯಕೀಯ ತ್ಯಾಜ್ಯ ಘಟಕ
    * ಮುರಿದು ಬಿದ್ದಿರುವ ಆರ್‌ಸಿಸಿ ಸಜ್ಜಾಗಳ ಮರು ನಿರ್ಮಾಣ, ಶೌಚಾಲಯಗಳಲ್ಲಿನ ನೀರು ಸರಬರಾಜು ಮತ್ತು ನೈರ್ಮಲೀಕರಣ ವ್ಯವಸ್ಥೆ ಸೇರಿ ಆಸ್ಪತ್ರೆಯ ಹಳೆಯ ಕಟ್ಟಡಗಳ ದುರಸ್ಥಿಗಾಗಿ ಸರ್ಕಾರಕ್ಕೆ 9.98 ಕೋಟಿ ರೂ. ವೆಚ್ಚದ ಪ್ರಸ್ತಾವನೆ ಸಲ್ಲಿಸಲು ಕ್ರಮ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts