More

    ಪುಸ್ತಕಗಳ ಮೂಲಕ ಸಂಸ್ಕೃತಿಯ ಪರಿಚಯವಾಗುತ್ತದೆ: ಮಹೇಶ್ ನಾಚಯ್ಯ

    ಮಡಿಕೇರಿ: ಕೊಡಗಿನ ಕಲೆ, ಸಾಹಿತ್ಯ, ಸಂಸ್ಕೃತಿ ಮತ್ತು ಪರಂಪರೆ ಪುಸ್ತಕಗಳ ಮೂಲಕ ಎಲ್ಲರಿಗೂ ಪರಿಚಯವಾಗುತ್ತಿದ್ದು, ಇದು ಉತ್ತಮ ಬೆಳವಣಿಗೆ ಎಂದು ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಅಜ್ಜಿನಿಕಂಡ ಮಹೇಶ್ ನಾಚಯ್ಯ ಹೇಳಿದರು.


    ನಗರದ ಭಾರತೀಯ ವಿದ್ಯಾಭವನದಲ್ಲಿ ಹಿರಿಯ ಸಾಹಿತಿ ಮೊಣ್ಣಂಡ ಶೋಭಾ ಸುಬ್ಬಯ್ಯ ಅವರ ಪಾರು ಇಂಗ್ಲೀಷ್ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಗುರುವಾರ ಪಾಲ್ಗೊಂಡು ಅವರು ಮಾತನಾಡಿದರು.


    ಪುಸ್ತಕಗಳ ಮೂಲಕ ಸಂಸ್ಕೃತಿಯ ಪರಿಚಯವಾಗುತ್ತದೆ ಮತ್ತು ಸಾಹಿತ್ಯದ ಬೆಳವಣಿಗೆಯಾಗುತ್ತದೆ. ಆಚಾರ, ವಿಚಾರಗಳನ್ನು ಉಳಿಸಿ ಬೆಳೆಸುವ ಶಕ್ತಿ ಕೂಡ ಪುಸ್ತಕಗಳಿಗಿದೆ. ಆದ್ದರಿಂದ ಹೆಚ್ಚು ಹೆಚ್ಚು ಪುಸ್ತಕಗಳು ರಚನೆಯಾಗಬೇಕು ಎಂದರು.


    ಆಧುನಿಕತೆಯ ಭರಾಟೆಯಿಂದಾಗಿ ಹಿಂದಿನ ಪ್ರೀತಿ, ವಿಶ್ವಾಸ, ಅಭಿಮಾನ ಇಂದು ಕಾಣುತ್ತಿಲ್ಲ. ಹಿರಿಯರು ಅಂದು ಅನುಭಿಸಿದ ಅನುಭವಗಳನ್ನು ಇಂದು ಪುಸ್ತಕದ ಮೂಲಕ ಓದಿ ತಿಳಿದುಕೊಳ್ಳುವಂತಾಗಿದೆ ಎಂದು ಮಹೇಶ್ ನಾಚಯ್ಯ ಬೇಸರ ವ್ಯಕ್ತಪಡಿಸಿದರು.


    ಮಡಿಕೇರಿ ಕೊಡವ ಸಮಾಜದ ಅಧ್ಯಕ್ಷ ಮಂಡುವಂಡ ಮುತ್ತಪ್ಪ ಮಾತನಾಡಿ, ಪ್ರಸ್ತುತ ದಿನಗಳಲ್ಲಿ ಸಮಾಜದಲ್ಲಿ ನಡೆಯುವ ವಿಭಿನ್ನ ವಿಚಾರಗಳ ಕುರಿತು ಪಾರು ಪುಸ್ತಕದಲ್ಲಿ ವಿವರಿಸಲಾಗಿದ್ದು, ಇದು ಎಲ್ಲರೂ ಓದಲೇ ಬೇಕಾದ ಪುಸ್ತಕವಾಗಿದೆ. ಸಾಹಿತಿ ಹಾಗೂ ಪುಸ್ತಕದ ಲೇಖಕಿ ಮೊಣ್ಣಂಡ ಶೋಭಾ ಸಬ್ಬಯ್ಯ ಅವರ ಬರವಣಿಗೆಗೆ ಮುಂದಿನ ದಿನಗಳಲ್ಲಿ ಮತ್ತಷ್ಟು ಪ್ರೋತ್ಸಾಹ ಸಿಗುವಂತಾಗಲಿ ಎಂದು ಶುಭ ಹಾರೈಸಿದರು.


    ಹಿರಿಯ ಸಾಹಿತಿ ಹಾಗೂ ಪಾರು ಪುಸ್ತಕದ ಲೇಖಕಿ ಮೊಣ್ಣಂಡ ಶೋಭಾ ಸುಬ್ಬಯ್ಯ ಮಾತನಾಡಿ, ಪ್ರಗತಿಶೀಲ ಸನ್ನಿವೇಶಗಳ ಮೇಲೆ ಪುಸ್ತಕ ಬರೆಯುವ ಆಸಕ್ತಿ ಹೊಂದಿದ್ದ ನಾನು ಪ್ರಸ್ತುತ ದಿನಗಳಲ್ಲಿ ನಡೆಯುವ ಘಟನೆಗಳನ್ನು ಕೇಂದ್ರಿಕರಿಸಿ ಪಾರು ಪುಸ್ತಕ ರಚಿಸಿದ್ದೇನೆ. ಹೆಣ್ಣೊಬ್ಬಳು ತನ್ನ ಕಠಿಣ ನಿರ್ಧಾರಗಳಿಂದ ಜೀವನದಲ್ಲಿ ಧೈರ್ಯವಾಗಿ ಹೇಗೆ ಮುನ್ನುಗ್ಗುತ್ತಾಳೆ ಎನ್ನುವುದನ್ನು ವಿವರಿಸಲಾಗಿದೆ. ಪುಸ್ತಕ ಪ್ರಕಟಿಸಲು ಸಹಕರಿಸಿದ ಮತ್ತು ಪ್ರೋತ್ಸಾಹ ನೀಡಿದ ಎಲ್ಲರಿಗೂ ಅಭಿನಂದನೆ ಸಲ್ಲಿಸುವುದಾಗಿ ತಿಳಿಸಿದರು.


    ಕಾರ್ಯಕ್ರಮವನ್ನು ಹಿರಿಯ ವೈದ್ಯರಾದ ಡಾ.ಜಯಲಕ್ಷ್ಮಿ ಪಾಟ್ಕರ್ ಉದ್ಘಾಟಿಸಿ, ಶುಭ ಹಾರೈಸಿದರು. ಉದ್ಯಮಿ ಪವಿತ್ರ ಅಪ್ಪಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಖ್ಯಾತ ವೈದ್ಯರು ಹಾಗೂ ಚಿಂತಕರಾದ ಡಾ.ಮನೋಹರ್ ಪಾಟ್ಕರ್, ಕೊಡವ ಮಕ್ಕಡ ಕೂಟದ ಅಧ್ಯಕ್ಷ ಬೊಳ್ಳಜಿರ ಬಿ.ಅಯ್ಯಪ್ಪ ಉಪಸ್ಥಿತರಿದ್ದರು. ಬೊಳ್ಳಜಿರ ಯಮುನಾ ಅಯ್ಯಪ್ಪ ಸ್ವಾಗತಿಸಿ, ನಿರೂಪಿಸಿದರು. ಕಂಬೆಯಂಡ ಸೀತಾಲಕ್ಷ್ಮಿ ಅಪ್ಪಯ್ಯ ಪ್ರಾರ್ಥಿಸಿದರೆ, ಲೇಖಕಿ ಮೊಣ್ಣಂಡ ಶೋಭಾ ಸುಬ್ಬಯ್ಯ ವಂದಿಸಿದರು. ಇದೇ ಸಂದರ್ಭ ಸಂತ ಜೋಸೆಫರ ಹಳೇ ವಿದ್ಯಾರ್ಥಿ ಸಂಘದ ವತಿಯಿಂದ ಚೌರೀರ ಕಾವೇರಿ ಪೂವಯ್ಯ ಅವರು, ಲೇಖಕಿ ಮೊಣ್ಣಂಡ ಶೋಭಾ ಸುಬ್ಬಯ್ಯ ಅವರಿಗೆ ಕಿರುಕಾಣಿಕೆ ನೀಡಿ ಗೌರವಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts