More

    ಕತ್ಪಾಜೆಯ ಕಾಂಕ್ರೀಟ್ ರಸ್ತೆ ಕುಸಿವ ಭೀತಿ: ಶಾಸಕ ಹರೀಶ್ ಪೂಂಜ ಪರಿಶೀಲನೆ

    ಬೆಳ್ತಂಗಡಿ: ಸವಣಾಲು ಗ್ರಾಮಕ್ಕೆ ತಾಗಿಕೊಂಡಿರುವ ಲಾಯಿಲ ಗ್ರಾಮ ವ್ಯಾಪ್ತಿಗೆ ಒಳಪಡುವ ಸವಣಾಲು ರಸ್ತೆಯಿಂದ ಆಯಿಲ, ಸಾಲಿಗ್ರಾಮ ತೆರಳುವ ಕತ್ಪಾಜೆ ಸಮೀಪ ಕಾಂಕ್ರೀಟ್ ರಸ್ತೆಯ ಅಂಚೊಂದು ಕುಸಿದು ರಸ್ತೆ ಸಂಪರ್ಕ ಕಡಿತಗೊಳ್ಳುವ ಸಾಧ್ಯತೆ ಎದುರಾಗಿದ್ದು, ಶಾಸಕ ಹರೀಶ್ ಪೂಂಜ ಬುಧವಾರ ಸ್ಥಳ ಪರಿಶೀಲಿಸಿ ಸಾರ್ವಜನಿಕರ ಅಹವಾಲು ಸ್ವೀಕರಿಸಿದರು.

    ಸವಣಾಲು ಮುಖ್ಯ ರಸ್ತೆಯಿಂದ ಸಾಲಿಗ್ರಾಮಕ್ಕೆ ತೆರಳುವ ಈ ಕಾಂಕ್ರೀಟ್ ರಸ್ತೆಯ ಅಂಚಿನಲ್ಲಿ ಕೆಳಭಾಗ ಸುಮಾರು 40 ಅಡಿಯಷ್ಟು ಕೆಳಭಾಗದಲ್ಲಿ ಖಾಸಗಿ ವರ್ಗ ಸ್ಥಳವಿದೆ. ಈ ಸ್ಥಳದ ಮಾಲೀಕರು ಜಾಗವನ್ನು ಕಳೆದ ವರ್ಷ ಜೆಸಿಬಿಯಿಂದ ಸಮತಟ್ಟು ಮಾಡಲು ಮುಂದಾದಾಗ ರಸ್ತೆ ಅಂಚು ಕುಸಿದಿದೆ. ಈ ವೇಳೆ ಸಾರ್ವಜನಿಕರು ರಸ್ತೆಗೆ ಹಾನಿಯಾಗುವ ಬಗ್ಗೆ ತಿಳಿಸಿದರೂ ನಿರ್ಲಕ್ಷ್ಯ ತೋರಿದ್ದಾರೆ. ಇದರಿಂದ ರಸ್ತೆ ಸಂಪೂರ್ಣ ಕಡಿತಗೊಳ್ಳುವ ಭೀತಿ ಎದುರಾಗಿದೆ ಎಂದು ಸಾರ್ವಜನಿಕರು ದೂರಿದರು.

    ಸಾರ್ವಜನಿಕ ರಸ್ತೆಯಾದ್ದರಿಂದ, ಮುಂದೆ ಅನಾಹುತವಾಗುವ ಮುನ್ನ ತಹಸೀಲ್ದಾರ್ ಮೂಲಕ ರಸ್ತೆಗೆ ಹಾನಿ ಮಾಡಲು ಕಾರಣರಾದವರ ಮೇಲೆ ತಕ್ಷಣ ನೋಟಿಸ್ ನೀಡುವಂತೆ ಸೂಚಿಸಿದರು. ಕುಸಿದ ಸ್ಥಳದಲ್ಲಿ ರಿಟೇನಿಂಗ್ ವಾಲ್ ನಿರ್ಮಿಸಿಕೊಡಬೇಕು ಎಂದು ಹರೀಶ್ ಪೂಂಜ ಹೇಳಿದರು.

    ಪಿಡಿಒ ಶ್ರೀನಿವಾಸ್ ಮಾತನಾಡಿ, ಒಂದು ವರ್ಷದಿಂದ ತಹಸೀಲ್ದಾರ್ ಅವರಿಗೆ ಪತ್ರ ಬರೆದಿದ್ದೇವೆ ಎಂದು ತಿಳಿಸಿದರು. ಅದಕ್ಕೆ ಶಾಸಕರು ಪ್ರತಿಕ್ರಿಯಿಸಿ, ಯಾವುದೇ ಗುಡ್ಡ ಅಗೆಯಬೇಕಿದ್ದರೂ ಪಂಚಾಯಿತಿ ಅನುಮತಿ ಪಡೆಯಬೇಕು. ಅನುಮತಿ ಪಡೆಯದೆ ಕಾಮಗಾರಿ ನಡೆಸಿದ್ದರಿಂದ ಸಾರ್ವಜನಿಕ ರಸ್ತೆಗೆ ಹಾನಿ ಎಂದು ಸಂಬಂಧಪಟ್ಟವರ ಮೇಲೆ ದೂರು ದಾಖಲಿಸಿ. ಎರಡು ದಿನದಲ್ಲಿ ನನಗೆ ವರದಿ ನೀಡಬೇಕು ಎಂದು ಸೂಚಿಸಿದರು.

    ಲಾಯಿಲ ಗ್ರಾಪಂ ಅಧ್ಯಕ್ಷೆ ಜಯಂತಿ ಎಂ.ಕೆ, ಮಾಜಿ ಸದಸ್ಯರಾದ ಈಶ್ವರ ಭೈರ, ಗಿರೀಶ್ ಡೋಂಗ್ರೆ, ಅಮಿತಾ, ಶಶಿರಾಜ್ ಶೆಟ್ಟಿ, ಪ್ರಶಾಂತ್ ರಾಗಿಬೆಟ್ಟು ಸಹಿತ ಸ್ಥಳೀಯ ಮನೆಮಂದಿ ಉಪಸ್ಥಿತರಿದ್ದರು.

    40 ಲಕ್ಷ ರೂ. ಅನುದಾನ

    ಈ ರಸ್ತೆ ಅವಲಂಬಿಸಿ 40ಕ್ಕಿಂತಲೂ ಅಧಿಕ ಪರಿಶಿಷ್ಟ ಜಾತಿಯ ಕುಟುಂಬಗಳು ವಾಸಿಸುತ್ತಿವೆ. 70ಕ್ಕೂ ಅಧಿಕ ಕುಟುಂಬಗಳು 30 ವರ್ಷಗಳಿಂದ ಇದೇ ರಸ್ತೆಯನ್ನು ಅವಲಂಬಿಸಿದ್ದು, 4 ವರ್ಷಗಳ ಹಿಂದೆ 40 ಲಕ್ಷ ರೂ. ಅನುದಾನದಲ್ಲಿ ಕಾಂಕ್ರಿಟ್ ರಸ್ತೆ ನಿರ್ಮಿಸಲಾಗಿತ್ತು. ಎರಡು ವರ್ಷಗಳ ಹಿಂದೆ ರಸ್ತೆ ಅಂಚು ಕುಸಿದಾಗ ಗ್ರಾಪಂಗೆ ಮನವಿ ನೀಡಲಾಗಿತ್ತು. ಆದರೂ ತಡೆಗೋಡೆ ಅಥವಾ ಯಾವುದೇ ಕ್ರಮ ಕೈಗೊಂಡಿಲ್ಲ. ಈ ಕುರಿತು ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರು ಶಾಸಕರಿಗೆ ಮನವಿ ನೀಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts