More

    ಕಡಲೊಡಲು ಸೇರುತ್ತಿದೆ ಭೂಭಾಗ: ಮರವಂತೆಯಲ್ಲಿ ನಾಡದೋಣಿ ಜಾಗ ಸಮುದ್ರ ಪಾಲು; ಸುರಕ್ಷತೆಗೆ ಕ್ರಮ ಅಗತ್ಯ

    ವಿಜಯವಾಣಿ ಸುದ್ದಿಜಾಲ ಗಂಗೊಳ್ಳಿ

    ಕಳೆದ ಮಳೆಗಾಲದಲ್ಲಿ ಹಾನಿಗೊಂಡಿದ್ದ ಮರವಂತೆ ಔಟ್‌ಡೋರ್ ಬಂದರು ಈ ಬಾರಿ ಮತ್ತೆ ಅಪಾಯಕ್ಕೆ ಸಿಲುಕಿದ್ದು, ಅಬ್ಬರಿಸುತ್ತಿರುವ ಕಡಲಿನ ಹೊಡೆತದಿಂದ ಬಂದರು ಜರ್ಜರಿತಗೊಂಡಿದೆ. ಕೇರಳ ಮಾದರಿ ಮರವಂತೆ ಔಟ್‌ಡೋರ್ ಬಂದರಿನಲ್ಲಿ ಕಡಲಿನ ರಕ್ಕಸ ಗಾತ್ರದ ಅಲೆಗಳು ಬಂದರಿನ ಬ್ರೇಕ್ ವಾಟರ್ ತಡೆಗೋಡೆಗೆ ಬಡಿಯುತ್ತಿದ್ದು, ತಡೆಗೋಡೆ ಟೆಟ್ರಾಪಾಡ್ ಮತ್ತು ಕಲ್ಲುಗಳು ಜಾರಿ ಕಡಲ ಒಡಲು ಸೇರುತ್ತಿದೆ. ಸಮುದ್ರದ ಅಲೆಗಳು ಬಂದರಿನ ಒಳಗೆ ಅಪ್ಪಳಿಸುತ್ತಿರುವುದರಿಂದ ಬಂದರು ಪ್ರದೇಶದಲ್ಲಿ ಯಾಂತ್ರೀಕೃತ ನಾಡದೋಣಿ ನಿಲುಗಡೆ ಜಾಗವನ್ನು ಸಮುದ್ರ ಕಬಳಿಸಲಾರಂಭಿಸಿದೆ. ನಾಲ್ಕೈದು ದಿನಗಳಿಂದ ಸುರಿಯುತ್ತಿರುವ ಮಳೆಗೆ ಅಲೆಗಳ ಅಬ್ಬರ ಹೆಚ್ಚಾಗಿದ್ದು, ಮಳೆ ಅಬ್ಬರಕ್ಕೆ ಮರವಂತೆ ಬಂದರು ಅಕ್ಷರಶಃ ನಲುಗಿ ಹೋಗಿದೆ. ಬಂದರಿನ ಒಳಾಂಗಣದಲ್ಲಿ ತೀವ್ರ ಕಡಲ್ಕೊರೆತ ಕಾಣಿಸಿಕೊಂಡಿದೆ.

    ನಾಡದೋಣಿ ನಿಲುಗಡೆ ಅಪಾಯ

    ಬಂದರಿನ ಒಳಗೆ ನಾಡದೋಣಿ ನಿಲುಗಡೆಗೆ ಇದ್ದ ಭೂಭಾಗವನ್ನು ಕಡಲು ಅಪೋಶನ ತೆಗೆದುಕೊಳ್ಳುತ್ತಾ ಮುನ್ನುಗ್ಗುತ್ತಿದ್ದು, ದೋಣಿ ನಿಲ್ಲಿಸಿರುವವಲ್ಲಿಗೆ ಕೊಚ್ಚಿಕೊಂಡು ಮುಂದೊತ್ತಿ ಬರುತ್ತಿದೆ. ಕಡಲ ಅಲೆಗಳ ಅಬ್ಬರಕ್ಕೆ ಬಂದರು ಒಳಾಂಗಣದ ಬಹುತೇಕ ಭೂಭಾಗ ಕಡಲ ಒಡಲು ಸೇರಿಕೊಂಡಿದೆ.

    ಕೊಚ್ಚಿ ಹೋಗುವ ಭೀತಿ

    ಬಂದರಿನಲ್ಲಿ ಅಳವಡಿಸಲಾಗಿದ್ದ ಹೈಮಾಸ್ಟ್ ದೀಪದ ಕಂಬಗಳು ಕೊಚ್ಚಿ ಹೋಗುವ ಭೀತಿ ಎದುರಾಗಿದ್ದು, ಬಂದರಿನಲ್ಲಿ ಅಳವಡಿಸಲಾಗಿರುವ ಇಂಟರ್‌ಲಾಕ್ ಕೂಡ ಕಡಲ ಒಡಲು ಸೇರುವ ಭೀತಿ ಎದುರಾಗಿದೆ. ನಾಡದೋಣಿ ನಿಲುಗಡೆ ಸ್ಥಳದಲ್ಲಿ ಕಡಲ್ಕೊರೆತ ತಡೆಯಲು ತಾತ್ಕಾಲಿಕ ಅಳವಡಿಸಲಾಗಿದ್ದ ಮರಳು ಚೀಲ ಹಾಗೂ ಟೆಟ್ರಾಪಾಡ್ ಅಲ್ಲಲ್ಲಿ ಕುಸಿದು ಬಿದ್ದಿದೆ. ಕಡಲ ಆರ್ಭಟ ತಡೆಯಲು ಸ್ಥಳೀಯ ಮೀನುಗಾರರು ದೊಡ್ಡ ಗಾತ್ರದ ಮರಳು ಚೀಲವನ್ನು ಅಳವಡಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ. ಕಡಲಿನ ಅಬ್ಬರ ಇದೇ ರೀತಿ ಮುಂದುವರಿದರೆ ಮರವಂತೆ ಔಟ್‌ಡೋರ್ ಬಂದರು ನಾಮಾವಶೇಷವಾಗುವ ಪರಿಸ್ಥಿತಿ ನಿರ್ಮಾಣಗೊಂಡಿದೆ.

    ಕಾಮಗಾರಿ ಅಪೂರ್ಣ

    2013ರಲ್ಲಿ ಆರಂಭಗೊಂಡಿದ್ದ ಮರವಂತೆ ಔಟ್‌ಡೋರ್ ಬಂದರು ಕಾಮಗಾರಿ ಈವರೆಗೆ ಪೂರ್ಣಗೊಂಡಿಲ್ಲ. ಈವರೆಗೆ ನಡೆದಿರುವ ಸುಮಾರು 55 ಕೋಟಿ ರೂ. ವೆಚ್ಚದ ಕಾಮಗಾರಿ ಶೇ.50ರಷ್ಟು ಸಮುದ್ರ ಪಾಲಾಗಿದೆ. ಬಂದರಿನ ರಕ್ಷಣೆ ಮತ್ತು ವಿನ್ಯಾಸ ಬದಲಾವಣೆಗಾಗಿ ಬಿಡುಗಡೆಯಾದ 85 ಕೋಟಿ ರೂ. ಅನುದಾನ ಇನ್ನೂ ಕಾರ್ಯರೂಪಕ್ಕೆ ಬಂದಿಲ್ಲ. ಕಾಮಗಾರಿ ಸ್ಥಗಿತಗೊಂಡು ಸುಮಾರು 2 ವರ್ಷ ಕಳೆದಿದ್ದು, ಕಡಲಿನ ಆರ್ಭಟಕ್ಕೆ ಆಗಿರುವ ಬಂದರು ಕಾಮಗಾರಿ ನೆಲಕಚ್ಚುವ ಪರಿಸ್ಥಿತಿ ಬಂದಿದೆ. 525 ಮೀ. ಉದ್ದದ ಬ್ರೇಕ್ ವಾಟರ್ ಸದ್ಯ ಬಂದರಿನ ರಕ್ಷಣೆಗೆ ನಿಂತುಕೊಂಡಿದ್ದರೂ. ಸಮುದ್ರದ ಅಲೆಗಳು ಮುಂದೊತ್ತಿ ಬಂದರಿನ ಒಳಾಂಗಣ ಪ್ರವೇಶಿಸುತ್ತಿರುವುದನ್ನು ನೋಡಿದಾಗ ಬಂದರಿನ ಅಸುರಕ್ಷತೆ ಕಾಡುತ್ತಿದೆ.

    ಕಳೆದ ನಾಲ್ಕೈದು ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಕಡಲಿನ ಆರ್ಭಟ ಹೆಚ್ಚಾಗಿದ್ದು, ಕಡಲಿನ ರಕ್ಕಸ ಅಲೆಗಳು ಬ್ರೇಕ್ ವಾಟರ್ ತಡೆಗೋಡೆಗೆ ಅಪ್ಪಳಿಸಿ ಔಟ್‌ಡೋಡ್ ಬಂದರಿನ ಒಳಗೆ ಮುಂದೊತ್ತಿ ಬಂದು ಯಾಂತ್ರೀಕೃತ ನಾಡದೋಣಿ ನಿಲುಗಡೆ ಜಾಗವನ್ನು ಸಮುದ್ರ ಕಬಳಿಸಲಾರಂಭಿಸಿದೆ. ಪರಿಸ್ಥಿತಿ ಹೀಗೆ ಮುಂದುವರಿದಲ್ಲಿ ಔಟ್‌ಡೋರ್ ಬಂದರು ಇನ್ನಿಲ್ಲದಂತೆ ಮರೆಯಾಗುವ ಸಾಧ್ಯತೆ ಇದೆ. ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಗಮನ ಹರಿಸಿ ಬಂದರು ಸುರಕ್ಷತೆಗೆ ಗಮನ ಹರಿಸಬೇಕಿದೆ.
    -ಶ್ರೀಧರ ಖಾರ್ವಿ ಮೀನುಗಾರರು, ಮರವಂತೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts