More

    ಕಾಯರ್‌ಪದವು ದರೋಡೆ ಪ್ರಕರಣದ ತನಿಖೆ ಆರಂಭ; ಸಿಸಿಟಿವಿ ಫೂಟೇಜ್‌ನಲ್ಲಿ ಸುಳಿವು ಲಭ್ಯ: ಗಾಯಗೊಂಡಿದ್ದ ಉದ್ಯಮಿ ಬಿಎಲ್‌ಪಿ ಚೇತರಿಕೆ

    ವಿಜಯವಾಣಿ ಸುದ್ದಿಜಾಲ ಗುರುಪುರ
    ಉಳಾಯಿಬೆಟ್ಟು – ಪೆರ್ಮಂಕಿ ಸಮೀಪದ ಕಾಯರ್‌ಪದವು ಎಂಬಲ್ಲಿ ಶುಕ್ರವಾರ ರಾತ್ರಿ ಉದ್ಯಮಿ ಹಾಗೂ ಕಾಂಗ್ರೆಸ್ ಮುಖಂಡ ಪದ್ಮನಾಭ ಕೋಟ್ಯಾನ್ (ಬಿಎಲ್‌ಪಿ)ಗೆ ಚೂರಿಯಿಂದ ಇರಿದು ಮನೆಯಿಂದ ಚಿನ್ನಾಭರಣ ದರೋಡೆಗೈದ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಘಟನೆಯಲ್ಲಿ ಗಾಯಗೊಂಡಿದ್ದ ಕೋಟ್ಯಾನ್ ಅವರು ಪ್ರಸ್ತುತ ಆಸ್ಪತ್ರೆಯಲ್ಲಿ ಚೇತರಿಸಿಕೊಳ್ಳುತ್ತಿದ್ದಾರೆ.

    ಸ್ಥಳ ಪರಿಶೀಲಿಸಿದ ಸಿಸಿಬಿ ಪೊಲೀಸ್ ತಂಡ

    ಶನಿವಾರ ಬೆಳಗ್ಗೆ ಮಂಗಳೂರು ಸಿಸಿಬಿ ಪೊಲೀಸ್ ತಂಡ ಕೋಟ್ಯಾನ್ ಅವರ ‘ಪ್ರಥಮ್’ ನಿವಾಸಕ್ಕೆ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದೆ. ಮನೆಯೊಳಗೆ ಮಹಜರು ನಡೆಸಿದ ಪೊಲೀಸರು, ದರೋಡೆಕೋರರು ಕಾಂಪೌಂಡ್ ಮೂಲಕ ಮನೆಯಂಗಳಕ್ಕೆ ಜಿಗಿದ ಹೆಜ್ಜೆ ಗುರುತುಗಳ ಚಿತ್ರೀಕರಣ ನಡೆಸಿದ್ದಾರೆ. ಕಾಂಪೌಂಡಿನ ಇತರ ಎರಡು ಕಡೆಯಲ್ಲಿ ಜಿಗಿಯಲು ವಿಫಲ ಯತ್ನ ನಡೆಸಿರುವ ದುಷ್ಕರ್ಮಿಗಳು 3ನೇ ಬಾರಿಗೆ ತಗ್ಗು ಗೋಡೆ ಮೂಲಕ ಜಿಗಿದು ಒಳಪ್ರವೇಶಿಸಿದ್ದರು.

    ಘಟನೆ ವಿವರ

    ಶುಕ್ರವಾರ ರಾತ್ರಿ 8ರ ಸುಮಾರಿಗೆ ಏಳೆಂಟು ಮಂದಿ ಮುಸುಕುಧಾರಿಗಳು ಕಾಂಪೌಂಡ್ ಹಾರಿ, ತೋಟದ ಮೂಲಕ ಮನೆಯ ಅಂಗಳಕ್ಕೆ ಪ್ರವೇಶಿಸಿದ್ದಾರೆ. ಈ ಸಂದರ್ಭ ಕೋಟ್ಯಾನ್ ಅವರು ಅಂಗಳದಲ್ಲಿ ವಾಕಿಂಗ್ ಮಾಡುತ್ತಿದ್ದರೆ, ಪುತ್ರ ಪ್ರಥಮ್ ಹಾಗೂ ಪತ್ನಿ ಶಶಿಪ್ರಭಾ ಮನೆಯೊಳಗಿದ್ದರು. ಕಾಂಪೌಂಡ್ ಹಾರಿಬಂದ ಅಪರಿಚಿತರನ್ನು ಪ್ರಶ್ನಿಸಿದ ಕೋಟ್ಯಾನ್ ಅವರಿಗೆ ನಾಲ್ಕೈದು ಮಂದಿ ಸೇರಿ ಮುಖ, ಹೊಟ್ಟೆಗೆ ಹೊಡೆದಿದ್ದಾರೆ. ಬಳಿಕ ಚೂರಿಯಿಂದ ಕೈ ಮತ್ತು ಕಾಲಿಗೆ ಇರಿದು ಗಾಯಗೊಳಿಸಿ, ಕೊರಳಲ್ಲಿದ್ದ ಚಿನ್ನದ ಸರ ಕಿತ್ತುಕೊಂಡಿದ್ದಾರೆ.

    ಕೈ ಕಾಲು ಕಟ್ಟಿ ಹಾಕಿದ ತಂಡ

    ಕೋಟ್ಯಾನ್ ಮೇಲೆ ಹಲ್ಲೆ ನಡೆಸಿದ ತಂಡ ಬಳಿಕ ಮನೆಯೊಳಗೆ ಪ್ರವೇಶಿಸಿ ಪುತ್ರ ಪ್ರಥಮ್ ಹಾಗೂ ಆತನ ತಾಯಿ ಶಶಿಪ್ರಭಾ ಅವರನ್ನು ಹಗ್ಗದಿಂದ ಕಟ್ಟಿ ಹಾಕಿ, ಕಪಾಟಿನ ಕೀಲಿಕೈ ಕೇಳಿದ್ದಾರೆ. ಕೀ ನೀಡದೆ ಹೋದಲ್ಲಿ ಮನೆ ಹೊರಗಿದ್ದ ತಂದೆಯನ್ನು ಕೊಲ್ಲುವುದಾಗಿ ಬೆದರಿಕೆಯೊಡ್ಡಿದ್ದಾರೆ. ತಂದೆಗೆ ಅಪಾಯವಿದೆ ಎಂದರಿತ ಪುತ್ರ ಕಪಾಟಿನ ಕೀಲಿಕೈ ನೀಡಿದ್ದು, ದರೋಡೆಕೋರರು ಈ ಕೀಲಿ ಕೈ ಬಳಸಿ ಹಣ ಮತ್ತು ಚಿನ್ನಾಭರಣ ಅಪಹರಿಸಿದ್ದಾರೆ. ಮನೆಯ ಪ್ರತಿಯೊಂದು ಕೋಣೆಯನ್ನೂ ಜಾಲಾಡಿದ ದರೋಡೆಕೋರರು, ನೆಲದಡಿ(ಟೈಲ್ಸ್ ಒಳಗೆ) ನಗದು, ಚಿನ್ನಾಭರಣ ಇಟ್ಟಿರಬಹುದಾದ ಬಗ್ಗೆ ಪ್ರಥಮ್‌ನಲ್ಲಿ ಪ್ರಶ್ನಿಸಿದ್ದರು ಎನ್ನಲಾಗಿದೆ.

    ಕೆಲಸದಾಕೆಗೂ ಬೆದರಿಕೆ

    ಘಟನೆ ನಡೆಯುತ್ತಿದ್ದಂತೆ ಮನೆಕೆಲಸದಾಕೆ ಕೋಟ್ಯಾನ್ ಮನೆಯಂಗಳಕ್ಕೆ ಬಂದಿದ್ದು, ಈ ಸಂದರ್ಭ ಅಂಗಳದಲ್ಲಿದ್ದ ದುಷ್ಕರ್ಮಿಗಳು ಆಕೆಗೆ ಚೂರಿ ತೋರಿಸಿ ಜೀವ ಬೆದರಿಕೆ ಹಾಕಿ ಕಳುಹಿಸಿದ್ದರು. ಆಕೆ ಸಂಶಯದ ಮೇಲೆ ಇತರರಿಗೆ ಕರೆ ಮಾಡಿದ ಬಳಿಕವಷ್ಟೇ ದರೋಡೆ ಪ್ರಕರಣ ಬೆಳಕಿಗೆ ಬಂದಿದೆ.

    ಸಿ.ಸಿ.ಟಿವಿ ಬದಲು ಟಿವಿ ಕೇಬಲ್ ಕಟ್ !

    ದರೋಡೆಕೋರರು ಕೋಟ್ಯಾನ್ ಮನೆಗೆ ದಾಳಿ ಮಾಡುವ ಮುನ್ನ ಮನೆಯ ಸಿ.ಸಿ.ಟಿವಿ ಸಂಪರ್ಕ ಕಡಿದು ಹಾಕುವ ಪ್ರಯತ್ನ ನಡೆಸಿದ್ದರು. ಆದರೆ ಅವರು ಸಿಸಿಟಿವಿ ಬದಲು ಮನೆಯ ಕೇಬಲ್ ಟಿವಿ ಸಂಪರ್ಕ ಕಡಿತಗೊಳಿಸಿದ್ದರಿಂದ ತಂಡದ ಕೃತ್ಯ ಸಂಪೂರ್ಣ ಸಿಸಿಟಿವಿ ಹಾರ್ಡ್‌ಡಿಸ್ಕ್‌ನಲ್ಲಿ ದಾಖಲಾಗಿದೆ. ಸಿಸಿಟಿವಿ ಪರಿಶೀಲನೆ ನಡೆಸಿರುವ ಪೊಲೀಸರಿಗೆ ದರೋಡೆಕೋರರ ಕೆಲವು ಚಿತ್ರಗಳು ಲಭಿಸಿದ್ದು, ಪಕ್ಕದ ಮನೆ ಹಾಗೂ ರಸ್ತೆಯಲ್ಲಿನ ಸಿ.ಸಿ.ಟಿವಿ ದೃಶ್ಯಾವಳಿಗಳನ್ನು ಸಂಗ್ರಹಿಸಿರುವ ಪೊಲೀಸರು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.

    ಕೆಲಸದಾಳುಗಳ ಕೈವಾಡ ?

    ವಾರಾಂತ್ಯದಲ್ಲಿ ಕೆಲಸದಾಳುಗಳಿಗೆ ಸಂಬಳ ನೀಡಲು ಕೋಟ್ಯಾನ್ ಅವರು ಶುಕ್ರವಾರವೇ ಬ್ಯಾಂಕ್‌ನಿಂದ ಹಣ ಡ್ರಾ ಮಾಡಿರಬೇಕೆಂಬ ಸಂಶಯದಿಂದ ದರೋಡೆಕೋರರು, ನಗದಿಗಾಗಿ ಮನೆಯಲ್ಲಿ ಜಾಲಾಡಿದ್ದಾರೆ ಎನ್ನಲಾಗಿದೆ. ಹಿಂದೆ ಕೋಟ್ಯಾನ್ ಅವರ ಜೆಸಿಬಿ ಅಥವಾ ಇತರ ವಾಹನಗಳ ಚಾಲಕರಾಗಿ ಕೆಲಸ ಮಾಡಿದ್ದ ಉತ್ತರ ಪ್ರದೇಶದ ಕಾರ್ಮಿಕರು ಮನೆಯ ಬಗ್ಗೆ ದರೋಡೆಕೋರರಿಗೆ ನಿಖರ ಮಾಹಿತಿ ನೀಡಿರುವ ಸಾಧ್ಯತೆಗಳಿವೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts